Advertisement

Sitavana: ಕೌತುಕದ ತಾಣ ಸೀತಾವನ

04:43 PM Sep 10, 2024 | Team Udayavani |

ರಾಮಾಯಣ ನಿಜ ಎಂಬುದಕ್ಕೆ ಈಗಲೂ ಅಲ್ಲಲ್ಲಿ ಕಾಣಸಿಗುವ ಕೆಲವೊಂದು ಕೌತುಕದ ಸನ್ನಿವೇಶಗಳು, ವಿಸ್ಮಯಗಳೇ ಸಾಕ್ಷಿ. ಇದಕ್ಕೆ ರುಜು ಎಂಬಂತೆ ರಾಮಾಯಣ ಕಾಲದಲ್ಲಿ ಶ್ರೀ ರಾಮನ ಪತ್ನಿ ಸೀತೆ ಸ್ನಾನ ಮಾಡಿದ ಪುಣ್ಯಸ್ಥಳ ಚಿಕ್ಕಮಗಳೂರಿನಲ್ಲಿದೆ. ಅಂದಿನಿಂದ ಇಂದಿನವರೆಗೂ ಈ ಜಾಗದಲ್ಲಿ ನೀರಿನ ಹರಿವು ಕಡಿಮೆಯಾಗಿಲ್ಲ. ಇಲ್ಲಿ ನೀರು ಹರಿಯಲು ಪ್ರಾರಂಭವಾದಾಗಿನಿಂದ ಎಂಥ ಬರಗಾಲ ಬಂದರೂ ಇಲ್ಲಿ ಮಾತ್ರ ನೀರು ಹರಿಯುವುದು ನಿಂತಿಲ್ಲ.

Advertisement

ಇಲ್ಲಿ ಮಳೆಗಾಲದಲ್ಲಿ ನೀರು ತುಸು ಕಡಿಮೆಯಾಗುವುದು, ಬೇಸಗೆಯಲ್ಲಿ ಹೆಚ್ಚಾಗುವುದು ಅಚ್ಚರಿಯೇ ಸರಿ. ಈ ಜಾಗಕ್ಕೆ ನೀರು ಎಲ್ಲಿಂದ ಬರುತ್ತದೆ ಈಗಲೂ ನಿಗೂಢ ಪ್ರಶ್ನೆಯಾಗಿಯೇ ಉಳಿದಿದೆ. ಈ ರೀತಿ ಅಚ್ಚರಿಯ, ಕೌತುಕ ಸ್ಥಳ ನೆಲೆಗೊಂಡಿರುವುದು ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಜಯಪುರ ಎಂಬ ಪುಟ್ಟ ಗ್ರಾಮದಲ್ಲಿ.

ಈ ಪ್ರದೇಶ ನೋಡಲು ಅತ್ತ ಜಲಪಾತವೂ ಅಲ್ಲ, ಇತ್ತ ಹಳ್ಳವೂ ಅಲ್ಲ. ಆದರೂ ಸದಾ ತಂಪು ನೀರಿನಿಂದ ಹರಿಯುವ ಮನಮೋಹಕ ತಾಣವೆಂದೇ ಹೇಳಬಹುದು. ಈ ಜಾಗವನ್ನು ಊರಿನ ಜನರು ಸೀತಾವನ ಎಂದು ಕರೆಯುವರು. ಈ ಸೀತಾವನಕ್ಕೆ ಕಲ್ಲು, ನಾಣ್ಯ, ಮರದ ತುಂಡು, ಯಾವುದೇ ವಸ್ತುವನ್ನು ಹಾಕಿದರೂ ಒಂದೇ ವಾರದಲ್ಲಿ ಆ ವಸ್ತುವಿನ ಮೇಲೆ ಸುಣ್ಣದ ಅಂಶ ಬೆಳೆದು ಕಲ್ಲಾಗುತ್ತದೆ.

ಇದರ ಹಿಂದಿರುವ ಪುರಾಣದ ಕಥೆ ನೋಡಿದರೆ, ಸೀತೆ ವನವಾಸದಲ್ಲಿದ್ದಾಗ ಈ ಜಾಗಕ್ಕೆ ಭೇಟಿ ನೀಡಿ ಇಲ್ಲಿ ಸ್ನಾನ ಮಾಡಿದ್ದಾಳೆ ಎಂಬ ಪ್ರತೀತಿ ಇದೆ. ಇದೇ ಜಾಗದಲ್ಲಿ ಸೀತೆ ತಾಂಬೂಲ ಹಾಕಿ ಸುಣ್ಣ ಹಾಕಿಕೊಂಡಿದ್ದು ಎಂದು ಹೇಳಲಾಗುತ್ತದೆ. ಅಂದಿನಿಂದ ಈ ಸ್ಥಳದಲ್ಲಿ ಯಾವುದೇ ವಸ್ತು ಬಿದ್ದರೂ ಅದರ ಮೇಲೆ ಸುಣ್ಣದ ಅಂಶ ಬೆಳೆಯುತ್ತದೆ ಎಂಬುದು ಇಲ್ಲಿನ ಜನರ ನಂಬಿಕೆ. ಆದರೆ ಇಲ್ಲಿನ ಮಣ್ಣಿನ ಗುಣ ಹಾಗೂ ಹವಾಮಾನ ಬದಲಾವಣೆಯೇ ಈ ರೀತಿಯ ಪವಾಡಗಳಿಗೆ ಕಾರಣವೆಂದು ವಿಜ್ಞಾನದ ವಾದ. ಏನೇ ಇದ್ದರು ಈಗಲೂ ಪುರಾಣಗಳಲ್ಲಿ ಇರುವ ಸ್ಥಳಗಳು ಕಾಣುವುದು ಒಂದು ಕೌತುಕವೇ ಸರಿ.

- ಬಿ. ಶರಣ್ಯ ಜೈನ್‌

Advertisement

ಎಸ್‌ಡಿಎಂ, ಉಜಿರೆ

Advertisement

Udayavani is now on Telegram. Click here to join our channel and stay updated with the latest news.

Next