Advertisement

ನಾಲ್ಕು ದಿನದಲ್ಲಿ ಆರು ವಾರ್ಡ್‌ ಕಂಟೈನ್ಮೆಂಟ್‌

06:03 AM May 26, 2020 | Lakshmi GovindaRaj |

ಬೆಂಗಳೂರು: ದೇವರ ಜೀವನಹಳ್ಳಿ ವಾರ್ಡ್‌ಗೂ ಸೋಮವಾರ ಕೋವಿಡ್‌ 19 ವೈರಸ್‌ ದಾಳಿಯಿಟ್ಟಿದ್ದು, ಈ ಮೂಲಕ ನಗರದ ಮತ್ತೂಂದು  ಪ್ರದೇಶ ಕಂಟೈನ್ಮೆಂಟ್‌ ವ್ಯಾಪ್ತಿಗೆ ಸೇರ್ಪಡೆಯಾಗಿದೆ. ಈ ಮೂಲಕ ಕಳೆದ ನಾಲ್ಕು ದಿನಗಳಲ್ಲಿ  ಕಂಟೈನ್ಮೆಂಟ್‌ ವಲಯಕ್ಕೆ ಸೇರಿದ ವಾರ್ಡ್‌ಗಳ ಸಂಖ್ಯೆ ಆರಕ್ಕೇರಿದೆ. ಮೇ 22ರಂದು ಲಕ್ಕಸಂದ್ರ, ಥಣಿಸಂದ್ರ ಹಾಗೂ ಅಗರಂ ಮೂರು ವಾರ್ಡ್‌ಗಳಲ್ಲಿ ಸೋಂಕಿ ತರು ಕಂಡುಬಂದು ಕಂಟೇನ್ಮೆಂಟ್‌ ಮಾಡಲಾಗಿತ್ತು. ಮೇ 23 ರಂದು ಪುಟ್ಟೇನಹಳ್ಳಿ, ಮಾರಪ್ಪನಪಾಳ್ಯ ಹಾಗೂ ಸೋಮವಾರ (ಮೇ 25) ಎಸ್‌.ಕೆ.ಗಾರ್ಡನ್‌ ಅನ್ನು ಕಂಟೈನ್ಮೆಂಟ್‌ ವ್ಯಾಪ್ತಿಗೆ ತರಲಾಗಿದೆ. ಇದರೊಂದಿಗೆ ಕಂಟೈನ್ಮೆಂಟ್‌ ವಾರ್ಡ್‌ಗಳ ಸಂಖ್ಯೆ 22ಕ್ಕೆ ಏರಿಕೆಯಾಗಿದೆ.

Advertisement

ನಾಲ್ಕು ಹೊಸ ಸೋಂಕು: ನಗರದಲ್ಲಿ ಸೋಮವಾರ ಹೊಸದಾಗಿ ನಾಲ್ಕು ಕೋವಿಡ್‌ 19 ವೈರಸ್‌ ಸೋಂಕು ಪ್ರಕರಣಗಳು ದೃಢಪಟ್ಟಿದ್ದು, ಒಟ್ಟಾರೆ ಸೋಂಕು ಪ್ರಕರಣಗಳ ಸಂಖ್ಯೆ 274ಕ್ಕೆ ಏರಿಕೆಯಾಗಿದೆ. ಭಾನುವಾರದ ಅಂತ್ಯಕ್ಕೆ ಬೆಂಗಳೂರು ವ್ಯಾಪ್ತಿಯಲ್ಲಿ ಸೋಂಕು ಪ್ರಕರಣಗಳ ಸಂಖ್ಯೆ 270 ತಲುಪಿತ್ತು. ಸೋಮವಾರ ಡಿಜೆ ಹಳ್ಳಿಯಲ್ಲಿ ತೀವ್ರ ಉಸಿರಾಟ ಸಮಸ್ಯೆಯಿಂದ ಬಳಲುತ್ತಿದ್ದ 38 ವರ್ಷದ ಮಹಿಳೆಗೆ ಸೋಂಕು ತಗುಲಿರುವುದು ಪರೀಕ್ಷೆಯಿಂದ ದೃಢಪಟ್ಟಿದೆ.

ಈ ಮಹಿಳೆಯ ಸೋಂಕಿನ ಮೂಲವನ್ನು ಆರೋಗ್ಯಾಧಿಕಾರಿಗಳು ಪತ್ತೆ ಮಾಡುತ್ತಿದ್ದಾರೆ. ಲಂಡನ್‌ನಿಂದ ಬೆಂಗಳೂರಿಗೆ ಆಗಮಿಸಿದ್ದ 25 ವರ್ಷದ ಯುವಕನಲ್ಲಿ ಸೋಂಕು ಪತ್ತೆಯಾಗಿದೆ. ಎರಡು ವಾರಗಳ ಹಿಂದೆ  ಬೆಂಗಳೂರಿಗೆ ಆಗಮಿಸಿದ್ದ 323 ಮಂದಿ ಪ್ರಯಾಣಿಕರನ್ನು ನಗರದ ಹೋಟೆಲ್‌ ನಲ್ಲಿ ಕ್ವಾರಂಟೈನ್‌ ಮಾಡಲಾಗಿತ್ತು. ಈ ಎಲ್ಲಾ ಪ್ರಯಾಣಿಕರಿಗೂ ಎರಡನೇ (12ನೇ ದಿನಕ್ಕೆ) ಬಾರಿ ಸೋಂಕು ಪರೀಕ್ಷೆ ನಡೆಸಲಾಗಿತ್ತು.

ಈ ವೇಳೆ ಬೆಂಗಳೂರು  ನಿವಾಸಿಯಾ ಗದಿದ್ದ ಈ ಯುವಕನಲ್ಲಿ ಸೋಂಕು ದೃಢಪಟ್ಟಿದೆ. ಸದ್ಯ ಯುವಕನನ್ನು ಕೋವಿಡ್‌ 19 ಚಿಕಿತ್ಸಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಒಟ್ಟಾರೆ ಲಂಡನ್‌ನಿಂದ ಒಂದೇ ವಿಮಾನದಲ್ಲಿ ಬಂದ 323 ಪ್ರಯಾಣಿಕರಲ್ಲಿ ಮೂರು ಮಂದಿಯಲ್ಲಿ ಸೋಂಕು  ದೃಢಪಟ್ಟಂತಾಗಿದೆ. ಮೇ 22 ರಂದು ಲಕ್ಕ ಸಂದ್ರದಲ್ಲಿ ಸೋಂಕು ದೃಢಪಟ್ಟಿದ್ದ 36 ವರ್ಷದ ಮಹಿಳೆಯ ( ರೋಗಿ – 1,659) ಪ್ರಾಥಮಿಕ ಸಂಪರ್ಕ ಹೊಂದಿದ್ದ 48 ವರ್ಷದ ಪುರುಷನಿಗೂ ಸೋಂಕು ತಗುಲಿದೆ.  ಇನ್ನು ಈ ಮಹಿಳೆಯ ಸೋಂಕಿನ ಹಿನ್ನೆಲೆ ಪತ್ತೆಯಾಗಿರಲಿಲ್ಲ.

ಅಷ್ಟರಲ್ಲೆ ಅವರ ಸಂಪರ್ಕದಿಂದ ಮತ್ತೂಬ್ಬರಿಗೆ ಸೋಂಕು ಹರಡಿದ್ದು, ಲಕ್ಕಸಂದ್ರದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಮತ್ತೂಂದು ಪ್ರಕರಣದಲ್ಲಿ ಜೆ.ಪಿ. ನಗರದಲ್ಲಿ  ತಮಿಳುನಾಡಿನಲ್ಲಿ ಬೈಪಾಸ್‌ ಸರ್ಜರಿಗೊಳಗಾಗಿ ಬಂದು ಸೋಂಕಿತನಾಗಿದ್ದ ( ರೋಗಿ -1,930) ವ್ಯಕ್ತಿಯಿಂದ ಆತನ 27 ವರ್ಷದ ಮಗನಿಗೂ ಸೋಂಕು ತಗುಲಿದೆ. ಭಾನುವಾರವಷ್ಟೇ ಪತ್ನಿ ಹಾಗೂ ಮಗಳಿಗೂ ಸೋಂಕು ತಗುಲಿತ್ತು. ಈ ಮೂಲಕ ಕುಟುಂಬದ ನಾಲ್ಕು ಮಂದಿ ಸೋಂಕಿತರಾಗಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next