Advertisement

ರಘು ತಿಥಿ ದಿನವೇ ಮಂಜನಿಗೆ ಸ್ಕೆಚ್!

01:06 AM Aug 28, 2019 | Lakshmi GovindaRaj |

ಬೆಂಗಳೂರು: ಟ್ಯಾಬ್ಲೆಟ್‌ ರಘು ಕೊಲೆಗೆ ಪ್ರತೀಕಾರವಾಗಿ ಆತನ ಎರಡನೇ ವರ್ಷದ ತಿಥಿಯಂದೇ ರೌಡಿ ತಮ್ಮ ಮಂಜನನ್ನು ಮಗಿಸಲು ಸಂಚು ರೂಪಿಸಲಾಗಿತ್ತು ಎಂಬ ವಿಚಾರ ಪೊಲೀಸರ ತನಿಖೆಯಲ್ಲಿ ಬಯಲಾಗಿದೆ.

Advertisement

ಭಾನುವಾರ ರಾತ್ರಿ ನಡೆದ ರೌಡಿಶೀಟರ್‌ ತಮ್ಮ ಮಂಜ ಹಾಗೂ ಬಿಲ್ಡರ್‌ ಒಬ್ಬರ ಮಗ ವರುಣ್‌ ರೆಡ್ಡಿ ಜೋಡಿ ಕೊಲೆ ಪ್ರಕರಣದ ಆರೋಪಿಗಳು ಪೊಲೀಸರ ವಿಚಾರಣೆ ವೇಳೆ ಈ ಮಾಹಿತಿ ಬಾಯ್ಬಿಟ್ಟಿದ್ದಾರೆ.ಅಣ್ಣ ಟ್ಯಾಬ್ಲೆಟ್‌ ರಘು ಕೊಲೆಗೆ ಪ್ರತೀಕಾರವಾಗಿ ಮಂಜನನ್ನು ಕೊಂದು ಹಗೆ ತೀರಿಸಲು ಕಾಯುತ್ತಿದ್ದ ನರೇಂದ್ರ, ಇದಕ್ಕಾಗಿಯೇ ಮಲಯಾಳಿ ಮಧು, ಲಿಖೀನ್‌ ಜತೆ ಸೇರಿ ಸಂಚು ರೂಪಿಸಿದ್ದ.

ಆ. 22ರಂದು ಟ್ಯಾಬ್ಲೆಟ್‌ ರಘುವಿನ ಎರಡನೇ ವರ್ಷದ ತಿಥಿ ದಿನವಾಗಿತ್ತು. ಅದೇ ದಿನ ಮಂಜನನ್ನು ಕೊಲ್ಲುವ ಶಪಥ ಮಾಡಿದ್ದರು. ಇದಕ್ಕಾಗಿ ಸುಮಾರು ಎರಡು ತಿಂಗಳಿನಿಂದ ಮಂಜನ ಕೊಲೆಗೆ ಯತ್ನಿಸಿದರೂ ಸಫ‌ಲವಾಗಿರಲಿಲ್ಲ. ಪ್ರತಿದಿನ ಇಸ್ಪೀಟ್‌ ಅಡ್ಡೆ ವ್ಯವಹಾರ ಮುಗಿದ ಮೇಲೆ ಮಂಜ, ಒಂದು ದಿನ ಬೈಕ್‌, ಆಟೋ, ಕಾರಿನಲ್ಲಿ ಹೊರಟು ಹೋಗುತ್ತಿದ್ದ. ಅವನು ಒಬ್ಬಂಟಿಯಾಗಿ ಸಿಗುತ್ತಿರಲಿಲ್ಲ.

ಅಂತಿಮವಾಗಿ ಭಾನುವಾರ ರಾತ್ರಿ ಮಂಜ ಹಾಗೂ ವರುಣ್‌ ರೆಡ್ಡಿಯನ್ನು ಕಾರಿನಲ್ಲಿ ಚೇಸ್‌ ಮಾಡಿದ ಆರೋಪಿಗಳು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆಗೈದಿದ್ದರು ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

ಮಂಜನ ವಿರುದ್ಧ ತಿರುಗಿಬಿದ್ದಿದ್ದ ಮಧು!: ದಕ್ಷಿಣ ವಿಭಾಗದಲ್ಲಿ ರೌಡಿ ವಲಯದಲ್ಲಿ ಅಧಿಪತ್ಯ ಹಾಗೂ ಇಸ್ಪೀಟ್‌ ಅಡ್ಡೆಗಳ ಮೇಲಿನ ನಿಯಂತ್ರಣಕ್ಕಾಗಿ ಟ್ಯಾಬ್ಲೆಟ್‌ ರಘು ಹಾಗೂ ತಮ್ಮ ಮಂಜನ ನಡುವೆ ವೈಷಮ್ಯ ಬೆಳೆದಿತ್ತು. ಈ ಸಂದರ್ಭದಲ್ಲಿ ಮಂಜನ ಬಲಗೈ ಬಂಟನಾಗಿ ಮಧು ಕೆಲಸ ಮಾಡುತ್ತಿದ್ದ. ಈ ಬೆಳವಣಿಗೆಗಳ ನಡುವೆಯೇ ಮತ್ತೂಬ್ಬ ರೌಡಿ ವಜ್ರೆಶ್ವರ್‌ ಅಶ್ವಿ‌ನಿ ಎಂಬಾಕೆಯನ್ನು ಪ್ರೀತಿಸುತ್ತಿದ್ದ ಅವರಿಬ್ಬರಿಗೂ ಜಗಳ ನಡೆದಿತ್ತು. ಈ ವೇಳೆ ರಾಜಿ ಸಂಧಾನ ಮಾಡಲು ಹೋಗಿದ್ದ ಮಧು ಆಕೆಯನ್ನು ಬಲೆಗೆ ಬೀಳಿಸಿಕೊಂಡು ತನ್ನ ಜತೆ ಕರೆದೊಯ್ದಿದ್ದ.

Advertisement

ಇದರಿಂದ ಕೋಪಗೊಂಡಿದ್ದ ತಮ್ಮ ಮಂಜ ಹಾಗೂ ವಜ್ರೆàಶ್ವರ್‌, ಮಧು ಮೇಲೆ ಹಲ್ಲೆ ನಡೆಸಿದ್ದರು. ಇದರಿಂದ ಅವರ ಗ್ಯಾಂಗ್‌ನಿಂದ ದೂರವಾಗಿದ್ದ. ಇತ್ತ ಸಹೋದರ ರಘು ಕೊಂದ ಮಂಜನ ಮುಗಿಸಲು ಸಮಯ ಕಾಯುತ್ತಿದ್ದ ನರೇಂದ್ರ, ಸಹಾಯ ಕೇಳಿದಾಗ ಮಧು ಕೂಡ ಒಪ್ಪಿಕೊಂಡಿದ್ದ ಎಂದು ಹಿರಿಯ ಅಧಿಕಾರಿ ಹೇಳಿದರು.

ಕವಳನ ಕೊಲೆ ಕೇಸಲ್ಲಿ ವರುಣ್‌, ಅಣ್ಣ!: ತಮ್ಮ ಮಂಜನ ಜತೆಯಲ್ಲಿ ಕೊಲೆಯಾದ ವರುಣ್‌ ರೆಡ್ಡಿ ಹಿನ್ನೆಲೆ ಪರಿಶೀಲನೆ ಮಾಡಲಾಗುತ್ತಿದೆ. ಬಿಕಾಂ ಪದವೀಧರನಾಗಿರುವ ವರುಣ್‌ ತಂದೆಯ ಜತೆ ಬಿಲ್ಡಿಂಗ್‌ ಕಾಂಟ್ರಾಕ್ಟ್ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದ. ಮಂಜನ ಸ್ನೇಹ ಪಡೆದ ಬಗ್ಗೆ ಅವರ ಪೋಷಕರಿಗೆ ಮಾಹಿತಿಯಿಲ್ಲ.

2014ರಲ್ಲಿ ನಡೆದಿದ್ದ ಕುಖ್ಯಾತ ರೌಡಿಶೀಟರ್‌ ಕವಳನ ಕೊಲೆ ಪ್ರಕರಣದಲ್ಲಿ ವರುಣ್‌ ಸಹೋದರ ಸಂಬಂಧಿ ಭಾಗಿಯಾಗಿ ಸದ್ಯ ಜೈಲಿನಲ್ಲಿದ್ದಾನೆ ಎಂಬ ಮಾಹಿತಿಯಿದೆ. ಈ ಆಯಾಮದಲ್ಲಿಯೂ ತನಿಖೆ ಮುಂದುವರಿಸಲಾಗಿದೆ ಎಂದು ಅಧಿಕಾರಿ ತಿಳಿಸಿದರು.

ನ್ಯಾಯಾಲಯಕ್ಕೆ ಶರಣಾದ ನರೇಂದ್ರ!: ಮಂಜ ಹಾಗೂ ವರುಣ್‌ ಜೋಡಿ ಕೊಲೆ ಪ್ರಕರಣದ ಪ್ರಮುಖ ಆರೋಪಿ ನರೇಂದ್ರ ಸೋಮವಾರವೇ ನ್ಯಾಯಾಲಯಕ್ಕೆ ಶರಣಾಗಿದ್ದಾನೆ. ಈ ಪ್ರಕರಣದ ತನಿಖೆ ಮುಂದುವರಿಸಿದ ಸುಬ್ರಹ್ಮಣ್ಯಪುರ ಉಪವಿಭಾಗದ ಎಸಿಪಿ ಮಹದೇವ್‌, ಇನ್ಸ್‌ಪೆಕ್ಟರ್‌ ಎಚ್‌.ವಿ ಪರಮೇಶ್‌ ನೇತೃತ್ವದ ತಂಡ, ಮಲಯಾಳಿ ಮಧು ಹಾಗೂ ಬಿ.ವಿ ಲಿಖೀನ್‌ನನ್ನು ಬಂಧಿಸಿದ್ದು, ಉಳಿದ ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

ತಂಗಿಯ ಮದುವೆ ಸೇಡಿಗೆ ಸುನೀಲನ ಕೊಲೆ!
ಬೆಂಗಳೂರು: ಸಹೋದರಿ ಪ್ರೇಮವಿವಾಹಕ್ಕೆ ಸಹಾಯ ಮಾಡಿದ್ದ ಎಂಬ ಕಾರಣಕ್ಕೆ ಮಾರೇನಹಳ್ಳಿ ಸುನೀಲ್‌ಕುಮಾರ್‌ನನ್ನು ರೌಡಿಶೀಟರ್‌ ವಿವೇಕ್‌ ಆತನ ಸಹಚರರು ಕೊಲೆ ಮಾಡಿದ್ದರು ಎಂಬ ವಿಚಾರ ಪೊಲೀಸರ ತನಿಖೆಯಲ್ಲಿ ಗೊತ್ತಾಗಿದೆ. ಆ. 24ರಂದು ರಾತ್ರಿ ನಡೆದಿದ್ದ ಕ್ಯಾಬ್‌ ಚಾಲಕ ಸುನೀಲ್‌ಕುಮಾರ್‌ ಕೊಲೆ ಪ್ರಕರಣದ ತನಿಖೆ ನಡೆಸುತ್ತಿದ್ದ ಜೆ.ಪಿ ನಗರ ಪೊಲೀಸರು, ಆರೋಪಿಗಳಾದ ವಿವೇಕ್‌, ಆತನ ಸಹಚರ ಅಖೀಲೇಶ್‌ನನ್ನು ಬಂದಿಸಲಾಗಿದೆ.

ಪ್ರಮುಖ ಆರೋಪಿ ವಿವೇಕ್‌ ಸಹೋದರಿ ನಂದಿನಿಯನ್ನು ಸಂತೋಷ್‌ ಎಂಬಾತ ಪ್ರೀತಿಸುತ್ತಿದ್ದ. ಇವರು ಪರಾರಿಯಾಗಿ ಮದುವೆಯಾಗಲು ಸುನೀಲ್‌ ಸಹಾಯ ಮಾಡಿದ್ದ. ಜತೆಗೆ, ಈ ವಿಚಾರವನ್ನು ಮಾರೇನಹಳ್ಳಿಯಲ್ಲಿ ಹೇಳಿಕೊಂಡು ತಿರುಗಾಡುತ್ತಿದ್ದ. ಈ ವಿಚಾರಕ್ಕೆ ಕೋಪಗೊಂಡಿದ್ದ ವಿವೇಕ್‌, ತನ್ನ ಸಹಚರರ ಜತೆಗೂಡಿ ಸುನೀಲ್‌ ಕೊಲೆಗೆ ಸಂಚು ರೂಪಿಸಿದ್ದ.

ಅದರಂತೆ ಆ. 24ರಂದು ರಾತ್ರಿ 12.30ರ ಸುಮಾರಿಗೆ ಸುನೀಲ್‌ ಬೈಕ್‌ನಲ್ಲಿ ಕ್ಯಾಬ್‌ ಚಲಾಯಿಸಿಕೊಂಡು ಬರುತ್ತಿದ್ದನ್ನು ಗಮನಿಸಿ ಕಾರಿನಲ್ಲಿ ಪಾಲೋ ಮಾಡಿದ್ದ ವಿವೇಕ್‌ ಹಾಗೂ ಆತನ ಸಹಚರರು ಬಾರ್‌ವೊಂದರ ಸಮೀಪ ಅಡ್ಡಗಟ್ಟಿ ಜಗಳ ಮಾಡಿದ್ದರು. ಬಳಿಕ ಬಿಯರ್‌ ಬಾಟೆಲ್‌ನಿಂದ ತಲೆಗೆ ಹೊಡೆದು, ಚಾಕುವಿನಿಂದ ಚುಚ್ಚಿ ಪರಾರಿಯಾಗಿದ್ದರು. ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫ‌ಲಿಸದೆ ಮೃತಪಟ್ಟಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿ ವಿವೇಕ್‌ ವಿರುದ್ಧ ಜೆ.ಪಿ ನಗರ ಠಾಣೆಯಲ್ಲಿ ರೌಡಿಪಟ್ಟಿಯಿದೆ. ಪ್ರಕರಣದಲ್ಲಿ ಭಾಗಿಯಾದ ಶ್ರೀನಿವಾಸ್‌, ರೇಣುಕಾ ಪ್ರಸಾದ್‌, ರಘು ಹಾಗೂ ಅನುಷ್‌ ತಲೆಮರೆಸಿಕೊಂಡಿದ್ದು ಅವರ ಬಂಧನಕ್ಕೆ ಕ್ರಮ ವಹಿಸಲಾಗಿದೆ ಎಂದು ಪೊಲೀಸರು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next