ಚಿಕ್ಕೋಡಿ: ಮಹಾರಾಷ್ಟ್ರದ ಕೊಂಕಣ ಭಾಗದಲ್ಲಿ ಅಬ್ಬರದ ಮಳೆ ಸುರಿಯುತ್ತಿರುವುದರಿಂದ ಗಡಿ ಭಾಗದ ನದಿಗಳು ಉಕ್ಕಿ ಹರಿಯುತ್ತ್ತಿವೆ. ಕೃಷ್ಣಾ, ದೂಧಗಂಗಾ, ವೇಧಗಂಗಾ ನದಿ ನೀರಿನ ಮಟ್ಟ ನಾಲ್ಕು ಅಡಿ ಏರಿಕೆ ಕಂಡಿದೆ. ಆರು ಸೇತುವೆ ಜಲಾವೃತವಾಗಿವೆ.
ಕಳೆದ ಒಂದು ವಾರದಿಂದ ನೆರೆಯ ಮಹಾರಾಷ್ಟ್ರ ಹಾಗೂ ರಾಜ್ಯದ ಗಡಿ ಭಾಗದಲ್ಲಿಯೂ ಧಾರಾಕಾರ ಮಳೆ ಸುರಿಯುತ್ತಿದೆ. ಹೀಗಾಗಿ ಕೃಷ್ಣಾ, ದೂಧಗಂಗಾ ಮತ್ತು ವೇದಗಂಗಾ ನದಿಗಳು ಅಪಾಯ ಮಟ್ಟ ಮೀರಿ ಹರಿಯುತ್ತಿವೆ. ಅದರಂತೆ ಮಹಾರಾಷ್ಟ್ರದ ನರಸಿಂಹವಾಡಿ ಹತ್ತಿರ ಹರಿಯುವ ಪಂಚಗಂಗಾ ನದಿ ನೀರಿನ ಮಟ್ಟವೂ ಗಣನೀಯ ಏರಿಕೆ ಕಂಡಿದೆ. ಪಂಚಗಂಗಾ ನದಿ ನೀರು ಹೆಚ್ಚಿನ ಪ್ರಮಾಣದಲ್ಲಿ ಹರಿದು ಕೃಷ್ಣಾ ನದಿಗೆ ಸೇರುತ್ತದೆ. ಹೀಗಾಗಿ ಕೃಷ್ಣಾ ನದಿ ನೀರಿನ ಮಟ್ಟ ಹೆಚ್ಚಾಗುತ್ತದೆ.
ಮಹಾರಾಷ್ಟ್ರದಿಂದ ಜಲಾನಯನ ಪ್ರದೇಶಗಳಾದ ರಾಧಾನಗರಿ, ಪಾಟಗಾಂವ, ಕಾಳಮ್ಮವಾಡಿ ಭಾಗದಲ್ಲಿ ಭಾರಿ ಮಳೆ ಸುರಿಯುವುದರಿಂದ ಗಡಿ ಭಾಗದ ನದಿಗಳು ಅಪಾಯ ಮಟ್ಟ ಮೀರಿ ಹರಿಯರಲಾರಂಭಿವೆ. ದೂಧಗಂಗಾ ನದಿ ನೀರಿನ ಮಟ್ಟ ನಾಲ್ಕು ಅಡಿಯಷ್ಟು ಹೆಚ್ಚಾದರೆ ಕೃಷ್ಣಾ ನದಿಯಲ್ಲಿಯೂ ನೀರಿನ ಪ್ರಮಾಣ ಏರಿಕೆ ಕಂಡು ಬರುವುದರಿಂದ ನದಿ ಒಡಲುಕ್ಕಿ ಹರಿಯುತ್ತವೆ.ಆರು ಸೇತುವೆಗಳು ಜಲಾವೃತ: ಕೃಷ್ಣಾ ನದಿ ನೀರಿನ ಮಟ್ಟ ಹೆಚ್ಚಾಗಿರುವುದರಿಂದ ಕಲ್ಲೋಳ-ಯಡೂರ ಸೇತುವೆ ಜಲಾವೃತಗೊಂಡಿದೆ. ದೂಧಗಂಗಾ ನದಿಗೆ ನಿರ್ಮಿಸಿರುವ ಮಲಿಕವಾಡ-ದತ್ತವಾಡ, ಕಾರದಗಾ-ಭೋಜ, ವೇದಗಂಗಾ ನದಿಗೆ ನಿರ್ಮಿಸಿರುವ ಬೋಜವಾಡಿ-ಕುನ್ನೂರ, ಸಿದ್ನಾಳ-ಅಕ್ಕೋಳ, ಜತ್ರಾಟ-ಭಿವಸಿ ಸೇತುವೆಗಳು ಮುಳುಗಡೆಗೊಂಡು ನಾಲ್ಕು ದಿನಗಳು ಕಳೆದಿವೆ. ಎಲ್ಲ ಸೇತುವೆಗಳ ಮೇಲೆ ನಾಲ್ಕೈದು ಅಡಿಯಷ್ಟು ನೀರು ಹರಿಯುತ್ತಿದೆ. ಇದೇ ರೀತಿ ರಾಧಾನಗರಿ ಪ್ರದೇಶದಲ್ಲಿ ಹೆಚ್ಚಾಗಿ ಮಳೆ ಸುರಿಯುತ್ತಿದ್ದರೆ ಚಿಕ್ಕೋಡಿ ತಾಲೂಕಿನ ಮತ್ತೆ ಎರಡು ಸೇತುವೆಗಳು ಮುಳುಗುವ ಸಾಧ್ಯತೆ ಇದೆ.ದೇವಸ್ಥಾನಗಳಲ್ಲಿ ನೀರು: ದೂಧಗಂಗಾ ನದಿ ಒಡಲಿನಲ್ಲಿರುವ ಯಕ್ಸಂಬಾದ ಮುಲ್ಲಾನಕ್ಕಿ ದರ್ಗಾ ಜಲಾವೃತಗೊಂಡಿದೆ. ಕಲ್ಲೋಳ ಬಳಿ ಇರುವ ಕೃಷ್ಣಾ ನದಿ ನೀರಿನಲ್ಲಿ ದತ್ತ ದೇವಸ್ಥಾನದ ಬಳಿ ನೀರು ನುಗ್ಗಿದೆ. ಹೀಗಾಗಿ ರೈತರು ಪಂಪಸೆಟ್‌ಗಳನ್ನು ತೆರವುಗೊಳಿಸುತ್ತಿದ್ದಾರೆ.
ಈಗಾಗಲೇ ಮಹಾರಾಷ್ಟ್ರದ ರಾಜಾಪುರ ಬ್ಯಾರೇಜ್‌ದಿಂದ ರಾಜ್ಯಕ್ಕೆ 59653 ಕ್ಯೂಸೆಕ್ ನೀರು ಹರಿದು ಬರುತ್ತಿದೆ. ದೂಧಗಂಗಾ ಮತ್ತು ವೇದಗಂಗಾ ನದಿ ನೀರಿನ ಮಟ್ಟವು ಕ್ಷಣ ಕ್ಷಣಕ್ಕೂ ಹೆಚ್ಚಾಗುತ್ತಿದೆ. ಅದರಂತೆ ಜಮಖಂಡಿ ತಾಲೂಕಿನ ಹಿಪ್ಪರಗಿ ಜಲಾಶಯದಿಂದ 45 ಸಾವಿರ ಕ್ಯೂಸೆಕ್ ನೀರನ್ನು ಆಲಮಟ್ಟಿ ಜಲಾಶಯಕ್ಕೆ ಹರಿ ಬಿಡಲಾಗುತ್ತಿದೆ ಎಂದು ತಹಶೀಲ್ದಾರ ಡಾ. ಸಂತೋಷ ಬಿರಾದಾರ ಮಾಹಿತಿ ನೀಡಿದರು.ಮಳೆ ಪ್ರಮಾಣ: ಕೊಯ್ನಾ-139 ಮಿಮೀ, ವಾರಣಾ-155 ಮಿಮೀ, ಕಾಳಮ್ಮವಾಡಿ- 136 ಮಿಮೀ, ನವಜಾ-115, ಸಾಂಗ್ಲಿ-6 ಮಿಮೀ, ರಾಧಾನಗರಿ-100 ಮಿಮೀ, ಪಾಟಗಾಂವ-111 ಮಿಮೀ, ಮಹಾಬಲೇಶ್ವರ-127ಮಿಮೀ, ಕೊಲ್ಲಾಪೂರ-29 ಮಿಮೀ ಮಳೆ ಆಗಿದೆ.ಚಿಕ್ಕೋಡಿ ತಾಲೂಕಿನ ಮಳೆ ವಿವರ: ಚಿಕ್ಕೋಡಿ-2.5 ಮಿಮೀ, ಅಂಕಲಿ-4.2 ಮಿಮೀ, ನಾಗರಮುನ್ನೋಳ್ಳಿ-0.8 ಮಿಮೀ, ಸದಲಗಾ-10.2 ಮಿಮೀ, ಗಳತಗಾ-3.0 ಮಿಮೀ, ನಿಪ್ಪಾಣಿ ಪಿಡಬ್ಲುಡಿ-9.6 ಮಿಮೀ, ನಿಪ್ಪಾಣಿ ಎಆರ್‌ಎಸ್-10.6 ಮಿಮೀ, ಸೌಂದಲಗಾ-5.3 ಮಿಮೀ ಮಳೆಯಾಗಿದೆ.