Advertisement

ನಗರಸಭೆಯ ನಿರಾಸಕ್ತಿ: ಪಾದಚಾರಿಗಳಿಗೆ ಸಂಕಟ!

05:10 PM Dec 02, 2017 | |

ನಗರ: ನಗರದ ಮುಖ್ಯ ರಸ್ತೆಯ ಬದಿಗಳಲ್ಲಿ ಚರಂಡಿಗೆ ಹಾಸಿದ ಸ್ಲ್ಯಾಬ್ ಗಳ ಮೇಲೆ ಓಡಾಡುವ ಪಾದಚಾರಿಗಳ ಭಯಕ್ಕೆ ಇನ್ನೂ ಮುಕ್ತಿ ಸಿಕ್ಕಿಲ್ಲ. ಯಾಕೆಂದರೆ ಬಹುತೇಕ ಸ್ಲ್ಯಾಬ್ ಗಳು ಉಪಯುಕ್ತ ಎನ್ನುವ ಬದಲು ಅಪಾಯ ತಂದೊಡ್ಡಲು ಹಾಸಿದಂತಿವೆ.

Advertisement

ಮೃತ್ಯುಕೂಪ
ಸಮರ್ಪಕವಾಗಿರದ ಸ್ಲ್ಯಾಬ್  ಹಾಸದ ಕಾರಣ, ಪಾದಚಾರಿಗಳಿಗೆ ಅಪಾಯಕಾರಿಯೆನಿಸಿದೆ. ಸಮತಟ್ಟಾಗಿರುವಂತೆ ಕಾಣುವ ಸ್ಲ್ಯಾಬ್ ಗಳಲ್ಲಿ ಕಾಲಿಟ್ಟಾಗ, ಅದು ತನ್ನ ನಿಜ ರೂಪ ತೋರಿಸುತ್ತದೆ. ಜತೆಗೆ ಮಧ್ಯೆ-ಮಧ್ಯೆ ಇರುವ ಅಪಾಯಕಾರಿ ಹೊಂಡ ಕೂಡ ಪಾದಚಾರಿಗಳ ಪಾಲಿಗೆ ಮೃತ್ಯುಕೂಪವೆನಿಸಿದೆ.

ಸಮಸ್ಯೆ ಹೆಚ್ಚಳ
ಮಾಣಿ-ಮೈಸೂರು ರಾಷ್ಟ್ರೀಯ ಹೆದ್ಧಾರಿಯ, ನಗರದ ಮುಖ್ಯ ರಸ್ತೆಯಲ್ಲೇ ಹಲವು ಸಮಯಗಳಿಂದ ಈ ಸಮಸ್ಯೆ ಹೆಚ್ಚಾಗಿದೆ. ನಗರಸಭೆಯ ವತಿಯಿಂದ ಮುಖ್ಯ ರಸ್ತೆಗಳ ಬದಿಗಳ ಚರಂಡಿ ಹೂಳೆತ್ತಲು ಸ್ಲ್ಯಾಬ್  ತೆಗೆದ ಅನಂತರ ಅದರ ಜೋಡಣೆ ಸರಿಯಾಗಿ ಮಾಡದ ಪರಿಣಾಮ, ಜತೆಗೆ ಅರ್ಧಂಬರ್ಧ ತುಂಡಾದ ಸ್ಲ್ಯಾಬ್ ಗಳನ್ನು ತೆರವು ಮಾಡದೆ ಅದನ್ನೇ ಮತ್ತೆ ಅಳವಡಿಸಿರುವುದು ಕೂಡ ಸಮಸ್ಯೆಗೆ ಮುಖ್ಯ ಕಾರಣವೆನಿಸಿದೆ.

ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ, ನಗರದ ಚರ್ಚ್‌ ಮುಂಭಾಗದ ರಸ್ತೆಯ ಎದುರು ಬದಿಯ ಚರಂಡಿಯಲ್ಲಿ ಇಂತಹ ಸ್ಲ್ಯಾಬ್ ಗಳಿವೆ. ಕಾಲಿಟ್ಟ ತತ್‌ಕ್ಷಣ ಬೀಳುವ, ಇನ್ನೊಂದು ತುದಿ ಎತ್ತರಕ್ಕೇರುವ, ಮುರಿದು ಹೊಂಡಕ್ಕೆ ಬೀಳುವ ಸ್ಲ್ಯಾಬ್ ಗಳು ಪಾದಚಾರಿಗಳಿಗೆ ಕಂಟಕವಾಗಿವೆ. ಈ ಬಗ್ಗೆ ನಗರಸಭೆ ಅಧಿಕಾರಿಗಳ ಗಮನ್ಕಕೆ ತಂದರೂ ಪ್ರಯೋಜನ ಆಗಿಲ್ಲ ಎಂಬುದು ಸಾರ್ವಜನಿಕರ ದೂರು.

ಸರಿಪಡಿಸುವಂತೆ ಆಗ್ರಹ
ಮುಖ್ಯ ರಸ್ತೆಯ ಚರಂಡಿಗೆ ಅಳವಡಿಸಿರುವ ಸ್ಲ್ಯಾಬ್  ಅನ್ನು ಬದಲಾಯಿಸಿ, ಅದಕ್ಕೆ ಫಿಕ್ಸ್‌ ಆದ ಸ್ಲ್ಯಾಬ್  ಹಾಕಬೇಕಿದೆ. ವೈಜ್ಞಾನಿಕ ಪದ್ಧತಿಯಲ್ಲಿ ಕಾಮಗಾರಿ ಮಾಡಿದಲ್ಲಿ ಇಂತಹ ಸಮಸ್ಯೆಗಳಾಗುತ್ತಿರಲಿಲ್ಲ. ವಯೋ ವೃದ್ಧರು ಚರಂಡಿಯಲ್ಲಿ ಸ್ಲ್ಯಾಬ್  ಅವ್ಯವಸ್ಥೆ ಪರಿವೆ ಇಲ್ಲದೆ ಬಿದ್ದಂತಹ ಘಟನೆಗಳೂ ಇದ್ದು, ನಗರಸಭೆ ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂಬ ಆಗ್ರಹ ಕೇಳಿ ಬಂದಿದೆ.

Advertisement

ಪರಿಶೀಲಿಸಿ ಕ್ರಮ
ಚರಂಡಿ ದುರಸ್ತಿಯ ಸಂದರ್ಭದಲ್ಲಿ ಕೆಲವೆಡೆ ಸ್ಲ್ಯಾಬ್ ಅನ್ನು ತೆರವುಗೊಳಿಸಿ, ಮತ್ತೆ ಹಾಕಲಾಗಿತ್ತು. ಆ ಸಂದರ್ಭದಲ್ಲಿ ಸಮರ್ಪಕವಾಗಿ ಜೋಡಣೆ ಆಗದೆ ಇದ್ದ ಕಡೆಗಳಲ್ಲಿ ಸಮಸ್ಯೆ ಇರಬಹುದು. ಈ ಬಗ್ಗೆ ಅಧಿಕಾರಿಗಳಿಂದ ಸ್ಥಳ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು.
ರೂಪಾ ಶೆಟ್ಟಿ
  ಪೌರಾಯುಕ್ತೆ, ನಗರಸಭೆ ಪುತ್ತೂರು

Advertisement

Udayavani is now on Telegram. Click here to join our channel and stay updated with the latest news.

Next