Advertisement

ಆತ್ಮಹತ್ಯೆಗೆ ಮುನ್ನ ರೈಲು ಬರುವ ಸಮಯದ ಬಗ್ಗೆ ಮಾಹಿತಿ ಪಡೆದಿದ್ದ ಧರ್ಮೇಗೌಡರು!

07:41 AM Dec 29, 2020 | keerthan |

ಚಿಕ್ಕಮಗಳೂರು: ವಿಧಾನ ಪರಿಷತ್ ಉಪಸಭಾಪತಿ ಎಸ್.ಎಲ್.ಧರ್ಮೇಗೌಡ (65) ರೈಲಿಗೆ ತಲೆಕೊಟ್ಟು ಆತ್ಮಹತ್ಯೆಗೆ ಶರಣಾಗಿದ್ದಾರೆ.

Advertisement

ಜಿಲ್ಲೆಯ ಕಡೂರು ತಾಲ್ಲೂಕು ಮಂಗೇನಹಳ್ಳಿ ಗ್ರಾಮದಲ್ಲಿ ಸೋಮವಾರ ರಾತ್ರಿ ಘಟನೆ ನಡೆದಿದ್ದು ಮಂಗಳವಾರ ಮುಂಜಾನೆ ಘಟನೆ ಬೆಳಕಿಗೆ ಬಂದಿದೆ.

ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಎಸ್.ಎಲ್.ಧರ್ಮೇಗೌಡ ಅವರು ಸೋಮವಾರ ಚಿಕ್ಕಮಗಳೂರು ನಗರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಖರಾಯಪಟ್ಟದಲ್ಲಿರುವ ಸರಪನಹಳ್ಳಿ ಗ್ರಾಮದ ತಮ್ಮ ನಿವಾಸಕ್ಕೆ ತೆರಳಿದ್ದರು.

ರಾತ್ರಿ 7 ರಿಂದ 8 ಗಂಟೆ ವೇಳೆಗೆ ಅಂಗರಕ್ಷಕ ಹಾಗೂ ಬೆಂಗಾವಲು ಪಡೆಯ ಸಿಬ್ಬಂದಿಯನ್ನು ಮನೆಗೆ ಕಳಿಸಿದ್ದರು ಎಂದು ತಿಳಿದು ಬಂದಿದ್ದು, ತಮ್ಮ ಹಳೆಯ ಸ್ಯಾಂಟ್ರೋ ಕಾರಿನಲ್ಲಿ ಖಾಸಗಿ ಡೈವರ್ ಜೊತೆ ಮನೆಯಿಂದ ಕಡೂರು ತಾಲ್ಲೂಕು ಗುಣಸಾಗರ ಗ್ರಾಮಕ್ಕೆ ತೆರಳಿದ್ದರು.

ಇದನ್ನೂ ಓದಿ:ಚಿಕ್ಕಮಗಳೂರು: ವಿಧಾನಪರಿಷತ್ ಉಪ ಸಭಾಪತಿ ಎಸ್.ಎಲ್.ಧರ್ಮೇಗೌಡ ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ

Advertisement

ಗುಣಸಾಗರ ಬಳಿ ಕಾರು ನಿಲ್ಲಿಸುವಂತೆ ಡೈವರ್‌ಗೆ ತಿಳಿಸಿದ್ದು, ಖಾಸಗಿಯಾಗಿ ಯಾರದ್ದೋ ಬಳಿ ಮಾತನಾಡುವುದಿದೆ. ನೀನು ಮನೆಗೆ ಹೋಗು ಎಂದು ಡೈವರ್‌ನನ್ನು ಕಳಿಸಿದ್ದರು ಎಂದು ಹೇಳಲಾಗುತ್ತಿದೆ.

ಎಸ್.ಎಲ್.ಧರ್ಮೇಗೌಡ ರಾತ್ರಿ 10 ಗಂಟೆಯಾದರೂ ಮನೆಗೆ ಹಿಂದಿರುಗದ ಪರಿಣಾಮ ಆತಂಕಗೊಂಡ ಕುಟುಂಬದವರು ಮೊಬೈಲ್‌ಗೆ ಕರೆ ಮಾಡಿದ್ದಾರೆ. ಮೊಬೈಲ್ ಸ್ವಿಚ್‌ಆಫ್ ಆಗಿದ್ದರಿಂದ ಧರ್ಮೇಗೌಡ ಅವರ ಕಾರಿನ ಚಾಲಕನನ್ನು ವಿಚಾರಿಸಿದ್ದಾರೆ. ತಕ್ಷಣ ಕಾರು ಚಾಲಕ ಸಖರಾಯಪಟ್ಟಣ ಪೊಲೀಸರಿಗೆ ಧರ್ಮೇಗೌಡ ನಾಪತ್ತೆ ಸಂಬಂಧ ದೂರು ದಾಖಲಿಸಿದ್ದಾರೆ ಎಂದು ತಿಳಿದು ಬಂದಿದೆ.

ಸೋಮವಾರ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಧರ್ಮೇಗೌಡರು

ದೂರು ದಾಖಲಿಸಿಕೊಂಡ ಪೊಲೀಸರು ಸೋಮವಾರ ರಾತ್ರಿಯೇ ಉಪಸಭಾಪತಿ ಅವರ ಪತ್ತೆಗೆ ಮುಂದಾಗಿದ್ದಾರೆ. ಕುಟುಂಬಸ್ಥರು, ಸ್ಥಳೀಯರು, ಜೆಡಿಎಸ್ ಪಕ್ಷದ ಮುಖಂಡರು ಹುಡುಕಾಟಕ್ಕೆ ಆರಂಭಿಸಿದ್ದಾರೆ.  ರಾತ್ರಿ 12ರಿಂದ ಮಧ್ಯರಾತ್ರಿ 2.30ರವರೆಗೆ ಹುಡುಕಾಡಿದರೂ ಧರ್ಮೇಗೌಡ ಅವರ ಸುಳಿವು ಸಿಕ್ಕಿರಲಿಲ್ಲ.

ಕಡೂರು ತಾಲ್ಲೂಕು ಗುಣಸಾಗರ ಗ್ರಾಮದ ಸಮೀಪದಲ್ಲಿರುವ ಮಂಗೇನಹಳ್ಳಿಯ ರೈಲ್ವೆ ಹಳಿಯ ಬಳಿ ಮೃತದೇಹ ಬಿದ್ದಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಲಭ್ಯವಾಗಿದ್ದು, ಪೊಲೀಸರು ಮಂಗಳವಾರ ಬೆಳಗಿನ ಜಾವ 3ರ ಸಮಯಲ್ಲಿ ಸ್ಥಳಕ್ಕೆ ತೆರಳಿ ಹುಡುಕಾಡಿದಾಗ ಮಂಗೇನಹಳ್ಳಿಯಲ್ಲಿ ಹಾದು ಹೋಗಿರುವ ರೈಲ್ವೆ ಹಳಿಯ ಬಳಿ ರೈಲಿಗೆ ಸಿಲುಕಿ ಛಿದ್ರಗೊಂಡ ಮೃತದೇಹ ಪತ್ತೆಯಾಗಿದ್ದು, ಮೃತದೇಹದಿಂದ ತುಂಡಾಗಿ ಬಿದ್ದಿದ್ದ ರುಂಡವನ್ನು ಸಂಬಂಧಿಗಳು ಗುರುತಿಸಿದ್ದರಿಂದ ಧಮೇಗೌಡ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.

ಆತ್ಮಹತ್ಯೆಗೂ ಮುಂಚೆ ಕಡೂರು ಪಟ್ಟಣದಲ್ಲಿ ಜೆಡಿಎಸ್ ಮುಖಂಡರೋರ್ವರಿಗೆ ಕರೆ ಮಾಡಿ ರೈಲು ಬರುವ ಸಮಯ ವಿಚಾರಣೆ ಮಾಡಿದ್ದಾರೆಂದು ತಿಳಿದು ಬಂದಿದೆ. ಡೆತ್‌ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ಹೇಳಲಾಗುತ್ತಿದ್ದು ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ.

ಎಸ್.ಎಲ್.ಧರ್ಮೇಗೌಡ ಆತ್ಮಹತ್ಯೆ ಸುದ್ದಿ ತಿಳಿಯುತ್ತಿದ್ದಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಚ್.ಎಂ.ಅಕ್ಷಯ್, ಜಿಲ್ಲಾಧಿಕಾರಿ ಡಾ|ಬಗಾದಿ ಗೌತಮ್, ಮಾಜಿ ಸಚಿವ ಸಿ.ಟಿ.ರವಿ ಸ್ಥಳಕ್ಕೆ ಬೇಟಿ ನೀಡಿದ್ದಾರೆ. ಮೃತದೇಹವನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಕೊಂಡೊಯ್ದು ಮರಣೋತ್ತರ ಪರೀಕ್ಷೆ ನಡೆಯಲಿದೆ ಎಂದು ತಿಳಿದು ಬಂದಿದ್ದು,

ಮರಣೋತ್ತರ ಪರೀಕ್ಷೆಯ ಬಳಿಕ ಮೃತದೇಹವನ್ನು ಅವರ ಸರಪನಹಳ್ಳಿಯ ಸ್ವಗೃಹಕ್ಕೆ ತರಲಾಗುತ್ತದೆ ಎಂದು ಹೇಳಲಾಗುತ್ತಿದೆ.

ಎಸ್.ಎಲ್.ಧರ್ಮೇಗೌಡ ಪತ್ನಿ, ಇಬ್ಬರು ಮಕ್ಕಳು, ಸಹೋದರ ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಬೋಜೇಗೌಡ ಅವರನ್ನು ಅಗಲಿದ್ದಾರೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ, ಇತ್ತೀಚೆಗೆ ವಿಧಾನ ಪರಿಷತ್ ಸಭೆಯಲ್ಲಿ ನಡೆದ ಘಟನೆಯಿಂದ ಖಿನ್ನತೆಗೆ ಒಳಗಾಗಿದ್ದರು ಎಂದು ಹೇಳಲಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಆತ್ಮಹತ್ಯೆಗೆ ಶರಣಾಗಿರಬಹುದು ಎಂದು ಹೇಳಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next