Advertisement

ವಜ್ರಮುನಿ ಭಾವಮೈದುನನ್ನು ಅಪಹರಿಸಿದ ಆರು ಮಂದಿ ಬಂಧನ

12:08 PM Apr 13, 2018 | |

ಬೆಂಗಳೂರು: ಖ್ಯಾತ ಖಳನಟ ದಿವಗಂತ ವಜ್ರಮುನಿ ಅವರ ಭಾವ ಮೈದುನನ್ನು ಅಪಹರಿಸಿ ಒಂದು ಕೋಟಿ ರೂ. ಒತ್ತೆ ಹಣಕ್ಕೆ ಬೇಡಿಕೆಯಿಟ್ಟಿದ್ದ ಪ್ರಕರಣವನ್ನು ಪರಪ್ಪನ ಅಗ್ರಹಾರ ಠಾಣೆ ಪೊಲೀಸರು ಭೇದಿಸಿದ್ದು, ಆರು ಮಂದಿಯನ್ನು ಬಂಧಿಸಿದ್ದಾರೆ.

Advertisement

ಬನ್ನೇರುಘಟ್ಟ ನಿವಾಸಿ ಇಂಟೀರಿಯಲ್‌ ಡಿಸೈನರ್‌ ಸತ್ಯವೇಲಾಚಾರಿ(24), ಬಿಬಿಎ ವಿದ್ಯಾರ್ಥಿ ಯಶ್ವಂತ್‌ ಯಾದವ್‌(20), ವಿನೋದ್‌ ಕುಮಾರ್‌(21), ಸಂಜಯ್‌ ರೆಡ್ಡಿ(20), ಶೇಖರ್‌(20) ಹಾಗೂ ಜಗನ್ನಾಥ್‌(23) ಬಂಧಿತರು. ಪ್ರಮುಖ ಆರೋಪಿ ಸತ್ಯವೇಲಾಚಾರಿ ತಾನು ಮಾಡಿದ್ದ ಬ್ಯಾಂಕ್‌ ಸಾಲ ತೀರಿಸಲು ವಜ್ರಮುನಿ ಅವರ ಭಾವಮೈದುನ ಶಿವಕುಮಾರ್‌ರನ್ನು ಭಾನುವಾರ ಮಧ್ಯಾಹ್ನ ತನ್ನ ಸ್ನೇಹಿತರೊಂದಿಗೆ ಸೇರಿ ಅಪಹರಿಸಿ ಹಣಕ್ಕೆ ಬೇಡಿಕೆ ಇಟ್ಟಿದ್ದ.

ಈ ಸಂಬಂಧ ತನಿಖೆ ನಡೆಸಿದ ಪೊಲೀಸರು ಕೋಲಾರದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಗಳನ್ನು ಬಂಧಿಸಿ, ಶಿವಕುಮಾರ್‌ರನ್ನು ರಕ್ಷಿಸಿದ್ದಾರೆ. ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ್ದ ಇನ್ನೋವಾ ಕಾರು ವಶಕ್ಕೆ ಪಡೆಯಲಾಗಿದೆ ಎಂದು ಡಿಸಿಪಿ ಬೋರಲಿಂಗಯ್ಯ ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.

ಶಿವಕುಮಾರ್‌ ಬಾಷ್‌ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದು, ಪ್ರಮುಖ ಆರೋಪಿ ಸತ್ಯವೇಲಾಚಾರಿಯ ಆಪ್ತ ಸ್ನೇಹಿತರಾಗಿದ್ದಾರೆ. ಇತ್ತೀಚೆಗೆ ಶಿವಕುಮಾರ್‌ ತಮ್ಮ ಮನೆಗಳನ್ನು ಮಾರಾಟ ಮಾಡಿ ಬಂದ ಹಣವನ್ನು ಬ್ಯಾಂಕ್‌ನಲ್ಲಿ ಠೇವಣಿ ಇಟ್ಟಿದ್ದರು. ಶಿವಕುಮಾರ್‌ ಅವರ ಪ್ರತಿಯೊಂದು ಆಗುಹೋಗುಗಳ ಮಾಹಿತಿ ಹೊಂದಿದ್ದ ಸತ್ಯವೇಲಾಚಾರಿ ಅವರನ್ನು ಅಪಹರಿಸಿ ಬ್ಯಾಂಕ್‌ನಲ್ಲಿಟ್ಟಿದ್ದ ಹಣ ಪಡೆಯಲು ಈ ಕೃತ್ಯ ಎಸಗಿದ್ದಾನೆ ಎಂದು ಅವರು ತಿಳಿಸಿದರು.

ಪತ್ನಿಗೆ ಕರೆ ಮಾಡಿ ಬೆದರಿಕೆ: ಜೆ.ಪಿ.ನಗರದಿಂದ ಶಿವಕುಮಾರ್‌ ಅವರನ್ನು ಅಪಹರಿಸಿ ಕೋಲಾರದ ಶ್ರೀನಿವಾಸಪುರಕ್ಕೆ ಕರೆದೊಯ್ದಿದ್ದ ಸತ್ಯವೇಲಾಚಾರಿ ಹಾಗೂ ಇತರ ಆರೋಪಿಗಳು, ಶಿವಕುಮಾರ್‌ ಮೂಲಕವೇ ಪತ್ನಿಗೆ ಕರೆ ಮಾಡಿಸಿ, ಒಂದು  ಕೋಟಿ ರೂ. ಹಣ ನೀಡಲು ತಿಳಿಸಿ, ಹಣ ಕೊಡದಿದ್ದರೆ ಕೊಲ್ಲುವುದಾಗಿ ಎಚ್ಚರಿಕೆ ನೀಡಿದ್ದರು.

Advertisement

ಇದರಿಂದ ಹೆದರಿದ ಶಿವಕುಮಾರ್‌ ಪತ್ನಿ ಸರ್ಜಾಪುರ ವೃತ್ತದ ಬಳಿ ಹಣ ಕೊಂಡೊಯ್ದರಾದರೂ ಆರೋಪಿಗಳು ಸ್ಥಳಕ್ಕೆ ಬಂದಿರಲಿಲ್ಲ. ಹೀಗಾಗಿ ಅವರು ಮನೆಗೆ ವಾಪಸ್‌ ಬಂದಿದ್ದರು. ಮತ್ತೆ ಸುಧಾ ಅವರಿಗೆ ಕರೆ ಮಾಡಿದ ಆರೋಪಿಗಳು, ನೀವು ಪೊಲೀಸರ ಗಮನಕ್ಕೆ ಈ ವಿಚಾರ ತಂದಿರುವುದರಿಂದ ಶಿವಕುಮಾರ್‌ನನ್ನು ಕೊಲ್ಲುವುದಾಗಿ ಎಚ್ಚರಿಕೆ ನೀಡಿ ಕರೆ ಸ್ಥಗಿತಗೊಳಿಸಿದ್ದರು.

ಇದರಿಂದ ಇನ್ನಷ್ಟು ಆತಂಕಗೊಂಡ ಶಿವಕುಮಾರ್‌ ಪತ್ನಿ ಸುಧಾ ಏ. 9ರಂದು ಪರಪ್ಪನ ಅಗ್ರಹಾರ ಠಾಣೆಗೆ ದೂರು ನೀಡಿದ್ದರು. ಈ ಸಂಬಂಧ ಡಿಸಿಪಿ ಬೋರಲಿಂಗಯ್ಯ ಅವರು ಇಬ್ಬರು ಎಸಿಪಿಗಳ ನೇತೃತ್ವದಲ್ಲಿ ವಿಶೇಷ ತಂಡ ರಚಿಸಿದ್ದರು. ಈ ತಂಡ ಆರೋಪಿಗಳ ಮೊಬೈಲ್‌ ನೆಟ್‌ವರ್ಕ್‌, ಎಲ್ಲ ಚೆಕ್‌ಪೋಸ್ಟ್‌ಗಳಲ್ಲಿ ದಾಖಲಾಗಿದ್ದ ವಾಹನಗಳ ಮಾಹಿತಿಯನ್ನಾಧರಿಸಿ ಕೋಲಾರದ ಶ್ರೀನಿವಾಸಪುರದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದೆ.

ಬ್ಯಾಂಕ್‌ ಸಾಲ ತೀರಿಸಲು ಕೃತ್ಯ: ಸತ್ಯವೇಲಾಚಾರಿ ಬ್ಯಾಂಕ್‌ನಿಂದ ಕಂತಿನ ಸಾಲದ ಮೇಲೆ ಇನ್ನೋವಾ ಕ್ರಿಸ್ಟ ಕಾರು ಖರೀದಿಸಿದ್ದ. ಸಕಾಲಕ್ಕೆ ಸಾಲ ತೀರಿಸಲು ಸಾಧ್ಯವಾಗದೆ ಬ್ಯಾಂಕ್‌ಗೆ ಹಣ ಪಾವತಿಸಲು ಶಿವಕುಮಾರ್‌ ಬಳಿ ಸಾಲ ಕೇಳಿದ್ದ. ಆದರೆ, ಶಿವಕುಮಾರ್‌ ಹಣ ಕೊಡಲು ನಿರಾಕರಿಸಿದ್ದರಿಂದ ಕೋಪಗೊಂಡು ಅಪರಹಣಕ್ಕೆ ಸಂಚು ರೂಪಿಸಿದ್ದ.

ಅದರಂತೆ ಏ.8ರಂದು ಬೆಳಗ್ಗೆ ಇಂಟೀರಿಯರ್‌ ಡಿಸೈನ್‌ ಮಾಡುವ ಗುತ್ತಿಗೆ ಕೊಡಿಸಿ ಎಂದು ತನ್ನ ಸ್ನೇಹಿತ ತಾಜ್ಮಿàಲ್‌ ಪಾಷಾ ಎಂಬುವರ ಮನೆಗೆ ವಾಹನದಲ್ಲಿ ಕರೆದೊಯ್ಯುವಂತೆ ಶಿವಕುಮಾರ್‌ ಬಳಿ ಕೇಳಿಕೊಂಡಿದ್ದ. ಶಿವಕುಮಾರ್‌ ಮತ್ತು ಸತ್ಯವೇಲಾಚಾರಿ ಹೋಗುತ್ತಿದ್ದಾಗ ಜೆ.ಪಿ.ನಗರಕ್ಕೆ ಇತರೆ ಆರೋಪಿಗಳನ್ನು ಕರೆಸಿಕೊಂಡ ಸತ್ಯವೇಲಾಚಾರಿ ಅಲ್ಲಿ ಶಿವಕುಮಾರ್‌ ಅವರನ್ನು ಅಪಹರಿಸಿ ಕೋಲಾರದ ಶ್ರೀನಿವಾಸಪುರಕ್ಕೆ ಕರೆದೊಯ್ದಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next