ಸಿರುಗುಪ್ಪ: ನಗರದಲ್ಲಿರುವ ಪಶುಸಂಗೋಪನಾ ಇಲಾಖೆ ಕಚೇರಿ ಕಟ್ಟಡವು ಸಂಪೂರ್ಣವಾಗಿ ಶಿಥಿಲಗೊಂಡ ಕಟ್ಟಡದಲ್ಲಿಯೇ ದಿನನಿತ್ಯ ಸಿಬ್ಬಂದಿ ಭಯದಲ್ಲಿಯೇ ಕಾರ್ಯನಿರ್ವಹಿಸುವಂತಾಗಿದೆ.
1955ರಲ್ಲಿ ನಿರ್ಮಾಣವಾದ ಪಶುಸಂಗೋಪನಾ ಇಲಾಖೆಯ ಕಟ್ಟಡದಲ್ಲಿ ಒಂದು ಹಾಲ್, 2 ಕೊಠಡಿಗಳಿದ್ದು, ಒಂದು ಕೊಠಡಿಯಲ್ಲಿ ವೈದ್ಯರು ಕುಳಿತು ಕಾರ್ಯನಿರ್ವಹಿಸುತ್ತಾರೆ. ಮತ್ತೂಂದು ಕೊಠಡಿಯಲ್ಲಿ ಔಷಧ ದಾಸ್ತಾನು ಮಾಡಲಾಗಿದೆ. ಹಾಲ್‌ನಲ್ಲಿ ಸಿಬ್ಬಂದಿಯು ಕುಳಿತು ಕಾರ್ಯನಿರ್ವಹಿಸುತ್ತಿದ್ದರು. ಆದರೆ ಇತ್ತೀಚೆಗೆ ಸುರಿದ ಭಾರಿ ಮಳೆಯಿಂದಾಗಿ ಕಟ್ಟಡವು ಸಂಪೂರ್ಣವಾಗಿ ಶಿಥಿಲವಾಗಿರುವುದರಿಂದ ಪಕ್ಕದಲ್ಲಿರುವ ದಾಸ್ತಾನು ಕೊಠಡಿಯಲ್ಲಿ ಇಲ್ಲಿನ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ.
64 ವರ್ಷಗಳ ಹಿಂದೆ ನಿರ್ಮಾಣವಾದ ಈ ಕಟ್ಟಡವು ಈಗ ಸಂಪೂರ್ಣವಾಗಿ ಶಿಥಿಲಗೊಂಡಿದ್ದು, ಮೇಲ್ಛಾವಣಿ ಸಿಮೆಂಟ್ ಎಲ್ಲೆಂದರಲ್ಲಿ ಉದುರಿಬಿದ್ದು, ಛಾವಣಿಗೆ ಅಳವಡಿಸಿದ ಕಬ್ಬಿಣದ ರಾಡ್‌ಗಳು ಕಾಣುತ್ತಿವೆ. ಮಳೆ ಬಂದರೆ ಈ ಕಟ್ಟಡವು ಮಳೆ ನೀರಿನಿಂದ ತೊಟ್ಟಿಕ್ಕುತ್ತದೆ. ಕಿಟಕಿಗಳು ಮತ್ತು ಬಾಗಿಲ ಮುಂದೆ ಕಟ್ಟಲಾದ ಸಬ್ಜಾಗಳು ಮುಟ್ಟಿದರೆ ಬೀಳುವ ಹಂತದಲ್ಲಿದ್ದು, ಈ ಕಟ್ಟಡದ ಸಮೀಪ ತೆರಳಲು ಸಾರ್ವಜನಿಕರು ಹಿಂದೇಟು ಹಾಕುತ್ತಿದ್ದಾರೆ. ಕೆಲವು ಕಡೆ ಸಬ್ಜಾ ಉದುರಿ ಬಿದ್ದಿದೆ. ಇದರಿಂದಾಗಿ ಕಟ್ಟಡದ ಮೇಲ್ಛಾವಣಿಯು ಯಾವಾಗ ಯಾರ ಮೇಲೆ ಬೀಳುತ್ತದೋ ಎನ್ನುವ ಆತಂಕ ಇಲ್ಲಿನ ಸಿಬ್ಬಂದಿ ಮತ್ತು ಕಚೇರಿಗೆ ಬರುವ ಸಾರ್ವಜನಿಕರದ್ದಾಗಿದೆ.
ಮಳೆ ಬಂದರೆ ಸಾಕು ಕಟ್ಟಡದೊಳಗೆ ಕುಳಿತು ಕೆಲಸ ಮಾಡಲು ಸಿಬ್ಬಂದಿ ಹೆದರುತ್ತಾರೆ. ಅಷ್ಟೇ ಅಲ್ಲ ಕಚೇರಿ ಕೆಲಸಗಳಿಗಾಗಿ ಬರುವ ಕುರಿಗಾಹಿಗಳು, ರೈತರು, ಸಾರ್ವಜನಿಕರು ಯಾವಾಗ ಮೇಲ್ಛಾವಣಿ ತಮ್ಮ ಮೇಲೆ ಬೀಳುತ್ತದೆ ಎನ್ನುವ ಆತಂಕ ಕಾಡುತ್ತಿದೆ. ಆದ್ದರಿಂದ ಈ ಕಟ್ಟಡವನ್ನು ಕೆಡವಿ ಹೊಸ ಕಟ್ಟಡ ನಿರ್ಮಾಣ ಕಾರ್ಯಕ್ಕೆ ಸರ್ಕಾರ ಮುಂದಾಗಬೇಕಾಗಿದೆ.