ಧಾರವಾಡ: ಕೆಲ ದಿನಗಳಿಂದಅನಾರೋಗ್ಯದಿಂದ ಬಳಲುತ್ತಿದ್ದ ಹಿರಿಯ ಸಿತಾರ್ ವಾದಕ ಹಮೀದ್ ಖಾನ್ ಅವರು ಶನಿವಾರ ಬೆಳಗ್ಗೆ ನಿಧನ ಹೊಂದಿದರು.
ಧಾರವಾಡದ ಸಂಗೀತ ಹಾಗೂ ಲಲಿತಾ ಕಲಾ ಕಾಲೇಜ್ ಉಪನ್ಯಾಸಕರಾಗಿ, ಪ್ರಾಚಾರ್ಯರಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ್ದರು.
ಇವರ ಸಂಗೀತ ಸೇವೆ ಗುರುತಿಸಿ ಹತ್ತು ಹಲವು ಪ್ರಶಸ್ತಿಗಳು ಬಂದಿದ್ದವು. ಅವರು ಮೈಸೂರಿನ ಗಂಗೂಬಾಯಿ ಹಾನಗಲ್ ಸಂಗೀತ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರಾಗಿದ್ದರು.
ಭಾರತೀಯ ಸಂಗೀತ ವಿದ್ಯಾಲಯದ ಮೂಲಕ ಹತ್ತು ಹಲವು ಕಾರ್ಯಕ್ರಮಗಳನ್ನು ನಿರಂತರವಾಗಿ ಸಂಘಟಿಸುವ ಮೂಲಕ ಸಂಗೀತಾಸಕ್ತರಿಗೆ ರಸದೌತಣ ಉಣಬಡಿಸುತ್ತಿದ್ದರು.
ಜೊತೆಗೆ ಅವರ ಅಜ್ಜನವರಾದ ಸಿತಾರ್ ರತ್ನ ರೆಹಮತ್ ಖಾನ್ ಹಾಗೂ ತಂದೆ ಉಸ್ತಾದ್ ಅಬ್ದುಲ್ ಕರೀಂ ಖಾನ್ ಅವರ ಸ್ಮರಣಾರ್ಥ ಅಹೋರಾತ್ರಿ ಸಂಗೀತ ಕಾರ್ಯಕ್ರಮ ಆಯೋಜಿಸಿ ವಿದ್ಯಾನಗರಿ ಧಾರವಾಡಕ್ಕೆ ಮೆರಗು ತಂದುಕೊಟ್ಟಿದ್ದರು.
ಹಮೀದ್ ಖಾನ್ ಅವರ ನಿಧನದಿಂದ ಸಂಗೀತ ಲೋಕದ ಹಿರಿಯ ಕೊಂಡಿಯೊಂದು ಕಳಚಿದಂತಾಗಿದೆ ಎಂದು ಅನೇಕರು ಕಂಬನಿ ಮಿಡಿದಿದ್ದಾರೆ.