ನವದೆಹಲಿ: ಉತ್ತರಾಖಂಡ್ ಮೂಲದ ಈ ಯುವಕ ಒಂದಲ್ಲ, ಎರಡಲ್ಲ, 4 ಬಾರಿ ಕ್ವಾರಂಟೈನ್ ಅನುಭವಿಸಿದ್ದಾರೆ!
ಇರಾನ್ ದೇಶದ ರಾಜಧಾನಿ ಟೆಹರಾನ್‌ನಲ್ಲಿ ಶಿಪ್ಪಿಂಗ್ ಕಂಪನಿಯೊಂದರಲ್ಲಿ ಉದ್ಯೋಗದಲ್ಲಿದ್ದ ಪ್ರವೀಣ್ ಬುರಾಠಿ ಎಂಬ ಯುವಕ ತಿಂಗಳ ಹಿಂದೆ ರಜೆ ಪಡೆದು ತನ್ನ ಸ್ವಂತ ಊರಾದ ಉತ್ತರಾಖಂಡದ ಖಾಟೋಲಿಯಕ್ಕೆ ಹೊರಟಿದ್ದರು.
ಫೆ.28 ರಂದು ಹೊರಟಿದ್ದ ವೇಳೆಗೆ ಇರಾನ್ ನಲ್ಲಿ ಲಾಕ್‌ಡೌನ್ ಘೋಷಿಸಲಾಯಿತು. ಭಾರತಕ್ಕೆ ಮರಳುವ ಉದ್ದೇಶದಿಂದ ಪ್ರವೀಣ್, ಭಾರತೀಯ ರಾಯಭಾರಿ ಕಚೇರಿಯನ್ನು ಸಂಪರ್ಕಿಸಿದಾಗ ‘14 ದಿನ ಕ್ವಾರಂಟೈನ್‌ಗೆ ಒಳಪಟ್ಟು, ಮುಂದಿನ ವಿಮಾನ ವ್ಯವಸ್ಥೆಯಾದಾಗ ಭಾರತಕ್ಕೆ ಹೋಗಿ’ ಎಂಬ ಸೂಚನೆ ಸಿಕ್ಕಿತು.
ಹೀಗೆ ಅಲ್ಲೇ 14 ದಿನಗಳ ಕ್ವಾರೆಂಟೈನ್ ಮುಗಿಸಿ ಮಾ.16ರಂದು ಇತರೆ 195 ಭಾರತೀಯರೊಂದಿಗೆ ಹೊರಟು ಪ್ರವೀಣ್ ದೆಹಲಿಗೆ ಬಂದಿಳಿದರು. ಅಲ್ಲಿ ಮತ್ತೆ ಅವರನ್ನೆಲ್ಲಾ ಕ್ವಾರಂಟೈನ್ ಮಾಡಲಾಯಿತು. ಮಾ.31ಕ್ಕೆ ಮರು ರಕ್ತ ಪರೀಕ್ಷೆಗೊಳಪಡಿಸಿ, ಪುನಃ ಕ್ವಾರಂಟೈನ್‌ಗೆ ಒಳ ಪಡಿಸಲಾಯಿತು.
ಅಲ್ಲಿಗೆ ಮೂರು ಬಾರಿ ಕ್ವಾರೆಂಟೈನ್ ಗೊಳಪಟ್ಟು ದೆಹಲಿಯಿಂದ ತನ್ನ ಸ್ವಂತ ಊರಿಗೆ ಬಂದು ತಲುಪಿದಾಗ ಇಲ್ಲಿನ ಚಂಪಾವತ್ ನಲ್ಲಿ ಪ್ರವೀಣ್ ಅವರನ್ನು ಪರೀಕ್ಷಿಸಿ ಮತ್ತೆ ಅಲ್ಲಿ ಕ್ವಾರಂಟೈನ್‌ನಲ್ಲೇ ಇರಿಸಲಾಯಿತು.
ಒಟ್ಟಾರೆ ಸರಿ ಸುಮಾರು ಎರಡು ತಿಂಗಳುಗಳಿಂದ ಕ್ವಾರೆಂಟೈನ್ ಮೇಲೆ ಕ್ವಾರೆಂಟನ್ ನಲ್ಲಿದ್ದು ಸದ್ಯಕ್ಕೆ ತನ್ನ ಮನೆಗೆ ತಲುಪಿರುವ ಪ್ರವೀಣ್ ಬುರಾಠಿ ಇದೀಗ ಮನೆಯಲ್ಲೇ ಸತತ ಐದನೇ ಬಾರಿ ಹೋಂ ಕ್ವಾರಂಟೈನ್‌ಗೆ ಸಜ್ಜಾಗಿದ್ದಾರೆ.
ಹೀಗೆ ವಿದೇಶದಿಂದ ತನ್ನ ಊರಿಗೆ ತೆರಳಿ ಮನೆಮಂದಿಯನ್ನು ಸೇರಿಕೊಳ್ಳಬೇಕೆಂಬ ಈ ಯುವಕನ ಆಸೆಗೆ ಕೋವಿಡ್ ತಂದಿಟ್ಟ ಕ್ವಾರೆಂಟೈನ್ ಸತತ ಎರಡು ತಿಂಗಳುಗಳಿಂದ ತಣ್ಣೀರೆರಚಿದೆ.