Advertisement

ಸ್ವಾವಲಂಬನೆಗೆ ಕೌಶಲ್ಯಾಭಿವೃದ್ಧಿ ತರಬೇತಿ

03:54 PM Apr 13, 2018 | |

ಬೀದರ: ಮಹಿಳೆಯರು ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಸಹಾಯವಾಗಲೆಂದು ಕೌಶಲ್ಯ ಅಭಿವೃದ್ಧಿ ತರಬೇತಿಗಳನ್ನು ನೀಡಲಾಗುತ್ತಿದೆ. ಸ್ವ ಸಹಾಯ ಸಂಘಗಳ ಮೂಲಕ ಆರ್ಥಿಕ ನೆರವು ಒದಗಿಸಲಾಗುತ್ತಿದೆ ಎಂದು ನಬಾರ್ಡ್‌ ಸಹಾಯಕ ಮಹಾ ಪ್ರಬಂಧಕ ಡಿವಿಎಸ್‌ ಜೋಶಿ ಹೇಳಿದರು.

Advertisement

ನಗರದ ಸಹಾರ್ದ ತರಬೇತಿ ಸಂಸ್ಥೆಯಲ್ಲಿ ಆರ್ಬಿಟ್‌ ಸಂಸ್ಥೆ ಸಹಯೋಗದಲ್ಲಿ ಸ್ವ-ಸಹಾಯ ಗುಂಪುಗಳ ಸದಸ್ಯರಿಗಾಗಿ ಹಮ್ಮಿಕೊಂಡಿದ್ದ ಸ್ವ ಉದ್ಯೋಗ ತರಬೇತಿ ಕಾರ್ಯಕ್ರಮ ಸಮಾರೋಪ ಸಮಾರಂಭದಲ್ಲಿ ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಿ ಮಾತನಾಡಿದ ಅವರು, ಸಾಲವನ್ನು ಸರಿಯಾಗಿ ಮರುಪಾವತಿ ಮಾಡಿದವರಿಗೆ 5 ಲಕ್ಷ ರೂ. ವರೆಗೂ ಶೂನ್ಯ ಬಡ್ಡಿ ದರದಲ್ಲಿ ಸಾಲ ನೀಡಲಾಗುತ್ತಿದೆ. ಮಹಿಳೆಯರು ಇದರ ಪ್ರಯೋಜನ ಪಡೆಯಬೇಕು ಎಂದು ಹೇಳಿದರು.

ಲೀಡ್‌ ಬ್ಯಾಂಕ್‌ ವ್ಯವಸ್ಥಾಪಕ ಪಂಡಿತ ಹೊಸಳ್ಳಿ ಮಾತನಾಡಿ, ಪ್ರಧಾನ ಮಂತ್ರಿಗಳ ಸಾಮಾಜಿಕ ಸುರಕ್ಷತಾ ಯೋಜನೆಯಡಿ ವಿಮಾ ಸೌಲಭ್ಯಗಳ ಲಾಭ ಪಡೆಯಬೇಕು. ಇಂದು ಬ್ಯಾಂಕಿಂಗ್‌ ವ್ಯವಸ್ಥೆ ಪೂರ್ಣವಾಗಿ ನಗದುರಹಿತವಾಗಿ ಮಾರ್ಪಾಡಾಗುತ್ತಿದ್ದು, ಪ್ರತಿಯೊಬ್ಬರೂ ಬ್ಯಾಂಕ್‌ ಖಾತೆಗಳನ್ನು ಹೊಂದಲೇಬೇಕು. ಸ್ವ ಸಹಾಯ ಗುಂಪುಗಳ ನಿರ್ವಹಣೆಯಲ್ಲಿ ಸದಸ್ಯರೇ ಲೆಕ್ಕ ಪತ್ರಗಳನ್ನು ನಿರ್ವಹಿಸಲು ಕಲಿಯಬೇಕು ಎಂದು ಸಲಹೆ ನೀಡಿದರು.

ಜಿಪಂ ಯೋಜನಾ ನಿರ್ದೇಶಕ ರಾಮಕೃಷ್ಣ ಮಾತನಾಡಿ, ಮಹಿಳೆಯರಿಗೆ ಆದಾಯ ಉತ್ಪನ್ನ ಚಟುವಟಿಕೆಗಳನ್ನು ಒದಗಿಸುವ ನಿಟ್ಟಿನಲ್ಲಿ ಸಹಾಯ ಮಾಡಲು ಕೌಶಲ್ಯ ಕರ್ನಾಟಕ ಯೋಜನೆಯಲ್ಲಿ ಉಚಿತ ತರಬೇತಿಗಳನ್ನು ಆಯೋಜಿಸಲಾಗುತ್ತಿದೆ. ಉದ್ಯೋಗ ಕೈಗೊಳ್ಳಲು ರಾಜೀವ ಗಾಂಧಿ ಚೈತನ್ಯ ಯೋಜನೆಯಲ್ಲಿ 2.5 ಲಕ್ಷ ಸಾಲ ನೀಡಲಾಗುತ್ತಿದೆ.

ಅದಕ್ಕೆ 50,000 ರೂಪಾಯಿ ಸಹಾಯಧನ ಕೂಡ ನೀಡಲಾಗುತ್ತಿದೆ. ಉತ್ನನ್ನಗಳನ್ನು ತಯಾರಿಸುವ ಕುಶಲ ಕರ್ಮಿಗಳಿಗೆ ತಮ್ಮ ಉತ್ಪನ್ನ ಮಾರುಕಟ್ಟೆ ಮಾಡಲು ದೇಶದ ನಾನಾ ಕಡೆ ನಡೆಯುವ ವಸ್ತು ಪ್ರದರ್ಶನ, ಮಾರಾಟ ಮೇಳಗಳಿಗೆ ಜಿಪಂ ಮೂಲಕ ಅನುದಾನ ನೀಡಿ ಕಳಿಸಲಾಗುತ್ತದೆ ಎಂದರು. 

Advertisement

ಆರ್ಬಿಟ್‌ ಸಂಸ್ಥೆಯ ಸಿಸ್ಟರ್‌ ಫೀಡಾ ಮಾತನಾಡಿ, ಶಾಲಾ ಕಾಲೇಜುಗಳ ಬ್ಯಾಗ್‌, ಸಮವಸ್ತ್ರ ಹೊಲಿಯುವ ಕೆಲಸ ಲಭ್ಯವಿದ್ದು ಮಹಿಳೆಯರು ಸ್ವ ಸಹಾಯ ಸಂಘದ ನೇತೃತ್ವದಲ್ಲಿ ಇದನ್ನು ಪೂರೈಸಬೇಕು ಎಂದು ಹೇಳಿದರು. ಸಹಾರ್ದ ಸಂಸ್ಥೆಯ ನಿರ್ದೇಶಕ ಸುಬ್ರಹ್ಮಣ್ಯ ಪ್ರಭು ಸ್ವಾಗತಿಸಿದರು.
ಅನಿಲಕುಮಾರ ಪರಶೆಣೆ, ತನ್ವಿರ ರಜಾ ಮತ್ತು ನಾಗಶೆಟ್ಟಿ ಘೋಡಂಪಳ್ಳಿ ನಿರ್ವಹಿಸಿದರು. ಎಸ್‌.ಜಿ. ಪಾಟೀಲ ವಂದಿಸಿದರು.

ಸ್ವಉದ್ಯೋಗ ಮಾಡಲು ರೆಕ್ಸಿನ್‌ ಬ್ಯಾಗ್‌ ಮತ್ತು ಪರದೆ ತಯಾರಿಸುವ ಕುರಿತು 13 ದಿನಗಳ ಕಾಲ ತರಬೇತಿ ನೀಡಲಾಯಿತು. ನಬಾರ್ಡ್‌ ವತಿಯಿಂದ ನಡೆದ ತರಬೇತಿಯಲ್ಲಿ ಸ್ವ ಸಹಾಯ ಗುಂಪಿನ 60ಕ್ಕೂ ಹೆಚ್ಚು ಸದಸ್ಯರಿಗೆ ಹೃಹೋಪಯೋಗಿ ವಸ್ತುಗಳನ್ನು ತಯಾರಿಸುವುದನ್ನು ಕಲಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next