ಸಿರುಗುಪ್ಪ: ತಾಲೂಕಿನ ಹೆರಕಲ್ಲು ಗ್ರಾಮದ ರೈತರ ಜಮಿನುಗಳು ತುಂಗಭದ್ರಾ ನದಿಯ ಪ್ರವಾಹದಿಂದ ಹಾನಿಗೊಳಗಾದ ಜಮೀನಿಗೆ ಕೃಷಿ ಇಲಾಖೆಯ ಜಿಲ್ಲಾ ಜಂಟಿ ಕೃಷಿ ನಿರ್ದೇಶಕ ಮಲ್ಲಿಕಾರ್ಜುನ ಮತ್ತು ಜಿಲ್ಲಾ ಉಪ ಕೃಷಿ ನಿರ್ದೇಶಕ ಚಂದ್ರಶೇಖರ್ ಗುರುವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ನಮ್ಮ ಬೆಳೆಗಳು ನದಿಯ ನೀರಿನ ಪ್ರವಾಹದಿಂದ ಹಾಳಾಗಿದ್ದು, ಹಾಳಾದ ಬೆಳೆಗಳಿಗೆ ಸೂಕ್ತ ಪರಿಹಾರ ಧನ ನೀಡಬೇಕು. ಆದಷ್ಟು ಬೇಗ ಪರಿಹಾರ ಧನ ನಮ್ಮ ಕೈಸೇರುವಂತೆ ಕ್ರಮ ಕೈಗೊಳ್ಳಬೇಕು. ಇದರಿಂದ ಮುಂದಿನ ಬೆಳೆ ಬೆಳೆಯಲು ಅನುಕೂಲವಾಗುತ್ತದೆಂದು ರೈತರು ಕೃಷಿ ಅಧಿಕಾರಿಗಳನ್ನು ಒತ್ತಾಯಿಸಿದರು.
ರೈತ ಚಿದಾನಂದಪ್ಪ ಮಾತನಾಡಿ, ನೀರಿನ ಪ್ರವಾಹದಿಂದ ನಮ್ಮ ಗದ್ದೆಗಳಿಗೆ ಸಂಪರ್ಕ ಕಲ್ಪಿಸುವ 2 ರಸ್ತೆಗಳು ಸಂಪೂರ್ಣವಾಗಿ ಹಾಳಾಗಿದ್ದು, ಗದ್ದೆಗಳಿಗೆ ತೆರಳಲು ಅನಾನುಕೂಲವಾಗುತ್ತಿದೆ. ಆದ್ದರಿಂದ ಶೀಘ್ರವಾಗಿ ಹಾಳಾಗಿರುವ ರಸ್ತೆಗಳನ್ನು ರಿಪೇರಿ ಮಾಡಿಸಲು ಕ್ರಮ ಕೈಗೊಳ್ಳಬೇಕು. ಈ ಬಗ್ಗೆ ನೀವು ಸರ್ಕಾರದ ಗಮನಕ್ಕೆ ತರಬೇಕೆಂದು ಕೃಷಿ ಅಧಿಕಾರಿಗಳನ್ನು ಒತ್ತಾಯಿಸಿದರು.
ತಾಲೂಕಿನ 22 ಗ್ರಾಮಗಳ ರೈತರ ಹೊಲಗಳಿಗೆ ನದಿ ನೀರು ನುಗ್ಗಿದ್ದರಿಂದ 584 ಹೆಕ್ಟೇರ್‌ನಲ್ಲಿ ನಾಟಿ ಮಾಡಿದ ಭತ್ತ, 205 ಹೆಕ್ಟೇರ್‌ನಲ್ಲಿ ಬೆಳೆದ ಭತ್ತದ ಸಸಿ, 4 ಹೆಕ್ಟೇರ್‌ನಲ್ಲಿ ಬೆಳೆದ ಸಜ್ಜೆ, 14 ಹೆಕ್ಟೇರ್ ನವಣೆ, 48 ಹೆಕ್ಟೇರ್ ಹತ್ತಿ, 13 ಹೆಕ್ಟೇರ್‌ನಲ್ಲಿ ಬೆಳೆದ ಕಬ್ಬು ಸೇರಿದಂತೆ ಒಟ್ಟು 868 ಹೆಕ್ಟೇರ್ ಪ್ರದೇಶದಲ್ಲಿ ಬೆಳೆದ ಬೆಳೆಗಳು ಹಾನಿಗೊಳಗಾಗಿವೆ. ಹಾನಿಗೊಳಗಾದ ರೈತರಿಗೆ ಶೀಘ್ರವಾಗಿ ಪರಿಹಾರ ಧನ ಕೊಡಲು ನಿರ್ಧರಿಸಿರುವುದರಿಂದ ಈ ಸಮೀಕ್ಷೆಯನ್ನು ನಡೆಸಲಾಗಿದೆ ಎಂದು ಕೃಷಿ ಇಲಾಖೆಯ ಜಿಲ್ಲಾ ಜಂಟಿ ಕೃಷಿ ನಿರ್ದೇಶಕ ಮಲ್ಲಿಕಾರ್ಜುನ ತಿಳಿಸಿದರು.
ತಾ. ಸಹಾಯಕ ಕೃಷಿ ನಿರ್ದೇಶಕ ನಜೀರ್ ಅಹಮ್ಮದ್, ಕೃಷಿ ಅಧಿಕಾರಿ ಶಿವಪ್ಪ ಬಾರೆಗಿಡದ್, ಗ್ರಾಮ ಲೆಕ್ಕಾಧಿಕಾರಿ ಮಲ್ಲಪ್ಪ ಗುಡಿ ಹಿಂದಲ, ರೈತರಾದ ವಿರೇಶ, ಕೆ. ರಾಮಣ್ಣ, ಸಣ್ಣದ್ಯಾವಣ್ಣ, ಹನುಮೇಶ, ಹುಸೇನಪ್ಪ ಇದ್ದರು.