Advertisement

ಸಮಾಜದ ಅಶಕ್ತರ ಬಾಳು ಬೆಳಗಿಸಲು ಸದಾ ಶ್ರಮ: ಐಕಳ ಹರೀಶ್‌ ಶೆಟ್ಟಿ 

11:17 AM Dec 13, 2021 | Team Udayavani |

ನವಿಮುಂಬಯಿ: ಸಮಾಜ ಬಾಂಧವರ ಸಹಕಾರದಿಂದ ಸಮಾಜಸೇವೆ ಮಾಡುವಂತಹ ಭಾಗ್ಯ ದೊರೆಯಿತು. ಇದ್ದವರಿಂದ ಪಡೆದು ಇಲ್ಲದವರಿಗೆ ನೀಡುವಂತಹ ಕೆಲಸ ಮಾಡಿದ್ದೇನೆ. ಇದಕ್ಕೆ ಸಮಾಜದ ಅನೇಕ ಮಹನೀಯರು ಸಹಕರಿಸಿದ್ದಾರೆ. ನಮ್ಮಲ್ಲಿ ಹಣ ಇದ್ದಾಗ ಅದು ಇನ್ನೊಬ್ಬರಿಗೆ ಉಪಯೋಗವಾಗುವಂತೆ ಆಗಬೇಕು. ಹಣ ಸಂಗ್ರಹಿಸಿಟ್ಟು ಹೆಚ್ಚು ಹೆಚ್ಚು ಆಸ್ತಿ ಮಾಡುವುದರಿಂದ ಪ್ರಯೋಜನ ಇಲ್ಲ. ನಾವು ಮಾಡುವ ದಾನ, ಧರ್ಮದಿಂದಾಗಿ ನಮ್ಮ ಜೀವಿತಾವಧಿಯ ಬಳಿಕವೂ ನಮ್ಮ ಹೆಸರು ಶಾಶ್ವತವಾಗಿರುತ್ತದೆ. ಸಮಾಜದ ಅಶಕ್ತರ ಬಾಳು ಬೆಳಗಿಸಲು ಸದಾ ಶ್ರಮಿಸುತ್ತಿದ್ದೇನೆ ಎಂದು ವಿಶ್ವ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್‌ ಶೆಟ್ಟಿ ತಿಳಿಸಿದರು.

Advertisement

ನವಿಮುಂಬಯಿ ಜೂಯಿ ನಗರದ ಬಂಟ್ಸ್‌ ಸೆಂಟರ್‌ನ ಸಭಾಗೃಹದಲ್ಲಿ ಡಿ. 11ರಂದು ಸಂಜೆ ಬಾಂಬೆ ಬಂಟ್ಸ್‌ ಅಸೋಸಿಯೇಶನ್‌ನ ಸಾಂಸ್ಕೃತಿಕ ಸಮಿತಿ ವತಿಯಿಂದ ಜರಗಿದ ಶಿವಧೂತೆ ಗುಳಿಗೆ ನಾಟಕದ ಮೊದಲು ಆಯೋಜಿಸಲಾದ ಸಮ್ಮಾನ ಸಮಾರಂಭದಲ್ಲಿ ಸಮ್ಮಾನ ಸ್ವೀಕರಿಸಿ ಮಾತನಾಡಿದ ಅವರು, ವಿಶ್ವ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷನಾದ ಬಳಿಕ ಊರಿನಲ್ಲಿ ಸಮಾಜ ಬಾಂಧವರ ಆರ್ಥಿಕ ಸ್ಥಿತಿಗತಿಗಳ ಬಗ್ಗೆ ನೋಡಿ ತಿಳಿದುಕೊಳ್ಳುವ ಅವಕಾಶ ದೊರೆಯಿತು. ಅನೇಕರು ಒಂದು ಹೊತ್ತಿನ ಊಟಕ್ಕೂ ವ್ಯವಸ್ಥೆ ಇಲ್ಲದಂತಹ ಪರಿಸ್ಥಿತಿಯಲ್ಲಿದ್ದು, ಮಕ್ಕಳ ಶಿಕ್ಷಣ, ಮನೆಗಳ ಸ್ಥಿತಿಗತಿ ಚಿಂತಾಜನಕವಾಗಿದೆ. ಇಂಥವರಿಗೆ ಸಹಾಯ ಮಾಡಬೇಕೆಂಬ ದೃಷ್ಟಿಯಲ್ಲಿ  ಕೆಲಸ ಮಾಡಿದೆ. ನನ್ನ ಆಶಯದಂತೆ ಎಲ್ಲರ ಸಹಕಾರದೊಂದಿಗೆ ಹೆಚ್ಚಿನ ಸಂಖ್ಯೆಯಲ್ಲಿ ವಸತಿಗಳನ್ನು ನಿರ್ಮಿಸಿ ನೀಡುವಲ್ಲಿ ಸಫಲನಾಗಿದ್ದೇನೆ. ಅನಾರೋಗ್ಯ ಪೀಡಿತರಿಗೆ ವೈದ್ಯಕೀಯ ಸಹಾಯ, ಹೆಣ್ಣುಮಕ್ಕಳ ವಿವಾಹ, ಮಕ್ಕಳ ಶಿಕ್ಷಣಕ್ಕೂ ಸಹಾಯ ಮಾಡುತ್ತ ಬಂದಿದ್ದೇನೆ. ಇನ್ನಷ್ಟು  ವಸತಿ ನಿರ್ಮಿಸಲು ಬಾಕಿ ಇದ್ದು, ಇದನ್ನು ಎಲ್ಲರ ಸಹಕಾರದೊಂದಿಗೆ ಪೂರ್ಣಗೊಳಿಸುತ್ತೇನೆ ಎಂಬ ವಿಶ್ವಾಸವಿದೆ. ನಾವು ಮಾಡಿದ ಸೇವಾ ಕಾರ್ಯಗಳ ಬಗ್ಗೆ ವಿವರಗಳನ್ನು ಜನರಿಗೆ ತಿಳಿಯಪಡಿಸುವ ದೃಷ್ಟಿಯಿಂದ ಪುಸ್ತಕ ಹೊರತರಲಿದ್ದೇವೆ. ಇಂದು ನನಗೆ ಬಾಂಬೆ ಬಂಟ್ಸ್‌ ಅಸೋಸಿಯೇಶನ್‌ ವತಿಯಿಂದ ನೀಡಿದ ಸಮ್ಮಾನ ಸಂತೋಷ ನೀಡಿದೆ. ಬಾಂಬೆ ಬಂಟ್ಸ್‌ ಅಸೋಸಿಯೇಶನ್‌ ಮುಂಬಯಿಯ ಸಮಾಜದ ಬಾಂಧವರ ಎರಡನೆಯ ಹಿರಿಯ ಸಂಸ್ಥೆಯಾಗಿದ್ದು, ಈ ಸಂಸ್ಥೆಗೆ ಅನೇಕ ಗಣ್ಯರು ಸಮಾಜ ಸೇವೆ ಮೂಲಕ ಕೊಡುಗೆ ನೀಡಿದ್ದಾರೆ ಎಂದರು.

ಐಕಳ ಹರೀಶ್‌ ಶೆಟ್ಟಿ ಅವರನ್ನು ಶಾಲು ಹೊದೆಸಿ, ಮೈಸೂರು ಪೇಟ, ಪುಷ್ಪಗುತ್ಛ, ಸಮ್ಮಾನ ಪತ್ರ, ಸ್ಮರಣಿಕೆಯೊಂದಿಗೆ ಬಾಂಬೆ ಬಂಟ್ಸ್‌ ಅಸೋಸಿಯೇಶನ್‌ ವತಿಯಿಂದ ಗಣ್ಯರು ಸಮ್ಮಾನಿಸಿದರು. ಸಮ್ಮಾನ ಪತ್ರವನ್ನು ಬಾಂಬೆ ಬಂಟ್ಸ್‌ ಅಸೋಸಿಯೇಶನ್‌ ಉಪಾಧ್ಯಕ್ಷ ಸಿಎ ಸುರೇಂದ್ರ ಕೆ. ಶೆಟ್ಟಿ ವಾಚಿಸಿದರು. ಸಾಂಸ್ಕೃತಿಕ ಸಮಿತಿಯ ಕಾರ್ಯಾಧ್ಯಕ್ಷ ಐಕಳ ವಿಶ್ವನಾಥ್‌ ಶೆಟ್ಟಿ ಅತಿಥಿಗಳನ್ನು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿ ಶುಭ ಹಾರೈಸಿದರು.

ಪ್ರಾರಂಭದಲ್ಲಿ ದೀಪ ಪ್ರಜ್ವಲಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.  ಉಪಾಧ್ಯಕ್ಷ ಸಿಎ ಸುರೇಂದ್ರ ಕೆ. ಶೆಟ್ಟಿ, ಗೌರವ ಪ್ರಧಾನ ಕಾರ್ಯದರ್ಶಿ ಸುನಿಲ್‌ ಶೆಟ್ಟಿ, ಗೌರವ ಕೋಶಾಧಿಕಾರಿ ಸಿಎ ವಿಶ್ವನಾಥ ಎಸ್‌. ಶೆಟ್ಟಿ, ಜತೆ ಕಾರ್ಯದರ್ಶಿ ಶಂಕರ್‌ ಎ. ಶೆಟ್ಟಿ, ಜತೆ ಕೋಶಾಧಿಕಾರಿ ಶಾಮ್‌ಸುಂದರ್‌ ಶೆಟ್ಟಿ, ಸಾಂಸ್ಕೃತಿಕ ಸಮಿತಿಯ ಕಾರ್ಯಾಧ್ಯಕ್ಷ ವಿಶ್ವನಾಥ್‌ ವಿ. ಶೆಟ್ಟಿ , ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಲತಾ ಗೋಪಾಲ್‌ ಶೆಟ್ಟಿ, ಯುವ ವಿಭಾಗದ ಕಾರ್ಯಾಧ್ಯಕ್ಷ ಶಶಿಕಾಂತ್‌ ರೈ ಮತ್ತಿತರರಿದ್ದರು.

ಹೇಮಲತಾ ಪ್ರಾರ್ಥನೆಗೈದರು. ದಯಾಸಾಗರ್‌ ಚೌಟ ಕಾರ್ಯಕ್ರಮ ನಿರೂಪಿಸಿದರು. ಗೌರವ ಕಾರ್ಯದರ್ಶಿ ಸುನಿಲ್‌ ಶೆಟ್ಟಿ ವಂದಿಸಿದರು. ಅಸೋಸಿಯೇಶನ್‌ನ ಮಾಜಿ ಅಧ್ಯಕ್ಷರು, ವಿಶ್ವಸ್ಥರು, ವಿವಿಧ ಉಪಸಮಿತಿಯ ಪದಾಧಿಕಾರಿಗಳು, ತುಳು-ಕನ್ನಡಿಗರು, ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ  ಭಾಗವಹಿಸಿದ್ದರು. ಮನೋರಂಜನೆಯ ಅಂಗವಾಗಿ ವಿಜಯಕುಮಾರ್‌ ಕೊಡಿಯಾಲ್‌ಬೈಲ್‌ ನಿರ್ದೇಶನದಲ್ಲಿ  ಕಲಾಸಂಗಮ ಮಂಗಳೂರು ಇದರ ಕಲಾವಿದರಿಂದ ಶಿವಧೂತೆ ಗುಳಿಗೆ ಎಂಬ ನಾಟಕ ಪ್ರದರ್ಶನಗೊಂಡಿತು.

Advertisement

ಐಕಳ ಹರೀಶ್‌ ಶೆಟ್ಟಿಯವರ ಸಾಮಾಜಿಕ ಕಾರ್ಯಗಳನ್ನು ಗಮನಿಸುತ್ತಿದ್ದೇನೆ. ಸಮಾಜಕ್ಕಾಗಿ ಅವರ ಸೇವೆ ಅಪಾರವಾಗಿದೆ. ಅವರನ್ನು ಸಮ್ಮಾನಿಸಬೇಕು ಎಂಬ ಬಯಕೆ ಬಹಳ ಸಮಯದಿಂದ ಇತ್ತು. ಅದು ಇಂದು ನೆರವೇರಿತು. ಅವರನ್ನು ಬಾಂಬೆ ಬಂಟ್ಸ್‌ ಅಸೋಸಿಯೇಶನ್‌ ವತಿಯಿಂದ ಗೌರವಿಸಿರುವುದರಿಂದ ಅಸೋಸಿಯೇಶನ್‌ನ ಗೌರವ ಹೆಚ್ಚಾಗಿದೆ. ಅವರು ಮಾಡುತ್ತಿರುವ ಸಮಾಜ ಸೇವೆಗೆ ದಾನಿಗಳು ಸದಾ ಪ್ರೋತ್ಸಾಹ ನೀಡಬೇಕಾಗಿದೆ. ನಮ್ಮ ಸಾಂಸ್ಕೃತಿಕ ಸಮಿತಿಯ ಕಾರ್ಯಾಧ್ಯಕ್ಷ ವಿಶ್ವನಾಥ್‌ ವಿ. ಶೆಟ್ಟಿ  ನೇತೃತ್ವದಲ್ಲಿ  ಕಳೆದ ಅನೇಕ ವರ್ಷಗಳಿಂದ ಸಾಂಸ್ಕೃತಿಕವಾಗಿ ಉತ್ತಮ ಕಾರ್ಯಕ್ರಮಗಳನ್ನು ನೀಡಲಾಗುತ್ತಿದೆ. ಇಂದು ನಡೆದ ಸಮ್ಮಾನ ಕಾರ್ಯಕ್ರಮ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಅವರು ಅಪಾರ ಶ್ರಮ ವಹಿಸಿದ್ದಾರೆ. ಅವರನ್ನು ಈ ಸಂದರ್ಭದಲ್ಲಿ  ಅಭಿನಂದಿಸುತ್ತೇನೆ.ಮುರಳಿ ಕೆ. ಶೆಟ್ಟಿ , ಅಧ್ಯಕ್ಷರು, ಬಾಂಬೆ ಬಂಟ್ಸ್‌ ಅಸೋಸಿಯೇಶನ್‌

ಚಿತ್ರ-ವರದಿ: ಸುಭಾಷ್‌ ಶಿರಿಯ

Advertisement

Udayavani is now on Telegram. Click here to join our channel and stay updated with the latest news.

Next