ಪ್ಯಾರಿಸ್: ಫ್ರಾನ್ಸ್‌ನಲ್ಲಿ ಸಂಚಾರ ನಿಯಮ ಉಲ್ಲಂಘನೆ ಕಾರಣಕ್ಕೆ 17 ವರ್ಷದ ಯುವಕ ಪೊಲೀಸರ ಗುಂಡೇಟಿಗೆ ಬಲಿಯಾದ ನಂತರ ಆರಂಭವಾಗಿರುವ ಹಿಂಸಾಚಾರ ಐದನೇ ದಿನವೂ ಮುಂದುವರಿದಿದೆ. ಹಿಂದಿನ ದಿನಗಳಿಗೆ ಹೋಲಿಸಿದರೆ ಪರಿಸ್ಥಿತಿ ತುಸು ನಿಯಂತ್ರಣಕ್ಕೆ ಬಂದಿದೆ. ಫ್ರಾನ್ಸ್‌ನಾದ್ಯಂತ ಭಾರಿ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿದ್ದು, ಭಾನುವಾರ ಬೆಳಗ್ಗೆ 719 ಪ್ರತಿಭಟನಾಕಾರರನ್ನು ಪೊಲೀಸರು ಬಂಧಿಸಿದ್ದಾರೆ.
ಇನ್ನೊಂದೆಡೆ, ಪೊಲೀಸರ ಗುಂಡಿಗೆ ಬಲಿಯಾದ ನಾಹೆಲ್ ಮೆಜೌìಕ್(17) ಅಂತ್ಯಸಂಸ್ಕಾರ ಇಸ್ಲಾಂ ಧರ್ಮದ ಅನುಸಾರ ಭಾನುವಾರ ನಡೆಯಿತು. ಇತ್ತೀಚಿನ ವರ್ಷಗಳಲ್ಲಿ ಫ್ರಾನ್ಸ್‌ನಲ್ಲಿ ಮುಸ್ಲಿಮರ ಸಂಖ್ಯೆ ಹೆಚ್ಚಳವಾಗಿದೆ. ಜತೆಗೆ ಅಕ್ರಮ ವಲಸಿಗರ ಸಂಖ್ಯೆಯು ಅಧಿಕವಾಗಿದೆ. ಇದೇ ಕಾರಣಕ್ಕೆ ಒಂದು ಘಟನೆಯಿಂದ ಇಷ್ಟು ದೊಡ್ಡ ಮಟ್ಟದಲ್ಲಿ ಹಿಂಸಾಚಾರ ನಡೆಯಲು ಕಾರಣವಾಗಿದೆ ಎಂದು ಅಧಿಕಾರಿಗಳು ವಿಶ್ಲೇಷಿಸಿದ್ದಾರೆ.
ಪ್ಯಾರಿಸ್‌ನಲ್ಲಿ ಕಳೆದ ಮಂಗಳವಾರ ಮರ್ಸಿಡೆಸ್ ಕಾರ್ ಅನ್ನು ನಾಹೆಲ್ ಚಾಲನೆ ಮಾಡುತ್ತಿದ್ದು, ಬಸ್ ಲೇನ್‌ನಲ್ಲಿ ಸಂಚರಿಸುತ್ತಿದ್ದ. ಯುವಕನಾಗಿದ್ದ ಕಾರಣ ಆತನ ಚಾಲನಾ ಪರವಾನಗಿ ತಪಾಸಣೆ ಮಾಡಲು ಪೊಲೀಸರು ಕಾರನ್ನು ನಿಲ್ಲಿಸಲು ಸೂಚಿಸಿದ್ದಾರೆ. ಆದರೆ ನಾಹೆಲ್ ಕಾರು ನಿಲ್ಲಿಸದೇ ಮುಂದಕ್ಕೆ ಚಲಾಯಿಸಿದ್ದಾನೆ. ಪೊಲೀಸರು ಆತನನ್ನು ಬೆನ್ನತ್ತಿ ಆತನ ಮೇಲೆ ಗುಂಡು ಚಲಾಯಿಸಿದ್ದಾರೆ. ಇದರಿಂದ ನಾಹೆಲ್ ಮೃತಪಟ್ಟಿದ್ದಾನೆ.
ಪೊಲೀಸರ ದೌರ್ಜನ್ಯದ ವಿರುದ್ಧ ಫ್ರಾನ್ಸ್‌ನಾದ್ಯಂತ ನಾಗರಿಕರು ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ. ಶಾಲಾ-ಕಾಲೇಜುಗಳು, ಸರ್ಕಾರಿ ಕಚೇರಿಗಳು, ಪೊಲೀಸ್ ಠಾಣೆಗಳು, ಟೌನ್ ಹಾಲ್, ಮೇಯರ್ ಮನೆ, ಅಂಗಡಿಗಳಿಗೆ ಹಾನಿ ಮಾಡಲಾಗಿದೆ. ಅಪಾರ ವಾಹನಗಳಿಗೆ ಬೆಂಕಿ ಹಚ್ಚಲಾಗಿದೆ. ಹಿಂಸಾಚಾರದಲ್ಲಿ ಅನೇಕ ಪೊಲೀಸರು, ಅಗ್ನಿಶಾಮಕ ಸಿಬ್ಬಂದಿ ಗಾಯಗೊಂಡಿದ್ದಾರೆ. ನೂರಾರು ಪ್ರತಿಭಟನಾಕಾರರನ್ನು ಪೊಲೀಸರು ಬಂಧಿಸಿದ್ದಾರೆ. ಗುಂಪುಗಳನ್ನು ಚದುರಿಸಲು ಪೊಲೀಸರು ಅಶ್ರುವಾಯು ಮತ್ತು ಸ್ಟನ್ ಗ್ರನೇಡ್‌ಗಳನ್ನು ಸಿಡಿಸಿದ್ದಾರೆ.
“ಶನಿವಾರ ಮನೆಯಲ್ಲಿ ಕುಟುಂಬದವರು ಮಲಗಿದ್ದ ಸಮಯದಲ್ಲಿ ಮಧ್ಯರಾತ್ರಿ 1.30 ಗಂಟೆಯ ಸುಮಾರಿಗೆ ಮೆನೆಯ ಮೇಲೆ ಗುಂಪೊಂದು ದಾಳಿ ಮಾಡಿದ್ದು, ಇದರಿಂದ ಪತ್ನಿ ಮತ್ತು ಮಕ್ಕಳು ಗಾಯಗೊಂಡಿದ್ದಾರೆ. ಈ ವೇಳೆ ನಾನು ಟೌನ್‌ಹಾಲ್‌ನಲ್ಲಿದ್ದು, ಹಿಂಸಾಚಾರ ನಿಯಂತ್ರಿಸುವ ಪ್ರಯತ್ನದಲ್ಲಿದ್ದೆ’ ಎಂದು ಪ್ಯಾರಿಸ್ ಮೇಯರ್ ವಿನ್ಸೆಂಟ್ ಜೀನ್‌ಬನ್ ತಿಳಿಸಿದ್ದಾರೆ.