ಬೆಂಗಳೂರು: ವಿಮಾನಪತನ ದುರಂತ ಸ್ಥಳದಲ್ಲಿ ಅವಶೇಷಗಳ ಅಡಿಯಲ್ಲಿ ಸಿಲುಕಿ ಆರು ಗಂಟೆಗಳ ಬಳಿಕ ಜೀವಂತವಾಗಿ ದೊರೆತ ನಾಯಿ ಮಾಲೀಕರ ಮೊಗದಲ್ಲಿ ಮಂಗಳವಾರ ನೆಮ್ಮದಿ ತರಿಸಿತು. ಇಸ್ರೋ ಲೇಔಟ್‌ನಲ್ಲಿರುವ ಉಮೇಶ್ ಅವರ ದನದ ಕೊಟ್ಟಿಗೆ ( ಶೆಡ್) ಮೇಲೆಯೇ ವಿಮಾನ ಅಪ್ಪಳಿಸಿತ್ತು. ಪರಿಣಾಮ ಶೆಡ್‌ನಲ್ಲಿದ್ದ ನೆಚ್ಚಿನ ಲ್ಯಾಬ್ರೋಡರ್ ನಾಯಿ ಮೃತಪಟ್ಟಿದೆ ಎಂದು ಭಾವಿಸಿ ಅವರು ದು:ಖೀತರಾಗಿದ್ದರು.
ನಾಯಿಯನ್ನು ಆರೈಕೆ ಮಾಡುತ್ತಿದ್ದ ವೆಂಕಟೇಶಪ್ಪ ಸ್ನೇಹಿತನಂತಿದ್ದ ಲ್ಯಾಬೋ ಕಳೆದುಕೊಂಡೆ. ಕಡೆಯ ಬಾರಿ ಅದರ ಮುಖ ನೋಡಲಾಗಲಿಲ್ಲ ಎಂದು ನೋವುತೋಡಿಕೊಳ್ಳುತ್ತಿದ್ದರು. ಆದರೆ, ಸಂಜೆ 5.30ರ ಸುಮಾರಿಗೆ ಅವಶೇಷಗಳ ಅಡಿಯಲ್ಲಿ ಸಿಲುಕಿದ್ದ ನಾಯಿಯನ್ನು ರಕ್ಷಣಾ ಸಿಬ್ಬಂದಿ ರಕ್ಷಿಸಿದರು. ಸೀಮೆ ಹಸುಗಳಿಗಾಗಿ ಶೇಖರಿಸಿಟ್ಟಿದ್ದ ಹಿಂಡಿ, ಮೇವು ತರಲು ಸಂಜೆ ಕೊಟ್ಟಿಗೆ ಬಳಿ ತೆರಳಿದೆ.
ಈ ವೇಳೆ ಶೀಟಿನಲ್ಲಿ ಸದ್ದಾಯಿತು. ಏನಾಗಿರಬಹುದು ಎಂದು ರಕ್ಷಣಾ ಸಿಬ್ಬಂದಿ ಕರೆದು ಶೀಟು ಸಡಿಲಿಸಿದಾಗ ಲ್ಯಾಬೋ ಸುಟ್ಟಗಾಯಗಳಿಂದ ಮಲಗಿತ್ತು. ಸತ್ತಿದೆ ಎಂದು ಭಾವಿಸಿದ್ದ ನಾಯಿ ಸಿಕ್ಕಿದ್ದಕ್ಕೆ ಆನಂದವಾಯಿತು. ಅವಘಡದಲ್ಲಿ ಅದರ ಹಿಂಭಾಗ, ಬೆನ್ನು ಸುಟ್ಟಿದೆ. ಕೂಡಲೇ ಆಸ್ಪತ್ರೆಗೆ ಕೊಂಡೊಯ್ದು ಚಿಕಿತ್ಸೆ ಕೊಡಿಸಿದ್ದೇನೆ ಎಂದು ಉಮೇಶ್
“ಉದಯವಾಣಿ’ಗೆ ಹೇಳಿದರು.
10 ಕೋಳಿ ಸುಟ್ಟು ಭಸ್ಮ!: ವಿಮಾನಪತನದಿಂದ ಬೆಂಕಿ ವ್ಯಾಪಿಸಿದ್ದರಿಂದ ಶೆಡ್‌ನಲ್ಲಿ ಸಾಕಿಕೊಂಡಿದ್ದ 10ಕ್ಕೂ ಹೆಚ್ಚು ಕೋಳಿಗಳು ಸುಟ್ಟು ಭಸ್ಮವಾಗಿವೆ. ಸುಮಾರು 50 ಸಾವಿರ ರೂ. ಮೌಲ್ಯದ ರಾಗಿಹುಲ್ಲು ಸುಟ್ಟುಹೋಗಿದೆ. ಶೆಡ್ ಬಿದ್ದುಹೋಗಿದೆ. ಜಿಲ್ಲಾಡಳಿತ ಪರಿಹಾರ ನೀಡುವ ಭರವಸೆ ನೀಡಿದೆ. ಪರಿಹಾರ ಹೋಗಲಿ ಈ ಬರಗಾಲದಲ್ಲಿ ಮೇವು ಹೊಂದಿಸುವುದೇ ಕಷ್ಟದ ಕೆಲಸ ಎಂದರು.
9 ಹಸು ಉಳಿದಿದ್ದು ನೆಮ್ಮದಿ!: ಶೆಡ್‌ನಲ್ಲಿದ್ದ 9 ಸೀಮೆಹಸುಗಳು, ಕೋಳಿ, ನಾಯಿಯನ್ನು ದಿನನಿತ್ಯ ಆರೈಕೆ ಮಾಡುತ್ತೇನೆ. ವಿಮಾನ ಪತನ ಸಂಭವಿಸುವ 10 ನಿಮಿಷದ ಮೊದಲಷ್ಟೇ 9 ಹಸುಗಳನ್ನು ಮೇಯಿಸಲು ಶೆಡ್‌ನಿಂದ ಬಿಟ್ಟು ಇಸ್ರೋ ಲೇಔಟ್ ಕಡೆಗೆ ಬಂದಿದ್ದೆ. ಆದರೆ, ಕೆಲವೇ ನಿಮಿಷಗಳಲ್ಲಿ ಶೆಡ್ ಬಳಿ ಬೆಂಕಿ ಕಾಣಿಸಿಕೊಂಡಿತ್ತು. ಅದೃಷ್ಟವಶಾತ್ ಹಸುಗಳು ಪಾರಾದವು ಎಂದು ವೆಂಕಟೇಶಪ್ಪ ಹೇಳಿದರು.