Advertisement

ಚಂಪಾ ಕ್ರೀಡಾಂಗಣದಲ್ಲಿ ಸ್ಕೇಟಿಂಗ್‌ ರಿಂಕ್‌

10:34 AM Aug 04, 2018 | Team Udayavani |

ಕಲಬುರಗಿ: ನಗರದ ಚಂದ್ರಶೇಖರ ಪಾಟೀಲ ಕ್ರೀಡಾಂಗಣದಲ್ಲಿ 40 ಲಕ್ಷ ರೂ. ವೆಚ್ಚದಲ್ಲಿ ಸ್ಕೇಟಿಂಗ್‌ ರಿಂಕ್‌ ನಿರ್ಮಿಸಲು ಜಿಲ್ಲಾ ಕ್ರೀಡಾಂಗಣ ಸಮಿತಿ ನಿರ್ಧರಿಸಿದೆ ಎಂದು ಪ್ರಾದೇಶಿಕ ಆಯುಕ್ತ ಹಾಗೂ ಎಚ್‌.ಕೆ.ಆರ್‌.ಡಿ.ಬಿ. ಕಾರ್ಯದರ್ಶಿ ಸುಬೋಧ ಯಾದವ ತಿಳಿಸಿದರು.

Advertisement

ಪ್ರಾದೇಶಿಕ ಆಯುಕ್ತರ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಕ್ರೀಡಾಂಗಣ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ
ಎಚ್‌.ಕೆ.ಆರ್‌.ಡಿ.ಬಿ ಮಂಡಳಿಯಿಂದ 20 ಲಕ್ಷ ರೂ., ಉಳಿದ 20 ಲಕ್ಷ ರೂ. ಅನುದಾನವನ್ನು ಶಾಸಕರು ಹಾಗೂ ಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿ ಅನುದಾನ, ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಅನುದಾನ ಪಡೆದು ಸ್ಕೇಟಿಂಗ್‌ ರಿಂಕ್‌ ನಿರ್ಮಿಸಲಾಗುವುದು ಎಂದರು.

ಚಂದ್ರಶೇಖರ ಪಾಟೀಲ ಕ್ರೀಡಾಂಗಣದಲ್ಲಿ ಫುಟ್‌ ಬಾಲ್‌ ಮತ್ತು ಕ್ರಿಕೆಟ್‌ಗೆ ಪ್ರತ್ಯೇಕ ಆಟದ ಮೈದಾನದ ಕೊರತೆಯಿರುವ ಹಿನ್ನೆಲೆಯಲ್ಲಿ ಈಜುಕೊಳ ಹಿಂದುಗಡೆ ಲೋಕೋಪಯೋಗಿ ಇಲಾಖೆಗೆ ಸೇರಿದ ಏಳು ಎಕರೆ ನಿವೇಶನ ಲಭ್ಯವಿದೆ. ಇದನ್ನು ಕ್ರೀಡಾ ಇಲಾಖೆಗೆ ಪಡೆದು ಅಲ್ಲಿ ಕ್ರಿಕೆಟ್‌ ಮತ್ತು ಫುಟ್‌ಬಾಲ್‌ ಮೈದಾನ ನಿರ್ಮಿಸಬಹುದಾಗಿದೆ ಎಂದು ಹೇಳಿದರು.

ಈ ಏಳು ಎಕರೆ ಜಮೀನನ್ನು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಗೆ ಉಚಿತವಾಗಿ ನೀಡಲು ಲೋಕೋಪಯೋಗಿ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲು ನಿರ್ಧರಿಸಲಾಗಿದೆ. ಅಲ್ಲದೆ ನಗರದ ಬಡೇಪುರ ಪ್ರದೇಶದ ವಿರೇಂದ್ರ ಪಾಟೀಲ ಬಡಾವಣೆಯಲ್ಲಿ ಲಭ್ಯವಿರುವ 2.75 ಎಕರೆ ಜಮೀನಿನಲ್ಲಿ ಕ್ರಿಕೆಟ್‌ ಪ್ರಾಕ್ಟಿಸ್‌ ಪಿಚ್‌ ಮತ್ತು ವಿವಿಧ ಕ್ರೀಡಾ ಸೌಲಭ್ಯ ನಿರ್ಮಿಸಲಾಗುವುದು ಎಂದು ತಿಳಿಸಿದರು.

ಇತ್ತೀಚೆಗೆ ಕ್ರೀಡಾಂಗಣದಲ್ಲಿನ ಮಕ್ಕಳ ಈಜುಕೊಳ ದುರಸ್ತಿ ಮಾಡಿದರೂ ಸೋರಿಕೆಯಾಗುತ್ತಿದೆ. ವಾರದೊಳಗೆ ಇದನ್ನು ದುರಸ್ತಿ ಮಾಡಬೇಕು. ಕ್ರೀಡಾಂಗಣದಲ್ಲಿ ಓವರ್‌ ಹೆಡ್‌ ಟ್ಯಾಂಕ್‌ ನಿರ್ಮಿಸಲಾಗಿದೆ. ಇದಕ್ಕೆ ಕೂಡಲೆ ಪೈಪ್‌ಲೈನ್‌ ಸಂಪರ್ಕ ಕಲ್ಪಿಸಬೇಕು ಎಂದು ಸೂಚಿಸಿದರು.
 
ನಿರ್ಮಿತಿ ಕೇಂದ್ರದ ಅಧಿಕಾರಿಗಳು ಜಿಲ್ಲಾ ಕ್ರೀಡಾಧಿಕಾರಿಗಳೊಂದಿಗೆ ಕ್ರೀಡಾಂಗಣದಲ್ಲಿ ನಡೆಯುತ್ತಿರುವ
ವಿವಿಧ ಕಾಮಗಾರಿಗಳ ಪ್ರಗತಿಯನ್ನು ಜಂಟಿ ಸಮೀಕ್ಷೆ ಮಾಡಿ ಪರಿಶೀಲಿಸಬೇಕು. ಪೂರ್ಣಗೊಳ್ಳದ ಕಾಮಗಾರಿಗಳನ್ನು ಶೀಘ್ರ ಮುಗಿಸಬೇಕು. ಕ್ರೀಡಾಂಗಣದಲ್ಲಿನ ಶೌಚಾಲಯಗಳಲ್ಲಿ ಸ್ವತ್ಛತೆಗೆ ಆದ್ಯತೆ ನೀಡಬೇಕು ಎಂದರು.

Advertisement

ಜಿಲ್ಲಾ ಕ್ರೀಡಾಂಗಣ ಸಮಿತಿಯಲ್ಲಿ ಕ್ರೀಡಾ ಕ್ಷೇತ್ರದ ಸದಸ್ಯರನ್ನು ನೇಮಕ ಮಾಡಬೇಕು. ಸಮಿತಿಗೆ ಪೂರಕವಾಗಿ ಜಿಲ್ಲಾ ಕ್ರೀಡಾಂಗಣ ಕಾರ್ಯನಿರ್ವಾಹಕ ಸಮಿತಿ ರಚಿಸಬೇಕು. ಬಳಕೆದಾರರನ್ನು ಸಮಿತಿಗೆ ನೇಮಿಸಿದರೆ ಕ್ರೀಡಾ ಸೌಲಭ್ಯಗಳನ್ನು ಇನ್ನಷ್ಟು ಉತ್ಕೃಷ್ಟಗೊಳಿಸಬಹುದಾಗಿದೆ ಎಂದರಲ್ಲದೆ ಜಿಲ್ಲಾ ಕ್ರೀಡಾಂಗಣದಲ್ಲಿರುವ ಕ್ಯಾಂಟಿನ್‌ ಪ್ರಾರಂಭಿಸಲು ಕೂಡಲೆ ಟೆಂಡರ್‌ ಕರೆಯುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಕೇಂದ್ರ ಸರ್ಕಾರದ “ಖೇಲೋ ಇಂಡಿಯಾ’ ಯೋಜನೆಯಡಿ ಕ್ರೀಡಾಂಗಣದಲ್ಲಿ ಫುಟಬಾಲ್‌, ಹಾಕಿ ಸಿಂಥೆಟಿಕ್‌ ಹಾಗೂ ಜುಡೋ, ರೆಸ್ಟಲಿಂಗ್‌ ಹಾಲ್‌
ನಿರ್ಮಿಸಲು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಅಗತ್ಯ ಕ್ರಮ ಲೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಆರ್‌.ಜಿ. ನಾಡಗೀರ ಮಾತನಾಡಿ, ಕ್ರೀಡಾಂಗಣದಲ್ಲಿ 17 ಕ್ರೀಡಾ ಸೌಲಭ್ಯಗಳಿವೆ. ಪ್ರತಿ ದಿನ 900ಕ್ಕಿಂತ ಹೆಚ್ಚು ಕ್ರೀಡಾ ಪಟುಗಳು ಇದರ ಸೌಲಭ್ಯ ಪಡೆಯುತಿದ್ದಾರೆ ಎಂದರು.

ನಿರ್ಮಿತಿ ಕೇಂದ್ರದ ಯೋಜನಾ ವ್ಯವಸ್ಥಾಪಕ ಏಕಾಂತಪ್ಪ, ಜಿಪಂ ಅಧ್ಯಕ್ಷೆ ಸುವರ್ಣಾ ಹಣಮಂತರಾಯ ಮಲಾಜಿ, ಮಹಾನಗರ ಪಾಲಿಕೆ ಮಹಾಪೌರ ಶರಣಕುಮಾರ ಮೋದಿ, ವಿಧಾನ ಪರಿಷತ್‌ ಸದಸ್ಯ ಬಿ.ಜಿ. ಪಾಟೀಲ ಸಲಹೆ ನೀಡಿದರು. ಜಿಲ್ಲಾಧಿಕಾರಿ ಆರ್‌. ವೆಂಕಟೇಶಕುಮಾರ, ಜಿಪಂ ಸಿಇಒ ಹೆಪ್ಸಿಬಾರಾಣಿ ಕೋರ್ಲಪಾಟಿ, ಪ್ರೊಬೇಷನರಿಐ.ಎ.ಎಸ್‌. ಅಧಿಕಾರಿ ಸ್ನೇಹಲ್‌ ಸುಧಾಕರ ಲೋಕಂಡೆ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next