ಸಂಬಂಧಗಳಿಗೆ ಈಗೀಗ ಬೆಲೆನೇ ಇಲ್ಲ, ಹತ್ತಿರವಿದ್ದವರನ್ನೂ ದೂರ ಮಾಡುತ್ತಾರೆ, ದೂರ ಮಾಡೋದು ಬಿಡಿ, ಹತ್ತಿರಕ್ಕೇ ಸೇರಿಸಿಕೊಳ್ಳಲ್ಲ… ಅಲ್ಲೆಲ್ಲೋ ಯಾರೋ ಹೀಗೆ ಹೇಳುತ್ತಿದ್ದುದು ಕಿವಿಗೆ ಬೀಳುತ್ತಿತ್ತು. ಯಾವ ಸಂಬಂಧದ ಬಗ್ಗೆ ಅವರು ಮಾತನಾಡುತ್ತಿದ್ದರೋ ತಿಳಿಯಲಿಲ್ಲ. ನನ್ನ ಮನಸ್ಸು ಆ ವೇಳೆಗಾಗಲೇ ಬಾಲ್ಯಕ್ಕೆ ಹೊರಳಿತ್ತು. ಮಕ್ಕಳಿರಲವ್ವ ಮನೆ ತುಂಬ ಎಂಬ ಮಾತಿನಂತೆ ಆಗ ಮನೆಗಳ ತುಂಬಾ ಮಕ್ಕಳಿರುತ್ತಿದ್ದವು. ಹೆತ್ತವರಿಗೆ ಎಲ್ಲಾ ಮಕ್ಕಳ ಮೇಲೆ ಗಮನವಿರದಿಲ್ಲದಿದ್ದರೂ, ಮಕ್ಕಳಿಗೆ ಸಹೋದರ- ಸಹೋದರಿಯ ಪ್ರೀತಿ ತುಂಬಿದ ಜೀವಗಳು ಕಾಣಸಿಗುತ್ತಿದ್ದವು.
ಅದರಲ್ಲೂ ಅಕ್ಕ- ತಂಗಿಯ ಸಂಬಂಧದ ಅನುಬಂಧ ಚೆಂದ.ಕೆಲವು ವರ್ಷಗಳ ವಯಸ್ಸಿನ ಅಂತರವಿರುವ ಅಕ್ಕ- ತಂಗಿಯೆಂದರೆ ಅವರು ಸ್ನೇಹಿತೆಯರೆಂದೇ ಲೆಕ್ಕ. ಅಮ್ಮನೊಡನೆ ಹೇಳಿಕೊಳ್ಳಲಾಗದ್ದನ್ನು ಅವರಿಬ್ಬರೂ ಮಾತನಾಡಿಕೊಳ್ಳುವುದಿದೆ. ಅಕ್ಕನ ಸ್ನೇಹಿತರು ತಂಗಿಗೂ ಸ್ನೇಹಿತರು. ತಂಗಿಯ ಸ್ನೇಹಿತರು ಅಕ್ಕನಿಗೆ ತಂಗಿ- ತಮ್ಮಂದಿರಂತೆ. ವಯಸ್ಸಿನ ಅಂತರ ಕಡಿಮೆಯಿದ್ದಷ್ಟೂ ಆಟ, ಇಷ್ಟ, ಕಷ್ಟಗಳಲ್ಲಿ ಸ್ವಲ್ಪವಾದರೂ ಸಾಮ್ಯತೆ ಇರುತ್ತದೆ. ಹಾಗೆಯೇ ಕಚ್ಚಾಟವೂ ಅಧಿಕವೇ! ಅಂತರ ಜಾಸ್ತಿಯಾದಂತೆ, ಅಲ್ಲಿ ಅಕ್ಕ- ತಂಗಿ ಎಂಬ ಭಾವಕ್ಕಿಂತ, ಅಕ್ಕನೆಂದರೆ ಇನ್ನೊಂದು ಅಮ್ಮನಂತೆ ತಂಗಿಗೆ ಅನಿಸುವುದುಂಟು.
ತಂಗಿಯೆಂದರೆ, ಅವಳೊಂದು ಪುಟಾಣಿ ಮಗುವಂತೆ ಎಂದು ಭಾವಿಸುವವಳು ಅಕ್ಕ. ಅಕ್ಕ ತಂಗಿಯರು ಜಗಳವಾಡಿದಾಗ, ಹೆತ್ತವರಕಣ್ಣಿಗೆ ಗುರಿಯಾಗುವುದು ಮೊದಲಿಗೆ ಅಕ್ಕನೇ. ಅವಳು ಚಿಕ್ಕವಳು, ನೀನು ಸುಮ್ಮನಿದ್ದು ಬಿಡು ಎಂದು ಅಕ್ಕನಿಗೆ ಉಪದೇಶಿಸುವುದುಂಟು.ಕೊನೆಗೊಮ್ಮೆ ಜಗಳ ನಿಲ್ಲುತ್ತದೆ. ಅಕ್ಕ- ತಂಗಿ ಒಂದಾಗುತ್ತಾರೆ. ಕೆಲವೊಮ್ಮೆ ಜಗಳ ವಿಕೋಪಕ್ಕೆ ಹೋದಾಗ ತಂಗಿಯೆನ್ನುತ್ತಾಳೆ; ನಾನೊಬ್ಬಳೇ ಮಗಳಾಗಿದ್ದರೆ ಎಷ್ಟು ಚೆನ್ನಿತ್ತು ಎಂದು. ಅದಕ್ಕೆ ಅಕ್ಕನ ಉತ್ತರ ಹೀಗಿರುತ್ತದೆ: ನಾನು ಮೊದಲು ಹುಟ್ಟಿದ್ದು, ನೀನು ಹುಟ್ಟದಿದ್ದರೇ ಒಳ್ಳೆಯದಿತ್ತು…
ಇಂತಹ ಹುಸಿ ಮುನಿಸು ಅಕ್ಕ- ತಂಗಿಯರ ನಡುವೆ ಸಾಮಾನ್ಯ. ಹಾಗೆಂದು ಒಬ್ಬರನೊಬ್ಬರು ಬಿಟ್ಟಿರೋಲ್ಲ, ಬಿಟ್ಟು ಕೊಡೋಲ್ಲ. ಗಂಡು ಮಕ್ಕಳಿಗೆ ಹೋಲಿಸಿದರೆ ಮೈಕೈ ಬಡಿದಾಟವೂ ಅಕ್ಕ- ತಂಗಿಯರ ಮಧ್ಯೆ ಕಡಿಮೆ. ಏನಿದ್ದರೂ ಬೈಗುಳಗಳು, ಇಲ್ಲವಾದರೆ, ನಾನು ನಿನಗೆಕೊಟ್ಟಿದ್ದನ್ನು ಪುನಃ ವಾಪಸ್ ಕೊಡು ಅನ್ನುವುದು! ಹೀಗೆ ಅಲ್ಲಿಗಲ್ಲಿಗೆ ಮುಗಿಯುವುದು ಕದನ.
ಇನ್ನು ಡ್ರೆಸ್ಸಿಂಗ್ ವಿಷಯದಲ್ಲಿ ಅಕ್ಕನ ಬಟ್ಟೆಗಳನ್ನು ತಂಗಿ ಹಾಕುವುದು, ತಂಗಿಯದು ಅಕ್ಕನಿಗೆ ಬರುವುದು, ಹಂಚುವಿಕೆಯ ಮನೋಭಾವ ಮಕ್ಕಳಲ್ಲಿ ಚಿಕ್ಕವಯಸ್ಸಿನಲ್ಲೇ ಮೂಡುವುದು.ಕಪಾಟಿನಲ್ಲಿದ್ದ ವಸ್ತುಗಳನ್ನೋ, ಬಟ್ಟೆಗಳನ್ನೋ ಹೇಳದೇಕೇಳದೆ ತೆಗೆದುಕೊಂಡರೆ, ಧುತ್ತೆಂದು ಅವುಗಳ ಮೇಲೆ ಅಪಾರ ಪ್ರೀತಿ ತೋರುವುದು! ಊಟ ಮುಗಿಸಿ ಮನೆಯಲ್ಲಿ ಎಲ್ಲರೂ ಮಲಗಿ, ಮನೆಯ ಲೈಟ್ಸ್ ಆಫ್ ಆದರೂ ಇವರಿಬ್ಬರ ಪಟ್ಟಾಂಗ ಮುಗಿದಿರೋಲ್ಲ. ಆ ಕತ್ತಲಲ್ಲೇ ಹರಟೆ ಹೊಡೆಯುತ್ತಿರ್ತಾರೆ, ಟೈಮ್ ಆಯ್ತು ಮಲ್ಕೊಳ್ರೆ ಎನ್ನುವ ಅಮ್ಮನ ಮಾತನ್ನೂ ಕೇಳಿಸಿಕೊಳ್ಳದವರಂತೆ. ಅಕ್ಕತಂಗಿಯರ ಈ ಬಗೆಯ ಅನುಬಂಧ, ಅದನ್ನು ಅನುಭವಿಸಿದವರಿಗೇ ಗೊತ್ತು.
-ಸುಪ್ರೀತಾ ವೆಂಕಟ್