Advertisement

ಮತ್ತಾರು ಜನರಲ್ಲಿ ಸೋಂಕು

02:30 PM Jun 25, 2020 | Suhan S |

ಗದಗ: ಜಿಲ್ಲೆಯಲ್ಲಿ ಆರು ಜನರಲ್ಲಿ ಕೋವಿಡ್‌-19 ಸೋಂಕು ದೃಢಪಟ್ಟಿದ್ದು, ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 94ಕ್ಕೆ ಏರಿಕೆಯಾಗಿದ್ದು, 48 ಪ್ರಕರಣಗಳು ಸಕ್ರಿಯವಾಗಿವೆ.

Advertisement

ತಾಲೂಕಿನ ಹೊಂಬಳ ಗ್ರಾಮದ ಪಿ-9403 ಸೋಂಕಿತರ ಸಂಪರ್ಕದಿಂದಾಗಿ 10 ವರ್ಷದ ಬಾಲಕ(ಪಿ.9727) ಹಾಗೂ 11 ವರ್ಷದ ಬಾಲಕ(ಪಿ.9728) ಇಬ್ಬರಿಗೆ ಸೋಂಕು ದೃಢಪಟ್ಟಿದೆ. ಅದೇ ಗ್ರಾಮದ ಪಿ.9404 ಸೋಂಕಿತರ ಸಂಪರ್ಕದಿಂದ 14 ವರ್ಷದ ಬಾಲಕನಿಗೆ(ಪಿ-9726) ಸೋಂಕು ದೃಢಪಟ್ಟಿದೆ.

ಮುಂಡರಗಿ ತಾಲೂಕಿನ ಡಂಬಳ ಗ್ರಾಮದ 40 ವರ್ಷದ ವ್ಯಕ್ತಿ(ಪಿ.9729) ಗೆ ಬಾಗಲಕೋಟ ಜಿಲ್ಲಾ ಪ್ರಯಾಣದಿಂದ ಹಾಗೂ ನರಗುಂದ ಪಟ್ಟಣದ 28 ವರ್ಷದ ಮಹಿಳೆ(ಪಿ.9731)ಗೆ ಧಾರವಾಡ ಜಿಲ್ಲಾ ಪ್ರಯಾಣದಿಂದಾಗಿ ಸೋಂಕು ದೃಢಪಟ್ಟಿದೆ. ಮುಂಡರಗಿ ಪಟ್ಟಣದ 75 ವರ್ಷದ ಮಹಿಳೆ(ಪಿ.9730)ಗೆ ರೋಗ ಲಕ್ಷಣ ಕಂಡು ಬಂದಿದ್ದರಿಂದ ಕೋವಿಡ್‌-19 ಪರೀಕ್ಷೆಗೆ ಒಳಪಡಿಸಿದಾಗ ಸೋಂಕು ಇರುವುದು ದೃಢಪಟ್ಟಿದೆ. ಸೋಂಕಿತರನ್ನು ನಿಗದಿತ ಜಿಮ್ಸ್‌ ಕೋವಿಡ್‌-19 ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಈವರೆಗೆ 94 ಕೋವಿಡ್‌ -19 ಪ್ರಕರಣಗಳು ದೃಢಪಟ್ಟಿದ್ದು, ಅದರಲ್ಲಿ ಇಬ್ಬರು ಮೃತಪಟ್ಟಿದ್ದಾರೆ. 44 ಜನರು ಗುಣಮುಖರಾಗಿ ಈಗಾಗಲೇ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಇನ್ನುಳಿದಂತೆ 48 ಸಕ್ರಿಯ ಪ್ರಕರಣಗಳಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಜತೆಗೆ ರೋಗ ಲಕ್ಷಣಗಳು ಹಾಗೂ ಸೋಂಕಿತರೊಂದಿಗೆ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕದಲ್ಲಿರುವವರ ಗಂಟಲಿನ ದ್ರವದ ಮಾದರಿಯನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು, 383 ಜನರ ವರದಿ ಬರಬೇಕಿದೆ. ವಿದ್ಯಾರ್ಥಿಗಳಲ್ಲಿ ಹೆಚ್ಚಿದ ಆತಂಕ: ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಇನ್ನೂ ಕೆಲವೇ ಗಂಟೆಗಳ ಮುನ್ನವೇ ಜಿಲ್ಲೆಯ ಎಸ್‌ ಎಸ್‌ಎಲ್‌ಸಿ ವಿದ್ಯಾರ್ಥಿಗೆ ಕೋವಿಡ್‌-19 ಸೋಂಕು ಪತ್ತೆಯಾಗಿರುವುದು, ವಿದ್ಯಾರ್ಥಿ ಹಾಗೂ ಪಾಲಕರಲ್ಲಿ ಆತಂಕ ಮೂಡಿಸಿದೆ. ಜಿಲ್ಲೆಯ ಲಕ್ಷ್ಮೇಶ್ವರ ಪಟ್ಟಣದ ಖಾಸಗಿ ಶಿಕ್ಷಣ ಸಂಸ್ಥೆಯ ವಿಶೇಷ ಮಕ್ಕಳ ವಸತಿ ಶಾಲೆಯ ವಿದ್ಯಾರ್ಥಿಯೊಬ್ಬನಿಗೆ ಸೋಂಕು ದೃಢಪಟ್ಟಿದೆ.

ಈ ವಿದ್ಯಾರ್ಥಿ ಮೂಲತಃ ವಿಜಯಪುರದವನಾಗಿದ್ದು, ಪರೀಕ್ಷೆಗೆ ಹಾಜರಾಗುವ ಹಿನ್ನೆಲೆಯಲ್ಲಿ ಜೂ.20 ರಂದು ವಿಜಯಪುರದಿಂದ ಖಾಸಗಿ ವಾಹನದಲ್ಲಿ ಲಕ್ಷ್ಮೇಶ್ವರಕ್ಕೆ ಆಗಮಿಸಿದ್ದಾನೆ. ಆತನೊಂದಿಗೆ ಇತರೆ ಇಬ್ಬರು ವಿದ್ಯಾರ್ಥಿಗಳ ಜಿಲ್ಲೆಗೆ ಆಗಮಿಸಿದ್ದಾರೆ. ಪ್ರಯಾಣದ ಹಿನ್ನೆಲೆಯಲ್ಲಿ ಹಾಗೂ ಸೋಂಕಿನ ಲಕ್ಷಣಗಳಿರುವ ಬಗ್ಗೆ ಸಂಶಯ ವ್ಯಕ್ತವಾಗಿದ್ದರಿಂದ ಲಕ್ಷ್ಮೇಶ್ವರ ತಾಲೂಕು ಆಸ್ಪತ್ರೆಯಲ್ಲಿ ವಿದ್ಯಾರ್ಥಿಗಳ ಗಂಟಲಿನ ಮಾದರಿ ಸಂಗ್ರಹಿಸಿ, ಜಿಮ್ಸ್‌ ಆಸ್ಪತ್ರೆಯ ಕೋವಿಡ್‌-19  ಲ್ಯಾಬ್‌ಗ ಕಳುಹಿಸಲಾಗಿದೆ. ಬುಧವಾರ ಬಂದ ಪ್ರಯೋಗಾಲಯದ ವರದಿಯಲ್ಲಿ ವಿದ್ಯಾರ್ಥಿಗೆ ಸೋಂಕು ಇರುವುದು ಪತ್ತೆಯಾಗಿದೆ.

Advertisement

ತಕ್ಷಣ ಆ ವಿದ್ಯಾರ್ಥಿಯನ್ನು ನಿಗದಿತ ಕೋವಿಡ್‌ -19 ಆಸ್ಪತ್ರೆಗೆ ದಾಖಲಿಸಲಾಗಿದ್ದು, ಗುರುವಾರ ನಡೆಯುವ ಪರೀಕ್ಷೆಗೆ ಅವಕಾಶ ನೀಡಲಾಗುವುದಿಲ್ಲ. ಜತೆಗೆ ಆತನೊಂದಿಗೆ ಸಂಪರ್ಕದಲ್ಲಿರುವ ವಿದ್ಯಾರ್ಥಿಗಳ ಗಂಟಲಿನ ದ್ರವದ ಮಾದರಿಯನ್ನೂ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಬುಧವಾರ ರಾತ್ರಿಯೊಳಗೆ ಪ್ರಯೋಗಾಲಯದ ವರದಿ ನೀಡುವಂತೆ ಸೂಚಿಸಲಾಗಿದೆ. ವರದಿ ಆಧರಿಸಿ, ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಮಾಹಿತಿ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next