ಸಿರುಗುಪ್ಪ: ಕೃಷಿ ಕೂಲಿ ಕಾರ್ಮಿಕರ ಕೊರತೆಯಿಂದ ಹತ್ತಿ ಬೆಳೆ ಕಟಾವಾಗಿಲ್ಲ. ಹತ್ತಿ ಬಿಡಿಸಲು ಕೃಷಿ ಕೂಲಿಕಾರರು ಸಿಗದೆ ಹತ್ತಿ ಬಿದ್ದು ಹಾಳಾಗುತ್ತಿದೆ. ತಾಲೂಕಿನಲ್ಲಿ ಸುಮಾರು 23ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಹತ್ತಿ ಬೆಳೆಯಲಾಗಿದೆ.
ಹತ್ತಿ ಬೆಳೆಯಲು ಸಾವಿರಾರು ರೂ. ವೆಚ್ಚ ಮಾಡಿರುವ ರೈತರಿಗೆ ಮಾರುಕಟ್ಟೆಯಲ್ಲಿ ಹತ್ತಿಗೆ ಉತ್ತಮ ಬೆಲೆ ಸಿಕ್ಕರೆ ಹೇಗಾದರೂ ಸುಧಾರಿಸಿಕೊಳ್ಳುತ್ತಾರೆ. ಆದರೆ ಬೆಲೆ ಕುಸಿತದಿಂದಾಗಿ ಮಾಡಿದ ವೆಚ್ಚ ಕಳೆದು ಜೀವನ ನಿರ್ವಹಣೆ ಮಾಡಲಾಗದಂತಹ ಸ್ಥಿತಿಯಲ್ಲಿ ರೈತರಿದ್ದಾರೆ. ಇಲ್ಲಿನ ಕೃಷಿ ಕೂಲಿ ಕಾರ್ಮಿಕರು ಹೆಚ್ಚಿನ ಕೂಲಿಗಾಗಿ ಬಳ್ಳಾರಿ ತಾಲೂಕು ಮತ್ತು ಸೀಮಾಂಧ್ರದ ಆದೋನಿ, ಆಲೂರು ತಾಲೂಕುಗಳ ರೈತರ ಜಮೀನಿಗೆ ಕೂಲಿಗೆ ಹೋಗುತ್ತಿದ್ದು, ಇಲ್ಲಿನ ರೈತರ ಹೊಲದಲ್ಲಿ ಹತ್ತಿ ಬಿಡಿಸುವವರಿಲ್ಲದೆ ಬೆಳೆ ನಷ್ಟ ಅನುಭವಿಸುಂತಾಗಿದೆ ಎಂದು ಗೋಳಾಡುತ್ತಿದ್ದಾರೆ.
ಮುಂಗಾರು ಹಂಗಾಮಿನಲ್ಲಿ ಸಮಯಕ್ಕೆ ಸರಿಯಾಗಿ ಮಳೆ ಬಾರದೆ ಕೃಷಿ ಕಾರ್ಮಿಕರಿಗೆ ಕೆಲಸ ಕಾರ್ಯಗಳು ಸಿಗದೆ ಇದ್ದುದರಿಂದ ತಾಲೂಕಿನ ಶೇ.60ರಷ್ಟು ಕೂಲಿ ಕಾರ್ಮಿಕರು ಕೂಲಿಯರಸಿ ಮಹಾನಗರಗಳಿಗೆ ವಲಸೆ ಹೋಗಿದ್ದಾರೆ. ಮುಂಗಾರು ತಡವಾಗಿ ಆರಂಭವಾದರೂ ತಾಲೂಕಿನಲ್ಲಿ ಸುಮಾರು 23ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಹತ್ತಿ ಬೆಳೆ ಬೆಳೆಯಲಾಗಿದೆ. ಆದರೆ ಹತ್ತಿಗೆ ವಿವಿಧ ರೋಗಗಳು ಕಾಣಿಸಿಕೊಂಡು ರೈತರನ್ನು ಹೈರಾಣು ಮಾಡಿದ್ದವು. ಆದರೆ ಹತ್ತಿ ಇಳುವರಿ ಕಡಿಮೆಯಾಗುತ್ತಿರುವುದು ಒಂದು ಕಡೆಯಾದರೆ, ಬಿಟ್ಟಿರುವ ಹತ್ತಿ ಬಿಡಿಸಿಕೊಳ್ಳಲಾಗದ ಸ್ಥಿತಿ ಮತ್ತೂಂದು ಕಡೆ ರೈತರನ್ನು ಕಂಗಾಲಾಗಿಸಿದೆ.
ತಾಲೂಕಿನಲ್ಲಿರುವ ಶೇ.40ರಷ್ಟು ಕೂಲಿ, ಕಾರ್ಮಿಕರಲ್ಲಿ ಬಹುತೇಕ ಕಾರ್ಮಿಕರು ಜಿಲ್ಲೆ ಮತ್ತು ಹೊರ ರಾಜ್ಯದ ರೈತರ ಹೊಲಗಳಿಗೆ ತೆರಳುತ್ತಿರುವುದರಿಂದ ಹೊಲದಲ್ಲಿರುವ ಹತ್ತಿ ಬಿಡಿಸಿಕೊಳ್ಳಲಾಗದೆ ರೈತರು ಸಂಕಷ್ಟಕ್ಕೀಡಾಗಿದ್ದಾರೆ. ಹೊರರಾಜ್ಯ ಮತ್ತು ಜಿಲ್ಲೆಯ ಇತರೆ ಭಾಗಗಳಲ್ಲಿ ಒಬ್ಬ ಮಹಿಳಾ ಕೃಷಿ ಕಾರ್ಮಿಕರಿಗೆ ರೂ.350 ರಿಂದ ರೂ.500ರವರೆಗೆ ಕೂಲಿ ದೊರೆಯುತ್ತಿರುವುದರಿಂದ ಹೆಚ್ಚಿನ ಸಂಖ್ಯೆಯ ಕೂಲಿಕಾರರು ಜಿಲ್ಲೆಯ ಇತರೆ ಭಾಗಗಳಿಗೆ ಆಟೋಗಳಲ್ಲಿ ತೆರಳುವುದು ಸಾಮಾನ್ಯವಾಗಿದೆ.
250 ರೂ. ಕೂಲಿ ಕೊಡುತ್ತೇವೆ ಎಂದು ಹೇಳುತ್ತಿದ್ದರು ಹತ್ತಿ ಬಿಡಿಸಲು ಆಳುಗಳು ಸಿಗುತ್ತಿಲ್ಲ. ಬೇರೆ ಕಡೆ ಹೆಚ್ಚಿನ ಕೂಲಿ ಸಿಗುತ್ತಿರುವುದರಿಂದ ತಾಲೂಕಿನಲ್ಲಿ ಹತ್ತಿ ಬೆಳೆದ ರೈತರು ಹತ್ತಿ ಬಿಡಿಸಿಕೊಳ್ಳಲು ಪರದಾಡುವಂತಾಗಿದೆ ಎಂದು ಹತ್ತಿ ಬೆಳೆ ಬೆಳೆದ ಕರೂರು ಗ್ರಾಮದ ರೈತ ವೈ. ಕೃಷ್ಣಾರೆಡ್ಡಿ ತಿಳಿಸಿದ್ದಾರೆ.
ಇಲ್ಲಿಗಿಂತ ಬೇರೆ ಕಡೆ ಹೆಚ್ಚಿನ ಕೂಲಿ ಸಿಗುತ್ತಿರುವುದರಿಂದ ನಾವು ಬೇರೆ ಕಡೆ ಹೋಗುತ್ತಿದ್ದೇವೆ. ಇಲ್ಲಿ ಒಂದು ದಿನಕ್ಕೆ ಸಂಜೆಯವರೆಗೆ
ದುಡಿದರೆ ರೂ.250 ಕೂಲಿ ಸಿಕ್ಕರೆ. ಬೇರೆ ಕಡೆ ನಮಗೆ 350 ರೂ. ರಿಂದ 500ರವರೆಗೆ ಕೂಲಿ ದೊರೆಯುತ್ತದೆ.
ಗೌರಮ್ಮ,
ಕೂಲಿ ಕಾರ್ಮಿಕ ಮಹಿಳೆ