ಹುಬ್ಬಳ್ಳಿ: ಸ್ಕೇಟಿಂಗ್ ಮಾಡುತ್ತಲೇ ಮೂರು ಹುಲಾಹೂಪ್ ಅನ್ನು 9 ನಿಮಿಷಗಳ ಕಾಲ ತಿರುಗಿಸುವ ಮೂಲಕ ಒಂಭತ್ತು ವರ್ಷದ ಬಾಲಕಿ ಸ್ತುತಿ ಕುಲಕರ್ಣಿ ಏಷ್ಯಾ ಬುಕ್ ಆಫ್ ರೆಕಾರ್ಡ್, ಗೋಲ್ಡನ್ ಬುಕ್ ಆಫ್ ರೆಕಾರ್ಡ್‌ಗೆ ಮುನ್ನುಡಿ ಬರೆದಿದ್ದಾಳೆ.
ಗೋಕುಲ ರಸ್ತೆಯ ಡೆಕಾಥ್ಲಾನ್‌ನಲ್ಲಿ ರವಿವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಸ್ತುತಿ ಈ ಸಾಧನೆ ಮಾಡಿದ್ದಾಳೆ. 9 ನಿಮಿಷಗಳ ಕಾಲ ಹೈವೀಲ್ ಇನ್‌ಲೈನ್ ಸ್ಕೇಟಿಂಗ್ ಮಾಡುವ ಮೂಲಕ ಹೊಸ ದಾಖಲೆ ನಿರ್ಮಿಸಿದ್ದಾಳೆ. ಈ ದಾಖಲೆಯನ್ನು ಸಂಪೂರ್ಣ ಚಿತ್ರೀಕರಿಸಲಾಗಿದ್ದು, ಏಷ್ಯಾಬುಕ್ ಆಫ್ ರೆಕಾರ್ಡ್, ಗೋಲ್ಡನ್ ಬುಕ್ ಆಫ್ ರೆಕಾರ್ಡ್‌ಗೆ ಕಳುಹಿಸಲಾಗಿದೆ. ಎರಡು ತಿಂಗಳಲ್ಲಿ ಪ್ರಮಾಣಪತ್ರ ದೊರೆಯುವ ನಿರೀಕ್ಷೆಯಿದೆ. ಗೆಜೆಟೆಡ್ ಅಧಿಕಾರಿಗಳಾದ ನಿರ್ಮಲಾ ಹಾಗೂ ಡಾ| ಎಂ.ಜಿ. ಗಿರಿಯಪ್ಪಗೌಡ ಅವರು ಇದನ್ನು ಪ್ರಮಾಣೀಕರಿಸಿದ್ದಾರೆ.
ಆಸ್ಟ್ರೇಲಿಯಾದ ಮಾರ್ವಾ ಇಬ್ರಾಹಿಂ ಎಂಬುವರು ಹೈಹೀಲ್ಡ್ನಲ್ಲಿ ಸ್ಕೇಟಿಂಗ್ ಮಾಡಿ ದಾಖಲೆ ಬರೆದಿದ್ದರು. ಇವರ ವಿಡಿಯೋಗಳನ್ನು ಯುಟ್ಯೂಬ್‌ನಿಂದ ಸಂಗ್ರಹಿಸಿ ಪ್ರೇರಣೆಯಾಗಿರಿಸಿಕೊಂಡು ಸುಮಾರು ಒಂದು ವರ್ಷಗಳ ಕಾಲ ಸ್ತುತಿ ಅಭ್ಯಾಸ ಮಾಡಿದ್ದಳು. ಇದರ ಪರಿಣಾಮ ಇದೀಗ 9 ನಿಮಿಷ ಕಾಲ ತಿರುಗಿಸುವ ಮೂಲಕ ಹೊಸ ದಾಖಲೆ ಬರೆದಿರುವುದು ಸಂತಸ ಮೂಡಿಸಿದೆ ಎಂದು ತರಬೇತುದಾರ ಅಕ್ಷಯ ಸೂರ್ಯವಂಶಿ ತಿಳಿಸಿದರು.
ಇಲ್ಲಿನ ಶಿರೂರು ಪಾರ್ಕ್ ನಿವಾಸಿಯಾಗಿರುವ ರಶ್ಮಿ ಕುಲಕರ್ಣಿ ಹಾಗೂ ಕಿಶೋರ ಕುಲಕರ್ಣಿ ಪುತ್ರಿಯಾಗಿರುವ ಸ್ತುತಿ ಕುಲಕರ್ಣಿ, ಪರಿವರ್ತನಾ ಗುರುಕುಲ ಶಾಲೆಯ ವಿದ್ಯಾರ್ಥಿಯಾಗಿದ್ದಾಳೆ. ಎರಡು ವರ್ಷಗಳಿಂದ ಹುಬ್ಬಳ್ಳಿ ರೋಲರ್ ಸ್ಕೇಟಿಂಗ್ ಕ್ಲಬ್‌ನಲ್ಲಿ ತರಬೇತಿ ಪಡೆಯುತ್ತಿದ್ದಾಳೆ.
ಪರ್ಫೆಕ್ಟ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ನಲ್ಲಿ ಇನ್‌ಲೈನ್ ಸ್ಕೇಟಿಂಗ್ ವಿತ್ ಹೂಲಾಹುಪ್ ದಾಖಲೆ, ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ನಲ್ಲಿ ಹೂಲಾಹುಪ್ ಬಳಸಿ ಸ್ಕೇಟಿಂಗ್ ಮಾಡುವ ಕಿರಿಯ ಬಾಲಕಿ ಎಂಬ ದಾಖಲೆ, ವರ್ಲ್ಡ್ ರೆಕಾರ್ಡ್ಸ್ ಇಂಡಿಯಾದಲ್ಲಿ ಬಾಲಕಿಯರ ವಿಭಾಗದಲ್ಲಿ ಅತೀ ಹೆಚ್ಚು ಹೂಲಾಹುಪ್ ಬಳಸಿ ಇನ್‌ಲೈನ್ ಸ್ಕೇಟಿಂಗ್ ಮಾಡಿದ ದಾಖಲೆ ಬರೆದಿದ್ದಾಳೆ.
ಗಿನ್ನಿಸ್ ರೆಕಾರ್ಡ್ ಕನಸು: ಅತ್ಯಂತ ಕಿರಿಯ ವಯಸ್ಸಿನಲ್ಲಿ ಸ್ಕೇಟಿಂಗ್ ಕ್ರೀಡೆಯಲ್ಲಿ ಹಲವು ದಾಖಲೆ ಮಾಡಿರುವ ಸ್ತುತಿಗೆ ಗಿನ್ನಿಸ್ ದಾಖಲೆ ಮಾಡಬೇಕೆಂಬ ಹೆಬ್ಬಯಕೆಯಿದೆ. ಇತ್ತೀಚೆಗೆ ಗಿನ್ನಿಸ್ ದಾಖಲೆಗೆ ಪ್ರಯತ್ನ ನಡೆದಿತ್ತು. 16 ವರ್ಷದೊಳಗಿರುವ ಕಾರಣಕ್ಕೆ ಇದು ಸಾಧ್ಯವಾಗಲಿಲ್ಲ. ಈ ಅಭ್ಯಾಸ ಫಲಕಾರಿಯಾಗಬೇಕು ಎನ್ನುವ ಕಾರಣಕ್ಕೆ ಇದೀಗ ಎರಡು ದಾಖಲೆಗಳಿಗೆ ಮುಂದಾಗಿದ್ದಾರೆ. ಮುಂದೊಂದು ದಿನ ಸ್ಕೇಟಿಂಗ್‌ನಲ್ಲಿ ವಿಶ್ವ ದಾಖಲೆ ಮಾಡುವ ಭರವಸೆಯನ್ನು ಸ್ತುತಿ ವ್ಯಕ್ತಪಡಿಸಿದ್ದಾಳೆ.