Advertisement

ಆಶ್ರಯ ಬಡಾವಣೆ ಸೊಳ್ಳೆಗಳ ತಾಣ!

05:15 PM Sep 28, 2018 | Team Udayavani |

ಕೊಪ್ಪಳ: ನಗರದ 3ನೇ ವಾರ್ಡಿನಲ್ಲಿ ಚರಂಡಿಗಳ ಸ್ಥಿತಿಯನ್ನೊಮ್ಮೆ ನೋಡಿದರೆ ಅವುಗಳಿಗೆ ರೋಗ ಬಂದಿದೆಯೇನೋ ಎಂದೆನಿಸುತ್ತದೆ. ಅಷ್ಟೊಂದು ತ್ಯಾಜ್ಯ ತುಂಬಿಕೊಂಡು ನರಳುತ್ತಿವೆ. ಪೌರ ಕಾರ್ಮಿಕರು ಸ್ವತ್ಛ ಮಾಡೋದೇ ತುಂಬ ಅಪರೂಪವಂತೆ. ಇಲ್ಲಿನ ಸೊಳ್ಳೆಗಳ ಕಾಟಕ್ಕೆ ಜನರು ನೆಮ್ಮದಿ ಹಾಳಾಗಿ ಮನೆ ಬಿಡುವಂತ ಪರಿಸ್ಥಿತಿ ಬಂದಿದೆ ಎಂದು ಜನರೂ ನರಳುತ್ತಾ ವೇದನೆ ವ್ಯಕ್ತಪಡಿಸುತ್ತಿದ್ದಾರೆ.

Advertisement

ಹೌದು, ಕೊಪ್ಪಳದಲ್ಲಿ ಅತಿ ದೊಡ್ಡ ವಾರ್ಡ್‌ ಎಂದೆನಿಸಿರುವ 3ನೇ ವಾರ್ಡ್‌ನಲ್ಲಿ ಸಮಸ್ಯೆಗಳ ಸರಮಾಲೆಯೇ ಇವೆ. ಅದರಲ್ಲೂ ನಿರ್ಮಿತಿ ಕೇಂದ್ರ, ಆಶ್ರಯ ಬಡಾವಣೆಯ ಜನರ ನರಳಾಟ ಯಾರೂ ನೋಡದಂತ ಪರಿಸ್ಥಿತಿಯಿದೆ. ಇವರು ಇನ್ನೂ ಯಾವ ಕಾಲದಲ್ಲಿದ್ದಾರಪ್ಪ ಎನ್ನುವಂತ ಪ್ರಶ್ನೆ ಎಲ್ಲರಲ್ಲೂ ಮೂಡುತ್ತದೆ. ಅಷ್ಟರ ಮಟ್ಟಿಗೆ ನಿರ್ಮಿತಿ ಕೇಂದ್ರ ಅದ್ವಾನ ಸ್ಥಿತಿಯಲ್ಲಿದೆ.

ತ್ಯಾಜ್ಯ ತುಂಬಿಕೊಂಡು ನರಳುವ ಚರಂಡಿ: ಮೊದಲೇ ನಿರ್ಮಿತಿ ಕೇಂದ್ರ ಯರೆ(ಕಪ್ಪು) ಭೂಮಿಯಾಗಿದೆ. ಈ ಪ್ರದೇಶದಲ್ಲಿ ಶುದ್ಧ ಚರಂಡಿ ವ್ಯವಸ್ಥೆ ಇಲ್ಲ. ಕೆಲವೊಂದು ಸ್ಥಳದಲ್ಲಿ ಅಲ್ಪಸ್ವಲ್ಪ ಚರಂಡಿ ನಿರ್ಮಿಸಿದ್ದರೂ ಸ್ವಚ್ಛ ಮಾಡುವವರು ದಿಕ್ಕಿಲ್ಲ. ಅದರಲ್ಲೂ ನಿರ್ಮಿತಿ ಕೇಂದ್ರದ ಮುಖ್ಯ ರಸ್ತೆಯ ಎರಡೂ ಬದಿಯಲ್ಲಿ ಚರಂಡಿಗಳೇ ಮುಚ್ಚಿ ಹೋಗಿವೆ. ಅಷ್ಟರ ಮಟ್ಟಿಗೆ ಅದ್ವಾನ ಸ್ಥಿತಿಗೆ ತಲುಪಿವೆ. ಇದೇ ಏರಿಯಾದ ಖಾಲಿ ನಿವೇಶನಗಳಲ್ಲಿ ತ್ಯಾಜ್ಯದ ನೀರು ಸೇರಿದಂತೆ ಚರಂಡಿ ನೀರು ಸಂಗ್ರಹವಾಗುತ್ತಿದೆ. ದುರ್ನಾತದ ವಾಸನೆ ಕುಡಿದು ಜನರು ಇಲ್ಲಿನ ಪರಿಸ್ಥಿತಿಗೆ ರೋಸಿ ಹೋಗಿದ್ದಾರೆ. ಚರಂಡಿಗಳಂತೂ ನರಳಾಡಿ ನಮಗೆ ಎಂದು ಮುಕ್ತಿ ಸಿಗುತ್ತದೆಯೋ ಎಂದು ನೊಂದುಕೊಳ್ಳುತ್ತಿವೆ.

ಕಳೆದ 10 ವರ್ಷದ ಹಿಂದೆಯೇ ಕೆಲವು ಭಾಗದಲ್ಲಿ ಚರಂಡಿಗಳನ್ನು ನಿರ್ಮಾಣ ಮಾಡಲಾಗಿದೆ. ಆದರೆ ಅವುಗಳೆಲ್ಲವೂ ತ್ಯಾಜ್ಯ ತುಂಬಿಕೊಂಡು ಬಂದ್‌ ಆಗಿವೆ. ಕಲುಷಿತ ನೀರು ಎತ್ತ ಸಾಗಲು ದಾರಿಯೇ ಇಲ್ಲ. ನಿಂತ ಸ್ಥಳದಲ್ಲೆ ಸೊಳ್ಳೆಗಳ ಉತ್ಪಾದನೆಗೆ ದಾರಿ ಮಾಡಿಕೊಡುತ್ತಿವೆ. ನಿರ್ಮಿತಿ ಕೇಂದ್ರದ ಮುಖ್ಯ ರಸ್ತೆಯ ಎರಡೂ ಬದಿಯಲ್ಲಿ ಶುದ್ಧ ಚರಂಡಿಗಳಿಲ್ಲ. ಇರುವ ಒಂದೇ ಒಂದು ಚರಂಡಿ ದಾರಿಯಲ್ಲಿ ತ್ಯಾಜ್ಯ ತುಂಬಿಕೊಂಡು ನರಳಾಡುತ್ತಿವೆ.

ಬಡಾವಣೆ ವಿವಾದಕ್ಕೆ ಅಭಿವೃದ್ಧಿ ಇಲ್ಲ: ನಿರ್ಮಿತಿ ಕೇಂದ್ರ ಸುತ್ತಲೂ ಆಶ್ರಯ ಬಡಾವಣೆ ಮಾಡಿ 10 ವರ್ಷಗಳ ಹಿಂದೆಯೇ ಬಡ ಜನರಿಗೆ ನಿವೇಶನ ಹಂಚಿಕೆ ಮಾಡಿದೆ. ಆದರೆ, ನಿವೇಶನ ಆಯ್ಕೆಯಲ್ಲಿ ಅರ್ಹ ಫಲಾನುಭವಿಗಳಿಲ್ಲ ಎನ್ನುವ ಆಪಾದನೆ ಬಂದ ಹಿನ್ನೆಲೆಯಲ್ಲಿ ಈ ವಿವಾದ ಕೋರ್ಟ್‌ ಮೆಟ್ಟಿಲೇರಿತ್ತು. ಹಲವು ಕುಟುಂಬಗಳಿಗೆ ನಿವೇಶನ ಇದ್ದರೂ ನಗರಸಭೆಯಲ್ಲಿ ಇನ್ನೂವರೆಗೂ ಎಂ.ಬಿ. ನಂಬರ್‌ ಪಡೆಯಲು ಸಾಧ್ಯವಾಗುತ್ತಿಲ್ಲ. ಇದರಿಂದ ಬಡ ಜನರಿಗೆ ಮನೆ ನಿರ್ಮಿಸಿಕೊಳ್ಳಲು, ಸರ್ಕಾರಿ ಸೌಲಭ್ಯ ಪಡೆದುಕೊಳ್ಳಲು ಕಷ್ಟವಾಗುತ್ತಿದೆ. ಮನೆ, ನಿವೇಶನಗಳ ನೊಂದಣಿ ಇಲ್ಲದ ಕಾರಣ ಅಭಿವೃದ್ಧಿಯೂ ಮರೀಚಿಕೆಯಾಗಿದೆ.

Advertisement

‘ಸೊಳ್ಳೆಗಳ ಕಾರ್ಖಾನೆ’ ಎಂದ ಜನ: ತ್ಯಾಜ್ಯ ತುಂಬಿದ ಬಡಾವಣೆಯಿಂದ ನಮಗೆ ನೆಮ್ಮದಿ ಇಲ್ಲದಂತಾಗಿದೆ. ಸೊಳ್ಳೆಗಳ ಕಾಟಕ್ಕೆ ನಾವು ಮನೆ ಬಿಟ್ಟು ಹೋಗಬೇಕು ಅಷ್ಟೊಂದು ಪರಿಸ್ಥಿತಿ ಹದಗೆಟ್ಟಿದೆ. ಸಂಜೆಯಾದರೆ ಸಾಕು ಮನೆ ಮುಂದೆ ಕುಳಿತು ಮಾತನಾಡುವಂತಿಲ್ಲ. ಅಷ್ಟು ಸೊಳ್ಳೆಗಳ ಕಾಟವಿದೆ. ಈ ಬಡಾವಣೆಯನ್ನು ಸೊಳ್ಳೆಗಳನ್ನು ಉತ್ಪಾದನೆ ಮಾಡುವ ಫ್ಯಾಕ್ಟರಿ ಎಂದರೂ ತಪ್ಪಲ್ಲ. ನಗರಸಭೆ ಕಾರ್ಮಿಕರು ಚರಂಡಿ ಸ್ವತ್ಛ ಮಾಡಲ್ಲ. ನಮ್ಮ ಮನೆ ಮುಂದಿನ ಚರಂಡಿ ನಾವೇ ಸ್ವಚ್ಛ 
ಮಾಡಿಕೊಳ್ಳಬೇಕಿದೆ. ಇನ್ನೂ ಪ್ರತಿ ಬಾರಿ ಕಸದ ತೆರಿಗೆ ಕಟ್ಟಿಸಿಕೊಳ್ಳುತ್ತಾರೆ. ಆದರೆ, ಕಸದ ವಾಹನ ಕೊನೆ ಭಾಗದವರೆಗೂ ಬರುವುದೇ ಇಲ್ಲ ಎನ್ನುವ ಆಪಾದನೆ ಮಾಡುತ್ತಿದ್ದಾರೆ.

ಶೌಚಾಲಯದ ಪರಿಸ್ಥಿತಿ ಕೆಟ್ಟಿದೆ: ನಿರ್ಮಿತಿ ಕಾಲೋನಿಯಲ್ಲಿ ಮಹಿಳೆಯರ ಶೌಚಾಲಯದ ಪರಿಸ್ಥಿತಿ ತುಂಬ ಗಂಭೀರವಾಗಿದೆ. ಇಂದಿಗೂ ಬಯಲು ಬಹಿರ್ದೆಸೆಗೆ ತೆರಳಬೇಕಿದೆ. ಆದರೆ, ನಗರಸಭೆ ಬಯಲು ಬಹಿರ್ದೆಸೆಗೆ ತೆರಳದಂತೆ ನಿರ್ಬಂಧನೆ ಹೇರಿದೆ. ಒಂದು ವೇಳೆ ಬಹಿರ್ದೆಸೆಗೆ ತೆರಳಿದರೆ ಕೇಸ್‌ ಮಾಡುವುದು, ದಂಡ ಹಾಕಲಾವುದು ಎನ್ನುವ ಎಚ್ಚರಿಕೆ ನೀಡುತ್ತಿದೆ. ವೈಯಕ್ತಿಕ ಶೌಚಾಲಯ ನಿರ್ಮಾಣವೂ ಗಗನ ಕುಸುಮವಾಗಿದೆ. ಜನರ ನೋವು, ಮಹಿಳೆಯರ, ಮಕ್ಕಳ, ವೃದ್ಧರ ನರಳಾಟ ಯಾರೂ ಕೇಳುವವರೇ ಇಲ್ಲ ಎನ್ನುತ್ತಿದೆ ಸ್ಥಳೀಯ ಜನ.

ನಿರ್ಮಿತಿ ಕೇಂದ್ರದ ಕಾಲೋನಿಯ ಚರಂಡಿಗಳ ಸ್ಥಿತಿ ಯಾರಿಗೂ ಹೇಳುವಂತಿಲ್ಲ. ಅಷ್ಟೊಂದು ಹದಗೆಟ್ಟಿವೆ. ಪೌರ ಕಾರ್ಮಿಕರು ಚರಂಡಿ ಸ್ವಚ್ಛ  ಮಾಡುವುದು ಗಗನ ಕುಸುಮವಾಗಿದೆ. ವಾರ್ಡಿಗೆ ಸದಸ್ಯ ಅಮ್ಜದ್‌ ಪಟೇಲ್‌ ಬರುವುದೇ ಅಪರೂಪವಾಗಿದೆ. ಮಳೆ ಬಂದರೆ ಎಲ್ಲೆಲ್ಲೂ ನೀರು ನಿಲ್ಲುತ್ತದೆ. ಚರಂಡಿಯಂತೂ ಗಬ್ಬೆದ್ದು ನಾರುತ್ತಿವೆ. ಸ್ವಚ್ಛ ಮಾಡುವವರು ದಿಕ್ಕೇ ಇಲ್ಲದಂತಾಗಿವೆ.
ಹಜರತ್‌ ಅಲಿ ಮುಜಾವರ್‌,
ಸ್ಥಳೀಯ ನಿವಾಸಿ.

ಚರಂಡಿಗಳ ಅವಸ್ಥೆಯಿಂದ ಸೊಳ್ಳೆಗಳು ಅತ್ಯ ಧಿಕವಾಗಿವೆ. ಜನರು ನೆಮ್ಮದಿಯಿಂದ ವಾಸ ಮಾಡದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ನಿರ್ಮಿತಿ ಕಾಲೋನಿಯನ್ನು ‘ಸೊಳ್ಳೆಗಳ ಫ್ಯಾಕ್ಟರಿ’ ಎಂದರೂ ತಪ್ಪಾಗಲಾರದು. ಚರಂಡಿಗಳ ಬಗ್ಗೆ ನಗರಸಭೆಗೆ ಕಾಳಜಿಯೇ ಇಲ್ಲ. ಇನ್ನೂ ಮಹಿಳೆಯರು ಶೌಚಕ್ಕೆ ತೆರಳಬೇಕೆಂದರೆ ನರಕಯಾತನೆ ಅನುಭವಿಸುತ್ತಿದ್ದಾರೆ.
ಸಲೀಂ ಅಳವಂಡಿ,
ಅಕ್ಕಮಹಾದೇವಿ ಸಸಿಮಠ, ಸ್ಥಳೀಯ ನಿವಾಸಿಗಳು.

ದತ್ತು ಕಮ್ಮಾರ

Advertisement

Udayavani is now on Telegram. Click here to join our channel and stay updated with the latest news.

Next