Advertisement

ಅಕ್ಕ ಮತ್ತು ಅಕ್ಕರೆಯ ಸಂಗತಿಗಳು 

06:00 AM May 25, 2018 | |

ಯಾರಾದರೂ ಮಾತಿಗೆ ಸಿಕ್ಕಿದಾಗ ಸಮಯ, ಸಂದರ್ಭಕ್ಕೆ ತಕ್ಕಂತೆ “”ನಿಮ್ಮೂರು ಯಾವುದು? ಏನ್‌ ಮಾಡ್ಕೊಂಡಿದ್ದೀರಾ? ಮಕ್ಕಳೆಷ್ಟು?” ಎಂದು ಸಾಮಾನ್ಯವಾಗಿ ಎಲ್ಲರೂ ಕೇಳುವ, ಎದುರಿಸುವ ಪ್ರಶ್ನೆಗಳು. ಇದು ಸಾಮಾನ್ಯ.

Advertisement

ಅಂತೆಯೇ ನನ್ನಲ್ಲೂ “”ಮಕ್ಕಳೆಷ್ಟು” ಎಂದು ಕೇಳಿದವರಿಗೆ “”ಮೂವರು ಹೆಣ್ಮಕ್ಕಳು” ಎಂದಾಗ, “”ಯೂ ಆರ್‌ ಲಕ್ಕೀ” ಎಂಬ ಪ್ರಶಂಸೆಗೆ ಒಳಗಾಗುತ್ತೇನೆ. ಇದೇ ಪ್ರಶ್ನೆ ಕೆಲವು ವರ್ಷಗಳ ಮೊದಲಾದರೆ, “”ಹಾ! ಮೂವರೂ ಹೆಣ್ಮಕ್ಕಳೇನಾ? ಒಂದೂ ಗಂಡು ಇಲ್ವಾ? ಛೇ ಒಂದಾದರೂ ಗಂಡಾಗಿದ್ರೆ ಚೆನ್ನಾಗಿತ್ತು” ಎಂದು ಹೇಳಿದವರಿಗೆ “”ನನ್ನ ಗಂಡನೇ ಗಂಡು ಮಗು” ಎಂದು ನಕ್ಕಿದ್ದೂ ಇತ್ತು! ಅವರಿಗೇನು ಗೊತ್ತು ಅಕ್ಕ-ತಂಗಿಯರೊಳಗಿನ ಪ್ರೀತಿ, ಒಡನಾಟದ ಆಳ.

ಪ್ರಾಸಬದ್ಧವಾದ ನಾಮಾಂಕಿತದೊಂದಿಗೆ ಒಂದೇ ತೆರನಾದ ಉಡುಪಿನಲ್ಲಿ ಜೋಡು ಜಡೆಯ ಜಮುನೆಯರಾಗಿ ಮನೆಯಲ್ಲೇ ಬೆಳೆದ ಘಮಘಮ ಮಲ್ಲಿಗೆ ಮುಡಿಗೇರಿಸಿಕೊಂಡು, ಕಾಲ್ಗೆಜ್ಜೆ ನಾದದೊಂದಿಗೆ ಕಿಲಕಿಲ ನಗುತ್ತಾ ಅಜ್ಜ-ಅಜ್ಜಿ , ಅಪ್ಪ-ಅಮ್ಮನಿಗೆ ಟಾಟಾ ಮಾಡಿ ಶಾಲೆಗೆ ಹೋಗುತ್ತಿದ್ದ ಮಗಳಂದಿರ ನೆನಪು ಇನ್ನೂ ನಿನ್ನೆಮೊನ್ನೆಯಂತಿದೆ.

ಅಷ್ಟೇ ಯಾಕೆ? ಇನ್ನೂ ಹಿಂದಕ್ಕೆ ಹೋದರೆ ಬಾಲ್ಯದಲ್ಲಿ ನನ್ನಕ್ಕನೊಂದಿಗೆ ಆಡಿ, ಕೂಡಿ, ಜಗಳಾಡಿದ ಆ ನೆನಪು, ಗೇರು, ಮಾವಿನ ರಸ, ಸೊನೆಗಳನ್ನು ಲಂಗಕ್ಕೊರೆಸುತ್ತಾ, ಬಿಸಿಲು, ಮಳೆಯನ್ನು ಲೆಕ್ಕಿಸದೆ ಗುಡ್ಡ-ತೋಟ ಸುತ್ತುತ್ತಾ ತೋಡು-ಹಳ್ಳಗಳಲ್ಲಿ ಜಲಕ್ರೀಡೆಯಾಡುತ್ತ ಅಜ್ಜಿಯನ್ನು ಗೋಳು ಹೊಯ್ದುಕೊಳ್ಳುತ್ತಾ ಇಡೀ ಊರೇ ತಮ್ಮದೆಂಬಂತೆ ಸುತ್ತುತ್ತ ಇದ್ದ ಆ ಕಾಲದ ದಿನಗಳ ನೆನಪು ವಾಹ್‌! ಈ ಅರುವತ್ತೈದರ ವಯಸ್ಸಲ್ಲೂ ಅವುಗಳನ್ನು ಮೆಲುಕು ಹಾಕುವುದೂ ಒಂದು ಆನಂದ. ಅದಕ್ಕೆ ಏಜ್‌ ಲಿಮಿಟೇಶನ್‌ ಅನ್ನುವುದು ಇಲ್ಲ. ಅದು ಡಿಕ್ಷನರಿಯಲ್ಲಿ ಹೊಡೆದು ಹಾಕುವ ಶಬ್ದ ಎಂಬುವುದು ನನ್ನ ಅಂಬೋಣ. ಸ್ವಸ್ಥದೇಹ-ಮನಸ್ಸುಗಳಿಗೆ ಸಹೋದರಿಯರೊಳಗಿನ ಪ್ರೀತಿ, ವಿಶ್ವಾಸ, ಒಡನಾಟವೂ ಒಂದು ಲಿಂಕ್‌.

ಪಕ್ಕದ ಮನೆ ಜಯಂತಿಯಕ್ಕನ ಆಮಂತ್ರಣದ ಮೇರೆಗೆ ಅವರ ಮನೆಗೆ ಸತ್ಯನಾರಾಯಣ ಪೂಜೆಗೆ ಹೋಗಿದ್ದೆ. ಜಯಂತಿಯಕ್ಕ ದಂಪತಿ ಪೂಜೆಗೆ ಕೂತಿದ್ದರಿಂದ ಅವರ ಸೋದರಿಯರು ಬಂದವರನ್ನು ಆದರಿಸಿ, ಕುಳ್ಳಿರಿಸಿ, ಪಾನೀಯಗಳನ್ನಿತ್ತು ಸತ್ಕರಿಸುತ್ತಿದ್ದರು. ಎಲ್ಲಿಯೂ ಏನೊಂದೂ ಲೋಪವಿಲ್ಲದಂತೆ ಅಚ್ಚುಕಟ್ಟಾಗಿ ಕೆಲಸ ನಿರ್ವಹಿಸುತ್ತಿದ್ದುದನ್ನು ಕಂಡಾಗ ಅಕ್ಕ-ತಂಗಿಯರ ಪರಸ್ಪರ ಅರ್ಥಮಾಡುವಿಕೆ, ಸಹಕಾರದ ಬಗ್ಗೆ ಹೆಮ್ಮೆಯೆನಿಸಿತು. ಆ ಕ್ಷಣ ಒಂದೊಮ್ಮೆ ಸಣ್ಣ ಸಂದೇಹವೋ, ಪ್ರಶ್ನೆಯೋ ಏನೋ ಒಂದು ಮನಸ್ಸಲ್ಲಿ ಉದ್ಭವಿಸಿದ್ದಂತೂ ಸತ್ಯ. ಅಕ್ಕ-ತಂಗಿಯರೊಳಗೆ ಇರುವ ಪ್ರೀತಿ, ಸ್ನೇಹ, ಸಲುಗೆ, ಅನ್ಯೋನ್ಯತೆ ಜೊತೆಗೆ ಜವಾಬ್ದಾರಿಯ ನಿರ್ವಹಣೆ ಅಣ್ಣ-ತಮ್ಮಂದಿರೊಳಗೆ ಇದೆಯೇ? ಇದರಲ್ಲಿ ಅಭಿಪ್ರಾಯ ಭೇದ‌ವೂ ಇರಬಹುದು. ಅದು ಅವರವರ ವ್ಯಕ್ತಿಗತ ಅಭಿಪ್ರಾಯ, ಅರ್ಥಮಾಡಿಕೊಂಡಂತೆ.

Advertisement

ಅಕ್ಕ-ತಂಗಿಯರೆಂದರೆ ಹೆಗಲಿಗೆ ಹೆಗಲು ಕೊಟ್ಟು ಅಂತರಂಗವನ್ನು ಅರ್ಥಮಾಡಿಕೊಳ್ಳುವ ಗೆಳತಿಯರು. ನನ್ನೊಬ್ಬಳು ಮಗಳು ವಿದೇಶವಾಸಿಯಾಗಿದ್ದು ಅವಳ ಹೆರಿಗೆ ಸಮಯದಲ್ಲಿ ನನ್ನ ದೊಡ್ಡಮಗಳು, “”ಅಮ್ಮಾ , ನೀನು ಏನೇ ಸಮಸ್ಯೆಗಳಿದ್ದರೂ ಈ ಸಮಯದಲ್ಲಿ ತಂಗಿಯ ಜೊತೆಗಿರಲೇಬೇಕು. ನಿನ್ನ ಇಲ್ಲಿಯ ಕೆಲಸಕಾರ್ಯಗಳನ್ನು ನಾನು ನಿರ್ವಹಿಸಬಲ್ಲೆ. ನಿರ್ಯೋಚನೆಯಿಂದ ಹೋಗಿ ಬಾ” ಎಂದು ನನ್ನ ಜವಾಬ್ದಾರಿಯನ್ನು ನೆನಪಿಸಿದ್ದು ಮಾತ್ರವಲ್ಲದೆ, ಲಗೇಜು ತಯಾರಿಯಿಂದ ಹಿಡಿದು ವೀಸಾ ತನಕ ಎಲ್ಲಾ ಸಿದ್ಧತೆಗಳನ್ನು ಮಾಡಿ ನನ್ನನ್ನು ಕಳುಹಿಸಿಕೊಟ್ಟು ಅಕ್ಕನಾಗಿ ಪರೋಕ್ಷವಾಗಿ ತಾಯಿ ಜವಾಬ್ದಾರಿಯನ್ನು ನಿರ್ವಹಿಸಿದ್ದನ್ನು ನಾನು ನೆನಪಿಸಿಕೊಳ್ಳುತ್ತಿರುತ್ತೇನೆ. ಇಂದು ಆ ತಂಗಿ ಈ ಅಮ್ಮನಿಗಿಂತ ಜಾಸ್ತಿ ಅಕ್ಕನಲ್ಲೇ ಸಲಹೆ-ಸೂಚನೆಗಳಿಗೆ ಅವಲಂಬಿತಳಾಗಿರುತ್ತಾಳೆ.

ಯಾವುದೇ ಸಭೆ-ಸಮಾರಂಭಗಳಿರಲಿ, ಅಲ್ಲಿ ಸಹೋದರಿಯರು ಹಾಜರಾಗಿದ್ದಾದರೆ ಜೊತೆ-ಜೊತೆಯಾಗಿರುವುದನ್ನು ಗಮನಿಸಬಹುದು. ಊಟ-ತಿಂಡಿಗೆ ಕೂತಿದ್ದಾಗಂತೂ ಇನ್ನಿಲ್ಲದಂತೆ ಹರಟುತ್ತ ಎಲ್ಲಾ ರೆಸಿಪಿಗಳ ಬಗ್ಗೆ ಚರ್ಚಿಸುತ್ತ ಎನ್‌ಜಾಯ್‌ ಮಾಡುತ್ತ ಉಣ್ಣುತ್ತಾರೆ.

ತವರಿಗೆ ಬಂದರಂತೂ ಮುಗಿಯಿತು ಕಥೆ. ಕೈಕೂಸುಗಳಿದ್ದರೆ ಅಜ್ಜಿ-ತಾತಂದಿರಿಗೆ ವರ್ಗಾಯಿಸಿ ತಾವು ಹಾರುವ ಹಕ್ಕಿಗಳಾಗಿ ಬಿಡುತ್ತಾರೆ. ಮದುವೆಗೆ ಮುನ್ನ ಎಷ್ಟೇ ಜಗಳಾಡಿಕೊಂಡಿರಲಿ, ವಿವಾಹಾನಂತರ ಅವರ ಟ್ರೆಂಡೇ ಬೇರೆಯಾಗಿರುತ್ತದೆ. ಬೆಡ್‌ರೂಮ್‌ನ ವಿಷಯದಿಂದ ಹಿಡಿದು ಎಲ್ಲಾ ಸೂಕ್ಷ್ಮಗಳನ್ನು ಮುಕ್ತವಾಗಿ ಚರ್ಚಿಸುವ ಕೌನ್ಸಿಲರಾಗಿ ಬಿಡುತ್ತಾರೆ. ಅದಕ್ಕೇ ಇರಬಹುದು ಸಿನಿರಸಿಕರ ಬಾಯಲ್ಲೂ “”ಅಕ್ಕಯ್ನಾ, ಅಕ್ಕಯ್ನಾ ಏನೇ ಇದು ಅನ್ಯಾಯಾ. ಬಂಗಾರದಂತಾ ಗಂಡಾ ಕಣೇ ಬಾಗಿಲು ತೆಗೆ ಅಕ್ಕಯ್ನಾ” ಎಂದು ತಂಗಿಯಾದವಳು ಅಕ್ಕನನ್ನು ಛೇಡಿಸಿದುದನ್ನು ನೆನಪಿಸಲು ಮರೆಯಲುಂಟೆ? ಇದೇ ಕಾರಣಕ್ಕೆ ಇರಬಹುದು, ವಿದೇಶದಲ್ಲಿದ್ದ ಸಹೋದರಿಯರೂ ಕೂಡಾ ಸ್ವದೇಶಕ್ಕಾಗಮಿಸುವಾಗ ಜೊತೆಯಾಗಿರಲು ಕೆಲವು ತಿಂಗಳ ಯಾ ವರ್ಷ ಮೊದಲೇ ಪೂರ್ವತಯಾರಿ ಮಾಡುತ್ತಾರೆ. ಸಹೋದರಿಯರ ಮದುವೆಯಿದ್ದರಂತೂ ತಾವೇನೂ ಮದುಮಗಳಿಗೆ ಕಮ್ಮಿಯಿಲ್ಲವೆಂಬ ಸಿದ್ಧಾಂತಕ್ಕೆ ಬದ್ಧರಾಗಿ ಅಡಿಯಿಂದ ಮುಡಿತನಕ ಶೃಂಗರಿಸಿ ನೋಡುಗರ ಕಣ್ಣುಗಳಿಗೆ ರಸದೌತಣವನ್ನೀಯುತ್ತಾರೆ.

ಸಹೋದರಿಯರ ಪ್ರೀತಿಗೆ ವಯಸ್ಸು ಕೂಡಾ ಅಡ್ಡಿಯಾಗುವುದಿಲ್ಲ. ಹಳ್ಳಿವಾಸಿ, ಕೃಷಿಕಳಾದ ನನ್ನಕ್ಕ ಎಪ್ಪತ್ತರ ಇಳಿವಯಸ್ಸಲ್ಲೂ ತಂಗಿ ಎಂಬ ವಾಂಛಲ್ಯವನ್ನು ಮುಂದಿಟ್ಟುಕೊಂಡು ಮಣಭಾರದ ವಸ್ತುಗಳನ್ನು ಫ್ಲಾಟ್‌ವಾಸಿ ತಂಗಿಗೋಸ್ಕರ ಹೊತ್ತು ತರುವುದು. ಮಾತ್ರವಲ್ಲ, ನಾನು ಆಕೆಯಲ್ಲಿಗೆ ಹೋದಾಗ “ಸ್ವರ್ಗಕ್ಕೆ ಮೂರೇ ಗೇಣು’ ಎಂಬಂತೆ ಸಂಭ್ರಮಿಸುತ್ತಾಳೆ. ನನ್ನ ಪತಿಯ ಅಗಲುವಿಕೆ ಸಂದರ್ಭದಲ್ಲಿ ನನ್ನ ನೋವನ್ನು ಅರ್ಥಮಾಡಿಕೊಂಡಾಕೆ, ತಲೆಸವರಿ ಎದೆಗಾನಿಸಿ ಸಂತೈಸಿದಾಕೆ, ಆಕೆಯ ಮಕ್ಕಳಲ್ಲಿ ನನ್ನ ಮಕ್ಕಳ ಮುಖವನ್ನು ಕಂಡಾಕೆ ಒಟ್ಟಿನಲ್ಲಿ ನನಗೆ ನನ್ನಕ್ಕ “ದಿ ಗ್ರೇಟ್‌ ಅಕ್ಕ’. ಅದಕ್ಕೆ ಸರಿಯಾಗಿ ನಾನೂ ಆಕೆಗೆ ತಕ್ಕಂತಿದ್ದೇನೆ.

ಮೊನ್ನೆ ತಾನೇ ದಿನಪತ್ರಿಕೆಯೊಂದರಲ್ಲಿ ಪ್ರಕಟವಾದ “ಈ ಮೂರು ಮಕ್ಕಳಿಗೆ ಅಕ್ಕನೇ ಅಮ್ಮ. ಹೆಗಲೇರಿದ ಕುಟುಂಬ ನಿರ್ವಹಣೆ’ ಎಂಬುದರ ಬಗ್ಗೆ ಕೇವಲ ಹನ್ನೆರಡರ ವಯೋಮಾನದಲ್ಲಿ ಹೆತ್ತವರನ್ನು ಕಳಕೊಂಡ ಬಾಲೆಯ ಬಗ್ಗೆ ಓದಿದಾಗ ಅಕ್ಕನಾದವಳು ಜವಾಬ್ದಾರಿಯುಳ್ಳ ಮುಖ್ಯ ಭೂಮಿಕೆಯೂ ಹೌದು ಎಂಬುದನ್ನು ಅಲ್ಲಗಳೆಯುವಂತಿಲ್ಲ. ಅಕ್ಕನಿಗೆ ಮಕ್ಕಳಾಗದ ಸಂದರ್ಭದಲ್ಲಿ ವಂಶೋದ್ಧಾರದ ಕಾರಣಕ್ಕೆ ತಂಗಿಯಾದವಳು ಭಾವನನ್ನು ಮದುವೆಯಾದ ಉದಾಹರಣೆಯೂ ಇದೆ. ನಮ್ಮ ಮನೆಯ ಕೆಲಸದಾಕೆ ಆಕೆಯ ಅಕ್ಕನ ಅನಾರೋಗ್ಯದ ಕಾರಣದಿಂದ ಅಕ್ಕನ ಆರೈಕೆ, ಮಕ್ಕಳ ಪಾಲನೆಗೋಸ್ಕರ ಭಾವನನ್ನೇ ಮದುವೆಯಾಗಿ ತ್ಯಾಗಮಯಿಯೆನಿಸಿಕೊಂಡಿರುತ್ತಾಳೆ. 

ಜೀವನದಲ್ಲಿ ಮಾತ್ರವಲ್ಲ, ಹಾಡು, ಸಂಗೀತ, ನೃತ್ಯ, ನಾಟಕವೇ ಮೊದಲಾದ ಸನ್ನಿವೇಶಗಳಲ್ಲೂ ಅಕ್ಕ-ತಂಗಿ ಜೊತೆ ಜೊತೆಯಾಗಿ ವೇದಿಕೆ ಹಂಚಿಕೊಂಡುದನ್ನು ಕಾಣಬಹುದು. ಇತ್ತೀಚೆಗೆ ದ. ಆಫ್ರಿಕಾದ ಜೊಹಾನ್ಸ್‌ಬರ್ಗ್‌ನಲ್ಲಿ ನಡೆದ ಅಂತಾರಾಷ್ಟ್ರೀಯ ಕುಸ್ತಿ ಸ್ಪರ್ಧೆಯಲ್ಲಿ ನಾಲ್ವರು ಸೋದರಿಯರು ಸ್ವರ್ಣ, ಬೆಳ್ಳಿಪದಕ ಪಡೆದಿರುವುದು ಸೋದರಿಯರ ಒಗ್ಗಟ್ಟು , ಪ್ರೀತಿಯೇ ಅವರ ಗೆಲುವಿನ ಸಂಕೇತವೆಂಬುದನ್ನು ಸಾಬೀತುಪಡಿಸುತ್ತದೆ. ಇದಕ್ಕೆ ಪೂರಕವೆಂಬಂತೆ ಟೆನಿಸ್‌ ಆಟಗಾರ್ತಿಯರಾದ ವಿಲಿಯಂ ಸೋದರಿಯರು ಕ್ರೀಡಾ ಕ್ಷೇತ್ರದಲ್ಲಿ ಸಾಕಷ್ಟು ಹೆಸರು ಮಾಡಿರುತ್ತಾರೆ.

ನನ್ನ ಕಿರಿಮಗಳು ಮೊದಲಿನದ್ದು ಹೆಣ್ಣು ಮಗುವಾದರೂ ಪುನಃ ತಾಯಿಯಾಗುವ ಸೂಚನೆ ಕಂಡಾಗ ಮೊದಲ ಮಗುವಿಗೆ ಜೊತೆಯಾಗಿ ಎಲ್ಲವನ್ನೂ ಹಂಚಿಕೊಳ್ಳಲು ಸಹೋದರಿಯ ಆಗಮನವನ್ನೇ ಬಯಸಿದ್ದಳು. ಅವಳ ಇಷ್ಟಾರ್ಥದಂತೆಯೇ ಆಯ್ತು ಕೂಡಾ. ಆದ್ದರಿಂದ ಅಕ್ಕ-ತಂಗಿಯರೆಂದರೆ ಬರೀ ಸಿಸ್ಟರ್ ಅಲ್ಲ. ಮನೆಯೆಂಬ ವಿಶ್ವವಿದ್ಯಾನಿಲಯದಲ್ಲಿ ಲಾಲಿ ಹಾಡುವ ಹಾಡುಗಾರ್ತಿ, ಪ್ರೀತಿಯ ಮುತ್ತು-ತುತ್ತನ್ನಿಡುವ ಅಮ್ಮ, ಪೂಜೆಮಾಡುವ ಪೂಜಾರಿ, ಪೂಜಿಸಲ್ಪಡುವ ಮೂರ್ತಿ ಎಲ್ಲವೂ ಹೌದು. ಇವರ ಮಧ್ಯೆ “ಥ್ಯಾಂಕ್ಯೂ’ ಅನ್ನುವ ಶಬ್ದಕ್ಕೆ ಜಾಗವೇ ಇಲ್ಲ. ಇವರೊಳಗೆ ಇದೆ ಮೊಗೆದಷ್ಟೂ ಬತ್ತದ ನೀರಿನ ಸೆಲೆ. ಸಮಯ, ಸಂದರ್ಭಗಳಲ್ಲಿ ವ್ಯತ್ಯಾಸವಿದ್ದರೂ ತಾತ್ಪರ್ಯ ಒಂದೇ. ಈ ಕೌಟುಂಬಿಕ ಆನಂದ ಆಹಾ! ಅನುಭವಿಸಿದವರಿಗೇ ಗೊತ್ತು. ಹೆಣ್ಣು ಮಕ್ಕಳಾದರೇನಂತೆ- ಇವರೇ ಲಕ್ಷ್ಮೀ-ಸರಸ್ವತಿ-ಶಾರದೆಯರು.

ಪಿ. ಪಾರ್ವತಿ ಐ. ಭಟ್‌ 

Advertisement

Udayavani is now on Telegram. Click here to join our channel and stay updated with the latest news.

Next