ಬೆಂಗಳೂರು: ಹಳೆ ವೈಷಮ್ಯದ ಹಿನ್ನೆಲೆಯಲ್ಲಿ ಯುವಕನನ್ನು ಚಾಕುವಿನಿಂದ ಇರಿದು ಕೊಂದಿದ್ದ ಆರು ಮಂದಿ ಆರೋಪಿಗಳನ್ನು ಜೆ.ಸಿ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಮುಖೇಶ್, ಡಿ.ಎಸ್.ಸಂತೋಷ್, ಸಂದೀಪ್, ಎಂ.ಸಿ.ಸೋಮಯ್ಯ, ಯೋಗೇಶ್, ಚೇತನ್ ಅಲಿಯಾಸ್ ಕೋಬ್ರಾ ಬಂಧಿತರು. ಮತ್ತೂಬ್ಬ ಆರೋಪಿ ರಮೇಶ್ ತಲೆಮರೆಸಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಏ.21ರಂದು ರಾತ್ರಿ 1 ಗಂಟೆ ಸುಮಾರಿಗೆ ವಿಘ್ನೇಶ್ (22) ಎಂಬಾತನನ್ನು ಅಡ್ಡಗಟ್ಟಿ ಎದೆ ಹಾಗೂ ಕುತ್ತಿಗೆಗೆ ಚಾಕುವಿನಿಂದ ಇರಿದು ಕೊಂದು, ಆರೋಪಿಗಳು ತಲೆಮರೆಸಿಕೊಂಡಿದ್ದರು. ಈ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದ ಇನ್ಸ್‌ಪೆಕ್ಟರ್ ಬಿ.ಕೆ ಮಂಜಯ್ಯ ನೇತೃತ್ವದ ತಂಡ, ಆರೋಪಿಗಳನ್ನು ಬಂಧಿಸಿದೆ.
ಅಪರಾಧ ಹಿನ್ನೆಲೆ ಹೊಂದಿದ್ದ ಮೃತ ವಿಘ್ನೇಶ್, ಕ್ಷುಲ್ಲಕ ಕಾರಣಕ್ಕೆ ಮನೆಯ ಬಳಿ ಹೋಗಿ, ಮುಖೇಶ್, ರಮೇಶ್ ಮೇಲೆ ಹಲ್ಲೆ ನಡೆಸಿ ಬೆದರಿಕೆ ಹಾಕುತ್ತಿದ್ದ. ಹೀಗಾಗಿ, ಕೆಲ ದಿನಗಳ ಹಿಂದೆ ರಾಜಿಸಂಧಾನ ನಡೆಸಲು ಆರೋಪಿಗಳೆಲ್ಲರೂ ವಿಘ್ನೇಶ್‌ನನ್ನು ಕರೆಸಿದ್ದರು.
ಆಗಲೂ ಆತ ಹಲ್ಲೆ ನಡೆಸಿದ್ದರಿಂದ ಕೊಲೆ ಮಾಡಿದ್ದಾಗಿ ವಿಚಾರಣೆ ವೇಳೆ ಆರೋಪಿಗಳು ತಿಳಿಸಿದ್ದಾರೆ ಎಂದು ಹಿರಿಯ ಅಧಿಕಾರಿ ತಿಳಿಸಿದರು. ಕೊಲೆಯಾದ ವಿಘ್ನೇಶ್, ಜೆ.ಸಿ.ನಗರ ಪೊಲೀಸ್ ಠಾಣೆಯಲ್ಲಿ ಎರಡು ಕೊಲೆಯತ್ನ, ಮೂರು ಸುಲಿಗೆ ಕೇಸ್ ಹಾಗೂ ಮಹಾಲಕ್ಷ್ಮೀ ಲೇಔಟ್ ಠಾಣೆಯಲ್ಲಿ ದರೋಡೆ ಪ್ರಕರಣದಲ್ಲಿ ಆರೋಪಿಯಾಗಿದ್ದ.