ಬಾಗಲಕೋಟೆ: ಅಯೋಧ್ಯೆಯ ರಾಮಪ್ರತಿಷ್ಠಾಪನೆ ಸಂದರ್ಭ ರಾಮೋತ್ಸವ ಕಾರ್ಯಕ್ರಮದಲ್ಲಿ ರಾಜ್ಯದ ಐತಿಹಾಸಿಕ ಸೂತ್ರದ ಗೊಂಬೆಯಾಟ ಸೀತಾಪಹರಣ ಸನ್ನಿವೇಶ ಕನ್ನಡ ಭಾಷೆಯಲ್ಲೇ ಪ್ರದರ್ಶನಗೊಳ್ಳಲಿದ್ದು ದೇಶದ ಜನರ ಗಮನ ಸೆಳೆಯಲಿದೆ.
ಹಳಿಯಾಳ ತಾಲೂಕಿನ ಚಬ್ಬಲಗೇರಿಯ ಸರಕಾರಿ ಪ್ರೌಢಶಾಲೆ ಶಿಕ್ಷಕರಾಗಿರುವ, ಮೂಲತಃ ವಿಜಯಪುರ ಜಿಲ್ಲೆ ನಿಡಗುಂದಿ ತಾಲೂಕಿನ ಮುದ್ದಾಪುರದ ಸಿದ್ದು ಬಿರಾದಾರ ನೇತೃತ್ವದ ಹೊಂಗಿರಣ ಕಲಾ ತಂಡ ಕರ್ನಾಟಕದ ಸೂತ್ರದ ಗೊಂಬೆಯಾಟ ಪ್ರದರ್ಶಿಸಲು ಆಯ್ಕೆಯಾಗಿದ್ದು, ಕೇಂದ್ರದ ಸಂಸ್ಕೃತಿ ಇಲಾಖೆಯ ದಕ್ಷಿಣ ಭಾರತ ಸಾಂಸ್ಕೃತಿಕ ಕೇಂದ್ರದಿಂದ ಮಂಗಳ ವಾರ ಸಂಜೆ ಅಧಿಕೃತ ಆಹ್ವಾನ ಬಂದಿದೆ.
ಹೊಂಗಿರಣ ಕಲಾ ತಂಡ 40 ನಿಮಿಷಗಳ ಸೀತಾ ಪಹರಣ ಸನ್ನಿವೇಶವನ್ನು ಪ್ರದರ್ಶಿಸುತ್ತದೆ. ಅದೂ ಕನ್ನಡ ಭಾಷೆಯಲ್ಲೇ ಪ್ರದರ್ಶನಗೊಳ್ಳುತ್ತಿರುವುದು ಹೆಮ್ಮೆ. ಯಾದಗಿರಿಯ ದಂಡಪ್ಪಗೌಡ ಪಾಟೀಲ ಸಾಹಿತ್ಯ, ಶಿರಸಿಯ ವಿಶ್ವನಾಥ ಹಿರೇಮಠರ ಸಂಗೀತ ವಿದೆ. ನಿರ್ವಹಣೆ, ನಿರ್ದೇಶನ ಹಾಗೂ ಸಂಪೂರ್ಣ ನೇತೃತ್ವ ಕನ್ನಡಿಗ ಶಿಕ್ಷಕ ಸಿದ್ದು ಬಿರಾದಾರ ಅವರದ್ದಾಗಿದೆ.
ಸಿದ್ದು ಬಿರಾದಾರ ಅವರು ಕಳೆದ 15 ವರ್ಷಗಳಿಂದ ವೃತ್ತಿಯೊಂದಿಗೆ ಸೂತ್ರದ ಗೊಂಬೆಯಾಟ ಕಲೆಯನ್ನು ಪ್ರವೃತ್ತಿಯನ್ನಾಗಿ ರೂಢಿಸಿಕೊಂಡಿದ್ದಾರೆ. ಈವರೆಗೆ ದೇಶದ 20 ರಾಜ್ಯ ಹಾಗೂ ಥೈಲ್ಯಾಂಡ್, ನೇಪಾಲದಲ್ಲಿ ಈ ಕಲೆ ಪ್ರದರ್ಶಿಸಿದ್ದಾರೆ.
ಅಯೋಧ್ಯೆಯಲ್ಲಿ ಜ.26ರಿಂದ 29ರ ವರೆಗೆ ನಡೆಯುವ ರಾಮೋ ತ್ಸವ ಕಾರ್ಯಕ್ರಮದಲ್ಲಿ ಸೂತ್ರದ ಗೊಂಬೆಯಾಟ ಪ್ರದರ್ಶನಕ್ಕೆ ಅಧಿಕೃತ ಆಹ್ವಾನ ಬಂದಿದೆ. ನಾನು ಈಗಾಗಲೇ ಥೈಲ್ಯಾಂಡ್, ನೇಪಾಲ ಅಲ್ಲದೆ, ದೇಶದ 20 ರಾಜ್ಯಗಳಲ್ಲಿ ಕನ್ನಡದಲ್ಲಿ ಈ ಕಲೆ ಪ್ರದರ್ಶಿಸಿದ್ದೇನೆ.
– ಸಿದ್ದು ಬಿರಾದಾರ, ಮುಖ್ಯಸ್ಥರು, ಹೊಂಗಿರಣ ಕಲಾ ತಂಡ, ಹಳಿಯಾಳ
ಶ್ರೀಶೈಲ ಕೆ. ಬಿರಾದಾರ