ಕಲಬುರಗಿ: ತೆಲಂಗಾಣ ರಾಜ್ಯದ ಗಡಿಗೆ ಹೊಂದಿಕೊಂಡಿರುವ ಕಲಬುರಗಿ ಜಿಲ್ಲೆಯಲ್ಲಿ ಕೊರೊನಾ ಸೋಂಕು ಹರಡದಂತೆ ತಡೆಯಲು ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದ್ದು, ನಿಗಾ ವಹಿಸಲು ಆರು ವೈದ್ಯಕೀಯ ತಂಡಗಳನ್ನು ರಚಿಸಲಾಗಿದೆ ಎಂದು ಜಿಲ್ಲಾಧಿಕಾರಿ ಶರತ್ ಬಿ. ತಿಳಿಸಿದರು.
ಬುಧವಾರ ಆರೋಗ್ಯ ಇಲಾಖೆಯ ಅಧಿಕಾರಿಗಳೊಂದಿಗೆ ಕೊರೊನಾ ಸೋಂಕು ಕುರಿತು ಜಿಲ್ಲಾ ಸಮನ್ವಯ ಸಮಿತಿ ಸಭೆ ನಡೆಸಿ ಮಾತನಾಡಿದ ಅವರು, ನಗರದ ಜಿಮ್ಸ್ ಆಸ್ಪತ್ರೆಯಲ್ಲಿ ಐದು ಬೆಡ್ ಗಳ ತ್ವರಿತ ಚಿಕಿತ್ಸಾ ಘಟಕ ಹಾಗೂ ಪ್ರತಿ ತಾಲೂಕು ಆಸ್ಪತ್ರೆಯಲ್ಲಿ ಎರಡು ಬೆಡ್ ಗಳ ಘಟಕ ಸಿದ್ಧಪಡಿಸಲಾಗಿದೆ ಎಂದರು.
ಜತೆಗೆ ಕೊರೊನಾ ಬಗ್ಗೆ ಜಿಲ್ಲಾದ್ಯಂತ ವ್ಯಾಪಕ ಜಾಗೃತಿ ಮೂಡಿಸಲಾಗುವುದು. ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ ಹಾಗೂ ವಿಮಾನ ನಿಲ್ದಾಣ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಅರಿವು ಮೂಡಿಸಲಾಗುತ್ತದೆ. ಮನುಷ್ಯನಿಂದ ಮನುಷ್ಯನಿಗೆ ಸೋಂಕು ಹರಡುವುದರಿಂದ ಮುಖ್ಯವಾಗಿ ಸ್ವಚ್ಛತೆಗೆ ಅಗತ್ಯ ನಾಗರಿಕರು ಹೆಚ್ಚಿನ ಅಗತ್ಯ ಕೊಡಬೇಕೆಂದು ಮನವಿ ಮಾಡಿದರು.
ಇನ್ನು, ಜಿಲ್ಲೆಯಲ್ಲಿ ಕೊರೊನಾ ಸೋಂಕು ಬಗ್ಗೆ ಕಳೆದ ಒಂದು ತಿಂಗಳಿಂದ ಮುನ್ನೆಚ್ಚರಿಕೆ ವಹಿಸಲಾಗಿದೆ. ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲೂ ಜಾಗೃತಿ ಮೂಡಿಸಲಾಗಿತ್ತು. ಹೀಗಾಗಿ ಈಗಾಗಲೇ ಅಗತ್ಯ ಸಂಖ್ಯೆಯ ಮಾಸ್ಕ್ ಗಳನ್ನು ಸಂಗ್ರಹಿಸಲಾಗಿದೆ ಎಂದರು.
ಗೋ ಮೂತ್ರ, ಸಗಣಿ ಪರಿಹಾರವಲ್ಲ: ಕೊರೊನಾ ಸೋಂಕು ಜಗತ್ತಿನಾದ್ಯಂತ ವ್ಯಾಪಕವಾಗಿ ಹರಡುತ್ತಿದೆ. ದೇಶದಲ್ಲಿ ಕೇರಳದಲ್ಲಿ ಮೂರು ಪ್ರಕರಣ, ತೆಲಂಗಾಣ ಮತ್ತು ದೆಹಲಿಯಲ್ಲಿ ತಲಾ ಒಂದು ಹಾಗೂ ಇಬ್ಬರು ವಿದೇಶಿಗರಲ್ಲಿ ಕೊರೊನಾ ಕಂಡುಬಂದಿದೆ ಎಂದು ಡಾ.ಗುರುರಾಜ ವಿವರಿಸಿದರು.
ಕೊರೊನಾ ಬಗ್ಗೆ ಇನ್ನೂ ಯಾವುದೇ ಔಷಧಿ ಕಂಡು ಹಿಡಿದಿಲ್ಲ. ಈ ನಿಟ್ಟಿನಲ್ಲಿ ಪ್ರಯತ್ನಗಳು ನಡೆಯುತ್ತಿವೆ. ಆದರೆ, ಸಗಣಿ, ಗೋಮೂತ್ರದಿಂದ ಕೊರೊನಾ ಗುಣಪಡಿಸಬಹುದು ಎಂಬೆಲ್ಲ ವದಂತಿಗಳು ಹರಡಿಸಲಾಗುತ್ತಿದೆ. ಇವೆಲ್ಲ ಅವೈಜ್ಞಾನಿಕವಾಗಿವೆ. ಕೊರೊನಾಗೆ ಇಂತಹದ್ದೇ ಪರಿಹಾರ ಎಂಬುದು ಎಲ್ಲೂ ದೃಢ ಪಟ್ಟಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.