Advertisement

ಸೀತೆ ಆಧುನಿಕ ಮಹಿಳೆಯರಿಗೆ ಮಾದರಿ: ಡಾ|ಡಿ.ವಿ. ಪ್ರಕಾಶ್‌

11:15 PM Aug 29, 2019 | Sriram |

ಮಂಜೇಶ್ವರ: ಉತ್ತರಕಾಂಡ ಕಾದಂಬರಿಯು ಸೀತಾ ಕೇಂದ್ರಿತವಾದದ್ದು. ಇಲ್ಲಿ ಪೂರ್ವ ಭಾಗದ ರಾಮ ಆದರ್ಶ ರಾಮನಾದರೆ ಉತ್ತರ ಭಾಗದ ರಾಮ ಅಧಿಕಾರ ಕೇಂದ್ರಿತ ರಾಮನಾಗಿದ್ದಾನೆ. ಸೀತೆ ಆಧುನಿಕ ಸ್ತ್ರೀಯರಿಗೆ ಮಾದರಿಯಾಗಿದ್ದಾಳೆ ಎಂದು ಚಿಂತಕ, ಪ್ರಾಧ್ಯಾಪಕ ಡಾ| ಡಿ.ವಿ. ಪ್ರಕಾಶ್‌ ಅವರು ವಿಮರ್ಶೆ ಚಿಂತನೆ ವ್ಯಕ್ತಪಡಿಸಿದರು.

Advertisement

ಪ್ರಾಧ್ಯಾಪಕ, ಸಾಹಿತಿ ಡಾ| ಟಿ.ಎ.ಎನ್‌. ಖಂಡಿಗೆ ಅವರ ಕಣ್ವತೀರ್ಥದಲ್ಲಿರುವ ನಿವಾಸದಲ್ಲಿ ಆಯೋಜಿಸಲಾಗಿದ್ದ “ಈ ಹೊತ್ತಿಗೆ ಈ ಹೊತ್ತಗೆ’ ಸರಣಿ ಪುಸ್ತಕ ವಿಮರ್ಶೆ, ಸಂವಾದದ 10ನೇ ಕಾರ್ಯಕ್ರಮದಲ್ಲಿ ಡಾ| ಎಸ್‌.ಎಲ್‌. ಭೈರಪ್ಪ ಅವರ ಉತ್ತರ ಕಾಂಡ ಕಾದಂಬರಿಯ ಬಗ್ಗೆ ಮುಖ್ಯ ಅತಿಥಿಗಳಾಗಿ ಕೃತಿ ವಿಶ್ಲೇಷಣೆ ನಡೆಸಿ ಮಾತನಾಡಿದರು.

ದೈವತ್ವ, ಅತಿ ಮಾನುಷತೆಯನ್ನು ರಾಮನ ಬಗೆಗೆ ಹೊರಗಿಟ್ಟು ಉತ್ತರ ಕಾಂಡವನ್ನು ಅರ್ಥೈಸಿದರಷ್ಟೆ ಒಳ ದನಿಗೆ ತಟ್ಟಬಲ್ಲದು. ಉತ್ತರಾರ್ಧದ ರಾಮನು ಪ್ರಭುತ್ವವಾದಿ ವ್ಯಕ್ತಿತ್ವದಿಂದ ವಿಭಿನ್ನನಾಗಿ ಕಂಡುಬರುತ್ತಾನೆ. ಪ್ರಭುತ್ವ ಸ್ತ್ರೀಯೊಬ್ಬಳ ಮೇಲೆ ಎಷ್ಟೊಂದು ಪ್ರಭಾವ ಬೀರಿ ಅತ್ಯಂತ ನಿಕೃಷ್ಟವಾಗಿ ಬದುಕಿದಳೆಂಬ ಚಿತ್ರಣ ಅಹಲೆÂಯ ಚಿತ್ರಣದಲ್ಲಿ ಭೈರಪ್ಪನವರು ಮಾರ್ಮಿಕವಾಗಿ ಪ್ರತಿಬಿಂಬಿಸಿದ್ದು, ಇಂತಹ ದೃಷ್ಟಿ ಭೈರಪ್ಪನವರಿಂದ ಮಾತ್ರ ಸಾಧ್ಯ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.

ವೇದ, ಶಾಸ್ತ್ರಗಳಿಂದ ಪ್ರಣೀತನಾಗಿ ಅದರಂತೆ ನಡೆದ ರಾಮ ಒಂದೆಡೆ ಧರ್ಮ ಸಂಘರ್ಷದ ಪ್ರಶ್ನೆಗಳಲ್ಲಿ ನಿರುತ್ತರನಾಗಿರುವುದು ಕಂಡು ಬರುತ್ತದೆ. ಸೀತೆಯ ಮನೋ ಭೂಮಿಕೆ ಯಲ್ಲಿ ರಾಮನನ್ನು ಪ್ರಶ್ನಿಸಿದ್ದು, ತಾನು ಆ ಮೂಲಕ ಅನುಭವಿಸುತ್ತಿರುವ ವೇದನೆಗೆ ವರ್ತಮಾನದ ಸ್ತ್ರೀ ಮನೋ ಭೂಮಿಕೆಯ ಮೂಲಕ ಭೈರಪ್ಪ ಅಪೂರ್ವವಾಗಿ ಚಿತ್ರಿಸಿರುವುದು ಗ್ರಂಥ ವನ್ನು ವಿಶಿಷ್ಟ ದೃಷ್ಟಿಕೋನದಲ್ಲಿ ನೋಡು ವಂತೆ ಮಾಡಿದೆ ಎಂದು ಅವರು ವಿಶ್ಲೇಶಿಸಿದರು. ಸೀತೆ ಭಾರತದ ಪ್ರತಿಮೆ ಯಾಗಿ ಇಂದಿಗೂ ಪ್ರಸ್ತುತ ಎಂದ ಅವರು, ಈ ಕೃತಿಯಲ್ಲಿ ಒಳಪಾತ್ರಗಳ ಕಾವ್ಯ ವಿನ್ಯಾಸವೇ ಕಾವ್ಯ ಸತ್ಯವನ್ನು ಕಟ್ಟಿ ಕೊಡುವ ಮುಖ್ಯ ಪಾತ್ರಗಳು ಎಂದು ತಿಳಿಸಿದರು.

ನಿವೃತ್ತ ಶಿಕ್ಷಕ ಈಶ್ವರ ಮಾಸ್ತರ್‌ ಉಪಸ್ಥಿತರಿದ್ದರು. ಶಿಕ್ಷಕಿ, ಸಹ ಸಂಯೋಜಕಿ ಕವಿತಾ ಟಿ.ಎ.ಎನ್‌.ಖಂಡಿಗೆ ಅವರು ಆಧುನಿಕ ಸ್ತ್ರೀವಾದ, ಮುಗಿಯದ ಸ್ತ್ರೀ ಶೋಷಣೆಗೆ ಪ್ರತಿಮೆಯಾಗಿ ಸೀತೆಯನ್ನು ಭೈರಪ್ಪ ಅವರು ತಮ್ಮ ಕಾದಂಬರಿಯಲ್ಲಿ ಚಿತ್ರಿಸಿರುವುದು ಪರಿಣಾಮಕಾರಿಯಾಗಿದ್ದು, ಗಂಭೀರ ಚಿಂತನೆಗೆ ಹಚ್ಚುತ್ತದೆ ಎಂದು ತಿಳಿಸಿ ವಂದಿಸಿದರು.

Advertisement

ವಿಶ್ಲೇಷಣೆಯಿಂದ ನಿಖರತೆ
ಪುರಾಣ ಪಾತ್ರಗಳನ್ನು ವಿಶ್ಲೇಷಣಾತ್ಮಕವಾಗಿ ವರ್ತಮಾನದಲ್ಲಿ ನಿಂತು ನೋಡುವ ಮನೋಭೂಮಿಕೆಯಿಂದ ಹೆಚ್ಚು ನಿಖರತೆಯೊಂದಿಗೆ ತುಮುಲಗಳಿಗೆ ಅರ್ಥ ನೀಡುವಲ್ಲಿ ಸಾಫಲ್ಯ ಗೊಳ್ಳುತ್ತದೆ. ಹೊಸ ತಲೆಮಾರಿಗೆ ಓದುವ ಹುಚ್ಚು ಹತ್ತಿಸಿದ ಭೈರಪ್ಪ ನವರ ಅಕ್ಷರ ಕ್ರಾಂತಿ ಕನ್ನಡ ಸಾರಸ್ವತ ಲೋಕದ ಮಹತ್ವದ ದಾಖಲೆ.
-ಡಾ| ಟಿ.ಎ.ಎನ್‌. ಖಂಡಿಗೆ
ಸಂಯೋಜಕ

Advertisement

Udayavani is now on Telegram. Click here to join our channel and stay updated with the latest news.

Next