Advertisement

ಆರು ದಶಕಗಳ ಅಕ್ಷರ ಪಯಣ

11:41 AM Jul 29, 2019 | mahesh |

ವೈಚಾರಿಕತೆಯನ್ನು ಧ್ಯೇಯವನ್ನಿರಿಸಿಕೊಂಡ ಪ್ರಕಾಶನ ಸಂಸ್ಥೆಯೊಂದು 60 ವರ್ಷಗಳನ್ನು ಪೂರೈಸಿರುವುದು ಕನ್ನಡ ನಾಡು-ನುಡಿಗಳಿಗೆ ಅಭಿಮಾನದ ಸಂಗತಿಯೇ.

Advertisement

ಪುಸ್ತಕಗಳ ಮೂಲಕ ಮನುಕುಲದ ಸೇವೆ’ ಎಂಬ ಧ್ಯೇಯವಾಕ್ಯದೊಂದಿಗೆ ಆರಂಭವಾದ ನವಕರ್ನಾಟಕ ಪ್ರಕಾಶನಕ್ಕೆ ಈಗ ಅರವತ್ತರ ಸಂಭ್ರಮ. ಏಕೀಕರಣಗೊಂಡ “ಕರ್ನಾಟಕ’ ರಾಜ್ಯದ ಭಾಗವಾ ಗಿ ಯೇ ಬೆಳೆದ ನವಕರ್ನಾಟಕ ಪ್ರಕಾಶನ ರಾಜ್ಯದ ಬಹುತೇಕ ಓದುಗರನ್ನು ತಲುಪಿದ ಏಕೈಕ ಸಂಸ್ಥೆ ಎಂಬುದು ಹೆಮ್ಮೆಯ ಸಂಗತಿ. 1950ರ ದಶಕದಲ್ಲಿ ಬೆಂಗಳೂರಿನ ನ್ಯೂ ಸೆಂಚುರಿ ಬುಕ್‌ಹೌಸ್‌, ಮಂಗಳೂರಿನ ಪ್ರಭಾತ್‌ ಬುಕ್‌ ಹೌಸ್‌, ಜನಶಕ್ತಿ ಪ್ರಿಂಟರ್ಸ್‌ ಮತ್ತು ಬೆಂಗಳೂರಿನ ಜನಶಕ್ತಿ ಪ್ರಕಾಶನ- ಈ ನಾಲ್ಕೂ ಸಂಸ್ಥೆಗಳು ಜನಪರ ಚಿಂತನೆಯ ಪುಸ್ತಕ, ಪತ್ರಿಕೆಗಳ ಮುದ್ರಣ, ಪ್ರಕಟಣೆ ಮತ್ತು ವಿತರಣೆಗೆ ಹೆಸರುವಾಸಿ ಯಾಗಿದ್ದವು. ಈ ನಾಲ್ಕೂ ಸಂಸ್ಥೆಗಳನ್ನು ಒಗ್ಗೂಡಿಸಿ 1960ರಲ್ಲಿ ನವಕರ್ನಾಟಕ ಪಬ್ಲಿಕೇಷನ್ಸ್‌ ಪ್ರೈವೇಟ್‌ ಲಿಮಿಟೆಡ್‌ ಎಂಬ ಸಂಸ್ಥೆಯನ್ನು ಆರಂಭಿಸಲಾಯಿತು. ಬಿ.ವಿ. ಕಕ್ಕಿಲ್ಲಾಯ, ಎಂ. ಎಸ್‌. ಕೃಷ್ಣನ್‌, ಎಸ್‌. ಆರ್‌. ಭಟ್‌, ಎಂ. ಸಿ. ನರಸಿಂಹನ್‌, ಸಿ. ಆರ್‌. ಕೃಷ್ಣರಾವ್‌ ಮುಂತಾದ ಕರ್ನಾಟಕದ ಜನನಾಯಕರೂ, ಚಿಂತಕರೂ ಸೇರಿ ಆರಂಭಿಸಿದ ಈ ಸಂಸ್ಥೆ ಇಂದು ಜನಪರ ಚಿಂತನೆಯ ಪುಸ್ತಕಗಳ ಬೃಹತ್‌ ಪ್ರಕಾಶನ ಸಂಸ್ಥೆಯಾಗಿ ಬೆಳೆದು ನಿಂತಿದೆ.

1970ರ ನಂತರ ನವಕರ್ನಾಟಕ ಪ್ರಕಾಶನ, ಇತ್ತೀಚೆಗೆ ಕರ್ನಾಟಕ ಸರಕಾರದಿಂದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಆರ್‌. ಎಸ್‌. ರಾಜಾರಾಮ್‌ ಅವರ ಕನಸು ಮತ್ತು ಕ್ರಿಯಾಶೀಲತೆಯಿಂದಾಗಿ “ಪುಸ್ತಕಗಳ ಮೂಲಕ ಮನುಕುಲದ ಸೇವೆ’ ಎಂಬ ಧ್ಯೇಯವಾಕ್ಯಕ್ಕೆ ಅರ್ಥ ತಂದುಕೊಟ್ಟಿತು. ಈವರೆಗೆ ಸುಮಾರು 5, 300 ಪ್ರಕಟಣೆಗಳನ್ನು ಹೊರತಂದಿರುವ ನವಕರ್ನಾಟಕ ಈ ಪುಸ್ತಕಗಳನ್ನು ಓದುಗರೆಡೆಗೇ ಕೊಂಡೊಯ್ಯುವ ಸಾಹಸವನ್ನು ರಾಜ್ಯಾದ್ಯಂತ ತಾಲೂಕು-ಜಿಲ್ಲಾ ಕೇಂದ್ರಗಳಲ್ಲಿ ಹಾಗೂ ಸಮ್ಮೇಳನ, ವಿಚಾರ ಸಂಕಿರಣಗಳಲ್ಲಿ ಪ್ರದರ್ಶನಗಳನ್ನೇರ್ಪಡಿಸುವ ಮೂಲಕ ಮಾಡಿದೆ. ರಾಜಾರಾಮ್‌ ಅವರ ಜೊತೆಗೂಡಿ ದಶಕಗಳ ಕಾಲ ದುಡಿದ ಎ. ರಮೇಶ ಉಡುಪ ಮತ್ತು ನವಕರ್ನಾಟಕದ ನೂರಾರು ವಿಧದ ಹಂತದ ಸಿಬ್ಬಂದಿಯ ಪರಿಶ್ರಮ ಈ ಸಂಸ್ಥೆಯ ವಿಕಾಸದ ಮಾರ್ಗದಲ್ಲಿ ಸ್ಮರಿಸುವಂಥಾದ್ದು.

ಭೂಗರ್ಭದಿಂದ ಆಕಾಶದವರೆಗಿನ ವ್ಯಾಪ್ತಿಯುಳ್ಳ ವಿವಿಧ ವಿಷಯಗಳಾದ ಮಾನವ ವಿಕಾಸ, ವಿಜ್ಞಾನ, ತಂತ್ರಜ್ಞಾನ, ಗಣಿತ, ಮನೋವಿಜ್ಞಾನ, ತತ್ವಶಾಸ್ತ್ರ , ಇತಿಹಾಸ, ಕೃಷಿ, ಸಾಹಿತ್ಯ, ಸಂಸ್ಕೃತಿ, ಭಾಷಾಶಾಸ್ತ್ರ , ಸಮಾಜಶಾಸ್ತ್ರ, ರಾಜಕೀಯ, ಆರ್ಥಿಕತೆ, ಕಾನೂನು, ಆರೋಗ್ಯ, ಪರಿಸರ, ಶಿಕ್ಷಣ, ಜನಪದ, ಕಲೆ, ಮಕ್ಕಳ ಸಾಹಿತ್ಯ, ಜೀವನ ಚರಿತ್ರೆಗಳು, ನಿಘಂಟುಗಳು, ಅನುವಾದಗಳು- ಹೀಗೆ ಎಲ್ಲವನ್ನೂ ಒಳಗೊಂಡು ವೈಚಾರಿಕ, ವೈಜ್ಞಾನಿಕ ಮನೋಭಾವದ ಹಿನ್ನೆಲೆಯಲ್ಲಿ ಅಸಂಖ್ಯ ವಸ್ತು, ವಿಷಯ ವೈವಿಧ್ಯವುಳ್ಳ ಪುಸ್ತಕಗಳನ್ನು ನವಕರ್ನಾಟಕ ಪ್ರಕಾಶನ ಪ್ರಕಟಿಸಿದೆ. ರಾಷ್ಟ್ರೀಯ, ಅಂತರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಪಡೆದ ಚಿಂತಕರು, ಬರಹಗಾರರು ಈ ಎಲ್ಲ ವಿಷಯಗಳ ಕುರಿತು ವಿದ್ವತ್‌ಪೂರ್ಣ ಕೃತಿಗಳನ್ನು ರಚಿಸಿ, ಸಂಪಾದಿಸಿ ಕೊಟ್ಟು ನವಕರ್ನಾಟಕ ಪ್ರಕಾಶನದ ಘನತೆ ಹೆಚ್ಚಲು, ಅದರ ಆಶಯ ಈಡೇರಲು, ನಿರಂತರವಾಗಿ ಆರು ದಶಕಗಳ ಕಾಲ ಅರ್ಥಪೂರ್ಣವಾಗಿ ಬೆಳೆದು ಬರಲು ಕಾರಣರಾಗಿದ್ದಾರೆ. ಈ ವೈವಿಧ್ಯಮಯ ಪುಸ್ತಕಗಳು ಓದುಗರ ಅರಿವು ಮತ್ತು ವೈಚಾರಿಕತೆಯನ್ನು ಹೆಚ್ಚಿಸುವುದರ ಜೊತೆಗೆ ಸಂಸ್ಥೆಗೆ ಹಾಗೂ ಲೇಖಕರಿಗೆ ಪ್ರತಿಷ್ಠಿತ ಪ್ರಶಸ್ತಿಗಳನ್ನು , ಬಹುಮಾನಗಳನ್ನು ತಂದುಕೊಟ್ಟಿವೆ. ಹೊಸ ಪೀಳಿಗೆಯ ಲೇಖಕರನ್ನೂ ಓದುಗರನ್ನೂ ಅವರ ಚಿಂತನೆಗಳನ್ನೂ ಒಳಗೊಳ್ಳುತ್ತಲೇ ಬೆಳೆದ ನವಕರ್ನಾಟಕ ಆಧುನಿಕ ತಂತ್ರಜ್ಞಾನವನ್ನೂ ತನ್ನ ವಿಕಾಸದ ಭಾಗವಾಗಿಸಿಕೊಂಡಿದೆ. ನವಕರ್ನಾಟಕ ಆನ್‌ಲೈನ್‌ ಮಳಿಗೆ, ವಿದ್ಯುನ್ಮಾನ ಪುಸ್ತಕಗಳು, ಹೀಗೆ ಕಾಲಕಾಲಕ್ಕೆ ಬೆಳೆಯುವ ವಿಜ್ಞಾನ, ತಂತ್ರಜ್ಞಾನಗಳಿಗೆ ಮೈಯೊಡ್ಡುತ್ತ ಈ ಸಂಸ್ಥೆ ಮುನ್ನಡೆಯುತ್ತಿದೆ.

ಸಿದ್ದನಗೌಡ ಪಾಟೀಲ

Advertisement
Advertisement

Udayavani is now on Telegram. Click here to join our channel and stay updated with the latest news.

Next