Advertisement

ಭಕ್ತರಿಂದ ಶಿವನಮೂರ್ತಿಗೆ ಪೂಜೆ-ಹಾಲು-ಬಿಲ್ವಪತ್ರೆ ಅರ್ಪಣೆ

02:26 PM Feb 25, 2017 | Team Udayavani |

ಹುಬ್ಬಳ್ಳಿ: ನಗರದ ವಿವಿಧೆಡೆ ಶುಕ್ರವಾರ ಮಹಾಶಿವರಾತ್ರಿ ಹಬ್ಬವನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು. ನಗರದಲ್ಲಿರುವ ಎಲ್ಲ ಶಿವ ದೇವಾಲಯದಲ್ಲಿ ಬೆಳಗ್ಗೆಯಿಂದಲೇ ವಿಶೇಷ ಪೂಜೆ ನಡೆದವು. ಶಿವಲಿಂಗ ಹಾಗೂ ಮೂರ್ತಿಗೆ ಭಕ್ತರು ಹಾಲು, ಬಿಲ್ವಪತ್ರೆ ಸಮರ್ಪಿಸಿ ಪೂಜೆ ಸಲ್ಲಿಸಿದರು. 

Advertisement

ಸಾವಿರಾರು ಭಕ್ತರು ಸಿದ್ಧಾರೂಢಸ್ವಾಮಿ ಮಠ ಹಾಗೂ ನಗರದ ವಿವಿಧ ಶಿವಾಲಯಗಳಿಗೆ ತೆರಳಿ ಶಿವನನ್ನು ಪೂಜಿಸಿದರು. ಶಿವನಿಗೆ ಬಿಲ್ವಾರ್ಚನೆ ಮಾಡಿದ ಭಕ್ತರು ಹಾಲು, ಖರ್ಜೂರ, ವಿವಿಧ ಹಣ್ಣುಗಳ ನೈವೇದ್ಯ ಮಾಡಿದರು. ಶಿವಾಲಯಗಳಲ್ಲಿ ಪಂಚಾಮೃತ ಅಭಿಷೇಕ, ವಿಶೇಷ ಪೂಜೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಭಕ್ತರು ಸರದಿಯಲ್ಲಿ ನಿಂತು ದೇವರ ದರ್ಶನ ಪಡೆದು ಪುನೀತರಾದರು.

 ಸಿದ್ಧಾರೂಢಸ್ವಾಮಿ ಮಠದಲ್ಲಿ ಬೆಳಿಗ್ಗೆಯಿಂದಲೇ ಭಕ್ತರು ಸಾಲುಗಟ್ಟಿ ನಿಂತು ಉಭಯ ಶ್ರೀಗಳ ಗದ್ದುಗೆ ಹಾಗೂ ಈಶ್ವರನ ದರ್ಶನ ಪಡೆದರು. ರಾಜ್ಯ ಹಾಗೂ ಹೊರ ರಾಜ್ಯಗಳಿಂದಲೂ ಆಗಮಿಸಿದ್ದ ಭಕ್ತರು  ಶ್ರೀ ಸಿದ್ದಾರೂಢರು ಹಾಗೂ ಗುರುನಾಥರೂಢರ ಗದ್ದುಗೆ ದರ್ಶನ ಪಡೆದರು. ಮಧ್ಯಾಹ್ನ ಶ್ರೀ ಸಿದ್ದಾರೂಢಸ್ವಾಮಿ ಮಠದಿಂದ ಉಭಯ ಶ್ರೀಗಳ ಪಲ್ಲಕ್ಕಿ ಉತ್ಸವ ನಡೆಯಿತು.

ಪಲ್ಲಕ್ಕಿ ಉತ್ಸವ ನಗರದ ವಿವಿಧ ಪ್ರದೇಶಗಳಲ್ಲಿ ಸಂಚರಿಸಿ ಸಂಜೆ ಶ್ರೀಮಠಕ್ಕೆ ಬಂದು ಸೇರಿತು. ಸಂಜೆಯಾಗುತ್ತಿದ್ದಂತೆ ಸಾವಿರಾರು ಭಕ್ತರು ಶಿವರಾತ್ರಿ ಜಾಗರಣೆಯಲ್ಲಿ ಪಾಲ್ಗೊಂಡರು. ಶಿವರಾತ್ರಿ ಉಪವಾಸದ ನಿಮಿತ್ತ ಸಿದ್ಧಾರೂಢಸ್ವಾಮಿ ಮಠ ಸೇರಿದಂತೆ ವಿವಿಧ ಮಂದಿರಗಳಲ್ಲಿ ಭಕ್ತರಿಗೆ ಅವಲಕ್ಕಿ, ಬಾಳೆಹಣ್ಣು, ಖರ್ಜೂರ ಇನ್ನಿತರ ಹಣ್ಣು, ಮಜ್ಜಿಗೆ ವಿತರಿಸಲಾಯಿತು. 

ಶಿವಪುರ ಕಾಲೋನಿಯಲ್ಲಿ ಸಾವಿರಾರು ಭಕ್ತರು ಬೃಹತ್‌ ಶಿವಮೂರ್ತಿಗೆ ಪೂಜೆ ಸಲ್ಲಿಸಿದರು. ವಿಶ್ವೇಶ್ವರ ನಗರದ ವಿಶ್ವನಾಥ ಕಲ್ಯಾಣಮಂಟಪದಲ್ಲಿನ ಶಿವನ ದೇವಸ್ಥಾನದಲ್ಲಿ ಬೆಳ್ಳಗ್ಗೆಯಿಂದಲೇ ಜನರು ಸರದಿಯಲ್ಲಿ ನಿಂತು ದರ್ಶನ ಪಡೆದರು. ಸ್ಟೇಶನ್‌ ರಸ್ತೆಯಲ್ಲಿರುವ ಈಶ್ವರ ದೇವಾಲಯ, ಬಮ್ಮಾಪುರ ಓಣಿಯಲ್ಲಿರುವ ಈಶ್ವರ ದೇವಸ್ಥಾನ, ಇಂಡಿ ಪಂಪ್‌ನಲ್ಲಿರುವ ಶ್ರೀ ಧರ್ಮಸ್ಥಳ ಮಂಜುನಾಥ ದೇವಸ್ಥಾನಗಳಲ್ಲಿ ಶಿವನಮೂರ್ತಿಗೆ ಹಾಲಿನ ಅಭಿಷೇಕ ಮಾಡುವ  ಮೂಲಕ ಭಕ್ತಿಭಾವ ಮೆರೆದರು. 

Advertisement

ದೇಶಪಾಂಡೆ ನಗರದ ಜಿಮಖಾನ ಮೈದಾನದಲ್ಲಿ ಅದಮ್ಯ ಚೇತನ ಸೇವಾ ಉತ್ಸವ ಹಾಗೂ ಕ್ಷಮತಾ ಸೇವಾ ಸಂಸ್ಥೆಯಿಂದ ನಡೆದ ಕಾರ್ಯಕ್ರಮದಲ್ಲಿ ದ್ವಾದಶ ಜ್ಯೋರ್ತಿಲಿಂಗ ದರ್ಶನದ ಅವಕಾಶ ಕಲ್ಪಿಸಲಾಗಿತ್ತು. ಉಣಕಲ್ಲ, ಗೋಕುಲ ರಸ್ತೆ, ಗೋಪನಕೊಪ್ಪ, ಸಾಯಿನಗರ, ಕೇಶ್ವಾಪುರ ಸೇರಿದಂತೆ ನಗರದೆಲ್ಲೆಡೆ ಶಿವರಾತ್ರಿ ಹಬ್ಬದ ನಿಮಿತ್ತ ದೇವರಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ಶಿವರಾತ್ರಿ ಜಾಗರಣೆ ನಿಮಿತ್ತ ನಗರದ ವಿವಿಧ ದೇವಾಲಯಗಳಲ್ಲಿ ಪ್ರವಚನ, ಸಂಗೀತ ಕಾರ್ಯಕ್ರಮ ನಡೆದವು.  

Advertisement

Udayavani is now on Telegram. Click here to join our channel and stay updated with the latest news.

Next