ಶಿವಮೊಗ್ಗ: ಸೋಂಕಿನ ಗುಣ ಲಕ್ಷಣವಿಲ್ಲದಿದ್ದರೂ ಕೋವಿಡ್ ಪಾಸಿಟಿವ್ ಬಂದವರು ಕೋವಿಡ್ ಕೇರ್ ಸೆಂಟರ್ ಸೇರಬೇಕೆಂದು ಇಲ್ಲಿನ ಜಿಲ್ಲಾಡಳಿತ ಕಟ್ಟಪ್ಪಣೆ ಹೊರಡಿಸಿದೆ. ಆದರೆ ಕೇರ್ ಸೆಂಟರ್ ಗೆ ಬಂದವರು ಮಾತ್ರ ನರಕ ಯಾತನೆ ಅನುಭವಿಸುವಂತಾಗಿದೆ. ಕೋವಿಡ್ ಕೇರ್ ಸೆಂಟರ್ ನ ಒಳಗಿನಿಂದ ಸೋಂಕಿತರು ತಾವು ಅನುಭವಿಸುತ್ತಿರುವ ಸಂಕಷ್ಟವನ್ನು ವಿವರಿಸಿದ್ದಾರೆ.
ಸೋಂಕು ಹರಡುವುದನ್ನು ತಡೆಯಲು, ಮನೆ ಮಂದಿಯಲ್ಲ ಕೋವಿಡ್ ಗೆ ತುತ್ತಾಗದಂತೆ ನೋಡಿಕೊಳ್ಳಲು ಪಾಸಿಟಿವ್ ಬಂದವರನ್ನು ಕೋವಿಡ್ ಕೇರ್ ಸೆಂಟರ್ ಗೆ ದಾಖಲು ಮಾಡಲಾಗುತ್ತಿದೆ. ಆದರೆ ಈ ಕೇರ್ ಸೆಂಟರ್ ಗಳತ್ತ ಅಧಿಕಾರಿಗಳು ಕ್ಯಾರೆ ಎನ್ನುತ್ತಿಲ್ಲ.
ಇದು ಮಲ್ಲಿಗೇನಹಳ್ಳಿಯಲ್ಲಿ ಇರುವ ಕೋವಿಡ್ ಕೇರ್ ಸೆಂಟರ್. ವೈದ್ಯಕೀಯ ಮತ್ತು ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗಾಗಿ ಡಾ. ದೇವರಾಜ ಅರಸು ಮೆಟ್ರಿಕ್ ನಂತರದ ಬಾಲಕರ ಹಾಸ್ಟೆಲ್ ನಲ್ಲಿ ಕೇರ್ ಸೆಂಟರ್ ಸ್ಥಾಪಿಸಲಾಗಿದೆ. ಇಲ್ಲಿ ಸುಮಾರು ಇನ್ನೂರು ಮಂದಿ ಸೋಂಕಿತರಿದ್ದಾರೆ. ಇವರೆಲ್ಲ ಕೋವಿಡ್ ಗುಣ ಲಕ್ಷಣ ಇಲ್ಲದವರು. ಆದರೂ ಪಾಸಿಟಿವ್ ಬಂದ ಹಿನ್ನೆಲೆ ಕ್ವಾರಂಟೈನ್ ಮಾಡಲಾಗಿದೆ.
ಕೇರ್ ಸೆಂಟರ್ ನಲ್ಲಿ ಅವ್ಯವಸ್ಥೆ
ಕೇರ್ ಸೆಂಟರ್ ನ ಮುಂದೆ ರಾಶಿ ರಾಶಿ ಕಸ ಚೆಲ್ಲಾಪಿಲ್ಲಿಯಾಗಿ ಬಿದ್ದಿದೆ. ಒಳಗಿರುವವರು ಊಟ, ತಿಂಡಿಯಲ್ಲಿ ಅಳಿದುಳಿದ್ದದ್ದನ್ನು ಬಿಸಾಡಿದ್ದೆಲ್ಲವು ಈ ಕಸದ ರಾಶಿಯಲ್ಲಿರುತ್ತದೆ. ಅಕ್ಕಪಕ್ಕದಿಂದ ಬರುವ ನಾಯಿಗಳು, ದನಕರುಗಳು ಇದನ್ನು ತಿನ್ನುತ್ತಿವೆ ಅಂತಾ ಆರೋಪಿಸುತ್ತಾರೆ ಇಲ್ಲಿರುವವರು. ಕೇರ್ ಸೆಂಟರ್ ಒಳಗಿರುವ ಕಸದ ಬುಟ್ಟಿ ದಿನನಿತ್ಯ ಖಾಲಿ ಮಾಡುವವರೂ ಇಲ್ಲ. ಕಸದ ರಾಶಿ ಮೂರ್ನಾಲ್ಕು ದಿನಗಳ ಕಾಲ ಹಾಗೆಯೇ ಇರುತ್ತದೆ.
ಶುಚಿತ್ವದ ವಿಚಾರ ಮಾತಾಡೋ ಹಾಗೆ ಇಲ್ಲ
ಒಳಗೆ ಬಿಡುಗಾಸಿನಷ್ಟೂ ಶುಚಿತ್ವ ಇಲ್ಲ ಎಂದು ಇಲ್ಲಿರುವವರು ಆರೋಪಿಸುತ್ತಾರೆ. ಶೌಚಾಲಯವನ್ನು ಕ್ಲೀನ್ ಮಾಡಿದ್ದನ್ನು ಇಲ್ಲಿ ಯಾರೂ ಕಂಡಿಲ್ಲವಂತೆ. ಕೊಠಡಿಗಳ ಶುಚಿತ್ವದ ವಿಚಾರವೂ ದೂರದ ಮಾತು. ಅಲ್ಲಿದ್ದರವರೇ ಕ್ಲೀನ್ ಮಾಡಿ ಮಲಗುತ್ತಿದ್ದಾರೆ. ಬೆಡ್ ಶೀಟ್ ಗಳನ್ನು ಒಗೆದಿದ್ದು ಯಾವಾಗ ಎನ್ನುವುದು ಗೊತ್ತಿಲ್ಲ. ನಾವೆ ಒಗೆದುಕೊಳ್ಳುತ್ತೇವೆ ಅಂದರೂ ವ್ಯವಸ್ಥೆ ಇಲ್ಲ ಅನ್ನುತ್ತಾರೆ.
ಇದನ್ನೂ ಓದಿ:ಕೋವಿಡ್ ಪರಿಸ್ಥಿತಿ ಸುಧಾರಣೆಯಾದರೆ ಮಾತ್ರ SSLC ಪರೀಕ್ಷೆ, ಇಲ್ಲದಿದ್ದರೆ ರದ್ದು: ಬಿಎಸ್ ವೈ
ಒಂದೇ ರೀತಿಯ ಊಟ, ತಿಂಡಿ
ಕೋವಿಡ್ ಸೋಂಕಿತರಿಗೆ ಪೌಷ್ಠಿಕ ಆಹಾರ ಬೇಕು. ಆದರೆ ಇಲ್ಲಿಯ ಕೋವಿಡ್ ಕೇರ್ ಸೆಂಟರ್ ನಲ್ಲಿ ಪ್ರತಿದಿನ ಒಂದೆ ಬಗೆಯ ಊಟ, ಒಂದೆ ರೀತಿಯ ಸಾಂಬಾರು, ಪಲ್ಯ. ಇದನ್ನು ಸಹಿಸಿಕೊಳ್ಳಲು ಆಗುತ್ತಿಲ್ಲ ಅನ್ನುತ್ತಾರೆ ಒಳಗಿರುವವರು. ಮನೆಗೆ ಕಳುಹಿಸಿದರೆ ನಾವೆ ಪೌಷ್ಠಿಕಾಂಶಯುಕ್ತ ಆಹಾರ ತಯಾರಿಸಿಕೊಳ್ಳುತ್ತೇವೆ ಅನ್ನುತ್ತಾರೆ ಇಲ್ಲಿರುವ ಮಹಿಳೆಯರು.
ಡಾಕ್ಟರ್ ಓಕೆ, ಉಳಿದವರದ್ದೆ ಕಿರಿಕ್ಕು
ಇಲ್ಲಿ ವೈದ್ಯಕೀಯ ವ್ಯವಸ್ಥೆ ಚೆನ್ನಾಗಿದೆ. ವೈದ್ಯರು ಸಮರ್ಪಕವಾಗಿ ಚಿಕಿತ್ಸೆ ನೀಡುತ್ತಿದ್ದಾರೆ ಎಂದು ಕೇರ್ ಸೆಂಟರ್ ನಲ್ಲಿರುವವರ ಅಭಿಪ್ರಾಯ. ಆದರೆ ಉಳಿದ ಸಿಬ್ಬಂದಿಗಳು ಕೇರ್ ಸೆಂಟರ್ ನಲ್ಲಿ ಇರುವವರನ್ನು ಬೆದರಿಸುತ್ತಿದ್ದಾರೆ. ಏನನ್ನಾದರೂ ವಿಚಾರಿಸಿದರೆ ಗದರುತ್ತಾರೆ ಎಂದು ಆರೋಪಿಸುತ್ತಾರೆ.
ಇನ್ನಾದರೂ ಜಿಲ್ಲಾಡಳಿತ ಈ ಕೇರ್ ಸೆಂಟರ್ ಗಳ ಮೇಲೆ ಹದ್ದಿನ ಕಣ್ಣಿಡಬೇಕಾಗಿದೆ. ಸೋಂಕಿತರಲ್ಲಿ ಆತ್ಮಸ್ಥೈರ್ಯ ತುಂಬಬೇಕಿದೆ. ಅದಕ್ಕೆ ಪೂರಕವಾದ ವಾತಾವರಣ ನಿರ್ಮಿಸಬೇಕಿದೆ. ಇಲ್ಲವಾದಲ್ಲಿ ಸೋಂಕಿನ ಲಕ್ಷಣ ಕಂಡು ಬಂದರೂ ಜನರು ಭೀತಿಯಿಂದ ಟೆಸ್ಟ್ ಮಾಡಿಸಿಕೊಳ್ಳದೆ, ಮನೆಗಳಲ್ಲಿಯೇ ಉಳಿದುಕೊಂಡು ಅನಾಹುತ ಸೃಷ್ಟಿಸುವ ಸಾಧ್ಯತೆ ಹೆಚ್ಚು.