Advertisement

ಚರ್ಮದ ಆರೈಕೆಯ ಸಲಹೆಗಳು

08:32 PM Sep 11, 2021 | Team Udayavani |

ವಯಸ್ಸಾಗುವುದು ಎನ್ನುವುದು ಹುಟ್ಟಿದ ಕೂಡಲೇ ಆರಂಭವಾಗುವ ಪ್ರಕ್ರಿಯೆ; ಅದನ್ನು ತಡೆಯಲು ಅಥವಾ ವಿಳಂಬಿಸಲು ಯಾರೂ ಏನನ್ನೂ ಮಾಡುವ ಹಾಗಿಲ್ಲ. ಆದರೆ ಪ್ರಸ್ತುತ ಜೀವಿತಾವಧಿ ಹೆಚ್ಚಿರುವುದರಿಂದ ಮತ್ತು ಯೌವ್ವನಿಗರಾಗಿ ಕಾಣಿಸಿಕೊಳ್ಳುವ ಆಸೆ ಆಧುನಿಕ ಜನತೆಯಲ್ಲಿ ಹೆಚ್ಚಾಗಿರುವ ಕಾರಣ ಯುವಕ/ಯುವತಿಯರಾಗಿ ಕಾಣಿಸಿಕೊಳ್ಳುವ ಹಲವಾರು ಆಯ್ಕೆಗಳು ಮತ್ತು ಅವಕಾಶಗಳು ಈಗ ಲಭ್ಯವಾಗಿವೆ.

Advertisement

ವಯಸ್ಸಾಗುತ್ತಿರುವುದರ ಲಕ್ಷಣಗಳು ಮೂರನೆಯ ದಶಕದ ಬಳಿಕ ಚರ್ಮದಲ್ಲಿ, ಅದರಲ್ಲೂ ಮುಖ್ಯವಾಗಿ ಮುಖದ ತ್ವಚೆಯಲ್ಲಿ ಎದ್ದು ಕಾಣಿಸುತ್ತವೆ. ಇವುಗಳಲ್ಲಿ ಮುಖ್ಯವಾದವುಗಳು ನೆರಿಗೆಗಳು ಮತ್ತು ಸುಕ್ಕುಗಳು. ಇಲ್ಲಿ ಸುಕ್ಕುಗಳು ಮತ್ತು ನೆರಿಗೆಗಳು, ಕಪ್ಪುಚುಕ್ಕೆಗಳು ಮತ್ತು ಮುಪ್ಪಾಗುವಿಕೆಯ ಇನ್ನಿತರ ಚಿಹ್ನೆಗಳನ್ನು ವಿಳಂಬಿಸುವ ಕೆಲವು ಸಲಹೆಗಳನ್ನು ನೀಡಲಾಗಿದೆ.

ಸೂರ್ಯನಿಂದ ರಕ್ಷಣೆ :

ಸೂರ್ಯನ ಕಿರಣಗಳು ಚರ್ಮದಲ್ಲಿರುವ ಕೊಲಾಜೆನ್‌ ಮತ್ತು ಇಲಾಸ್ಟಿಕ್‌ಗಳಿಗೆ ಹಾನಿ ಉಂಟುಮಾಡಬಹುದಾಗಿದೆ. ಈ ನಾರಿನಂಶಗಳು ಚರ್ಮವನ್ನು ಬಿಗಿಯಾಗಿ, ನಮನೀಯವಾಗಿರಿಸುತ್ತವೆ. ಈ ಅಂಗಾಂಶಗಳಿಗೆ ಉಂಟಾಗುವ ಹಾನಿಯಿಂದ ಚರ್ಮವು ಸಡಿಲವಾಗುತ್ತದೆ, ಜೋತು ಬೀಳುತ್ತದೆ ಹಾಗೂ ನೆರಿಗೆಗಳು ಮತ್ತು ಸುಕ್ಕುಗಳು ಉಂಟಾಗುತ್ತವೆ. ಎಸ್‌ಪಿಎಫ್ 20 ಅಥವಾ ಅದಕ್ಕಿಂತ ಹೆಚ್ಚಿರುವ ಸರಿಯಾಗಿ ಹೊಂದಿಕೊಳ್ಳುವ ಉತ್ತಮವಾದ ಸನ್‌ಸ್ಕ್ರೀನ್‌ ಬಳಕೆಯಿಂದ ಮುಪ್ಪಾಗುವ ಈ ಪ್ರಕ್ರಿಯೆಯು ವಿಳಂಬಿಸುತ್ತದೆ. ಸನ್‌ಸ್ಕ್ರೀನ್‌ಗಳನ್ನು ಮೋಡ ಕವಿದ ದಿನಗಳಲ್ಲಿಯೂ ಸರಿಯಾಗಿ ಉಪಯೋಗಿಸಬೇಕು ಎನ್ನುವುದನ್ನು ನೆನಪಿಡಿ. ಏಕೆಂದರೆ, ನೇರಳಾತೀತ ಕಿರಣ (ಯುವಿ ಕಿರಣಗಳು) ಮೋಡಗಳನ್ನೂ ಹಾದು ಬರಬಲ್ಲವು. ಇದರ ಜತೆಗೆ, ವಿಟಮಿನ್‌ ಡಿ ಕೊರತೆ ಉಂಟಾಗುವುದನ್ನು ತಡೆಗಟ್ಟಲು ದಿನಕ್ಕೆ 30ರಿಂದ 40 ನಿಮಿಷಗಳ ಕಾಲ ಬೆಳಗ್ಗಿನ ಎಳೆಬಿಸಿಲು ಅಥವಾ ಸಂಜೆಯ ಬಿಸಿಲಿಗೆ ಒಡ್ಡಿಕೊಳ್ಳುವುದನ್ನು ಮರೆಯಬಾರದು.

ಚರ್ಮದ ಆದ್ರìತೆ  ಕಾಪಾಡಿಕೊಳ್ಳುವುದು:

Advertisement

ಸರಿಯಾದ ಪ್ರಮಾಣದಲ್ಲಿ ಆದ್ರìತೆಯಿಂದ ಕೂಡಿರುವುದು ಆರೋಗ್ಯಯುತ ಚರ್ಮದ ಲಕ್ಷಣ. ಚರ್ಮಕ್ಕೆ ಹೊರಗಿನಿಂದ ಮತ್ತು ಒಳಗಿನಿಂದ ಸರಿಯಾದ ಪ್ರಮಾಣದ ಆದ್ರìತೆಯನ್ನು ಪೂರೈಸುವುದು ನೆರಿಗೆಗಳನ್ನು ನಿಭಾಯಿಸಲು, ಅದರಲ್ಲೂ ಮುಖ್ಯವಾಗಿ ಮುಖ ಮತ್ತು ಕೈಕಾಲುಗಳಲ್ಲಿ ನೆರಿಗೆಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಹವಾಮಾನ ಮತ್ತು ಭೌಗೋಳಿಕ ಸ್ಥಿತಿಗತಿಗಳನ್ನು ಆಧರಿಸಿ ದೇಹದ ಆವಶ್ಯಕತೆಗೆ ಅನುಗುಣವಾಗಿ ಸಾಕಷ್ಟು ಪ್ರಮಾಣದಲ್ಲಿ ನೀರು, ದ್ರವಾಹಾರ ಸೇವಿಸಬೇಕು. ದಿನಕ್ಕೆ ಸರಿಸುಮಾರು 2 ಲೀಟರ್‌ ನೀರು ಸೇವನೆ ಉತ್ತಮ.

ಸಾಕಷ್ಟು ಪ್ರಮಾಣದಲ್ಲಿ ನೀರು ಕುಡಿಯುವ ಅಭ್ಯಾಸ ಇರಿಸಿಕೊಳ್ಳುವುದರಿಂದ ಇತರ ದೈಹಿಕ ಚಟುವಟಿಕೆಗಳು, ಚಯಾಪಚಯ ಕ್ರಿಯೆ ಉತ್ತಮವಾಗಿ ನಡೆಯುತ್ತದೆ. ಇದು ಚರ್ಮದ ಸ್ಥಿತಿಗತಿಯಲ್ಲಿಯೂ ಪ್ರತಿಫ‌ಲಿಸುತ್ತದೆ. ಸರಿಯಾದ ಮಾಯಿಶ್ಚರೈಸರ್‌ ಉಪಯೋಗಿಸುವುದರಿಂದ ಚರ್ಮದಲ್ಲಿರುವ ಆದ್ರìತೆಯನ್ನು ಕಾಪಾಡಿಕೊಳ್ಳಬಹುದಾಗಿದೆ. ಸೂಕ್ತವಾದ ಫೇಸ್‌ವಾಶ್‌ ಶಿಫಾರಸು ಮಾಡುವಂತೆ ನೀವು ನಿಮ್ಮ ಚರ್ಮತಜ್ಞರನ್ನು ಕೇಳಿಕೊಳ್ಳಬಹುದು. ತೀಕ್ಷ್ಣವಾದ ಮತ್ತು ಕ್ಲೆನ್ಸರ್‌ಗಳು ಮತ್ತು ಸðಬ್‌ಗಳನ್ನು ಉಪಯೋಗಿಸಿದರೆ ಚರ್ಮಕ್ಕೆ ಹಾನಿ ಉಂಟಾಗಬಹುದಾದ್ದರಿಂದ ಇವುಗಳನ್ನು ಉಪಯೋಗಿಸಬೇಡಿ. ಚರ್ಮವನ್ನು ಉಜ್ಜಿದಷ್ಟು ಅದು ಒರಟು ಮತ್ತು ದೊರಗಾಗುತ್ತದೆ.

ಸರಿಯಾದ ಪ್ರಮಾಣದಲ್ಲಿ ಪೌಷ್ಟಿಕಾಂಶ ಪೂರೈಕೆ:

“ನೀವು ಏನನ್ನು ಸೇವಿಸುತ್ತೀರೋ ಹಾಗೆ ಇರುತ್ತೀರಿ’ – ಇದು ವೆಲ್‌ನೆಸ್‌ ತರಬೇತುದಾರರು, ಪೌಷ್ಟಿಕಾಂಶ ತಜ್ಞರು ಮತ್ತು ವೈದ್ಯರು ಆಗಾಗ ಪಠಿಸುವ ಮಂತ್ರ. ನಿಜ, ಚರ್ಮವು ನಮ್ಮ ಪೌಷ್ಟಿಕಾಂಶ ಸ್ಥಿತಿಗತಿಯನ್ನು ವಿವಿಧ ರೀತಿಗಳಲ್ಲಿ ಪ್ರತಿಫ‌ಲಿಸುತ್ತದೆ, ವಯಸ್ಸಾಗುವ ಲಕ್ಷಣಗಳು ಅವುಗಳಲ್ಲೊಂದು. ನಿಮ್ಮ ದೇಹಕ್ಕೆ ಸರಿಯಾದ ಪ್ರಮಾಣದಲ್ಲಿ ಪೌಷ್ಟಿಕಾಂಶಗಳು ಪೂರೈಕೆಯಾಗುವುದಕ್ಕಾಗಿ ದಿನನಿತ್ಯದ ಊಟ ಉಪಾಹಾರದಲ್ಲಿ ಸಾಕಷ್ಟು ಪ್ರಮಾಣದಲ್ಲಿ ತರಕಾರಿಗಳು, ಹಣ್ಣುಹಂಪಲುಗಳು, ಬೀಜಗಳನ್ನು ಸೇರಿಸಿಕೊಳ್ಳಿ. ನಿಮ್ಮ ಸ್ಥಳೀಯ ಮಾರುಕಟ್ಟೆ ಮತ್ತು ನಿಮ್ಮ ಪ್ರದೇಶದಲ್ಲಿ ಋತುಮಾನಕ್ಕೆ ಅನುಗುಣವಾಗಿ ಲಭ್ಯವಾಗುವ ತರಕಾರಿ, ಹಣ್ಣುಹಂಪಲುಗಳನ್ನು ಯಥೇತ್ಛವಾಗಿ ಉಪಯೋಗಿಸಿ. ತರಕಾರಿಗಳು ನಮ್ಮ ಚರ್ಮಕ್ಕೆ ಅಗತ್ಯವಾಗಿರುವ ವಿಟಮಿನ್‌ಗಳು ಮತ್ತು ಖನಿಜಾಂಶಗಳನ್ನು ಬಹುತೇಕ ಪ್ರಮಾಣದಲ್ಲಿ ಪೂರೈಸುತ್ತವೆ. ಕೆಲವು ಸೊಪ್ಪು ತರಕಾರಿಗಳ ಸಹಿತ ಇವುಗಳಲ್ಲಿ ಹೆಚ್ಚಿನವುಗಳನ್ನು ಸಲಾಡ್‌ಗಳಲ್ಲಿ ಸೇರಿಸಿಕೊಂಡು ಹಸಿಯಾಗಿಯೇ ಸೇವಿಸಬಹುದು. ಯಾಕೆಂದರೆ, ಬೇಯಿಸುವುದರಿಂದ ಅವುಗಳ ತಾಜಾತನ, ಪೌಷ್ಟಿಕಾಂಶಗಳು ನಷ್ಟವಾಗುತ್ತವೆ. ತಾಜಾ ಹಣ್ಣುಗಳನ್ನು ಜಗಿದು ತಿನ್ನುವುದು ಜ್ಯೂಸ್‌ ಆಗಿಸಿ ಸೇವಿಸುವುದರಿಂದ ಅಥವಾ ಅವುಗಳ ಸಾರ ತೆಗೆದು ಸೇವಿಸುವುದರಿಂದ ಉತ್ತಮ. ಯಾವುದೇ ಹಣ್ಣು ತರಕಾರಿ ಇತ್ಯಾದಿಗಳನ್ನು ಅವುಗಳ ಪೌಷ್ಟಿಕಾಂಶ ಸ್ಥಿತಿಗತಿಯ ಆಧಾರದಲ್ಲಿ ಮಿತಿಮೀರಿ

ಸೇವಿಸಬಾರದು. ಎಲ್ಲವನ್ನೂ ಮಿತವಾದ ಪ್ರಮಾಣದಲ್ಲಿ ಮಿಶ್ರರೂಪದಲ್ಲಿ, ಸರಿಯಾದ ಪ್ರಮಾಣದಲ್ಲಿ ಸಮತೋಲಿತವಾಗಿ ಸೇವಿಸುವುದು ಮುಖ್ಯ. ಸಕ್ಕರೆ, ಸಿಹಿಗಳು, ಸಂಸ್ಕರಿತ ಹಿಟ್ಟುಗಳು ಮತ್ತು ಹೈನು ಉತ್ಪನ್ನಗಳ ಸೇವನೆ ಮಿತವಾಗಿರಲಿ.

ಚೆನ್ನಾಗಿ ವ್ಯಾಯಾಮ ಮಾಡಿ ಮತ್ತು ಸದೃಢರಾಗಿರಿ:

ಆರೋಗ್ಯಯುತ ದೇಹದಲ್ಲಿ ಮನಸ್ಸು ಕೂಡ ಸ್ವಸ್ಥವಾಗಿರುತ್ತದೆ ನಿಜ. ಅದು ಚರ್ಮದಲ್ಲಿಯೂ ಪ್ರತಿಫ‌ಲಿಸಬೇಕು. ನಮ್ಮ ದೇಹದ ಆಂತರಿಕ ವ್ಯವಸ್ಥೆಗಳು ಉತ್ತಮ ಸ್ಥಿತಿಗತಿಯಲ್ಲಿದ್ದರೆ ಅದರಿಂದ ನಮ್ಮ ತ್ವಚೆಯೂ ಯುವ ಮತ್ತು ಆರೋಗ್ಯಯುತವಾಗಿ ಗೋಚರಿಸುತ್ತದೆ.

  • ರೆಟಿನಾಲ್‌ ಆಧರಿತ ಲೋಶನ್‌ಗಳು ಮತ್ತು ಕ್ರೀಮುಗಳು ಕೊಲಾಜೆನ್‌ ಫೈಬರ್‌ ಚೆನ್ನಾಗಿ ಕಾರ್ಯನಿರ್ವಹಿಸುವಲ್ಲಿ ಪಾತ್ರ ವಹಿಸುವುದರಿಂದ ಚರ್ಮತಜ್ಞರು ಅವುಗಳ ಬಳಕೆಯನ್ನು ಶಿಫಾರಸು ಮಾಡುತ್ತಾರೆ.
  • ಧೂಮಪಾನವನ್ನು ತ್ಯಜಿಸಿ ಮತ್ತು ಮದ್ಯಪಾನ ಮಿತ ಪ್ರಮಾಣದಲ್ಲಿರಲಿ. ಧೂಮಪಾನದಿಂದ ಚರ್ಮದ ನಮನೀಯತೆ ಮತ್ತು ಕೊಲಾಜೆನ್‌ ಫೈಬರ್‌ಗಳಿಗೆ ಹಾನಿಯುಂಟಾಗುತ್ತದೆ.
  • ಒತ್ತಡದಿಂದ ಮುಪ್ಪು ಬೇಗನೆ ಉಂಟಾಗುತ್ತದೆ. ಯಾವುದೇ ರೀತಿಯ ಒತ್ತಡ ಉಂಟಾಗದಂತೆ ಕೆಲಸ ಕಾರ್ಯಗಳನ್ನು ಹಂಚಿಕೊಳ್ಳುವುದಕ್ಕಾಗಿ ಸರಿಯಾದ ಕಾರ್ಯಯೋಜನೆ, ವೇಳಾಪಟ್ಟಿ ರೂಪಿಸಿಕೊಳ್ಳಿ. ಸಿಟ್ಟಾಗುವುದು, ಮುಖ ಗಂಟಿಕ್ಕಿಕೊಳ್ಳುವುದು, ಹತಾಶೆಗೊಳ್ಳುವುದರಿಂದ ಮುಖದ ನೆರಿಗೆಗಳು, ಸುಕ್ಕುಗಳು ವೃದ್ಧಿಸುತ್ತವೆ ಮತ್ತು ಇದುವರೆಗೆ ಹೇಳಿದ ಸಲಹೆಗಳಿಂದ ಉಂಟಾಗುವ ಪ್ರಯೋಜನಗಳೆಲ್ಲವನ್ನೂ ಅಳಿಸಿಹಾಕುತ್ತದೆ.
  • ಇದೆಲ್ಲದಕ್ಕಿಂತ ಮುಖ್ಯವಾಗಿ, ವಯಸ್ಸಾಗುವಿಕೆಯ ಲಕ್ಷಣಗಳು ಗೋಚರಿಸುವುದಕ್ಕಿಂತ ಸಾಕಷ್ಟು ಮುನ್ನವೇ ಸರಿಯಾದ ಸಮಯದಲ್ಲಿ ನಿಮ್ಮ ಚರ್ಮ ತಜ್ಞರನ್ನು ಭೇಟಿಯಾಗಿ ಅಗತ್ಯ ಸಲಹೆಗಳನ್ನು ಪಡೆಯುವ ಮೂಲಕ ಮುಪ್ಪಿನ ಲಕ್ಷಣಗಳು ವಿಳಂಬವಾಗುವಂತೆ ನೋಡಿಕೊಳ್ಳಿ. ವಯಸ್ಸಾಗುವಿಕೆಯ ಲಕ್ಷಣಗಳು ಗೋಚರಿಸಿದ ಬಳಿಕ ಅದಕ್ಕೆ ಚಿಕಿತ್ಸೆ ಪಡೆಯುವುಕ್ಕಿಂತ ಸಾಕಷ್ಟು ಮುನ್ನವೇ ಎಚ್ಚರಿಕೆ ವಹಿಸಿ ಅವುಗಳನ್ನು ದೂರ ಇರಿಸುವುದು ವಿಹಿತ.

 

ಡಾ| ಪ್ರಮೋದ್‌ ಕುಮಾರ್‌

ಕನ್ಸಲ್ಟಂಟ್‌ ಡರ್ಮಟಾಲಜಿ

ಕೆಎಂಸಿ ಆಸ್ಪತ್ರೆ, ಮಂಗಳೂರು

Advertisement

Udayavani is now on Telegram. Click here to join our channel and stay updated with the latest news.

Next