ಬೆಂಗಳೂರು: ಒಂದೆಡೆ ಕೋವಿಡ್ 19 ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿದ್ದರೆ, ಮತ್ತೂಂದೆಡೆ ಸರಿಯಾಗಿ ಚಿಕಿತ್ಸೆ ಸಿಗದೆ ಸೋಂಕಿತರು ಮೃತಪಡುತ್ತಿದ್ದಾರೆ. ಶುಕ್ರವಾರ ಒಂದೇ ದಿನ 6 ಜನ ಬಲಿಯಾಗಿದ್ದಾರೆ. ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 54 ವರ್ಷದ ಮಹಿಳೆ, ಕೆ.ಸಿ. ಜನರಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 47 ವರ್ಷದ ಮಹಿಳೆ, 58 ವರ್ಷದ ವ್ಯಕ್ತಿ, ಥಣಿಸಂದ್ರದ 17 ವರ್ಷದ ಯುವತಿ, ಸಂಪಂಗಿರಾಮನಗರದ 55 ವರ್ಷದ ಸೋಂಕಿತ, ಕಲಾಸಿಪಾಳ್ಯದ 61 ವರ್ಷದ ವೃದ್ಧ ಮೃತಪಟ್ಟಿದ್ದಾರೆ.
ಸಂಪಂಗಿರಾಮನಗರದ 55 ವರ್ಷದ ವ್ಯಕ್ತಿ ಮನೆಯಲ್ಲೇ ಮೃತಪಟ್ಟಿದ್ದು, ಇತ್ತೀಚೆಗೆ ಅವರಿಗೆ ಸೋಂಕು ಕಾಣಿಸಿಕೊಂಡಿತ್ತು. ಆಸ್ಪತ್ರೆಗೆ ದಾಖಲು ಮಾಡಬೇಕು ಎನ್ನುವಷ್ಟರಲ್ಲಿ ಸೋಂಕಿಗೆ ಬಲಿಯಾಗಿದ್ದಾರೆ. ಕಾಚರಕನಹಳ್ಳಿಯಲ್ಲಿ ಕಳೆದ ಮೂರು ದಿನಗಳಿಂದ ಜ್ವರದಿಂದ ಬಳಲುತ್ತಿದ್ದ 88 ವರ್ಷದ ವೃದ್ಧನಿಗೆ ಚಿಕಿತ್ಸೆ ನೀಡಲು ಅಲೆದಾಡಿಸಿದ ಖಾಸಗಿ ಆಸ್ಪತ್ರೆ ಸಿಬ್ಬಂದಿ ನಿರ್ಲಕ್ಷ್ಯದಿಂದ ವೃದ್ಧ ಮೃತಪಟ್ಟಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಮೃತಪಟ್ಟವರ ಗಂಟಲು ದ್ರವ ಮಾದರಿ ಸಂಗ್ರಹಿಸಿ, ಪರೀಕ್ಷೆಗೊಳಪಡಿಸಿದಾಗ ಸೋಂಕು ತಗುಲಿರುವುದು ದೃಢಪಟ್ಟಿದೆ. ಪತ್ನಿ ಹಾಗೂ ಮಗನನ್ನು ಪ್ರತ್ಯೇಕ ಆಸ್ಪತ್ರೆಗಳಲ್ಲಿ ಕ್ವಾರಂಟೈನ್ ಮಾಡಲಾಗಿದೆ.
ಬೆಳಗ್ಗೆ ಸೋಂಕು ದೃಢ, ಮಧ್ಯಾಹ್ನ ಮೃತ: ಕಲಾಸಿಪಾಳ್ಯದ 61 ವರ್ಷದ ವೃದ್ಧನಿಗೆ ಶುಕ್ರವಾರ ಸೋಂಕು ದೃಢಪಟ್ಟಿದ್ದು, ಮಧ್ಯಾಹ್ನ ಮನೆಯಲ್ಲಿ ಮೃತಪಟ್ಟಿದ್ದಾರೆ. ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ಸೋಂಕಿತ ವ್ಯಕ್ತಿಗೆ ಉಸಿರಾಟದ ತೊಂದರೆಯಾಗಿದ್ದು, ಶಂಕರಪುರದ ಖಾಸಗಿ ಆಸ್ಪತ್ರೆಯಲ್ಲಿ ಪರೀಕ್ಷೆಗೆ ಒಳಪಟ್ಟಿದ್ದಾರೆ. ಶುಕ್ರವಾರ ವರದಿ ಬಂದಿದ್ದು, ಆ್ಯಂಬುಲನ್ಸ್‌ನಲ್ಲಿ ಕರೆದುಕೊಂಡು ಹೋಗುವುದಾಗಿ ತಿಳಿಸಿದ ಪಾಲಿಕೆ ಅಧಿಕಾರಿಗಳು, ಮಧ್ಯಾಹ್ನವಾದರೂ ಬಂದಿಲ್ಲ.
ವೃದ್ಧ ಮನೆಯಲ್ಲಿ ಮೃತಪಟ್ಟಿದ್ದು, ಸ್ಥಳೀಯರು ಪಿಪಿಇ ಕಿಟ್ ಧರಿಸಿ ಶವವನ್ನು ಹೊರಗೆ ತೆಗೆದಿದ್ದಾರೆ. ಸರಿಯಾದ ಸಮಯಕ್ಕೆ ಆ್ಯಂಬುಲನ್ಸ್ ಬಂದು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದ್ದರೆ ಬದುಕಿ ಉಳಿಯುತ್ತಿದ್ದರು. ಅಧಿಕಾರಿಗಳ ನಿರ್ಲಕ್ಷದಿಂದ ಮೃತಪಟ್ಟಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಈ ಮಧ್ಯೆ ಥಣಿಸಂದ್ರದ 17 ವರ್ಷದ ಯುವತಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಕಾಮಾಕ್ಷಿಪಾಳ್ಯದ 50 ವರ್ಷದ ವ್ಯಕ್ತಿಯೊಬ್ಬರು ವೈದ್ಯರ ನಿರ್ಲಕ್ಷದಿಂದ ಬಲಿಯಾಗಿದ್ದಾರೆಂಬ ಆರೋಪ ಕೇಳಿಬಂದಿದೆ.
ಈ ವ್ಯಕ್ತಿ ಬೆಳಗ್ಗೆ ಎಂದಿನಂತೆ ಪಾರ್ಕ್‌ಗೆ ವಾಯುವಿಹಾರಕ್ಕೆ ತೆರಳಿದ್ದರು. ಈ ವೇಳೆ ಹೃದಯಾಘಾತವಾಗಿದೆ. ತಕ್ಷಣ ಅವರನ್ನು ಹತ್ತಿರದ ಆಸ್ಪತ್ರೆಗೆ ಸ್ಥಳೀಯರೇ ಕರೆದೊಯ್ದಿದ್ದಾರೆ. ಆದರೆ, ಆಸ್ಪತ್ರೆ ಸಿಬ್ಬಂದಿ ಆ ವ್ಯಕ್ತಿಯನ್ನು ಒಳಗೆ ಸೇರಿಸಿಕೊಂಡಿಲ್ಲ ಎಂದು ಆರೋಪಿಸಲಾಗಿದೆ. ಆ ವ್ಯಕ್ತಿಗೆ ಉಸಿರಾಟದ ತೊಂದರೆ ಇತ್ತು. ಕೂಡಲೇ ಚಿಕಿತ್ಸೆ ಕೊಟ್ಟಿದ್ದರೆ ಬದುಕುತ್ತಿದ್ದರು. ಆದರೆ, ಆ ರೋಗಿಯನ್ನು ಒಳಗಡೆಯೇ ಬಿಟ್ಟುಕೊಂಡಿಲ್ಲ. ಈಗ ಮರಣ ಪ್ರಮಾಣ ಪತ್ರ ನೀಡುತ್ತಿಲ್ಲ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ಸಿಂಗೇನ ಅಗ್ರಹಾರ ಮಾರ್ಕೆಟ್ ಬಂದ್: ಎಲೆಕ್ಟ್ರಾನಿಕ್ ಸಿಟಿ ಸಮೀಪದ ಸಿಂಗೇನ ಅಗ್ರಹಾರ ವನ್ನು ಸ್ವಯಂ ಪ್ರೇರಿತವಾಗಿ ಒಂದು ವಾರ ಬಂದ್ ಮಾಡಲು ಹಣ್ಣಿನ ವ್ಯಾಪಾರಸ್ಥರು ನಿರ್ಧರಿಸಿದ್ದಾರೆ. ಈಗಾಗಲೇ ಸ್ವಯಂ ಪ್ರೇರಿತ ಬಂದ್‌ಗೆ ಬೆಂಗಳೂರು ಸಗಟು ಹಣ್ಣಿನ ವರ್ತಕರ ಸಂಘ ಕರೆ ನೀಡಿದ್ದು ಜತೆಗೆ ಹಣ್ಣು ಸಾಗಾಟ ವಾಹನ ಮಾಲೀಕರು ಬಂದ್‌ಗೆ ಬೆಂಬಲ ನೀಡಿದ್ದಾರೆ. ಮಾರುಕಟ್ಟೆ ಪ್ರಾಂಗಣದಲ್ಲಿ ತಮಿಳುನಾಡು ಮತ್ತಿ ತರ ಭಾಗಗಳ ಕಾರ್ಮಿಕರು ಕೆಲಸ ಮಾಡುತ್ತಿದ್ದು, ಕೆಲವರಿಗೆ ಸೋಂಕು ತಗಲುವ ಆತಂಕ ಉಂಟಾ ಗಿದೆ. ಆ ಹಿನ್ನೆಲೆಯಲ್ಲಿ ಬಂದ್‌ಗೆ ಕರೆ ನೀಡಲಾಗಿದೆ ಎಂದು ಸಗಟು ಹಣ್ಣಿನ ವರ್ತಕರ ಸಂಘ ಕಾರ್ಯದರ್ಶಿ ಸಿದಾಟಛಿರೆಡ್ಡಿ ತಿಳಿಸಿದ್ದಾರೆ.