Advertisement

ಶಿಕ್ಷಣದ ಜತೆ ಇರಲಿ ಕೌಶಲ

09:16 PM Jun 25, 2019 | mahesh |

ವಿದ್ಯಾರ್ಥಿ ಜೀವನ ಎನ್ನುವುದು ಪ್ರತಿಯೊಬ್ಬರ ಪಾಲಿಗೆ ಸ್ಮರಣೀಯವಾಗಿರುತ್ತದೆ. ಭವಿಷ್ಯ ನಿರ್ಧಾರವಾಗುವುದೂ ಈ ದಿನಗಳಲ್ಲೇ. ಸರಿಯಾದ ಮಾರ್ಗದಲ್ಲಿ ಹೆಜ್ಜೆ ಇಟ್ಟರೆ ಉತ್ತಮ ಬದುಕು ನಿಮ್ಮದಾಗುತ್ತದೆ. ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಣ ಮಾತ್ರವಲ್ಲ ಅದರೊಂದಿಗೆ ಕೆಲವೊಂದು ಕೌಶಲಗಳನ್ನು ರೂಢಿಸಿಕೊಳ್ಳುವುದು ಭವಿಷ್ಯದ ದೃಷ್ಟಿಯಿಂದ ಉತ್ತಮ. ಹೀಗಾಗಿ ಪಠ್ಯೇತರ ಚಟುವಟಿಕೆಗಳಲ್ಲೂ ತೊಡಗಿಸಿಕೊಳ್ಳಬೇಕು ಎಂದು ಸಲಹೆ ನೀಡುತ್ತಾರೆ ಶಿಕ್ಷಣ ತಜ್ಞರು. ಶಿಕ್ಷಣ ಮುಗಿಸಿ ವಿದ್ಯಾಸಂಸ್ಥೆಯಿಂದ ಹೊರ ಬರುವಾಗ ಯಾವುದಾದರೊಂದು ಮಾರ್ಗದ ಮೂಲಕ ಜೀವನ ಸಾಗಿಸುವಂತಿರಬೇಕು.

Advertisement

ಶಿಕ್ಷಣ ವ್ಯವಸ್ಥೆಯಲ್ಲಿ ಬದಲಾವಣೆ
ಶಿಕ್ಷಣ ಜತೆಗೆ ಪ್ರಾಯೋಗಿಕ ಅನುಭವವೂ ವಿದ್ಯಾರ್ಥಿಗಳಿಗೆ ಸಿಗುವಂತಾಗಬೇಕು. ಆಗ ಮಾತ್ರ ಶಿಕ್ಷಣದ ಉದ್ದೇಶ ಸಾರ್ಥಕವಾದಂತಾಗುತ್ತದೆ. ಉದಾಹರಣೆಗೆ ಕಾಮರ್ಸ್‌ ವಿದ್ಯಾರ್ಥಿಗಳಿಗೆ ಬ್ಯಾಂಕಿಂಗ್‌ ಬಗ್ಗೆ ನಾವು ಥಿಯರಿ ಪಾಠ ಮಾಡಿದರೆ ಮಾತ್ರ ಸಾಕಾಗುವುದಿಲ್ಲ. ಅವರನ್ನು ಬ್ಯಾಂಕ್‌ಗೆ ಕೆರದುಕೊಂಡು ಹೋಗಿ ಅಲ್ಲಿನ ಕಾರ್ಯ ವಿಧಾನಗಳ ಪರಿಚಯ ಮಾಡಿಕೊಡಬೇಕು ಎನ್ನುತ್ತಾರೆ ಉಡುಪಿಯ ಎಂ.ಜಿ.ಎಂ. ಕಾಲೇಜಿನ ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಕೊಕ್ಕರ್ಣೆ ಸುರೇಂದ್ರನಾಥ್‌ ಶೆಟ್ಟಿ. ಈಗ ಮಂಗಳೂರು ವಿ.ವಿ. 50 ಮಾರ್ಕ್ಸ್ ನ ಹೆಚ್ಚು ವರಿ ಚಟುವಟಿಕೆಗಳನ್ನು ಪಠ್ಯದಲ್ಲಿ ಅಳವಡಿಸಿಕೊಂಡಿದೆ. ವಾರಕ್ಕೆ ಒಂದೆರಡು ಗಂಟೆ ಇದರ ತರಬೇತಿ ನೀಡಲಾಗುತ್ತದೆ. ವಿದ್ಯಾರ್ಥಿಗಳು ತಮಗೆ ಬೇಕಾದ ವಿಷಯವನ್ನು ಆಯ್ಕೆ ಮಾಡಿಕೊಳ್ಳಬೇಕು. ಜತೆಗೆ ವಿದ್ಯಾರ್ಥಿ ಎನ್ನೆಸ್ಸೆಸ್‌, ಎನ್‌ಸಿಸಿ ಅಥವಾ ಅವರ ಅಭಿರುಚಿಗೆ ತಕ್ಕಂತ ಪಠ್ಯೇತರ ಚಟುವಟಿಕೆಯಲ್ಲಿ ಪಾಲ್ಗೊಳ್ಳುವುದು ಕಡ್ಡಾಯ. ಇದರಿಂದ ಅವರಿಗೆ ಬದುಕಿನ ಪರಿಚಯ ಆಗುವುದರ ಜತೆಗೆ ಪ್ರಾಯೋಗಿಕ ಅನುಭವ ಸಿಗುತ್ತದೆ ಎಂದು ಅವರು ವಿವರಿಸುತ್ತಾರೆ.

ಇಂದಿನ ಅಗತ್ಯ
ವಿದ್ಯಾರ್ಥಿಗಳಲ್ಲಿ ಛಲ, ಕೌಶಲ ಮತ್ತು ಸಂವಹನ ಶಕ್ತಿಯನ್ನು ಹೆಚ್ಚಿಸಬೇಕು. ನಾನು ಸಾಧಿಸಬಲ್ಲೆ ಎನ್ನುವ ಛಲ ಬೆಳೆಸುವ ಶಿಕ್ಷಣ ಇಂದಿನ ಅಗತ್ಯ. ಇತ್ತೀಚೆಗೆ ರಾಷ್ಟ್ರೀಯ ಶಿಕ್ಷಣ ನೀತಿಯೂ ಇತ್ತ ಗಮನ ಹರಿಸಿ ರುವುದು ಉತ್ತಮ ಬೆಳವಣಿಗೆ.
– ಕೊಕ್ಕರ್ಣೆ ಸುರೇಂದ್ರನಾಥ್‌ ಶೆಟ್ಟಿ
ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ, ಎಂ.ಜಿ.ಎಂ. ಕಾಲೇಜು, ಉಡುಪಿ

ಪಠ್ಯೇತರ ಚಟುವಟಿಕೆಗಳಿಗೆ ಸಮಯ ಮೀಸಲಿಡಿ
ವಿದ್ಯಾರ್ಥಿಗಳು ಓದಿನೊಂದಿಗೆ ಕೆಲವು ಕೌಶಲಗಳನ್ನು ರೂಢಿಸಿಕೊಳ್ಳಬೇಕು. ಬಿಡುವಿನ ಸಮಯವನ್ನು ಇದಕ್ಕಾಗಿ ಬಳಸಬಹುದು. ಅವುಗಳೆಂದರೆ:
1 ಕಂಪ್ಯೂಟರ್‌ ಶಿಕ್ಷಣ: ಪ್ರಸ್ತುತ ಕಂಪ್ಯೂಟರ್‌ನ ಪ್ರಾಥಮಿಕ ಜ್ಞಾನ ಎಲ್ಲರಲ್ಲೂ ಇದೆ. ಇದರ ಜತೆಗೆ ಅದರಲ್ಲಿನ ಕೆಲವು ವಿಶೇಷ ಕೋರ್ಸ್‌ ಗಳನ್ನು ನೀವು ಅಧ್ಯಯನ ಮಾಡಬಹುದು. ನಿಮ್ಮ ಆಸಕ್ತಿ, ಬೇಡಿಕೆಗೆ ಅನುಗುಣವಾಗಿ ತರಗತಿಗಳನ್ನು ಆಯ್ಕೆ ಮಾಡಿಕೊಳ್ಳಬಹುದು.

2 ಸಂವಹನ ಕಲೆ: ಜಗತ್ತು ನಿಂತಿರುವುದು ಮಾತಿನ ಮೇಲೆ. ಹೀಗಾಗಿ ನೀವು ಉತ್ತಮ ಸಂವಹನ ಕಲೆಯನ್ನು ರೂಢಿಸಿಕೊಳ್ಳಬೇಕು. ಇನ್ನೊಬ್ಬರೊಂದಿಗೆ ಹೇಗೆ ವರ್ತಿಸಬೇಕು, ಸಾರ್ವಜನಿಕ ಸ್ಥಳಗಳಲ್ಲಿ ಯಾವ ರೀತಿ ವರ್ತಿಸಬೇಕು ಎನ್ನುವುದರ ಕುರಿತು ಮಾಹಿತಿ ಹೊಂದುವುದು ಅವಶ್ಯ.

Advertisement

3 ಭಾಷಾ ಸಾಮರ್ಥ್ಯ: ಸಾಧ್ಯವಾದಷ್ಟು ಭಾಷೆಗಳನ್ನು ಕಲಿಯಲು ಶ್ರಮಿಸಿ. ಅದರಲ್ಲೂ ಮಾತೃಭಾಷೆ ಜತೆಗೆ ಇಂಗ್ಲಿಷ್‌, ಹಿಂದಿಯಲ್ಲಿ ಪರಿಣತಿ ಹೊಂದುವುದು ಅನಿವಾರ್ಯ.

4 ಆಸಕ್ತಿಯೇ ಹವ್ಯಾಸವಾಗಲಿ: ನಿಮಗೆ ಯಾವ ಕ್ಷೇತ್ರದಲ್ಲಿ ಆಸಕ್ತಿ ಇದೆಯೋ ಅದರಲ್ಲಿ ತೊಡಗಿಸಿಕೊಳ್ಳಿ. ಉದಾಹರಣೆಗೆ ಫೋಟೋಗ್ರಫಿಯಲ್ಲಿ ಆಸಕ್ತಿ ಇದ್ದರೆ ಅದರಲ್ಲಿ ತೊಡಗಿಸಿಕೊಳ್ಳಿ, ಅದರ ಬಗೆಗಿನ ಹೆಚ್ಚಿನ ಮಾಹಿತಿ ಕಲೆ ಹಾಕಿ.

5 ಅಪ್‌ಡೇಟ್‌ ಆಗಿರಿ: ಜಗತ್ತಿನ ಆಗು-ಹೋಗುಗಳ ಬಗ್ಗೆ ನಿಗಾ ಇರಲಿ. ನಿಮ್ಮ ಆಸಕ್ತಿಯ ಕ್ಷೇತ್ರ ಮಾತ್ರವಲ್ಲ ಎಲ್ಲ ರಂಗಗಳಲ್ಲಿ ನಡೆಯುವ ಬೆಳವಣಿಗೆ ಬಗ್ಗೆ ಮಾಹಿತಿ ಇರಬೇಕು.

– ರಮೇಶ್‌ ಬಳ್ಳಮೂಲೆ

Advertisement

Udayavani is now on Telegram. Click here to join our channel and stay updated with the latest news.

Next