Advertisement

ಸ್ಕಿಲ್‌ ಇಂಡಿಯಾದಡಿ ಗ್ರಾಮೀಣ ವಿದ್ಯಾರ್ಥಿಗಳ ಕೌಶಲಾಭಿವೃದ್ಧಿ

10:37 PM Feb 10, 2021 | Team Udayavani |

ಬೆಳ್ತಂಗಡಿ: ಸರಕಾರಿ ಶಾಲೆಯಲ್ಲಿ ಗುಣಮಟ್ಟದ ಶಿಕ್ಷಣ ಕೊರತೆ ಹುಡುಕುವ ದಿನವೊಂದಿತ್ತು. ಮೂಲ ಸೌಕರ್ಯ ಹಾಗೂ ಜನಪ್ರತಿನಿಧಿಗಳು, ಸಂಘಸಂಸ್ಥೆಗಳು ಇಚ್ಛಾಶಕ್ತಿ ತೋರಿದಲ್ಲಿ ಪರಿವರ್ತನೆ ಕಂಡುಕೊಳ್ಳಬಹುದು ಎಂಬುದಕ್ಕೆ ಬೆಳ್ತಂಗಡಿ ತಾಲೂಕಿನ ಕೇಂದ್ರ ಸ್ಥಾನದಲ್ಲಿರುವ ಸರಕಾರಿ ಪ.ಪೂ. ಕಾಲೇಜು ಸಾಕ್ಷಿ.

Advertisement

ಬೆಳ್ತಂಗಡಿಯಲ್ಲಿ ಮೊಟ್ಟ ಮೊದಲ ಪ್ರೌಢ ಶಾಲೆಯಾಗಿ ಆರಂಭಗೊಂಡು 1973ರಲ್ಲಿ ಪದವಿ ಪೂರ್ವ ಕಾಲೇಜಾಗಿ ಉನ್ನತೀಕರಣಗೊಂಡ ಬಳಿಕ ಸಾವಿರಾರು ವಿದ್ಯಾರ್ಥಿಗಳಿಗೆ ವಿದ್ಯಾದಾನ ನೀಡುತ್ತಾ ಬಂದಿದೆ. ಜೂನಿಯರ್‌ ಕಾಲೇಜು ಎಂದೇ ಹೆಸರುವಾಸಿಯಾಗಿರುವ ಕಾಲೇಜು ಸುವರ್ಣ ಮಹೋತ್ಸವಕ್ಕೆ ದಾಪುಗಾಲಿಡುತ್ತಿದೆ.

ವಿದ್ಯಾರ್ಥಿಸ್ನೇಹಿ ಕಾಲೇಜು
ಸುವರ್ಣ ಮಹೋತ್ಸವದಂಚಿನಲ್ಲಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಪಾಲಿಗೆ ಸುವರ್ಣ ವಕಾಶದಂತಿದ್ದು, ತಾಲೂಕಿನ ಸರಕಾರಿ ಶಾಲೆಗಳ ಪೈಕಿ ಸುಧಾರಿತ ವಿಜ್ಞಾನ ಪ್ರಯೋಗಾಲಯ ಹೊಂಡಿರುವ ಏಕೈಕ ಕಾಲೇಜಾಗಿದೆ. 9ನೇ ತರಗತಿಯಿಂದ ರಾಷ್ಟ್ರೀಯ ಕೌಶಲ ಅರ್ಹತಾ ಚೌಕಟ್ಟು (ಎನ್‌ಎಸ್‌ಕ್ಯುಎಫ್‌) ಎಂಬ ವಿಚಾರದಲ್ಲಿ ವಿದ್ಯಾರ್ಥಿಗಳ ಕೌಶಾಲಾಭಿವೃದ್ಧಿಗೆ ವಿಶೇಷ ಸ್ಥಾನಮಾನ ನೀಡಿದೆ.

ಏನಿದು ಎನ್‌ಎಸ್‌ಕ್ಯುಎಫ್‌?
9ನೇ ತರಗತಿಯಿಂದ 12ನೇ ತರಗತಿಯವರೆಗೆ ಆಸಕ್ತ ವಿದ್ಯಾರ್ಥಿಗಳಿಗೆ ಭಾಷಾ ವಿಷಯದ ಬದಲು ಆಯ್ಕೆ ಮಾಡಲು ಅಟೋಮೊಬೈಲ್‌, ಬ್ಯೂಟಿ ಮತ್ತು ವೆಲ್‌ನೆಸ್‌ ಎಂಬ ಎರಡು ವಿಷಯಗಳು ಕೌಶಲ ಭಾರತದಡಿ ಸೇರ್ಪಡೆಗೊಂಡಿದ್ದು ವೃತ್ತಿ ಆಧಾರಿತವಾಗಿದೆ. ಪ್ರತಿ ತರಗತಿಯಲ್ಲಿ ಕನಿಷ್ಠ 25 ಮಂದಿ ಇದ್ದು ಬೆಳ್ತಂಗಡಿ ಪ.ಪೂ. ಕಾಲೇಜಿಲ್ಲಿ ಸಾಕಾರಗೊಂಡಿದೆ. ಇದಕ್ಕೆ ಪ್ರತ್ಯೇಕ ಇಬ್ಬರು ಶಿಕ್ಷಕರನ್ನು ನಿಯೋಜಿಸಲಾಗಿದೆ. ಈ ಮೂಲಕ ವಿದ್ಯಾರ್ಥಿಗಳು ಪಿಯುಸಿ ಶಿಕ್ಷಣ ಪೂರ್ಣಗೊಂಡಾಗ ತಮ್ಮ ಆಯ್ಕೆಯ ಸ್ವೋದ್ಯೋಗದ ಕೌಶಲದೆಡೆಗೆ ಸಿದ್ಧಪಡಿಸುವುದೇ ಇದರ ಮೂಲ ಉದ್ದೇಶ.

ಪ್ರಾಥಮಿಕ ಜ್ಞಾನ
ಅಟೋಮೊಬೈಲ್‌ ವಿಷಯದಲ್ಲಿ ಮಾರುಕಟ್ಟೆ ಪ್ರಯೋಗ, ಸಲಕರಣೆ ಜೋಡಣೆ, ವಿಭಜನೆ, ಎಂಜಿನಿಯರಿಂಗ್‌ ಡ್ರಾಯಿಂಗ್‌ ಮುಂತಾದ ಮೂಲ ಜ್ಞಾನ ನೀಡಲಾಗುತ್ತದೆ. ಬ್ಯೂಟಿ ಆ್ಯಂಡ್‌ ವೆಲ್‌ನೆಸ್‌ನಡಿ ಶಾರೀರಿಕ ಸ್ವತ್ಛತೆ, ಬಾಹ್ಯ ಸ್ವತ್ಛತೆ, ದೇಹ ಸೌಂದರ್ಯ ವಿಚಾರವಾಗಿ ತರಬೇತಿ ನೀಡಲಾಗುತ್ತದೆ. ಇದಕ್ಕಾಗಿ ಸರಕಾರ ಪ್ರತಿ ವರ್ಷ ಅನುದಾನ ಭರಿಸುತ್ತಿದೆ. ಬೆಳ್ತಂಗಡಿ ತಾಲೂಕಿನಲ್ಲಿ ಎನ್‌ಎಸ್‌ಕ್ಯುಎಫ್‌ ಯೋಜನೆ ಇರುವ ಏಕೈಕ ಪ್ರೌಢಶಾಲೆ ಇದಾಗಿದ್ದು, ಉಳಿದಂತೆ ಬಂಟ್ವಾಳದಲ್ಲಿ ಸಿದ್ಧಕಟ್ಟೆ, ಪುತ್ತೂರು ಕೊಂಬೆಟ್ಟು, ಸುಳ್ಯ ಸರಕಾರಿ ಪ.ಪೂ. ಕಾಲೇಜಿನಲ್ಲಿ ಪ್ರಯೋಗ ನಡೆದಿದೆ.

Advertisement

ಸುಸಜ್ಜಿತ ವಿಜ್ಞಾನ ಪ್ರಯೋಗಾಲಯ
ಮಂಗಳೂರು ಕರ್ಣಾಟಕ ಬ್ಯಾಂಕ್‌ ವತಿಯಿಂದ 1.42 ಲಕ್ಷ ರೂ. ಮೊತ್ತದಲ್ಲಿ ತಾಲೂಕಿನ ಸರಕಾರಿ ಪ.ಪೂ. ಕಾಲೇಜುಗಳ ಪೈಕಿ ಉತ್ತಮ ಜೀವಶಾಸ್ತ್ರ ಪ್ರಯೋಗಾಲಯದ ಮೂಲ ವ್ಯವಸ್ಥೆ ಒದಗಿಸಲಾಗಿದೆ. ಆರ್‌ಐಡಿಎಫ್‌ ಯೋಜನೆಯಡಿ 87 ಲಕ್ಷ ರೂ.ನಲ್ಲಿ 4 ಕೊಠಡಿಯ ವಿಜ್ಞಾನ ವಿಭಾಗ ರಚಿಸಲಾಗಿದೆ. ಬೆಳ್ತಂಗಡಿ ಮಾತ್ರವಲ್ಲದೆ ಚಿಕ್ಕಮಗಳೂರು, ಮೂಡಿಗೆರೆ ಸೇರಿದಂತೆ ಇತರ ತಾಲೂಕುಗಳ ವಿದ್ಯಾರ್ಥಿಗಳು ಇಲ್ಲಿದ್ದಾರೆ. ಪ್ರಸಕ್ತ ಪ್ರೌಢಶಾಲಾ ವಿಭಾಗದಲ್ಲಿ 150 ವಿದ್ಯಾರ್ಥಿಗಳು ಹಾಗೂ ಪಿ.ಯು. ವಿಭಾಗದಲ್ಲಿ 426 ವಿದ್ಯಾರ್ಥಿಗಳು ಸೇರಿ 576 ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ.

ಉತ್ತಮ ಶಿಕ್ಷಕರ ತಂಡ
ಪ್ರಾಂಶುಪಾಲರು ಸೇರಿ ಒಟ್ಟು 20 ವರ್ಷಕ್ಕೂ ಮೇಲ್ಪಟ್ಟ ಅನುಭವವುಳ್ಳ 12 ಪೂರ್ಣಕಾಲಿಕ ಶಿಕ್ಷಕರು ಇದ್ದಾರೆ. ಶಾಲೆಯ ಅಭಿವೃದ್ಧಿಗಾಗಿ ಶಿಕ್ಷಕರೂ ಶ್ರಮಿಸುತ್ತಿದ್ದು, ಪ್ರಸಕ್ತ ವರ್ಷ ಸ್ವತಃ 35,000 ರೂ. ವೆಚ್ಚದಲ್ಲಿ ಗಾರ್ಡನ್‌, 30,000 ರೂ. ವೆಚ್ಚದಲ್ಲಿ ಸುಣ್ಣಬಣ್ಣ ಬಳಿಯಲು ಸಹಕರಿಸಿದ್ದಾರೆ.

ಮಾದರಿ ಸಂಸ್ಥೆಯಾಗಿಸುವ ಗುರಿ
ತಾಲೂಕಿನ ಕೇಂದ್ರ ಭಾಗದಲ್ಲಿರುವ ಈ ಸಂಸ್ಥೆಯು ಎಲ್ಲ ವಿಧಗಳಲ್ಲೂ ಮಾದರಿ ಸಂಸ್ಥೆಯಾಗಿ ಬೆಳವಣಿಗೆಯಾಗಬೇಕೆಂಬ ಕನಸು ಹೊತ್ತಿದ್ದೇವೆ. ಶಾಸಕ ಹರೀಶ್‌ ಪೂಂಜ, ಕಾಲೇಜು ಅಭಿವೃದ್ಧಿ ಸಮಿತಿ ಶಿಕ್ಷಕರು ಸಹಕಾರ ನೀಡುತ್ತಿದ್ದಾರೆ. ಮುಂದೆ ತಾಲೂಕಿನಲ್ಲಿರುವ ವಿದ್ಯಾಸಂಸ್ಥೆಯ ಹಳೆ ವಿದ್ಯಾರ್ಥಿಗಳು ಹಾಗೂ ವಿದ್ಯಾಭಿಮಾನಿಗಳು ಕೈಜೋಡಿಸಬೇಕಿದೆ.
-ಸುಕುಮಾರ್‌ ಜೈನ್‌, ಪ್ರಾಂಶುಪಾಲರು.

ಮಾದರಿ ಪರಿವರ್ತನೆ
– ಕಲಾ, ವಾಣಿಜ್ಯ ವಿಭಾಗದೊಂದಿಗೆ 2019-2020ನೇ ಸಾಲಿನಲ್ಲಿ ಶಾಸಕರು ಮತ್ತು ಪ್ರಾಂಶುಪಾಲರ ಪ್ರಯತ್ನದಿಂದ ವಿಜ್ಞಾನ ವಿಭಾಗ ಆರಂಭ.
– ಕರ್ಣಾಟಕ ಬ್ಯಾಂಕ್‌ ವತಿಯಿಂದ 1.42 ಲಕ್ಷ ರೂ. ಮೊತ್ತದಲ್ಲಿ ಜೀವಶಾಸ್ತ್ರ ಪ್ರಯೋಗಾಲಯದ ವ್ಯವಸ್ಥೆ.
– ರೋಟರಿ ಕ್ಲಬ್‌ ವತಿಯಿಂದ 30,000 ರೂ.ಗಳಲ್ಲಿ ಜೀವಶಾಸ್ತ್ರ ಪ್ರಯೋಗಾಲಯ ಉಪಕರಣ, 3 ಲಕ್ಷ ರೂ. ವೆಚ್ಚದಲ್ಲಿ ಸಂಸ್ಥೆಗೆ 2 ತರಗತಿ ಕೊಠಡಿಗಳ ನವೀಕರಣ(ಛಾವಣಿ, ಕಿಟಕಿ ಬಾಗಿಲು ದುರಸ್ತಿ)
– ಪ್ರಾಂಶುಪಾಲರು, ಉಪನ್ಯಾಸಕರು ಹಾಗೂ ಸಿಬಂದಿ ನೆರವಿನಿಂದ ತರಗತಿ ಕೊಠಡಿಗಳ ಪೈಂಟಿಂಗ್‌.
– ಶಾಸಕ ಹರೀಶ್‌ ಪೂಂಜ ಅವರ ಪ್ರಯ ತ್ನದಿಂದ ಸರಕಾರದ ವಿಶೇಷ ಪ್ಯಾಕೇಜ್‌ ಯೋಜನೆಯಡಿ 1 ಕೋ.ರೂ. ಅನುದಾನದಲ್ಲಿ 6 ತರಗತಿ ಕೊಠಡಿ ಮತ್ತು 2 ಶೌಚಾಲಯಗಳ ನಿರ್ಮಾಣ.

– ಚೈತ್ರೇಶ್‌ ಇಳಂತಿಲ

Advertisement

Udayavani is now on Telegram. Click here to join our channel and stay updated with the latest news.

Next