ಸಿರುಗುಪ್ಪ: ಶಿವನನ್ನು ಒಲಿಸಿಕೊಳ್ಳುವ ಸುಲಭ ಮಾರ್ಗಗಳಲ್ಲಿ ಒಂದಾಗಿರುವ ಮಾರ್ಗವೆಂದರೆ ಭಕ್ತಿ ಮಾರ್ಗ. ಶಿವರಾತ್ರಿ ದಿನದಂದು ಶಿವನ ನಾಮಸ್ಮರಣೆ ಹಾಗೂ ಶಿವನ ಕುರಿತು ಸಂಗೀತ ಮೂಲಕ ಶಿವನನ್ನು ಒಲಿಸಿಕೊಳ್ಳಬಹುದು ಎಂದು ಒಳ ಬಳ್ಳಾರಿಯ ಸುವರ್ಣಗಿರಿ ವಿರಕ್ತಮಠದ ಸಿದ್ಧಲಿಂಗ ಮಹಾಸ್ವಾಮೀಜಿ ತಿಳಿಸಿದರು.
ಶ್ರೀ ಅಭಯಾಂಜನೇಯಸ್ವಾಮಿ ದೇವಸ್ಥಾನದ ಆವರಣದಲ್ಲಿ ಸಿರಿ ಸಾಂಸ್ಕೃತಿಕ ಸಂಸ್ಥೆ ವತಿಯಿಂದ ನಡೆದ ಶಿವರಾತ್ರಿ ಸಂಗೀತ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಆಶೀರ್ವಚನ ನೀಡಿ ಶಿವರಾತ್ರಿಯಂದು ಉಪವಾಸ ವ್ರತವನ್ನು ಆಚರಿಸಿ ರಾತ್ರಿಯಿಡಿ ಭಕ್ತಿಯಿಂದ ಶಿವನ ನಾಮಸ್ಮರಣೆ ಮಾಡಿದರೆ ಶಿವನ ಕೃಪೆ ದೊರೆಯುತ್ತದೆ ಎಂದರು.
ಗುರುಬಸವ ಮಠದ ಬಸವಭೂಷಣ ಸ್ವಾಮೀಜಿ ಆಶೀರ್ವಚನ ನೀಡಿದರು. ವಕೀಲರಾದ ಮಲ್ಲಿಕಾರ್ಜುನಸ್ವಾಮಿ, ಡಾ| ಪ್ರಶಾಂತ್, ವೆಂಕಟರಾಮರೆಡ್ಡಿ, ಶಿವಶಂಕರಗೌಡ, ರಾಮಚಂದ್ರಪ್ಪ, ಗೋಪಾಲರೆಡ್ಡಿ, ದೊಡ್ಡ ರಾಮರೆಡ್ಡಿ, ಶಿವಕುಮಾರಬಳಿಗಾರ್, ಮಾರುತಿ ರೆಡ್ಡಿ, ಪ್ರಭಾಕರರೆಡ್ಡಿ ಇದ್ದರು. ನಂತರ ನಡೆದ ದಾಸವಾಣಿ ಮತ್ತು ವಚನ ಗಾಯನ ಕಾರ್ಯಕ್ರಮದಲ್ಲಿ ಬಳ್ಳಾರಿಯ ಕುಮಾರಿ ನಿ ಧಿ, ಕುಮಾರಿ ಓಯಿಲಾ ಶಂಭೋ ಶಿವಶಂಭೋ ಎನ್ನುವ ಭಕ್ತಿಗೀತೆ ಸೇರಿದಂತೆ ವಿವಿಧ ಗೀತೆಗಳನ್ನು ಹಾಡಿದರು.
ಬಸವಲಿಂಗ ಹಿರೇಮಠ್ ಕೇಳಜಾಣ ಶಿವದ್ಯಾನ, ಹಿಂಡು ಹೆಣ್ಣಿನ್ಯಾಗ ಆಕೆಯ ನಾರಿ ಸಂತೆಯಲ್ಲಿ ಬೆಣ್ಣೆಮಾರಲು ತಂದಿದ್ದಳು. ಗುಬ್ಬಿ ಒಂದು ಗೂಡು ಕಟ್ಯಾದೋ ಎನ್ನುವ ತತ್ವಪದ, ಒಕ್ಕಲಿಗಾಗ ಚಕ್ಕಡಿ ಬೇಕಾ ಎನ್ನುವ ಗೀಗೀ ಪದ ಹಾಡಿ ರಂಜಿಸಿದರು.
ಬೆಂಗಳೂರಿನ ಶ್ರೇಯಾಮೂರ್ತಿ ರಾಗ್ ಬಿಹಾಗ್ ಹಾಡಿ ಪ್ರೇಕ್ಷಕರನ್ನು ಮಂತ್ರಮುಗ್ಧರನ್ನಾಗಿಸಿದರು. ಧಾರವಾಡದ ಶ್ರೀಕಾಂತ ಕುಲಕರ್ಣಿ, ಉಸ್ತಾದ್ ಫಯಾಜ್‌ಖಾನ್, ಗುಲ್ಬರ್ಗಾದ ಶಂಕರ್ ಹೂಗಾರ್, ಸಂತೋಷ್ ಗದ್ದನಕೇರಿ, ಧಾರವಾಡದ ವೈಷ್ಣವಿ ಪಂಚಮುಖೀಯವರು ದಾಸವಾಣಿ, ವಚನಗಾಯನವನ್ನು ನಡೆಸಿಕೊಟ್ಟರು. ಉಸ್ತಾದ್ ಶಫಿಖಾನ್, ಶುಭ ಸಂಜೀವರಾವ್ ಕುಲಕರ್ಣಿ ಸೀತಾರವಾದನ ನಡೆಸಿಕೊಟ್ಟರು. ಧಾರವಾಡ ಆಕಾಶವಾಣಿ ಕಲಾವಿದರಾದ ಪಂಡಿತ ಶಾಂತಲಿಂಗ ದೇಸಾಯಿ ಕಲ್ಲೂರು, ಗುಲ್ಬರ್ಗಾದ ಜಡೇಶ್ ಹೂಗಾರ್ ತಬಲಸಾಥ್ ನೀಡಿದರು.
ಬೆಂಗಳೂರಿನ ಪಂಚಾಕ್ಷರಿ ಹಿರೇಮಠ್, ಬೆಳಗಾವಿಯ ಸಾರಂಗ್ ಕುಲಕರ್ಣಿ, ಮದಿರೆ ಮರಿಸ್ವಾಮಿ, ಶಾಂತಕುಮಾರ್ ಗವಾಯಿಗಳು ಹಾರ್ಮೋನಿಯಂ ಸಾಥ್ ನೀಡಿದರು.