ಕೆಂಪನೂರು ಎಂಬಲ್ಲಿ ಅನಿತಾ, ಗೀತಾ, ನೀತಾ ಎಂಬ ಮೂವರು ಸೋದರಿಯರಿದ್ದರು. ಅವರು ತುಂಬಾ ಆತ್ಮೀಯರಾಗಿದ್ದರು. ಇವರ ಒಗ್ಗಟ್ಟು, ಪ್ರೀತಿ ಕಂಡು ಹೆತ್ತವರು ಸಂತೋಷ ಪಡುತ್ತಿದ್ದರು. ಒಂದು ದಿನ ಮೂವರು ಮಕ್ಕಳನ್ನು ಬಳಿಗೆ ಕರೆದ ತಂದೆ, ತಾಯಿ ನಾವು ತೀರ್ಥಯಾತ್ರೆಗೆ ಹೋಗಿ ಬರುತ್ತೇವೆ. ಸುಮಾರು ಒಂದು ತಿಂಗಳಾಗಬಹುದು. ಅಲ್ಲಿಯವರೆಗೆ ಮನೆಯ ಸಂಪೂರ್ಣ ಜವಾಬ್ದಾರಿ ನಿಮ್ಮದು. ಗೀತಾ, ನೀತಾಳನ್ನು ನೋಡಿಕೊಳ್ಳುವ, ಅಡುಗೆ ಮಾಡಿ ಎಲ್ಲರಿಗೂ ಉಣಿಸುವ ಜವಾಬ್ದಾರಿ ಅನಿತಾಳದ್ದು. ಮನೆಯ ಹೊರಗಿನ ಕೆಲಸವನ್ನು ಗೀತಾ ನೋಡಿಕೊಂಡರೆ, ಮನೆಯಲ್ಲಿ ಹಿರಿಯಕ್ಕನಿಗೆ ಸಹಾಯ ಮಾಡುವ ಜವಾಬ್ದಾರಿ ನೀತಾಳದ್ದು ಎಂದು ಹೇಳಿ ಮನೆಯ ಖರ್ಚಿಗೆಂದು ಒಂದಷ್ಟು ಹಣವನ್ನು ಗೀತಾಳ ಕೈಗೆ ಕೊಟ್ಟು ಅವರು ಹೊರಟು ಹೋದರು.
ತಂದೆ ತಾಯಿ ಇಲ್ಲದೇ ಇರುವುದು ಮೂವರು ಸಹೋದರಿಯರಿಗೆ ಒಂದು ರೀತಿಯ ಸಂಪೂರ್ಣ ಸ್ವಾತಂತ್ರ್ಯ ಕೊಟ್ಟಂತಾಗಿತ್ತು. ಅವರು ಖುಷಿಖುಷಿಯಿಂದ ಬಸ್ ನಿಲ್ದಾಣದವರೆಗೆ ಹೋಗಿ ಅವರನ್ನು ಬೀಳ್ಕೊಟ್ಟು ಬಂದರು. ಮನೆಯೊಳಗೆ ಬರುವಾಗ ಅಪ್ಪ, ಅಮ್ಮ ಇಲ್ಲ ಎನ್ನುವ ಕೊರಗು ಬಾಧಿಸಿದರೂ ಅವರು ಹಿಂದಿರುಗಿ ಬರುವಾಗ ನಮಗೆ ಏನೆಲ್ಲ ತರಬಹುದು, ಅಷ್ಟು ದಿನಗಳ ಕಾಲ ನಾವು ಏನೆಲ್ಲ ಆಟವಾಡುವುದು, ಏನೆಲ್ಲ ಅಡುಗೆ ಮಾಡುವುದು, ಏನೆಲ್ಲ ತಿನ್ನುವುದು ಎನ್ನುವ ಪ್ರಶ್ನೆಗಳ ಕುರಿತು ಚರ್ಚೆಗಳು ನಡೆದವು. ಸಾಕಷ್ಟು ಹೊತ್ತು ಹೊರಗೆ ಆಟವಾಡಿ ಕತ್ತಲಾಗುತ್ತಿದ್ದಂತೆ ಮನೆಯೊಳಗೆ ಬಂದ ಮೂವರು ಆವತ್ತು ಅಮ್ಮ ಮಾಡಿಟ್ಟ ಊಟ ಮಾಡಿ ರಾತ್ರಿ ಬಹಳ ಹೊತ್ತಿನವರೆಗೂ ಆಟವಾಡಿ ಸುಸ್ತಾದ ಮೇಲೆ ಮಲಗಿದರು.
ರಾತ್ರಿ ಬಹಳ ಹೊತ್ತಿನ ಅನಂತರ ಮಲಗಿದ್ದರಿಂದ ಬೆಳಗ್ಗೆ ಬೇಗ ಏಳಲಾಗದೆ ಅನಿತಾಳಿಗೆ ತಿಂಡಿ ಮಾಡುವುದು ತಡವಾಯ್ತು. ಇದರಿಂದ ಗೀತಾ, ನೀತಾ ಕೊಂಚ ಕೋಪಗೊಂಡರೂ ಇದಕ್ಕೆ ತಾವೂ ಜವಾಬ್ದಾರರು ಎಂದು ಅರಿತು ಸುಮ್ಮನಾದರು. ಬಳಿಕ ಮನೆ ಕೆಲಸ ಕಾರ್ಯಗಳನ್ನೆಲ್ಲ ಮುಗಿಸಿ ಆಡಳು ಕುಳಿತಾಗ ಅನಿತಾ ತನಗೆ ಸುಸ್ತಾಗಿದೆ. ನೀವಿಬ್ಬರು ಆಡಿಕೊಳ್ಳಿ ಎಂದು ಹೇಳಿ ಒಳಗೆ ಹೋಗಿ ಮಲಗಿದಳು. ಗೀತಾ, ನೀತಾಳ ಆಟವಾಡುವ ಸದ್ದು, ಗದ್ದಲದಿಂದ ಕುಪಿತಳಾದ ಅನಿತಾ ಅವರಿಬ್ಬರಿಗೂ ಬೈದು ಸುಮ್ಮನೆ ಕುರಿಸಿದಳು. ಹೀಗೆ ಮೊದಲ ಬಾರಿ ಸಹೋದರಿಯರ ನಡುವೆ ಸಣ್ಣ ಬಿರುಕು ಮೂಡಿತ್ತು. ಆ ದಿನ ಮೂವರ ನಡುವೆ ಮಾತುಕತೆ ಅಷ್ಟಕಷ್ಟೆ. ರಾತ್ರಿ ಊಟ ಮುಗಿಸಿ, ಎಲ್ಲರೂ ಬೇಗ ಮಲಗಿದರು.
ಮರುದಿನ ಬೆಳಗ್ಗೆ ಗೀತಾ, ನೀತಾ ಏಳುವ ಮೊದಲೇ ಅನಿತಾ ಬಿಸಿಬಿಸಿ ದೋಸೆ ಹೊಯ್ದಿಟ್ಟಿದ್ದಳು. ಅಲ್ಲಿಗೆ ಬಂದ ಗೀತಾ, ಅಕ್ಕ ನನಗೆ ದೋಸೆ ಇಷ್ಟವಿಲ್ಲ ಎಂದು ಅಮ್ಮ ಉಪ್ಪಿಟ್ಟು ಮಾಡುತ್ತಿದ್ದರು. ನಿನಗದು ನೆನಪಿಲ್ಲವೇ ಎಂದಾಗ ಅನಿತಾಳಿಗೆ ಸಿಟ್ಟು ನೆತ್ತಿಗೇರಿತ್ತು. ಇವತ್ತು ಇದನ್ನು ತಿನ್ನು. ಅಮ್ಮ ಬಂದ ಮೇಲೆ ಉಪ್ಪಿಟ್ಟು ಮಾಡಿ ಕೊಡಲು ಹೇಳು ಎಂದಳು. ಇದರಿಂದ ಬೇಸರಗೊಂಡ ಗೀತಾ ದೋಸೆ ತಿನ್ನದೆ ಕೋಣೆಗೆ ಹೋಗಿ ಅತ್ತು ಕುಳಿತಳು. ಎಷ್ಟು ಕರೆದರೂ ಬಾಗಿಲು ತೆರೆಯಲಿಲ್ಲ.
ಅಡುಗೆ ಮನೆಗೆ ಬೇಕಾದ ಸಾಮಗ್ರಿಗಳನ್ನು ತರುವಂತೆ ಗೀತಾಳಿಗೆ ಅನಿತಾಳು ತಂಗಿ ನೀತಾಳ ಮೂಲಕ ಹೇಳಿ ಕಳುಹಿಸಿದಳು. ಇದನ್ನು ಕೇಳಿಯೂ ಕೇಳದಂತೆ ಮಾಡಿದಳು ಗೀತಾ. ಆ ದಿನವೂ ಸಹೋದರಿಯರ ಮಧ್ಯೆ ಜಗಳವಾಗಿ ರಾತ್ರಿ ಅನಿತಾ ಊಟ ಮಾಡದೆ ಮಲಗಿದಳು. ಇದನ್ನೆಲ್ಲ ಸುಮ್ಮನೆ ನೋಡುತ್ತಿದ್ದ ನೀತಾಳಿಗೆ ಬೇಸರವಾಯ್ತು. ಅವಳು ಅಕ್ಕನವರನ್ನು ಹೇಗಾದರೂ ಒಂದು ಮಾಡಿಸಬೇಕು ಎಂದು ಯೋಚಿಸುತ್ತಿದ್ದಳು. ಮರುದಿನ ಬೇಗ ಎದ್ದ ನೀತಾ ಉಪ್ಪಿಟ್ಟು ಮಾಡಿ ಒಂದು ಪಾತ್ರೆಯ ಕೆಳಗೆ ಬಚ್ಚಿಟ್ಟಳು. ಅನಿತಾ ಎದ್ದು ಹಿಂದಿನ ದಿನ ಉಳಿದಿದ್ದ ಹಿಟ್ಟಿನಿಂದ ದೋಸೆ ಮಾಡಲಾರಂಭಿಸಿದಳು. ಆಗ ನೀತಾ ನಾನು ಪಕ್ಕದ ಮನೆಯಲ್ಲಿರುವ ರಜನಿಯಿಂದ ನೋಟ್ಸ್ ತರುತ್ತೇನೆ ಎಂದು ಹೋದವಳು ಮರಳಿ ಬರುವಾಗ ಮನೆಗೆ ಬೇಕಾದ ಸಾಮಗ್ರಿಗಳನ್ನು ತಂದಳು. ಇದರಿಂದ ಅಚ್ಚರಿಗೊಂಡ ಅನಿತಾ ಯಾಕೆ ಹೀಗೆ ಮಾಡಿದೆ ಎಂದಾಗ ಅಕ್ಕ, ನೀವಿಬ್ಬರು ಜಗಳ ಮಾಡುವುದನ್ನು ನೋಡಿದರೆ ನನಗೆ ಬೇಸರವಾಗುತ್ತದೆ. ಅದಕ್ಕೆ ಹೀಗೆ ಮಾಡಿದೆ ಎನ್ನುತ್ತಾಳೆ.
ಆಗಷ್ಟೇ ಎದ್ದು ಬಂದ ಗೀತಾ ಅಡುಗೆ ಮನೆಯಲ್ಲಿ ಯಾವೆಲ್ಲ ಸಾಮಗ್ರಿಗಳಿಲ್ಲ ಎಂದು ಹುಡುಕುತ್ತಿದ್ದಾಗ ಬಚ್ಚಿಟ್ಟಿದ್ದ ಉಪ್ಪಿಟ್ಟನ್ನು ನೋಡಿ ಓಡಿ ಬಂದು ಅನಿತಾಳನ್ನು ತಬ್ಬಿ ಅಕ್ಕ, ನನ್ನ ಕ್ಷಮಿಸು. ನಿನ್ನೆ ಉಪ್ಪಿಟ್ಟಿಗಾಗಿ ನಾನು ನಿನ್ನ ಜತೆ ಜಗಳ ಮಾಡಿದೆ. ಇವತ್ತು ನೀನೇ ಅದನ್ನು ಮಾಡಿಟ್ಟಿದ್ದೆ ಎಂದಾಗ ಅನಿತಾಳಿಗೆ ಅಚ್ಚರಿಯಾಯಿತು. ಆಗ ನೀತಾ ಅದನ್ನು ತಾನು ಮಾಡಿದ್ದು ಎನ್ನುತ್ತಾಳೆ. ಇದರಿಂದ ಅನಿತಾ ಮತ್ತು ಗೀತಾಳಿಗೆ ತಮ್ಮ ತಪ್ಪಿನ ಅರಿವಾಗುತ್ತದೆ. ನಾವು ಮೂವರು ಕೆಲಸಗಳನ್ನು ಹಂಚಿಕೊಂಡು ಮಾಡೋಣ. ಇದರಿಂದ ಜಗಳವಾಗುವುದಿಲ್ಲ. ಯಾರಿಗೂ ಹೆಚ್ಚು ಸುಸ್ತೂ ಆಗುವುದಿಲ್ಲ. ಕೆಲಸ ಮಾಡಿ ಉಳಿದ ಸಮಯದಲ್ಲಿ ಒಟ್ಟಿಗೆ ಆಟವಾಡೋಣ. ರಾತ್ರಿ ಬೇಗ ಮಲಗಿ, ಬೆಳಗ್ಗೆ ಒಟ್ಟಿಗೆ ಎದ್ದು ಮನೆ ಕೆಲಸಗಳನ್ನು ಮಾಡಿ ಮುಗಿಸೋಣ ಎನ್ನುತ್ತಾಳೆ. ಬಳಿಕ ಇದೇ ರೀತಿಯ ದಿನಚರಿಯನ್ನು ಅನುಸರಿಸುತ್ತಾರೆ. ತಂದೆತಾಯಿ ಮರಳಿ ಬಂದಾಗ ಮಕ್ಕಳು ಖುಷಿಯಾಗಿರುವುದು ನೋಡಿ, ಮನೆಯ ಕೆಲಸ ಕಾರ್ಯಗಳನ್ನೆಲ್ಲ ಅಚ್ಚುಕಟ್ಟಾಗಿ ಮಾಡಿರುವುದು ನೋಡಿ ಸಂತೋಷ ಪಡುತ್ತಾರೆ.
ವಿಶ್ರಾನ್