Advertisement

ಜಲಮೂಲಗಳಿಲ್ಲದೆ ಜಾನುವಾರುಗಳ ಪರದಾಟ

01:16 PM May 09, 2019 | Team Udayavani |

ಸಿರುಗುಪ್ಪ: ತಾಲೂಕಿನಲ್ಲಿ ಬಿಸಿಲಿನ ತಾಪ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಭೂಮಿಯು ಕಾದ ಕಾವಲಿಯಂತಾಗಿದೆ. ರಣ ಬಿಸಿಲಿನಿಂದಾಗಿ ತಾಲೂಕಿನ ಕೆಲವೆಡೆ ಜಲಮೂಲಗಳು ಬತ್ತಿ ಹೋಗಿದ್ದು, ಜಾನುವಾರುಗಳು ಕುಡಿಯುವ ನೀರು ಮತ್ತು ಮೇವಿಗಾಗಿ ಪರಿತಪಿಸುವ ಸ್ಥಿತಿ ಬಂದಿದೆ.

Advertisement

ತಾಲೂಕಿನ ಜಮೀನಿನಲ್ಲಿರುವ ಮೇವು ಬಿಸಿಲಿನ ಪ್ರಖರತೆಗೆ ಒಣಗುತ್ತಿದ್ದು, ಕಾಲುವೆಯಲ್ಲಿ ನೀರಿಲ್ಲದ ಕಾರಣ ಜಲಕ್ಷಾಮ ಉಂಟಾಗಿದ್ದು, ನೀರಿನ ಅಭಾವದಿಂದ ಭೂಮಿಯಲ್ಲಿ ಕಾವು ಹೆಚ್ಚಾಗಿದೆ. ತಾಲೂಕಿನಲ್ಲಿ ಮಳೆ ರೈತರ ಜತೆಗೆ ಚೆಲ್ಲಾಟವಾಡುತ್ತಿದ್ದು, ಇದರ ಪರಿಣಾಮವಾಗಿ ಜಾನುವಾರುಗಳಿಗೆ ಹೊಲಗಳಲ್ಲಿ ಮೇವಿಲ್ಲದಂತಾಗಿದೆ.

ಇನ್ನೂ ಕುರಿಗಳನ್ನು ಕಾಯುವ ಕುರಿಗಾರರ ಸ್ಥಿತಿ ಅಧೋಗತಿಯಾಗಿದ್ದು, ಕುರಿ, ಮೇಕೆ ಮೇಯಿಸಲು ಅಡವಿಯಲ್ಲಿ ಎಲ್ಲಿ ಸುತ್ತಿದರೂ ಒಂದಿಷ್ಟು ಮೇವು ಸಿಗುತ್ತಿಲ್ಲ. ಇದರಿಂದಾಗಿ ಕುರಿ, ಮೇಕೆಗಳು ಹೊಲಗಳಲ್ಲಿರುವ ಮರಗಿಡಗಳ ತಪ್ಪಲನ್ನು ತಿನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ. ಮಳೆ ಬೀಳುವವರೆಗೆ ಕುರಿ ಮತ್ತು ದನಕರುಗಳಿಗೆ ಹೊಲಗದ್ದೆಗಳಲ್ಲಿ ಮೇವು ಇಲ್ಲ, ನೀರು ಇಲ್ಲ.

ಕುರಿಗಾರರು ನಿತ್ಯ ಕುರಿಗಳಿಗೆ ನೀರು ಕುಡಿಸಲು ನೀರಿನ ಮೂಲ ಹುಡುಕಿಕೊಂಡು 5 ರಿಂದ 6 ಕಿಮೀ ಅಲೆದಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಸದಾ ಅಲ್ಪಸ್ವಲ್ಪ ನೀರಿದ್ದರೂ ಕುರಿ, ಮೇಕೆ, ದನಕರುಗಳು ಹಳ್ಳಗಳ ದಂಡೆಯಲ್ಲಿ ನೆಲೆಯೂರಿ ತಂಪಾದ ವಾತಾವರಣದ ಆಸರೆ ಪಡೆದು ಸಂಜೆ ಮನೆಗೆ ವಾಪಾಸಾಗುತ್ತಿದ್ದರು. ಸದಾ ಹಳ್ಳ ಮತ್ತು ಕಾಲುವೆ ನೀರನ್ನೇ ಅವಲಂಬಿಸಿದ್ದ ಎಮ್ಮೆಗಳು ಸದ್ಯ ಬಿಸಿಲಿನ ಝಳಕ್ಕೆ ತತ್ತರಿಸಿ ಹೋಗಿವೆ.

ಸಿರುಗುಪ್ಪ ತಾಲೂಕನ್ನು ಬರಪೀಡಿತ ತಾಲೂಕೆಂದು ಘೋಷಣೆ ಮಾಡಿದ್ದರೂ ಬರ ಪರಿಹಾರ ಕಾಮಗಾರಿಗಳು ಇದುವರೆಗೂ ತಾಲೂಕಿನ ಯಾವುದೇ ಭಾಗದಲ್ಲಿ ನಡೆದಿಲ್ಲ. ಈ ಬಗ್ಗೆ ತಾಲೂಕು ಆಡಳಿತ ಯಾವುದೇ ಕ್ರಮ ಕೈಗೊಂಡಿಲ್ಲ.

Advertisement

ತಾಲೂಕಿನಲ್ಲಿ ಹರಿಯುವ ನೀರಿನ ಜಲಮೂಲಗಳು ಬತ್ತಿ ಹೋಗಿದ್ದು, ಸರ್ಕಾರ ಬತ್ತಿ ಹೋಗಿರುವ ಜಲ ಮೂಲಗಳಾದ ದೊಡ್ಡಹಳ್ಳ, ಗರ್ಜಿಹಳ್ಳ, ವೇದಾವತಿ ಹಗರಿನದಿಗೆ ತುಂಗಭದ್ರಾ ಜಲಾಶಯದಿಂದ ನೀರು ಬಿಡಿಸುವ ವ್ಯವಸ್ಥೆ ಮಾಡಿದರೆ ದನಕರು, ಕುರಿ, ಮೇಕೆಗಳಿಗೆ ನೀರು ಸಿಗುತ್ತದೆ ಎಂದು ಮಾಟಸೂಗೂರು ಗ್ರಾಮದ ಆನಂದ ಒತ್ತಾಯಿಸಿದ್ದಾರೆ.

ತಾಲೂಕಿನಲ್ಲಿ ಒಟ್ಟು 31,857 ಎತ್ತು ಮತ್ತು ಆಕಳು, 22,294 ಎಮ್ಮೆಗಳು, 47,139 ಕುರಿಗಳು, 14,799 ಮೇಕೆಗಳು ಇದ್ದು, ಇದರ ಜತೆಗೆ ಬೇರೆಡೆಯಿಂದ ಅನೇಕ ಕುರಿಗಾರರು ತಾಲೂಕಿಗೆ ಬಂದಿದ್ದಾರೆ.
ಗಂಗಾಧರ,
ಪಶು ಆಸ್ಪತ್ರೆಯ ಅಧಿಕಾರಿ

ಬಸವರೆಡ್ಡಿ

Advertisement

Udayavani is now on Telegram. Click here to join our channel and stay updated with the latest news.

Next