Advertisement

ಆರರಿಂದ ಹತ್ತು ಪಾಕಿಸ್ಥಾನಿ ಸೈನಿಕರು ಹತ;ಮೂರು ಉಗ್ರಶಿಬಿರಗಳು ಧ್ವಂಸ: ಆರ್ಮಿ ಚೀಫ್ ಕನ್ಫರ್ಮ್

10:18 AM Oct 21, 2019 | Hari Prasad |

ನವದೆಹಲಿ: ಭಾರತದ ಗಡಿಯೊಳಕ್ಕೆ ಉಗ್ರರನ್ನು ನುಗ್ಗಿಸುವ ಪಾಕಿಸ್ಥಾನದ ಕೃತ್ಯಕ್ಕೆ ಸೂಕ್ತ ಪ್ರತ್ಯುತ್ತರವನ್ನು ನೀಡಿರುವ ಭಾರತೀಯ ಸೇನೆ ಆದಿತ್ಯವಾರದಂದು ಪಾಕ್ ಆಕ್ರಮಿತ ಪ್ರದೇಶದಲ್ಲಿರುವ ಉಗ್ರ ಶಿಬಿರಗಳ ಮೆಲೆ ನಡೆಸಿದ ದಾಳಿಯಲ್ಲಿ ಕನಿಷ್ಟ 6 ರಿಂದ 10 ಪಾಕಿಸ್ಥಾನಿ ಸೈನಿಕರು ಹತರಾಗಿದ್ದಾರೆ ಮತ್ತು ಮೂರು ಪ್ರಮುಖ ಉಗ್ರ ನೆಲೆಗಳನ್ನು ನಮ್ಮ ಯೋಧರು ಧ್ವಂಸಗೊಳಿಸಿದ್ದಾರೆ ಎಂಬ ಮಾಹಿತಿಯನ್ನು ಭಾರತೀಯ ಸೇನಾಪಡೆಯ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಅವರು ಖಚಿತಪಡಿಸಿದ್ದಾರೆ.

Advertisement

ಪಿ.ಒ.ಕೆ.ಯಲ್ಲಿದ್ದ ಉಗ್ರ ಶಿಬಿರಗಳನ್ನು ನಾಶಪಡಿಸಲು ಭಾರತೀಯ ಸೇನೆಯು ಆರ್ಟಿಲ್ಲರಿ ಗನ್ ಗಳನ್ನು ಬಳಸಿದೆ ಎಂಬ ಮಾಹಿತಿಯನ್ನೂ ಸಹ ಜನರಲ್ ರಾವತ್ ಅವರು ಇದೇ ಸಂದರ್ಭದಲ್ಲಿ ನೀಡಿದ್ದಾರೆ. ಕಾಶ್ಮೀರ ಭಾಗದಲ್ಲಿರುವ ಇಂಡೋ – ಪಾಕ್ ಗಡಿ ಪ್ರದೇಶದ ಕೇರನ್, ತಂಗ್ದಾರ್ ಮತ್ತು ನೌಗಾಂವ್ ಪ್ರದೇಶಗಳ ಆಯಕಟ್ಟಿನ ಜಾಗಗಳತ್ತ ಪಿ.ಒ.ಕೆ. ಕಡೆಯಿಂದ ಉಗ್ರರು ನುಸುಳಿ ಬರುತ್ತಿದ್ದಾರೆ ಎಂಬ ಖಚಿತ ಮಾಹಿತಿ ಸೇನೆಗೆ ದೊರಕಿತ್ತು ಎಂದು ಅವರು ಇದೇ ಸಂದರ್ಭದಲ್ಲಿ ತಿಳಿಸಿದರು.

‘ಹಾಗಾಗಿ ನಾವು ಆ ಭಾಗದಲ್ಲಿದ್ದ ಉಗ್ರ ಶಿಬಿರಗಳನ್ನು ಧ್ವಂಸಗೊಳಿಸುವ ಉದ್ದೇಶದಿಂದ ಆರ್ಟಿಲರಿ ಗನ್ ಗಳನ್ನು ಬಳಸಿದೆವು ಮತ್ತು ನಮಗೆ ಲಭ್ಯವಾಗಿರುವ ಮಾಹಿತಿಯ ಪ್ರಕಾರ ಪಾಕಿಸ್ಥಾನೀ ಸೇನೆಗೆ ಹಾಗೂ ಆ ಸ್ಥಳದಲ್ಲಿದ್ದ ಉಗ್ರಪಡೆಗಳಲ್ಲಿ ಸಾಕಷ್ಟು ಹಾನಿ ಸಂಭವಿಸಿದೆ’ ಎಂದು ಸೇನಾ ಮುಖ್ಯಸ್ಥರು ಖಚಿತವಾಗಿ ನುಡಿದರು.

‘ಜಮ್ಮು ಕಾಶ್ಮೀರದಲ್ಲಿ 370ನೇ ವಿಧಿ ರದ್ದುಗೊಂಡ ಬಳಿಕ ಪಾಕಿಸ್ಥಾನ ಗಡಿಯಾಚೆಯಿಂದ ನಿರಂತರ ಉಗ್ರ ಒಳನುಸುಳುವಿಕೆ ಚಟುವಟಿಕೆಗಳು ನಡೆಯುತ್ತಲೇ ಇತ್ತು. ಕಣಿವೆ ಭಾಗದಲ್ಲಿ ಶಾಂತಿ ಸುವ್ಯವಸ್ಥೆಯನ್ನು ಹಾಳುಗೆಡಹುವ ಉದ್ದೇಶದಿಂದ ಪಾಕಿಸ್ಥಾನ ತನ್ನ ನೆಲದಿಂದ ತರಬೇತುಗೊಂಡ ಉಗ್ರರನ್ನು ಭಾರತದ ಭೂಭಾಗದೊಳಕ್ಕೆ ನುಗ್ಗಿಸುತ್ತಿತ್ತು ಎಂಬ ಮಾಹಿತಿಯನ್ನೂ ಸಹ ಜನರಲ್ ರಾವತ್ ಅವರು ಇದೇ ಸಂದರ್ಭದಲ್ಲಿ ನೀಡಿದರು.

ಕಳೆದ ರಾತ್ರಿ ಉಗ್ರರು ಒಳನುಸುಳುವಿಕೆ ಪ್ರಯತ್ನವನ್ನು ಮಾಡಿದ್ದಕ್ಕೆ ಪ್ರತೀಕಾರವಾಗಿ ನಾವು ಈ ಕ್ರಮ ಕೈಗೊಳ್ಳಬೇಕಾಯಿತು. ನಮ್ಮ ಸೇನಾನೆಲೆಗಳತ್ತ ಪಾಕಿಸ್ಥಾನೀ ಸೈನಿಕರು ಫೈರಿಂಗ್ ಮಾಡಿದ್ದರಿಂದ ನಮ್ಮ ಕಡೆಯೂ ಹಾನಿಯಾಗಿತ್ತು. ಆದರೆ ಉಗ್ರರು ಒಳನುಸುಳುವ ಪ್ರಯತ್ನದಲ್ಲಿರುವಾಗಲೇ ನಾವು ಅವರ ಭಾಗದಲ್ಲಿದ್ದ ಉಗ್ರ ನೆಲೆಗಳನ್ನು ಧ್ವಂಸಗೊಳಿಸಿದೆವು ಎಂದು ರಾವತ್ ಅವರು ಘಟನೆಯ ಕುರಿತಾಗಿ ಮಾಹಿತಿಯನ್ನು ನೀಡಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next