Advertisement

ಜೋರ್ಮಕ್ಕಿ ಬಾಬು ಶೆಟ್ಟಿ ಕೊಲೆ : 6 ಮಂದಿ ಆರೋಪಿಗಳ ಬಂಧನ

10:02 AM Dec 27, 2019 | Hari Prasad |

ಕುಂದಾಪುರ: ಕನ್ಯಾನ ಕಲ್ಕಂಬ ಎಂಬಲ್ಲಿ ಡಿ.17 ರಂದು ನಡೆದ ಜೋರ್ಮಕ್ಕಿ ಬಾಬು ಶೆಟ್ಟಿ(55) ಕೊಲೆ ಪ್ರಕರಣ ಸಂಬಂಧ 6 ಮಂದಿ ಆರೋಪಿಗಳನ್ನು ಕುಂದಾಪುರ ಉಪವಿಭಾಗದ ಎಎಸ್‌ಪಿ ಹರಿರಾಂ ಶಂಕರ್‌ ನೇತೃತ್ವದ ಪೊಲೀಸರ ತಂಡ ಬಂಧಿಸಿದೆ.

Advertisement

ನೇರಳಕಟ್ಟೆ ನಿವಾಸಿ ತೇಜಪ್ಪ ಶೆಟ್ಟಿ (68) ಪ್ರಕರಣ ಪ್ರಮುಖ ಆರೋಪಿಯಾಗಿದ್ದು, ಶೆಟ್ರಕಟ್ಟೆಯ ಉದಯ್‌ ರಾಜ್‌ ಶೆಟ್ಟಿ (55) ಕೊಲೆಯ ಸಂಪೂರ್ಣ ಯೋಜನೆ ರೂಪಿಸಿದ ಆರೋಪಿ. ಕೆಂಚನೂರಿನ ರಮೇಶ್‌ ಪೂಜಾರಿ (25), ಆನಗಳ್ಳಿಯ ಪ್ರವೀಣ್‌ ಪೂಜಾರಿ (25), ರಾಘವೇಂದ್ರ ಪೂಜಾರಿ (24) ಹಾಗೂ ಬಸ್ರೂರಿನ ಸಚಿನ್‌ ಪೂಜಾರಿ (21) ಬಂಧಿತ ಆರೋಪಿಗಳು. ಬಂಧಿತ ಆರೋಪಿಗಳನ್ನು ಗುರುವಾರ ಕುಂದಾಪುರದ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, 6 ದಿನಗಳ ಕಾಲ ಪೊಲೀಸ್‌ ಕಸ್ಟಡಿಗೆ ಒಪ್ಪಿಸಲಾಗಿದೆ.

ವೈಯಕ್ತಿಕ ವೈಮನಸ್ಸು ಕಾರಣ
ಪ್ರಕರಣದ ತನಿಖೆ ಕುರಿತಂತೆ ಕಂಡ್ಲೂರು ಠಾಣೆಯಲ್ಲಿ ಮಾಹಿತಿ ನೀಡಿದ ಎಎಸ್‌ಪಿ ಹರಿರಾಂ ಶಂಕರ್‌, ಕೊಲೆಯಾದ ಬಾಬು ಶೆಟ್ಟಿ ಮತ್ತು ತೇಜಪ್ಪ ಶೆಟ್ಟಿ ನಡುವೆ 10 – 15 ವರ್ಷಗಳಿಂದಲೂ ವೈಮನಸ್ಸಿದ್ದು, ಇಬ್ಬರ ನಡುವೆ ಆಗಾಗ ಗಲಾಟೆ ನಡೆಯುತ್ತಿತ್ತು. ಅದಲ್ಲದೇ ನೇರಳಕಟ್ಟೆ ಭಾಗದಲ್ಲಿ ಇತ್ತೀಚೆಗೆ ನಡೆದ ಎರಡು ಕೊಲೆ ಯತ್ನ ಪ್ರಕರಣದಲ್ಲಿಯೂ ಕೂಡ ಬಾಬು ಶೆಟ್ಟಿ ಮತ್ತು ತೇಜಪ್ಪ ಶೆಟ್ಟಿ ಮಧ್ಯೆ ಸಂಘರ್ಷ ಉಂಟಾಗಿದೆ. ಇದನ್ನೇ ಗಂಭೀರವಾಗಿ ಪರಿಗಣಿಸಿದ ತೇಜಪ್ಪ ಶೆಟ್ಟಿಯು ಬಾಬು ಶೆಟ್ಟಿಯನ್ನು ಕೊಲೆ ಮಾಡಲು ಸಂಚು ರೂಪಿಸಿದ್ದ ಎಂದು ತಿಳಿಸಿದ್ದಾರೆ.

ಗೊಬ್ಬರ ಸಾಗಾಟಕ್ಕೆ ಕರೆ
ತೇಜಪ್ಪ ಶೆಟ್ಟಿಗೆ ಈ ದುಷ್ಕೃತ್ಯಕ್ಕೆ ಉದಯ್‌ ರಾಜ್‌ ಶೆಟ್ಟಿ ಸಹಕರಿಸಿದ್ದು, ಕೊಲೆ ನಡೆದ ದಿನ ಮಧ್ಯಾಹ್ನ ಸ್ವಂತ ಟೆಂಪೋ ಹೊಂದಿದ್ದ ಬಾಬು ಶೆಟ್ಟಿಗೆ ಕರೆ ಮಾಡಿದ ಆರೋಪಿಗಳು ಒಂದು ಕಡೆಯಿಂದ ಗೊಬ್ಬರ ಸಾಗಾಟ ಮಾಡಬೇಕಿದ್ದು, ಅದನ್ನು ತೋರಿಸುತ್ತೇವೆ ಬನ್ನಿ ಎಂದಿದ್ದರು. ಕುಂದಾಪುರದಿಂದ ತಲ್ಲೂರು ಮಾರ್ಗವಾಗಿ ನೇರಳಕಟ್ಟೆಗೆ ಸಾಗುವ ಹಾಗೂ ಹೆಮ್ಮಾಡಿ ಕೊಲ್ಲೂರು ರಾಜ್ಯ ಹೆದ್ದಾರಿಯನ್ನು ಸಂಪರ್ಕಿಸುವ ಹಟ್ಟಿಯಂಗಡಿ ಗ್ರಾ. ಪಂ. ವ್ಯಾಪ್ತಿಯ ಜಾಡಿ ಕಲ್ಕಂಬ ಎಂಬಲ್ಲಿಗೆ ಕರೆಯಿಸಿಕೊಂಡ ಆರೋಪಿಗಳು ಬೈಕ್‌ನಲ್ಲಿ ಬಂದ ಬಾಬು ಶೆಟ್ಟಿಯ ಎದೆ, ತಲೆ, ಹೊಟ್ಟೆಗೆ ಇರಿದು ಕೊಲೆಗೈದು ಪರಾರಿಯಾಗಿದ್ದರು.

ಉಡುಪಿ ಎಸ್ಪಿ ನಿಶಾ ಜೇಮ್ಸ್‌ ಮಾರ್ಗದರ್ಶನದಲ್ಲಿ, ಎಎಸ್ಪಿ ಹರಿರಾಂ ಶಂಕರ್‌, ಡಿಸಿಐಬಿ ಇನ್ಸ್‌ಪೆಕ್ಟರ್‌ ಕಿರಣ್‌, ಕುಂದಾಪುರ ವೃತ್ತ ನಿರೀಕ್ಷಕ ಡಿ.ಆರ್‌. ಮಂಜಪ್ಪ, ಎಸ್‌ಐಗಳಾದ ಕುಂದಾಪುರ ಗ್ರಾಮಾಂತರ ಠಾಣೆಯ ರಾಜಕುಮಾರ್‌, ಶಂಕರನಾರಾಯಣ ಠಾಣೆಯ ಶ್ರೀಧರ್‌ ನಾಯ್ಕ, ಕುಂದಾಪುರದ ಹರೀಶ್‌ ಆರ್‌. ಹಾಗೂ ಸಿಬಂದಿಯ ತಂಡ ಆರೋಪಿಗಳನ್ನು ಘಟನೆ ನಡೆದ ಕೇವಲ 10 ದಿನದೊಳಗೆ ಬಂಧಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next