Advertisement

ರಾಜ್ಯದ ಆರು ಕಡೆ ವಿಧಿವಿಜ್ಞಾನ ಪ್ರಯೋಗಾಲಯ ಸ್ಥಾಪನೆಗೆ ಕ್ರಮ: ಸಿಎಂ ಬೊಮ್ಮಾಯಿ

03:44 PM Sep 27, 2021 | Team Udayavani |

ಹುಬ್ಬಳ್ಳಿ: ಅಪರಾಧ ಪ್ರಕರಣಗಳ ತ್ವರಿತ ಪತ್ತೆ ಮತ್ತು ತನಿಖೆಯ ವೇಗ ಹೆಚ್ಚಿಸಲು ರಾಜ್ಯದ ಕಲಬುರಗಿ, ಹುಬ್ಬಳ್ಳಿ-ಧಾರವಾಡ, ಮೈಸೂರು ಸೇರಿದಂತೆ ಒಟ್ಟು ಆರು ಕಡೆ ವಿಧಿವಿಜ್ಞಾನ ಪ್ರಯೋಗಾಲಯ(ಎಫ್ ಎಸ್ಎಲ್) ಗಳನ್ನು ಸ್ಥಾಪಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

Advertisement

ಇಲ್ಲಿನ ಹಳೇಹುಬ್ಬಳ್ಳಿ ಬಾಣಂತಿಕಟ್ಟೆಯಲ್ಲಿ ಸೋಮವಾರ, ಕಸಬಾಪೇಟೆ ಪೊಲೀಸ್ ಠಾಣೆ, ದಕ್ಷಿಣ ಸಂಚಾರಿ ಠಾಣೆ, ಅಳ್ನಾವರ ಪೊಲೀಸ್ ಠಾಣೆ, ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಆಡಳಿತ ಕಚೇರಿ ಮತ್ತು 36 ಪೊಲೀಸ್ ವಸತಿ ಗೃಹಗಳ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.

ಎಫ್ ಎಸ್ ಎಲ್ ಕೇಂದ್ರ ಸ್ಥಾಪಿಸುವ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೊಂದಿಗೆ ಚರ್ಚಿಸಲಾಗಿದೆ. ಆಫೀಸರ್ ಆನ್ ಕ್ರೈಂ ಸೀನ್ ಅಧಿಕಾರಿಗಳನ್ನು ನೇಮಿಸಿಕೊಂಡು ಅವರಿಗೆ ಉನ್ನತ ಮಟ್ಟದ ತರಬೇತಿ ನೀಡಿ ಅಪರಾಧ ಕೃತ್ಯಗಳ ಸಾಕ್ಷ್ಯಾಧಾರ ನಾಶಕ್ಕೆ ಅವಕಾಶವಿಲ್ಲದೆ ಮಹಜರು ನಡೆಸಿ, ಪ್ರಯೋಗಾಲಯಕ್ಕೆ ಕಳುಹಿಸುವ ಕ್ರಮಗಳ ಸ್ಪಷ್ಟ ತಿಳಿವಳಿಕೆ ನೀಡಲಾಗುವುದು. ಪುಣೆಯ ಕಡಕ್‌ವಾಸ್ಲಾದಲ್ಲಿರುವ ರಾಷ್ಟ್ರೀಯ ರಕ್ಷಣಾ ಅಕಾಡೆಮಿ (ಎನ್ ಡಿಎ) ತರಬೇತಿ ಕೇಂದ್ರದ ಮಾದರಿಯಲ್ಲಿ ರಾಜ್ಯದ ಮಧ್ಯಮ ಹಂತದ ಪೊಲೀಸ್ ಅಧಿಕಾರಿಗಳ ತರಬೇತಿಗಾಗಿ ಪ್ರತ್ಯೇಕ ಕೇಂದ್ರ ಸ್ಥಾಪಿಸಲಾಗುವುದು ಎಂದರು.

ಡಿವೈ‌ಎಸ್‌ಪಿ ಹಾಗೂ ಮೇಲಿನ ಹಂತದ ಅಧಿಕಾರಿಗಳು ಕೇವಲ ಕಚೇರಿ, ಆಡಳಿತ ಕೆಲಸಗಳಿಗೆ ಮಹತ್ವ ನೀಡದೆ ಪ್ರತಿಯೊಂದು ಠಾಣೆಗೆ ಭೇಟಿ ನೀಡಿ ಮೂಲ ಪೊಲೀಸ್ ವೃತ್ತಿ ನಿರ್ವಹಿಸಬೇಕು. ಎಲ್ಲರೂ ಕ್ಷೇತ್ರಕ್ಕೆ ಇಳಿದು ಕರ್ತವ್ಯ ಮಾಡಬೇಕು. ಪ್ರತಿ ವರ್ಷ ನೂರು ಠಾಣೆಗಳಂತೆ ಮುಂದಿನ ಐದು ವರ್ಷದಲ್ಲಿ 500 ಪೊಲೀಸ್ ಠಾಣೆ ನಿರ್ಮಿಸುವ ಗುರಿ ಇದೆ. 10ಸಾವಿರ ಪೊಲೀಸ್ ವಸತಿ ಗೃಹ ನಿರ್ಮಿಸಲಾಗುವುದು. ಶ್ವಾನಗಳ ತರಬೇತಿಗೆ ಡಾಗ್ ಕ್ಯಾನಲ್ ಕೇಂದ್ರಗಳನ್ನು ಸ್ಥಾಪಿಸಲಾಗುವುದು. ನೆರೆಯ ದೇಶಗಳಲ್ಲಿ ಆಂತಕವಾದಿಗಳು ದೇಶದ ಆಡಳಿತ ನಡೆಸುವ ಮಟ್ಟಕ್ಕೆ ಹೋಗುತ್ತಿದ್ದಾರೆ. ನಮ್ಮ ದೇಶದ ಭದ್ರತೆಗೆ ಪ್ರತಿಯೊಬ್ಬರೂ ದೇಶಪ್ರೇಮ ಹಾಗೂ ಜಾಗೃತಿಯಿಂದ ತಮ್ಮ ಜವಾಬ್ದಾರಿ ನಿರ್ವಹಿಸಬೇಕು.  ಪೊಲೀಸರು ದಕ್ಷವಾಗಿ ಕರ್ತವ್ಯ ನಿರ್ವಹಿಸಿದರೆ ಶಾಂತಿ ನೆಲೆಸುತ್ತದೆ ಎಂದರು.

ಇದನ್ನೂ ಓದಿ:ಪೊಲೀಸರಿಗೆ ಹೆಚ್ಚಿನ ಸವಲತ್ತು ಸಿಗಲಿ: ಸಿದ್ದೇಶ್ವರ

Advertisement

ಹುಬ್ಬಳ್ಳಿ-ಧಾರವಾಡ ಅವಳಿ ನಗರದ ಕಾನೂನು ಸುವ್ಯವಸ್ಥೆ ಮುಖ್ಯ. ಇಲ್ಲಿ ಕೆಲವು ಕಿಡಗೇಡಿಗಳಿಂದ ಕಾನೂನು ಮತ್ತು ಸುವ್ಯವಸ್ಥೆಗೆ ಭಂಗ ತರುವ ಪ್ರಯತ್ನವಾಗುತ್ತಿದೆ. ಅವುಗಳನ್ನು ನಿಯಂತ್ರಿಸುವುದು ಅಧಿಕಾರಿಗಳಿಂದ ಸಾಧ್ಯವಿದೆ. ಪೊಲೀಸ್ ಆಯುಕ್ತರು ಠಾಣೆಗಳಿಗೆ ತೆರಳಿ ಪರಿಶೀಲನೆ ಮಾಡಬೇಕು. ಠಾಣೆಗಳಿಗೆ ಮೂಲಭೂತ ಸೌಕರ್ಯ ನೀಡಿ ಸುಧಾರಣೆ ಮಾಡಬೇಕು.

ಹುಬ್ಬಳ್ಳಿ-ಧಾರವಾಡ ಮಹಾನಗರ ವೇಗವಾಗಿ ಬೆಳೆಯುತ್ತಿದೆ. ಜನಸಂಖ್ಯೆ, ವಿಸ್ತೀರ್ಣ ಹಾಗೂ ಅಪರಾಧ ಪ್ರಕರಣಗಳ ದರ ಆಧರಿಸಿ, ರಾಷ್ಟ್ರೀಯ ಪೊಲೀಸ್ ಆಯೋಗದ ಮಾನದಂಡಗಳ ಪ್ರಕಾರ  ಪೊಲೀಸ್ ಠಾಣೆ ಸ್ಥಾಪಿಸಬೇಕಾಗುತ್ತದೆ ಎಂದರು.

ಗೃಹ ಸಚಿವ ಆರಗ ಜ್ಞಾನೇಂದ್ರ ಮಾತನಾಡಿ, ಜಿಲ್ಲೆಯಲ್ಲಿ ಅಂದಾಜು 21 ಕೋಟಿ ರೂ‌. ವೆಚ್ಚದಲ್ಲಿ ಪೋಲಿಸ್ ಠಾಣೆ, ಸಂಚಾರಿ ಠಾಣೆ, ವಸತಿ ಗೃಹಗಳನ್ನು ನಿರ್ಮಿಸಲು ಶಂಕುಸ್ಥಾಪನೆ ಮಾಡಲಾಗಿದೆ. ಸರಕಾರದಿಂದ ಒಂದು ವರ್ಷದಲ್ಲಿ 2ಸಾವಿರ ಕೋಟಿ ರೂ. ವೆಚ್ಚದಲ್ಲಿ 100 ಪೊಲೀಸ್ ಠಾಣೆ ನಿರ್ಮಾಣ ಮಾಡಲಾಗುವುದು. ಪೊಲೀಸ್ ಸಿಬ್ಬಂದಿಗೆ ಸದ್ಯ ಶೇ‌‌ 49ರಷ್ಟು ವಸತಿ ಗೃಹಗಳಿವೆ. ಮುಂದಿನ ದಿನಗಳಲ್ಲಿ 10ಸಾವಿರ ಪೊಲೀಸ್ ವಸತಿ ಗೃಹ ನಿರ್ಮಾಣ ಮಾಡಲಾಗುವುದು. 250 ವಿಧಿ ವಿಜ್ಞಾನ ಪ್ರಯೋಗಾಲಯ ತಜ್ಞರ ನೇಮಕ ಮಾಡಿಕೊಳ್ಳಲಾಗುವುದು. ಆನ್ ಲೈನ್ ಲಾಟರಿ ಹಾಗೂ ಮಟ್ಕಾ, ಜೂಜಾಟ ದಂಧೆಗೆ ಇತಿಶ್ರೀ ಹಾಡಲು ಶಾಸನ ಸಭೆಯಲ್ಲಿ ಮಸೂದೆ ಪಾಸು ಮಾಡಲಾಗಿದೆ. ಆ ಮೂಲಕ ಇಂತಹವುಗಳನ್ನು ಕಾಗ್ನಿಜಿಬಲ್ ಪ್ರಕರಣ ಎಂದು ದಾಖಲಿಸಿಕೊಂಡು. ಜಾಮೀನು ರಹಿತವಾಗಿ ತನಿಖೆ ನಡೆಸಲು ಅವಕಾಶ ಕಲ್ಪಿಸಲಾಗಿದೆ. ಶೀಘ್ರದಲ್ಲೇ ಈ ಕಾಯ್ದೆ ಜಾರಿಗೆ ಬರಲಿದೆ. ಔರಾದಕರ್ ವರದಿ ಜಾರಿಗೆ ತರಲಾಗುತ್ತಿದೆ. ಪೊಲೀಸರಿಗೆ  ಇದರಿಂದ ಅನುಕೂಲವಾಗಲಿದೆ. ಅಗ್ನಿ ಶಾಮಕ ದಳ ಬಲಪಡಿಸಲಾಗುತ್ತಿದೆ. ವಿದೇಶದಿಂದ ಉಪಕರಣಗಳನ್ನು ತರಿಸಿಕೊಂಡು ಸಶಸ್ತ್ರ ಘಟಕ ಬಲಪಡಿಸಲಾಗುವುದು ಎಂದರು.

ಶಾಸಕ ಪ್ರಸಾದ ಅಬ್ಬಯ್ಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಪೊಲೀಸ್ ಇಲಾಖೆಯಲ್ಲಿ ಕೆಳಹಂತದಲ್ಲೇ ಸಿಬ್ಬಂದಿ ದಕ್ಷತೆ ಹೆಚ್ಚಾದರೆ ಸಮಾಜದಲ್ಲಿ ಅಪರಾಧ ಪ್ರಮಾಣ ನಿಯಂತ್ರಣಕ್ಕೆ ಬರುತ್ತದೆ. ಬಹಳ ವರ್ಷಗಳಿಂದ ಒಂದೇ ಕಡೆ ಕರ್ತವ್ಯ ನಿರ್ವಹಿಸುತ್ತಿರುವ ಕೆಳಹಂತದ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ನಿಯಮಿತವಾಗಿ ಅಂತರ್ ಜಿಲ್ಲಾ ವರ್ಗಾವಣೆ ಮಾಡುವುದು ಸೂಕ್ತ ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ, ಶಾಸಕರಾದ ಅರವಿಂದ ಬೆಲ್ಲದ, ಅಮೃತ ದೇಸಾಯಿ, ಸಿ.ಎಂ. ನಿಂಬಣ್ಣವರ, ಕುಸುಮಾವತಿ ಶಿವಳ್ಳಿ, ವಿಧಾನ ಪರಿಷತ್ ಸದಸ್ಯ ಪ್ರದೀಪ ಶೆಟ್ಟರ, ನಿಗಮ-ಮಂಡಳಿ ಅಧ್ಯಕ್ಷರಾದ ಈರಣ್ಣ ಜಡಿ, ಎಸ್.ಐ. ಚಿಕ್ಕನಗೌಡರ, ಸವಿತಾ ಅಮರಶೆಟ್ಟಿ, ವಿ.ಎಸ್. ಪಾಟೀಲ, ಹುಡಾ ಅಧ್ಯಕ್ಷ ನಾಗೇಶ ಕಲಬುರ್ಗಿ, ಉತ್ತರ ವಲಯ ಐಜಿಪಿ ಎನ್. ಸತೀಶಕುಮಾರ, ಜಿಲ್ಲಾಧಿಕಾರಿ ನಿತೇಶ ಪಾಟೀಲ, ಹು-ಧಾ ಪೊಲೀಸ್ ಆಯುಕ್ತ ಲಾಭೂ ರಾಮ್, ಎಸ್ ಪಿ ಪಿ. ಕೃಷ್ಣಕಾಂತ ಮೊದಲಾದವರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next