ಬೆಂಗಳೂರು: ರಾಜ್ಯದ ಉನ್ನತ ಶಿಕ್ಷಣ ವಲಯದಲ್ಲಿ ವಿದ್ಯಾರ್ಥಿಗಳಿಗೆ ಪಠ್ಯದ ಜತೆಗೆ ಕೌಶಲ್ಯಗಳನ್ನು ಕಲಿಸಲು ರೂಪಿಸಿರುವ ಕಾರ್ಯಕ್ರಮಗಳಿಗೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಎನ್ಇಪಿ ಜಾರಿ, ಪಠ್ಯಕ್ರಮ ರಚನೆ ಮತ್ತು ರೂಪಿಸಿರುವ ಚೌಕಟ್ಟು ಇತ್ಯಾದಿಗಳನ್ನು ಕುರಿತು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಮತ್ತು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಜತೆ ಅವರು ಗುರುವಾರ ವಿಚಾರ ವಿನಿಮಯ ನಡೆಸಿದರು.
ನಂತರ ಮಾತನಾಡಿದ ಪ್ರಧಾನ್ ಅವರು, `ಕರ್ನಾಟಕದಲ್ಲಿ ಉನ್ನತ ಶಿಕ್ಷಣ ಕ್ಷೇತ್ರವನ್ನು ಉದ್ಯೋಗದ ಖಾತ್ರಿಯೊಂದಿಗೆ ಬೆಸೆದು, ಕೈಗಾರಿಕಾ ಕ್ರಾಂತಿ 4.0ಗೆ ಅನುಗುಣವಾಗಿ ಪಠ್ಯಕ್ರಮವನ್ನು ರೂಪಿಸಿರುವುದು ಕ್ರಾಂತಿಕಾರಕವಾಗಿದೆ. ಜತೆಗೆ, ರಾಜ್ಯ ಕೌಶಲ್ಯಾಭಿವೃದ್ಧಿ ನಿಗಮದ ಮೂಲಕ ಈ ವರ್ಷ ರಾಜ್ಯದಲ್ಲಿ 2.50 ಲಕ್ಷ ಯುವಜನರಿಗೆ ಉಚಿತವಾಗಿ ಕೌಶಲ್ಯ ಪೂರೈಕೆ ಮಾಡುತ್ತಿರುವುದು ಸ್ತುತ್ಯರ್ಹವಾಗಿದೆ’ ಎಂದರು.
ಡಿಪ್ಲೊಮಾ, ಪಾಲಿಟೆಕ್ನಿಕ್ ಮತ್ತು ಜಿಟಿಟಿಸಿ, ಕರ್ನಾಟಕ-ಜರ್ಮನ್ ತಂತ್ರಜ್ಞಾನ ಕೇಂದ್ರಗಳೆಲ್ಲವೂ ಸುಸ್ಥಿರ ಮಾದರಿಯಲ್ಲಿರುವುದು ಶ್ಲಾಘನೀಯ ಸಂಗತಿಯಾಗಿದೆ. ಇಲ್ಲಿ ಭವಿಷ್ಯದ ತಂತ್ರಜ್ಞಾನಗಳಾದ ಕ್ಲೌಡ್ ಕಂಪ್ಯೂಟಿಂಗ್, ರೋಬೋಟಿಕ್ಸ್, ಆರ್ಟಿಫಿಶಿಯಲ್ ಇಂಟೆಲಿಜೆನ್ಸ್, ಅನಿಮೇಷನ್, ಆಟೋಮೇಷನ್ ಮುಂತಾದ ಕೋರ್ಸುಗಳನ್ನು ರೂಪಿಸಿರುವುದು ಗಮನಾರ್ಹವಾಗಿದೆ. ಈ ಮಾದರಿಯನ್ನು ಉಳಿದವರೂ ಅನುಸರಿಸಬಹುದು ಎಂದು ಅವರು ಅಭಿಪ್ರಾಯಪಟ್ಟರು.
ಪ್ರಾಥಮಿಕ ಶಿಕ್ಷಣದ ಹಂತದಲ್ಲಿ ಮುಂಬರುವ ಶೈಕ್ಷಣಿಕ ಸಾಲಿನಿಂದ ಎನ್ಇಪಿ ಜಾರಿಗೊಳಿಸಲು ಮಾಡಿಕೊಂಡಿರುವ ಸಿದ್ಧತೆಗಳ ಬಗ್ಗೆ ನಾಗೇಶ್ ಅವರು ವಿವರಿಸಿದರು.