Advertisement

ರೌಡಿಶೀಟರ್‌ ತಟ್ಟೆಯ ಕೊಂದ ಆರು ಮಂದಿ ಬಂಧನ

11:50 AM Aug 29, 2017 | Team Udayavani |

ಬೆಂಗಳೂರು: ರೌಡಿಶೀಟರ್‌ ಅರ್ಜುನ್‌ ಅಲಿಯಾಸ್‌ ತಟ್ಟೆ ಎಂಬಾತನನ್ನು ಹತ್ಯೆಗೈದಿದ್ದ ಆರು ಮಂದಿ ಆರೋಪಿಗಳನ್ನು ಜ್ಞಾನಭಾರತಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಜೋಸೆಫ್‌ (28), ಜಯಂತ (20), ಮನು (21), ಸತೀಶ್‌ (22), ಷೇಕ್‌ ಸುಹೇಲ್‌ (21), ದೀಪು (24) ಬಂಧಿತರು. ಆ.24ರಂದು ಮದ್ಯದ ನಶೆಯಲ್ಲಿದ್ದ ಆರೋಪಿಗಳು ಕ್ಷುಲಕ್ಕ ಕಾರಣಕ್ಕೆ ಅರ್ಜನ್‌ ಜತೆ ಜಗಳ ಮಾಡಿಕೊಂಡಿದ್ದಾರೆ.

Advertisement

ಇದು ವಿಕೋಪಕ್ಕೆ ಹೋಗಿದ್ದು, ಅರ್ಜುನ್‌ನನ್ನು ನ್ಯಾಷನಲ್‌ ಸ್ಕೂಲ್‌ ಆಫ್‌ ಲಾ ಸಮೀಪದ ನ್ಪೋರ್ಟ್ಸ್ ಅಥಾರಿಟಿ ಆಫ್‌ ಇಂಡಿಯಾ ಹಿಂಭಾಗದ ಸಾಯಿ ಕ್ಯಾಂಪಸ್‌ ಬಳಿ ಹತ್ಯೆಗೈದು ಪರಾರಿಯಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಕೊಲೆಯಾದ ರೌಡಿಶೀಟರ್‌ ಅರ್ಜುನ್‌ ಮತ್ತು ಚಂದ್ರಲೇಔಟ್‌ ಠಾಣೆ ರೌಡಿಶೀಟರ್‌ ಜೋಸೆಫ್ ಒಂದೇ ತಂಡದಲ್ಲಿದ್ದವರು.

ಆ.20ರಂದು ಬನ್ನೇರುಘಟ್ಟ ನಿವಾಸಿ, ತಮ್ಮ ಸ್ನೇಹಿತ ಮಂಜು ಅಲಿಯಾಸ್‌ ಬರ್ಮ ಎಂಬಾತನ ತಂದೆಯ ಸಾವಿಗೆ ಇಬ್ಬರೂ ಹೋಗಿದ್ದರು. ಬಳಿಕ ವಾಪಸ್‌ ಬರುವಾಗ ಮದ್ಯ ಸೇವನೆಗೆ ಬಾರ್‌ವೊಂದರಲ್ಲಿ ಕುಳಿತಿದ್ದರು. ಆಗ ಕೊಲೆಯಾದ ಅರ್ಜನ್‌, ಆರೋಪಿ ಮನುಗೆ ಸೀಗರೇಟ್‌ ಮತ್ತು ಚಿಪ್ಸ್‌ ತರುವಂತೆ ಸೂಚಿಸಿದ್ದಾನೆ. ಇದಕ್ಕೆ ಒಪ್ಪದ ಮನು ನಾನೇಕೆ ತರಬೇಕು, ಬೇಕಾದರೆ ಹೋಗಿ ತರುವಂತೆ ಉತ್ತರಿಸಿದ್ದಾನೆ.

ಇದರಿಂದ ಆಕ್ರೋಶಗೊಂಡ ಅರ್ಜನ್‌, ಮನು ಮೇಲೆ ಹಲ್ಲೆ ನಡೆಸಿದ್ದಾನೆ. ಕೂಡಲೇ ಸ್ಥಳದಲ್ಲಿದ್ದ ಜೋಸೆಫ್ ಹಲ್ಲೆ ಬಗ್ಗೆ ಪ್ರಶ್ನಿಸಿದ್ದಾನೆ. ಇನ್ನಷ್ಟು ಕೋಪಗೊಂಡ ಅರ್ಜುನ್‌, ಮದ್ಯದ ಬಾಟಲಿಯಿಂದ ಜೋಸೆಫ್ ಮೇಲೆ ಹಲ್ಲೆ ನಡೆಸಿದ್ದ. ಈ ಬಗ್ಗೆ ಎಲ್ಲಿಯೂ ದೂರು ನೀಡಿರಲಿಲ್ಲ. ಈ ಘಟನೆ ನಂತರ ಜೋಸೆಫ್ ಹಾಗೂ ಅರ್ಜುನ್‌ ಪರಸ್ಪರ ಕೊಲೆಗೆ ಸಂಚು ರೂಪಿಸಿಕೊಂಡಿದ್ದರು.

ಏನಪ್ಪ ಕೊತ್ವಾಲ್‌: ಆ.24ರಂದು ಜ್ಞಾನಭಾರತಿ ಪೊಲೀಸ್‌ ಠಾಣೆ ವ್ಯಾಪ್ತಿಯ ಬಳಿಯ ಬಾರ್‌ವೊಂದರಲ್ಲಿ ಜೋಸೆಫ್ ಮತ್ತು ತಂಡದವರು ಮದ್ಯ ಸೇವಿಸುತ್ತಿದ್ದರು. ಆಗ ಸ್ಥಳಕ್ಕೆ ಬಂದ ಅರ್ಜನ್‌, ಜೋಸೆಫ್ ಕಂಡು, ಏನಪ್ಪ ಕೊತ್ವಾಲ್‌ ಎಂದೆಲ್ಲ ರೇಗಿಸಿದ್ದಾನೆ. ಇದಕ್ಕೆ ಪ್ರತಿಯಾಗಿ ಜೋಸೆಫ್ ಕೂಡ ನಿನ್ನ ಮುಂದೆ ನಾನ್ಯಾರು ಎಂದು ಹೇಳಿದ್ದ. ಆಗಲೂ ಇಬ್ಬರ ನಡುವೆ ಮಾರಾಮಾರಿ ನಡೆದಿದೆ. ಈ ವೇಳೆ ಆರೋಪಿಗಳು ಮಾರಕಾಸ್ತ್ರ ಬಳಸಿ ಅರ್ಜನ್‌ನನ್ನು ಹತ್ಯೆಗೈದು ಪರಾರಿಯಾಗಿದ್ದರು ಎಂದು ಪಶ್ಚಿಮ ವಿಭಾಗದ ಡಿಸಿಪಿ ಎಂ.ಎನ್‌.ಅನುಚೇತ್‌ ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next