ಚಂದ್ರಾಪುರ : ಮಹಾರಾಷ್ಟ್ರದ ಚಂದ್ರಾಪುರದ ಬಲರ್ಷಾ ರೈಲ್ವೆ ಜಂಕ್ಷನ್‌ನಲ್ಲಿ ಭಾನುವಾರ(ನ 27) ಫುಟ್ ಓವರ್‌ಬ್ರಿಡ್ಜ್‌ನ ಚಪ್ಪಡಿ ಬಿದ್ದು 13 ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಪ್ರಾಥಮಿಕ ವರದಿಗಳು ತಿಳಿಸಿವೆ.
ರೈಲ್ವೆ ಪ್ಲಾಟ್‌ಫಾರ್ಮ್‌ನಲ್ಲಿ ಅದರ ಕೆಳಗೆ ನಡೆದುಕೊಂಡು ಹೋಗುತ್ತಿದ್ದ ಪ್ರಯಾಣಿಕರ ಮೇಲೆ ಸ್ಲ್ಯಾಬ್ ಬಿದ್ದಿದೆ. ವರದಿಗಳ ಪ್ರಕಾರ, ಹೈ-ವೋಲ್ಟೇಜ್ ಓವರ್‌ಹೆಡ್ ತಂತಿಗಳ ಸಂಪರ್ಕಕ್ಕೆ ಬಂದ ನಂತರ ಕೆಲವು ಪ್ರಯಾಣಿಕರು ತೀವ್ರವಾಗಿ ಗಾಯಗೊಂಡಿದ್ದಾರೆ.
ಇಂದು ಸಂಜೆ 5:10 ರ ಸುಮಾರಿಗೆ ಬಲರ್ಷಾ ವಿಭಾಗದ ರೈಲು ನಿಲ್ದಾಣದಲ್ಲಿ ಫುಟ್ ಓವರ್ ಬ್ರಿಡ್ಜ್‌ನ ಪ್ರಿ-ಕಾಸ್ಟ್ ಸ್ಲ್ಯಾಬ್‌ನ ಬೃಹತ್ ಭಾಗವು ಬಿದ್ದು 13 ಜನರು ಗಾಯಗೊಂಡಿದ್ದಾರೆ. ಪ್ರಾಥಮಿಕ ಚಿಕಿತ್ಸೆ ನೀಡಿದ ಬಳಿಕ ಗಾಯಾಳುಗಳನ್ನು ಸಮೀಪದ ಸಿವಿಲ್ ಆಸ್ಪತ್ರೆಗೆ ರವಾನಿಸಲಾಗಿದೆ. ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಶಿವಾಜಿ ಸುತಾರ್ ಅವರು ಮಾಹಿತಿ ನೀಡಿದಂತೆ ಯಾವುದೇ ಸಾವು ವರದಿಯಾಗಿಲ್ಲ.
ಏತನ್ಮಧ್ಯೆ, ರೈಲ್ವೆ ಇಲಾಖೆ ತೀವ್ರವಾಗಿ ಗಾಯಗೊಂಡವರಿಗೆ 1 ಲಕ್ಷ ರೂ ಮತ್ತು ಸಣ್ಣ ಗಾಯಗಳಿಗೆ ಒಳಗಾದವರಿಗೆ 50,000 ರೂಪಾಯಿಗಳ ಪರಿಹಾರ ಘೋಷಿಸಿದೆ. “ಗಾಯಗೊಂಡ ವ್ಯಕ್ತಿಗಳನ್ನು ತ್ವರಿತವಾಗಿ ಚೇತರಿಸಿಕೊಳ್ಳಲು ಇತರ ಆಸ್ಪತ್ರೆಗಳಿಗೆ ಸ್ಥಳಾಂತರಿಸುವ ಮೂಲಕ ಉತ್ತಮ ವೈದ್ಯಕೀಯ ಚಿಕಿತ್ಸೆ ನೀಡಲಾಗುತ್ತಿದೆ” ಎಂದು ಶಿವಾಜಿ ಸುತಾರ್ ಹೇಳಿದ್ದಾರೆ.