ಬೆಂಗಳೂರು: ಹಾಸನದ ಅಶ್ಲೀಲ ಪೆನ್‌ಡ್ರೈವ್ ಪ್ರಕರಣದ ಸಂಬಂಧ ಸಂಸದ ಪ್ರಜ್ವಲ್ ರೇವಣ್ಣ ಜರ್ಮನಿಯಿಂದ ವಿಮಾನದ ಟಿಕೆಟ್ ಬುಕ್ ಮಾಡಿ ಕೊನೆ ಕ್ಷಣದಲ್ಲಿ ರದ್ದುಗೊಳಿಸಿ ವಿಶೇಷ ತನಿಖಾ ತಂಡದ (ಎಸ್‌ಐಟಿ) ಜತೆಗೆ ಕಣ್ಣಾ-ಮುಚ್ಚಾಲೆ ಆಟ ಮುಂದುವರಿಸಿದ್ದಾರೆ.
ಮೇ 15ರಂದು ಜರ್ಮನಿಯ ಮ್ಯೂನಿಕ್‌ನಿಂದ ಬೆಂಗಳೂರಿನತ್ತ ಸಾಗುವ ವಿಮಾನವೊಂದು ಹರಿಯಾ ಣದ ಟ್ರಾವೆಲ್ಸ್‌ವೊಂದರಿಂದ 3 ಲಕ್ಷ ರೂ. ಮೌಲ್ಯದ ಬ್ಯುಸ್‌ನೆಸ್ ಕ್ಲಾಸ್ ಕೆಟಗರಿ ಸೀಟನ್ನು ಪ್ರಜ್ವಲ್ ರೇವಣ್ಣ ಬುಕ್ ಮಾಡಿದ್ದರು. ಆದರೆ, ಕೊನೆ ಕ್ಷಣದಲ್ಲಿ ವಿಮಾನ ನಿಲ್ದಾಣದತ್ತ ಪ್ರಜ್ವಲ್ ಸುಳಿಯಲೇ ಇಲ್ಲ. ಇತ್ತ ಎಸ್‌ಐಟಿ ಅಧಿಕಾರಿಗಳು ಜರ್ಮನ್‌ನ ಕೆಲವು ಅಧಿಕಾರಿಗಳ ಜತೆಗೆ ಸಂಪರ್ಕ ಸಾಧಿಸಿದ್ದು, ಜರ್ಮನಿ ಮ್ಯೂನಿಕ್ ವಿಮಾನ ನಿಲ್ದಾಣದ ಲಾಂಜ್‌ನಲ್ಲಿಯೇ ಪ್ರಜ್ವಲ್ ಕಾಣಿಸಿಕೊಂಡಿರಲಿಲ್ಲ ಎಂದು ತಿಳಿದು ಬಂದಿದೆ.
ಈ ವಿಮಾನವು ತಡರಾತ್ರಿ 12.30ಕ್ಕೆ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಲಿದೆ. ಪ್ರಜ್ವಲ್ ಬರುವ ನಿರೀಕ್ಷೆಯಲ್ಲಿದ್ದ ಎಸ್‌ಐಟಿಗೆ ಇದೀಗ ನಿರಾಸೆಯಾಗಿದೆ.
ಪ್ರಜ್ವಲ್ ರೇವಣ್ಣ ಜರ್ಮನ್‌ನಿಂದ ಬೆಂಗಳೂರಿಗೆ ಆಗಮಿಸಲು ಟಿಕೆಟ್ ಬುಕ್ ಮಾಡಿರುವ ಬಗ್ಗೆ ಪೊಲೀಸರಿಗೆ ಖಚಿತತೆ ಸಿಕ್ಕಿದ ಬೆನ್ನಲ್ಲೇ ಬುಧವಾರ ಬೆಳಗ್ಗೆಯಿಂದಲೇ ಪೊಲೀಸರು ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬೀಡು ಬಿಟ್ಟಿದ್ದರು. ಪ್ರಜ್ವಲ್ ವಿಮಾನದಿಂದ ಇಳಿದು ಎಕ್ಸಿಟ್ ಗೇಟ್‌ನಲ್ಲಿ ಹೊರಗೆ ಬರುತ್ತಿದ್ದಂತೆ ವಶಕ್ಕೆ ಪಡೆಯಲು ಎಸ್‌ಐಟಿ ಸಿದ್ಧತೆ ನಡೆಸಿತ್ತು. ಪ್ರಜ್ವಲ್ ಮೇಲೆ ಹದ್ದಿನ ಕಣ್ಣಿಡಲು ವಿಮಾನ ನಿಲ್ದಾಣದಲ್ಲಿ ಸಿಬಂದಿ ನಿಯೋಜಿಸಲಾಗಿತ್ತು. ಆದರೆ, ಟಿಕೆಟ್ ಬುಕ್ ಮಾಡಿದ್ದ ಪ್ರಜ್ವಲ್ ಮಾತ್ರ ವಿಮಾನ ಹತ್ತದೇ ಈ ಹಿಂದೆ ನಡೆಸಿದಂತೆ ಎಸ್‌ಐಟಿ ಜತೆಗೆ ಕಣ್ಣ-ಮುಚ್ಚಾಲೆ ಆಟ ಮುಂದುವರೆಸಿದ್ದಾರೆ.
ಎಸ್‌ಐಟಿ ಮುಂದಿನ ನಡೆ ಏನು?
ಎಸ್‌ಐಟಿ ಅಧಿಕಾರಿಗಳ ಮುಂದಿನ ನಡೆ ಏನು ಎಂಬುದು ಕುತೂಹಲಕ್ಕೀಡು ಮಾಡಿದೆ. ಎಸ್‌ಐಟಿ ಅಧಿಕಾರಿಗಳಿಗೂ ಪ್ರಜ್ವಲ್ ನಡೆ ತಲೆನೋವು ತರಿಸಿದೆ. ಇತ್ತ ಪ್ರಜ್ವಲ್ ರೇವಣ್ಣ ಅವರನ್ನು ವಶಕ್ಕೆ ಪಡೆಯಲಾಗದೆ ಅವರ ಹೇಳಿಕೆ ದಾಖಲಿಸಿಕೊಳ್ಳಲಾಗುತ್ತಿಲ್ಲ. ಮತ್ತೊಂದೆಡೆ ಕೆಲವು ಸಾಕ್ಷ್ಯ ಕಲೆ ಹಾಕಿದರೂ, ಪ್ರಜ್ವಲ್ ಕೈಗೆ ಸಿಗದೇ ಪ್ರಕರಣದ ತನಿಖೆ ವೇಗ ಪಡೆಯುತ್ತಿಲ್ಲ.