ಸಿರುಗುಪ್ಪ: ಪ್ರತಿ ಮಳೆಗಾಲದಲ್ಲಿಯೂ ಉಕ್ಕಿ ಹರಿದು ಸಾವಿರಾರು ಎಕರೆ ಭತ್ತ, ಕಬ್ಬು ಬೆಳೆಯನ್ನು ಮುಳುಗಡೆ ಮಾಡುವ ತುಂಗಭದ್ರೆ ಒಡಲಿನಲ್ಲಿ ಈಗ ಬಾವಿಗಳು ನಿರ್ಮಾಣಗೊಳ್ಳುತ್ತಿವೆ.
ತುಂಗಭದ್ರಾ ಒಡಲು ಕಳೆದ 3 ತಿಂಗಳಿಂದ ಬರಿದಾಗಿದ್ದು, ನದಿ ಪಾತ್ರದಲ್ಲಿ ಬೆಳೆದಿರುವ ಬೆಳೆ ಉಳಿಸಿಕೊಳ್ಳಲು ಜೆಸಿಬಿ ಬಳಸಿ ಬಾವಿ ತೆಗೆದು ನೀರು ಹರಿಸಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಕಳೆದ 15 ದಿನಗಳ ಹಿಂದೆ ತುಂಗಭದ್ರಾ ಜಲಾಶಯದಿಂದ ನದಿಗೆ ನೀರು ಬಿಟ್ಟಿದ್ದರೂ ತಾಲೂಕಿನ ಇಬ್ರಾಹಿಂಪುರ ಗ್ರಾಮದವರೆಗೆ ಮಾತ್ರ ನದಿಯಲ್ಲಿ ನೀರು ಹರಿದಿದ್ದರಿಂದ ನದಿ ಪಾತ್ರದಲ್ಲಿರುವ ಅನೇಕ ಹಳ್ಳಿಗಳ ಜನ ನೀರಿಗಾಗಿ ಒದ್ದಾಡುವ ಸ್ಥಿತಿ ಬಂದಿದೆ.
ತಾಲೂಕಿನ ಬಾಗೇವಾಡಿ, ಶ್ರೀಧರಗಡ್ಡೆ, ಹಚ್ಚೊಳ್ಳಿ, ಚಿಕ್ಕಬಳ್ಳಾರಿ, ಮಾಟೂರು, ಚಲ್ಲಕೂಡ್ಲೂರು ಮುಂತಾದ ಗ್ರಾಮಗಳಿಗೆ ಕುಡಿಯುವ ನೀರು ಪೂರೈಕೆ ಮಾಡುವ ಮೂಲವಾಗಿರುವ ತುಂಗಭದ್ರಾ ನದಿಯಲ್ಲಿ ನೀರು ಸಂಪೂರ್ಣವಾಗಿ ಬತ್ತಿ ಹೋಗಿರುವುದರಿಂದ ಕೆರೆಗೆ ನೀರು ಹರಿಸಲು ಸಾಧ್ಯವಾಗದೆ ಇರುವುದರಿಂದ ನದಿ ಪಾತ್ರದಲ್ಲಿ ದೊಡ್ಡ ಗಾತ್ರದ ಬಾವಿ ತೆಗೆದು ಅದರಲ್ಲಿ ಸಂಗ್ರಹವಾಗುವ ನೀರನ್ನು ಮೋಟರ್ ಮುಖಾಂತರ ಎತ್ತಿ ಗ್ರಾಮಗಳಿಗೆ ನೀರು ಪೂರೈಕೆ ಮಾಡಲು ಗ್ರಾಪಂ ಅಧಿಕಾರಿಗಳು ಮುಂದಾಗಿದ್ದಾರೆ. ತಾಲೂಕಿನ ಬಾಗೇವಾಡಿ ಮತ್ತು ಚಿಕ್ಕಬಳ್ಳಾರಿ ಗ್ರಾಮಗಳ ಹತ್ತಿರ ತುಂಗಭದ್ರಾ ನದಿಯಲ್ಲಿ 10ಅಡಿ ಆಳದ ಬಾವಿಯನ್ನು ತೆಗೆದು ಅಲ್ಲಿ ಸಂಗ್ರಹವಾಗುವ ನೀರನ್ನು ಗ್ರಾಮಗಳಿಗೆ ಪೂರೈಕೆ ಮಾಡಲು ಕ್ರಮ ಕೈಗೊಳ್ಳಲಾಗಿದೆ. ಇದರಿಂದ ಹಚ್ಚೊಳ್ಳಿ ಮತ್ತು ಬಾಗೇವಾಡಿ ಗ್ರಾಪಂ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳಿಗೆ ಬಾವಿಯ ನೀರನ್ನು ಪೂರೈಕೆ ಮಾಡಲಾಗುತ್ತಿದೆ ಎಂದು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಎ.ಇ.ಇ. ಪಕ್ಕೀರಸ್ವಾಮಿ ತಿಳಿಸಿದ್ದಾರೆ.
ಹಚ್ಚೊಳ್ಳಿ ಮತ್ತು ಬಾಗೇವಾಡಿ ಗ್ರಾಪಂ ವ್ಯಾಪ್ತಿಯ ಹಳ್ಳಿಗಳಲ್ಲಿ ನೀರಿನ ಸಮಸ್ಯೆ ಪರಿಹರಿಸಲು ಕ್ರಮ ಕೈಗೊಳ್ಳಲಾಗಿದೆ. ನದಿಯಲ್ಲಿ ಬಾವಿಗಳನ್ನು ತೆಗೆದು ಅಲ್ಲಿ ಶೇಖರಣೆಗೊಂಡ ನೀರನ್ನು ಪೂರೈಸಲು ಕ್ರಮ ಕೈಗೊಳ್ಳಲಾಗಿದೆ.
•
ಶಿವಪ್ಪ ಸುಬೇದಾರ್, ತಾಪಂ ಇಒ.