Advertisement

ಗೌರಿ ಹತ್ಯೆ ಪ್ರಕರಣ: ತನಿಖೆ ಚುರುಕುಗೊಳಿಸಿದ ಎಸ್‌ಐಟಿ

06:30 AM Sep 08, 2017 | Team Udayavani |

ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್‌ ಹತ್ಯೆ ಪ್ರಕರಣದ ತನಿಖೆ ಚುರುಕುಗೊಳಿಸಿರುವ ಎಸ್‌ಐಟಿ (ವಿಶೇಷ ತನಿಖಾ
ತಂಡ) ಗುರುವಾರ ಗೌರಿ ಲಂಕೇಶ್‌ ಅವರ ಮನೆ ಮತ್ತು ಪತ್ರಿಕಾ ಕಚೇರಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ.

Advertisement

ರಾಜರಾಜೇಶ್ವರಿ ನಗರದ ಐಡಿಯಲ್‌ ಹೋಂನಲ್ಲಿರುವ ಗೌರಿ ಅವರ ನಿವಾಸಕ್ಕೆ ಮಧ್ಯಾಹ್ನ 12 ಗಂಟೆ ಸುಮಾರಿಗೆ ಬಂದ ಪ್ರಕರಣದ ಎಸ್‌ಐಟಿ ಮುಖ್ಯಸ್ಥ ಬಿ.ಕೆ.ಸಿಂಗ್‌ ನೇತೃತ್ವದ 15 ಮಂದಿಯ ತಂಡ ಮನೆಯೊಳಗೆ ಮತ್ತು ಹೊರಗಿನ ಸ್ಥಳವನ್ನು ಪರಿಶೀಲಿಸಿತು. ಘಟನೆ ನಡೆದ ದಿನ ಗೌರಿ ಆಗಮಿಸಿ ಕಾರು ಇಳಿದ ಸ್ಥಳ, ಅಲ್ಲಿಂದ ಗೇಟ್‌ ತೆರೆಯುವ ಜಾಗ, ಗುಂಡಿನ ದಾಳಿಗೊಳಗಾಗಿ ಬಿದ್ದ ಸ್ಥಳ, ಮನೆಯ ಗೋಡೆಗೆ ಬಿದ್ದಿರುವ ಗುರುತುಗಳ ಪರಿಶೀಲನೆ ನಡೆಸಿದರು.

ಬಳಿಕ ಐಜಿಪಿ ಬಿ.ಕೆ.ಸಿಂಗ್‌, ಡಿಸಿಪಿ ಅನುಚೇತ್‌, ಜಿನೇಂದ್ರ ಖಣಗಾವಿ ಹಾಗೂ ಇತರೆ ಅಧಿಕಾರಿಗಳು ಕಾಲ್ನಡಿಗೆಯಲ್ಲೇ ಗೌರಿ ಅವರ ಮನೆಯ ಸುತ್ತ ಇರು ವಂತಹ ಎಲ್ಲ ರಸ್ತೆಗಳಲ್ಲಿ ಒಂದು ಸುತ್ತು ಹಾಕಿದರು. ಬಳಿಕ ಯಾವ ರಸ್ತೆಯಲ್ಲಿ ಸಿಸಿ ಕ್ಯಾಮೆರಾಗಳಿವೆ ಎಂದು ಮತ್ತೂಮ್ಮೆ ಪರಿಶೀಲಿಸಿದರು. ನಂತರ ರಾಜರಾಜೇಶ್ವರಿನಗರದ ಮುಖ್ಯದ್ವಾರದಿಂದ ಗೌರಿ ಲಂಕೇಶ್‌ ಅವರ ಮನೆಗೆ ಸಂಪರ್ಕಿಸುವ ಎಲ್ಲ ರಸ್ತೆಗಳನ್ನು ವೀಕ್ಷಿಸಿದರು. ಇದೇ ವೇಳೆ ದುಷ್ಕರ್ಮಿಗಳು ಹೇಗೆ ಬಂದು ಕೃತ್ಯವೆಸಗಿ ಮತ್ತೆ ವಾಪಸ್‌ ಯಾವ ಮಾರ್ಗದಲ್ಲಿ ಹೋಗಿದ್ದಾರೆ ಎಂಬುದನ್ನು ಊಹಿಸಿ, ಯಾವ ಮಾರ್ಗದಿಂದ ತೆರಳಿದರೆ ನಗರದಿಂದ ಬಹುಬೇಗನೆ ಹೊರ ಹೋಗಬಹುದು ಎಂಬೆಲ್ಲ ವಿಚಾರವನ್ನಿಟ್ಟುಕೊಂಡು ಸಮಾಲೋಚಿಸಿದರು.

ನಂತರ ಕೆಲ ಸ್ಥಳೀಯರಿಂದ ಗೌರಿ ಲಂಕೇಶ್‌ ಅವರ ನಿತ್ಯದ ಚಟುವಟಿಕೆಗಳ ಬಗ್ಗೆ ಮಾಹಿತಿ ಪಡೆದುಕೊಂಡರು. ಹಾಗೆಯೇ ಬಸವನಗುಡಿಯಲ್ಲಿರುವ ಪತ್ರಿಕಾ ಕಚೇರಿಗೆ ತೆರಳಿದ ತಂಡ, ಅಲ್ಲಿನ ಸಿಬ್ಬಂದಿಯನ್ನು ಕೆಲ ಸಮಯ ವಿಚಾರಣೆಗೊಳಪಡಿಸಿದೆ. ಗೌರಿ ಅವರು ಯಾವ ಸಮಯಕ್ಕೆ ಕಚೇರಿಗೆ ಬರುತ್ತಿದ್ದರು. ಯಾವಾಗ ಹೋಗುತ್ತಿದ್ದರು. ಯಾರೆಲ್ಲ ಕಚೇರಿಗೆ ಬರುತ್ತಿದ್ದರು. ಇತ್ತೀಚಿನ ದಿನಗಳಲ್ಲಿ ಕಚೇರಿಯಲ್ಲಿ ಯಾರೊಂದಿಗಾದರೂ ಏರು ಧ್ವನಿಯಲ್ಲಿ ಮಾತನಾಡಿದ್ದರೆ, ಗಲಾಟೆ ಮಾಡಿಕೊಂಡಿದ್ದರೆ ಎಂಬೆಲ್ಲ ಪ್ರಶ್ನೆಗಳನ್ನು ಸಿಬ್ಬಂದಿಗೆ ಕೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಈ ತಂಡದಲ್ಲಿ ಡಿಸಿಪಿ ಅನುಚೇತ್‌, ಜಿನೇಂದ್ರ ಖಣಗಾವಿ, ಡಿವೈಎಸ್‌ಪಿ ನಾಗರಾಜ್‌, ಪಿಐ ರಂಗಪ್ಪ,ಅನಿತ್‌, ಅಯ್ಯಣರೆಡ್ಡಿ, ಅನಿಲ್‌, ಶ್ರೀನಿವಾಸ್‌, ಪುನೀತ್‌, ಸತ್ಯನಾರಾಯಣ ಹಾಗೂ ಇತರೆ ಅಧಿಕಾರಿಗಳು ಇದ್ದರು. ಇದಕ್ಕೊ ಮೊದಲು ಕಾರ್ಲಟನ್‌ ಹೌಸ್‌ನಲ್ಲಿರುವ ಸಿಐಡಿ ಕಚೇರಿಯಲ್ಲಿ ಐಜಿಪಿ ಬಿ.ಕೆ.ಸಿಂಗ್‌ ನೇತೃತ್ವದಲ್ಲಿ ಎಸ್‌ಐಟಿ ತಂಡ ಸಭೆ ನಡೆಸಿದೆ. ಈ ವೇಳೆ ಡಿಸಿಪಿ ಅನುಚೇತ್‌ ಪ್ರಕರಣದ ಸಂಪೂರ್ಣ ವಿವರ, ಸದ್ಯದ ತನಿಖಾ ಪ್ರಗತಿಯನ್ನು ಸಿಂಗ್‌ಗೆ ವಿವರಿಸಿದರು.

Advertisement

ಪ್ರಗತಿಪರ ಸ್ವಾಮೀಜಿ, ಮೌಲ್ವಿಗಳ ಭೇಟಿ ಗೌರಿ ಲಂಕೇಶ್‌ ಮನೆಗೆ ಬೆಳಗಾವಿ, ಬಾಗಲಕೋಟೆ, ಧಾರವಾಡದಿಂದ ನಾಲ್ಕೈದು ಮಂದಿ ಸ್ವಾಮೀಜಿಗಳು ಕುಟುಂಬಸ್ಥರಿಗೆ ಧೈರ್ಯ ತುಂಬಲು ಆಗಮಿಸಿದ್ದರು. ಆದರೆ, ಕುಟುಂಬ ಸ್ಥರು
ಇಲ್ಲದ ಕಾರಣ ವಾಪಸ್‌ ತೆರಳಿದರು. ಈ ವೇಳೆ ಮಾತನಾಡಿದ ಬೆಳಗಾವಿಯ ಬಸವರಾಜೇಂದ್ರ ದೇವರ ಪ್ರಗತಿಪರ ಸ್ವಾಮಿಜಿ, ಪ್ರಗತಿಪರ ಚಿಂತನೆಗಳ ಮೂಲಕ ಗೌರಿ ಲಂಕೇಶ್‌ ಮನೆ ಮಾತಾಗಿದ್ದರು. ಗೌರಿ ಹತ್ಯೆ ಖಂಡನೀಯ. ಇಂತಹ ಹಂತಕರಿಗೆ ಶಿಕ್ಷೆಯಾಗಲೇಬೇಕು ಎಂದರು.

ಮಧ್ಯಾಹ್ನ ಸುಮಾರು 2.30ರ ಸುಮಾರಿಗೆ ಮುಸ್ಲಿಂ ಸಮುದಾಯದ ಕೆಲ ಮುಖಂಡರು,ಮೌಲ್ವಿಗಳು ಗೌರಿ ಮನೆ ಬಳಿ ಬಂದಿದ್ದರು. ಆದರೆ, ಭದ್ರತೆಗೆ ನಿಯೋಜನೆಗೊಂಡಿದ್ದ ಪೊಲೀಸರು ಮನೆಯೊಳಗೆ ಅವಕಾಶವಿಲ್ಲ ಎಂದು ಸೂಚಿಸಿದ್ದರಿಂದ ವಾಪಸ್‌ ಹೋದರು.

ಮೂವರ ವಿಚಾರಣೆ
ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಥಳೀಯ ಕೇಬಲ್‌ ಆಪರೇಟರ್‌ ರವಿಕುಮಾರ್‌ ಹಾಗೂ ಈತನ ಸಿಬ್ಬಂದಿ ಅವಿನಾಶ್‌, ಮುಕೇಶ್‌ ಮತ್ತು ಪ್ರಕಾಶ್‌ನನ್ನು ಪೊಲೀಸರು ವಿಚಾರಣೆಗೊಳಪಡಿಸಿದ್ದಾರೆ. ಗೌರಿ ಹತ್ಯೆಯಾಗುವ ಹಿಂದಿನ
ದಿನ ತಮ್ಮ ಮನೆಯ ಟಿವಿ ಕೇಬಲ್‌ ಸ್ಥಗಿತಗೊಂಡಿದ್ದರ ಬಗ್ಗೆ ರಿಪೇರಿ ಮಾಡಲು ಯುವಕರನ್ನು ಕಳುಹಿಸಿಕೊಂಡುವಂತೆ
ರವಿಕುಮಾರ್‌ಗೆ ಗೌರಿ ಕರೆ ಮಾಡಿದ್ದರು. ಆದರೆ, ರವಿ ಕುಮಾರ್‌, ಈಗಾಗಲೇ ತಡವಾಗಿದ್ದು, ಮರುದಿನ ಕಳುಹಿಸಿ
ಕೊಡುವುದಾಗಿ ಉತ್ತರಿಸಿದ್ದರು. ಹೀಗಾಗಿ ಸೆ.5ರಂದು ರಾತ್ರಿ 7.40ರ ಸುಮಾರಿಗೆ ಕರೆ ಮಾಡಿದ ಗೌರಿ, ಕೆಲವೇ ಕ್ಷಣಗಳಲ್ಲಿ ಮನೆಗೆ ಬರುತ್ತೇನೆ. ಟಿವಿ ಕೇಬರ್‌ ರಿಪೇರಿಗೆ ಯುವಕರನ್ನು ಕಳುಹಿಸಿಕೊಡುವಂತೆ ಕೇಳಿಕೊಂಡಿದ್ದರು. ಅದರಂತೆ ರವಿ ಕುಮಾರ್‌ ತಮ್ಮ ಸಿಬ್ಬಂದಿ ಅವಿನಾಶ್‌, ಮುಖೇಶ್‌ ಹಾಗೂ ಪ್ರಕಾಶ್‌ ಎಂಬುವರನ್ನು ಹೋಗುವಂತೆ ಸೂಚಿಸಿದ್ದರು. 

ಈ ಯುವಕರು ಹೋಗುವ ಕೆಲವೇ ನಿಮಿಷಗಳ ಮುಂಚೆ ಅಥವಾ ಬಳಿಕ ಗೌರಿ ಅವರ ಹತ್ಯೆಯಾಗಿದೆ. ಇದನ್ನು ಯುವಕರು ನೋಡಿರುವ ಸಾಧ್ಯತೆಯಿದೆ. ಅಲ್ಲದೇ ದೊರೆತ ಸಿಸಿಟಿವಿಯಲ್ಲಿ ಯುವಕರಿಬ್ಬರು ಸ್ಥಳದಿಂದ ಓಡುತ್ತಿರುವ ದೃಶ್ಯ ಸೆರೆಯಾಗಿದೆ. ಈ ಹಿನ್ನೆಲೆಯಲ್ಲಿ ಮೂವರನ್ನು ವಿಚಾರಣೆಗೊಳಪಡಿಸುತ್ತಿದ್ದು, ಈ ಪೈಕಿ ಅವಿನಾಶ್‌, ಮುಖೇಶ್‌ನನ್ನು ತೀವ್ರ ವಿಚಾರಣೆಗೊಳಪಡಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next