Advertisement

ಹಾ ಸೀತಾ! ಲಕ್ಷ್ಮಣ ರೇಖೆ

01:16 PM Oct 06, 2017 | |

ತಾಯೀ ವೈದೇಹಿ,
ನೀನು ನಿನ್ನ ಅಂತರಂಗದ ಬಯಕೆಯನ್ನು ಅರುಹಿಕೊಂಡಾಗೆಲ್ಲ ಅದಕ್ಕೆ ರಾಮನ ಸಹಸ್ಪಂದನವಿತ್ತು. ವನವಾಸಕ್ಕೆ ಜೊತೆಯಾಗುವುದಾಗಿ ನೀನು ಹಠ ಹಿಡಿದಾಗ ಅವನು “ಒಲ್ಲೆ’ ಎನ್ನಲಿಲ್ಲ. ಪಂಚವಟಿಯಲ್ಲಿ ಹೊಂಬಣ್ಣದ ಚಿಗರೆ ಬೇಕೇ ಬೇಕೆಂದಾಗಲೂ ನಿನಗಾಗಿ ಆ ಮಾಯಾಮೃಗದ ಬೆನ್ನಟ್ಟಿಕೊಂಡು ಹೋಗಿದ್ದನಾತ. ಕೊನೆಗೆ ಗರ್ಭಿಣಿಯಾಗಿದ್ದಾಗಲೂ ಅರಣ್ಯ ಸಿರಿಯ ಸಾಮೀಪ್ಯಕ್ಕೆ ನೀನು ಹಾತೊರೆದಾಗ ಲಕ್ಷ್ಮಣನ ಮೂಲಕ ಅದನ್ನೂ ಪೂರೈಸಿದ.

Advertisement

ಒಂದೊಮ್ಮೆ “ಸ್ತ್ರೀ ಸಹಜವಾದುದು’ ಎಂದು ಈ ಲೋಕ ತೀರ್ಮಾನಿಸಿದ ಇಂತಹ ಆಸೆಗಳನ್ನುಳಿದು ತುಸು ಭಿನ್ನವಾದ ಆಕಾಂಕ್ಷೆಗಳು ನಿನ್ನವಾಗಿದ್ದರೆ ಆಗಲೂ ನಿನಗದು ದಕ್ಕುತ್ತಿತ್ತೇ? ಮಾತಿಗೆ ಹೇಳುವುದಾದರೆ, ಮಾಯಾಜಿಂಕೆಯ ಹಿಂದೆ ಧನುರ್ಧಾರಿಯಾಗಿ ಹೋಗಬೇಕು ಎಂದು ನೀನು ಹಂಬಲಿಸಿದ್ದರೆ? ರಾಜನೀತಿಯನ್ನು ತರ್ಕಿಸುತ್ತ ರಾಮರಾಜ್ಯ ಕಟ್ಟುವ ರಾಜಕೀಯದಲ್ಲಿ ನಿನಗೂ ಒಲವು ಇದ್ದಿದ್ದರೆ? ವೇದೋಪನಿಷತ್ತುಗಳ ಆಳ-ಅಗಲವನ್ನು ಅರಿಯುವುದನ್ನೇ ಜೀವನದ ಧ್ಯೇಯವಾಗಿಟ್ಟುಕೊಂಡು ಸ್ವಯಂವರವನ್ನೇ ನಿರಾಕರಿಸಲು ನೀನು ಮನಮಾಡಿದ್ದರೆ?

“ಕಾಲ, ದೇಶದ ಪರಿಜ್ಞಾನವಿಲ್ಲದೇ ಆಡುವ ಇಂತಹ ಅಪ್ರಬುದ್ಧ ಮಾತುಗಳು ಅಸಂಬದ್ಧವಾದೀತು’ ಎಂದು ನಿನಗನ್ನಿಸಬಹುದು. ಆದರೆ, ನನ್ನ ಯೋಚನೆ ಹೀಗೆ ಸಾಗುತ್ತದೆ. “ಮಾನವ’ ಎಂಬ ಪರಿಕಲ್ಪನೆಯಡಿ ಬರುವುದು ಪುರುಷ ಮಾತ್ರನಲ್ಲ; ಮಹಿಳೆಯೂ ಹೌದು. ಹಾಗಾಗಿ ಮನುಷ್ಯ ಸಹಜವಾದ ಆಸೆ ಅಂಕುರಿಸಲು ದೇಶ, ಕಾಲ, ಲಿಂಗದ ಹಂಗಿದೆಯೇನು?

ನಿನ್ನ ಕಾಲದ ಕುಮುದಿನಿಯ ಕಥೆಯನ್ನೇ ನೆನಪಿಸಿಕೋ. ರಾವಣನ ಸಂಬಂಧಿ ಆಕೆ. ಆದರೆ ರಾಮಭಕ್ತೆ. ಅವಳು ಈ ನೆಲದ ರಾಜಕೀಯವನ್ನೇ ನಿರಾಕರಿಸಿ ಸಮುದ್ರದಾಳದಲ್ಲಿ “ಮಾಯಾಪುರಿ’ ಎಂಬ ತನ್ನದೇ ಸ್ತ್ರೀರಾಜ್ಯ ಕಟ್ಟಿಕೊಂಡಿದ್ದಳು. ಏಕಿರಬಹುದು? ಅವಳು ಆಯ್ದುಕೊಂಡ ಗುರಿ, ದಾರಿ ಎರಡೂ ವಿಭಿನ್ನವಾಗಿತ್ತು. ತನ್ನ ಇಡೀ ಜೀವನವನ್ನು ರಾಮಧ್ಯಾನದಲ್ಲೇ ಕಳೆಯುತ್ತ, ಐಹಿಕ ಸುಖಭೋಗದಿಂದ ದೂರವಿರಬೇಕೆಂದು ದೃಢ ನಿರ್ಧಾರ ಮಾಡಿಕೊಂಡವಳವಳು. ರಾವಣ ರಾಜ್ಯವೇನು, ರಾಮರಾಜ್ಯದಲ್ಲೂ ಅವಳಿಗೆ ಇದಕ್ಕೆ ಪೂರಕವಾದ ತಾಣ ಸಿಗದೇ ಆಕೆ ನೀರಿನಾಳದ ಮೊರೆ ಹೋಗಬೇಕಾಯ್ತು. ಮದನಾಕ್ಷಿ, ತಾರಾವಳಿಯಂಥ ವೀರವನಿತೆಯರನ್ನು ಪೊರೆಯುತ್ತ ತನ್ನವರ ಭದ್ರ ಕೋಟೆಯ ನಡುವೆ ಯೋಗಿನಿಯಾಗಿ ತನ್ನಿಚ್ಛೆಯಂತೆ ಬದುಕುವುದು ಅವಳಿಗೆ ಸಾಧ್ಯವಾಗಿತ್ತು. ಅಲ್ಲಿಯೂ ಅವರು ತಣ್ಣಗಿರದಂತೆ “ರಾಮಾಶ್ವಮೇಧ’ದ ಸಂದರ್ಭದಲ್ಲಿ ಶತ್ರುಘ್ನನ ಸೇನೆ ಮಾಯಾಪುರಿಯ ಮೇಲೆ ತಮ್ಮ ಯಾಜಮಾನ್ಯವನ್ನು ಸ್ಥಾಪಿಸಿಯೇ ಬಿಟ್ಟಿತಲ್ಲ?

ಗಂಡು-ಹೆಣ್ಣು ಒಂದಾಗಿ ಬದುಕಿದ್ದಾಗಲೇ ಪರಿಪೂರ್ಣತೆ ಸಾಧಿತವಾಗುವುದು ಎಂಬ ಅರಿವಿದ್ದರೂ ಶಶಿಪ್ರಭೆ, ಪ್ರಮೀಳೆಯಂತಹ ಹಲವು ನಾರಿಯರು ಸ್ತ್ರೀರಾಜ್ಯವನ್ನೇ ಕಟ್ಟಿಕೊಂಡಿರುವ ಹಿನ್ನೆಲೆಯ ಮನಸ್ಥಿತಿ ಏನಿದ್ದಿರಬಹುದು? ವಿನಾ ಕಾರಣ ಅವರು ಪುರುಷದ್ವೇಷಿಗಳಾಗಿದ್ದರೆ? ತಮ್ಮ ಸಮಕಾಲೀನ ಸಮಾಜದಲ್ಲಿ ತಮ್ಮ ಮನೋಭಿಲಾಷೆಗೆ ಪೂರಕವಾದ ವಾತಾವರಣ ಇಲ್ಲದಾದಾಗ ತಮಗೆ ಅನುಕೂಲವಾದ ತಾವನ್ನು ತಾವೇ ನಿರ್ಮಿಸಿಕೊಂಡು ಬದುಕನ್ನು ಕಟ್ಟಲು ಹೊರಟವರು. ಪ್ರವಾಹದ ವಿರುದ್ಧ ಈಜಾಡಿದ ಈ ಹೆಣ್ಣುಗಳು ಪ್ರಬಲವಾದ ಇಚ್ಛಾಶಕ್ತಿಯನ್ನು ಮೆರೆದವರೇ. ಈ ಎಲ್ಲ ಕಥೆಗಳ ಅಂತ್ಯ ಮಾತ್ರ ಒಂದೇ ಬಗೆಯದು. ಒಬ್ಬ ಬಲಶಾಲಿಯಾದ ಪುರುಷ ಸಿಂಹ ಇಂತಹ ಸ್ತ್ರೀರಾಜ್ಯವನ್ನು ಆಕ್ರಮಿಸಿ ಅಲ್ಲೊಂದು ಯುದ್ಧ ಸಂಭವಿಸುವುದು. ಒಂದು ಹಂತದಲ್ಲಿ ಈ ವೀರ ನಾರಿಯರಿಂದ ಈ ಪುರುಷರು ಹಿನ್ನಡೆ ಅನುಭವಿಸಿದರೂ ಅದಕ್ಕೆ ಆ ಹೆಂಗಸು ತಿಳಿದಿದ್ದ ಮಾಯಾವಿದ್ಯೆಯೇ ಕಾರಣ ಎಂದು ಬಿಂಬಿಸಲಾಗುತ್ತದೆ. ಅಂದರೆ ಹೆಣ್ಣುಮಕ್ಕಳಿಂದ ಪೆಟ್ಟು ತಿಂದಾಗಲೂ ಅದು ಅವಳಿಂದಲ್ಲ, ಅವಳ ಮಾಯೆ, ಮೋಸದಿಂದ ಎಂದು ನಂಬುವುದು ಎಲ್ಲ ಗಂಡು-ಹೆಣ್ಣುಗಳಿಗೂ ಸಮಾಧಾನ ತರುತ್ತದೆ. ಇಷ್ಟರಲ್ಲಿ ಒಂದು ಅಶರೀರ ವಾಣಿ ಉಲಿದು ಯುದ್ಧ ಕೊನೆಗೊಳ್ಳುತ್ತದೆ. ಆ ಬಲಶಾಲಿ ಗಂಡು ಈ ಕೊಬ್ಬಿದ ಹೆಣ್ಣನ್ನು ಮದುವೆಯಾಗಿ ಅಹಂಕಾರವಳಿದು ಅವನಿಗೆ ಅನುಕೂಲೆಯಾದ ಹೆಂಡತಿಯಾಗುವುದರ ಮೂಲಕ ಕಥೆ ಸುಖಾಂತ್ಯ ಕಾಣುವುದು.

Advertisement

ಇಲ್ಲಿ ಗಂಡೂ ಹೆಣ್ಣು ಸಹಬಾಳ್ವೆ ನಡೆಸುವುದು ಸಮಾಜಕ್ಕೆ ಸುಖಕರವೇ. ಆದರೆ ತನ್ನಷ್ಟಕ್ಕೇ ರಾಜ್ಯಭಾರ ಮಾಡಿಕೊಂಡಿರುವ ಆಕೆ ಅಹಂಕಾರಿಯೇ ಅಥವಾ ಅವಳಿದ್ದ ತಾಣವನ್ನು ತಾನೇ ಆಕ್ರಮಿಸಿ ಆ ರಾಜ್ಯವನ್ನೂ ರಾಣಿಯನ್ನೂ ವಶಪಡಿಸಿಕೊಳ್ಳುವ ಆ ಪುರುಷ ಅಹಂಕಾರಿಯೇ?

ಹೀಗೆ ಭಿನ್ನ ದಾರಿ ಸವೆಸಲು ಮುಂದಾದ ಮೊದಲಗಿತ್ತಿಯರಿಗೆಲ್ಲ “ಅಹಂಕಾರಿಗಳು’, “ಮರುಳರು’ ಎಂಬ ಗುಣವಿಶೇಷಣ ತಪ್ಪಿದ್ದಲ್ಲ. “ನಡುವಿರುವ ಆತ್ಮ ಗಂಡೂ ಅಲ್ಲ ಹೆಣ್ಣು ಅಲ್ಲ’ ಎಂಬಂತೆ ಲಿಂಗದ ಹಂಗನ್ನೂ ಮೀರಿ ತಮ್ಮ ಆಯ್ಕೆಗಳಿಗೆ ಬದ್ಧರಾಗಿ ಬದುಕಿ ತಮ್ಮನ್ನೂ ತಮ್ಮ ಸುತ್ತಲಿನವರನ್ನೂ ಅನುಭಾವದ ನೆಲೆಗೆ ಒಯ್ದ ಅಕ್ಕಮಹಾದೇವಿ, ಮೀರಬಾಯಿಯಂಥವರೂ ಅವರವರ ಕಾಲಕ್ಕೆ “ಹುಚ್ಚಿ’ಯರೇ ಆಗಿದ್ದರು.

ಆದರೆ ತಾಯೀ, ಸಮತೆಯೆಂಬ ಭೃಂಗದ ಬೆನ್ನೇರಿ ಹೊರಟ ಇಂಥ ಈ ಕಾಲದಲ್ಲೂ ಸಮಾಜದ ಮನಸ್ಥಿತಿಯಲ್ಲಿ ಬಹಳ ಬದಲಾವಣೆಗಳೇನೂ ಆಗದೇ ಹೆಣ್ಣಿಗೆ ಆಯ್ಕೆಗಳು ಮುಕ್ತವಾಗಿಲ್ಲ ಎಂಬ ವಸ್ತುಸ್ಥಿತಿ ಬೆರಗು ಹುಟ್ಟಿಸುತ್ತದೆ. ಗುಣ-ಅವಗುಣಗಳಿಗೆ, ಆಸೆ-ಆಕಾಂಕ್ಷೆಗಳಿಗೆ ಪುಲ್ಲಿಂಗ-ಸ್ತ್ರೀಲಿಂಗಗಳನ್ನು ಆರೋಪಿಸಿ ಕೆಲವೊಂದು ದಾರಿಗಳನ್ನು ಕೆಲವರಿಗೆ ಒತ್ತಾಯಪೂರ್ವಕವಾಗಿ ಮುಚ್ಚಲಾಗುತ್ತದೆ.

ಹಾಗಾಗಿಯೇ ಬಾಲ್ಯದಲ್ಲಿ ಕೋಲ್ಮಿಂಚಿನಂತೆ ಹೊಳೆದು ಎಲ್ಲರ ಗಮನ ಸೆಳೆಯುವ ಅನೇಕ ಬಾಲೆಯರು ಮುಂದಿನ ದಿನಗಳಲ್ಲಿ ತಮ್ಮ ತಮ್ಮ ಗುಹೆಗಳಲ್ಲಿ ಕಣ್ಮರೆಯಾಗಿ ಬಿಡುತ್ತಾರೆ. ತಮ್ಮ ಸರೀಕರ ಸಾಧನೆ ಕಾಣುತ್ತ ನಿರಾಶೆ, ಚಡಪಡಿಕೆಗಳನ್ನು ಜೊತೆಗಾರರನ್ನಾಗಿ ಮಾಡಿಕೊಂಡಿರುತ್ತಾರಷ್ಟೆ. 

ರಕ್ಷಣೆ ಮತ್ತು ಸಾಂಸ್ಕೃತಿಕ ಹೊಣೆಗಾರಿಕೆಯನ್ನು ನೆಪವಾಗಿಟ್ಟುಕೊಂಡು ಹೆಜ್ಜೆ ಹೆಜ್ಜೆಗೂ ಹೆಣ್ಣನ್ನು “ಸರಿದಾರಿ’ಯಲ್ಲಿ ನಡೆಸಲು ಊರ ಮಂದಿ ರೀತಿ, ನೀತಿ, ಶಾಸ್ತ್ರ, ಪುರಾಣಗಳೆಂಬ ಬಾಣಗಳನ್ನು ಬತ್ತಳಿಕೆಯಲ್ಲಿಟ್ಟುಕೊಂಡು ಸದಾ ಎಚ್ಚರದಿಂದಿದ್ದು ಕಾಯುತ್ತಿರುತ್ತದೆ.

ಹೇಳು ಜಾನಕಿ, ಲಕ್ಷ್ಮಣರೇಖೆ ನಿಜವಾಗಿಯೂ ನಿನ್ನನ್ನು ರಕ್ಷಿಸಿತೆ? ಅದು, ನೀನು ರಾಮನನ್ನು ಉಳಿಸಿಕೊಳ್ಳಬಹುದಾದ ಹಲವಾರು ಸಾಧ್ಯತೆಗಳನ್ನು ಮೊಟಕುಗೊಳಿಸಿರಲಿಲ್ಲವೆ? ತನ್ನ ಗುರಿ-ದಾರಿಯನ್ನು ನಿರ್ಧರಿಸುವ ಸ್ವಾತಂತ್ರ್ಯ ಪ್ರತಿಯೊಬ್ಬರ ಹಕ್ಕು.  ಈ ಹೊತ್ತಾದರೂ ನನ್ನ ಆಯ್ಕೆ ನನ್ನವೇ ಆಗಿರಬೇಕು, ಒಪ್ಪುತ್ತೀಯಲ್ಲವೇ ಸೀತೆ?

ಅಭಿಲಾಷಾ ಎಸ್‌.

Advertisement

Udayavani is now on Telegram. Click here to join our channel and stay updated with the latest news.

Next