ಸಿರುಗುಪ್ಪ: ತಾಲೂಕಿನ ರಾರಾವಿ-ಬೇಲೂರು ರಾಜ್ಯ ಹೆದ್ದಾರಿ 63ರಲ್ಲಿ ಬರುವ ರಾರಾವಿ ಗ್ರಾಮದ ಹತ್ತಿರ ವೇದಾವತಿ ಹಗರಿ ನದಿಗೆ ನಿರ್ಮಾಣವಾಗುತ್ತಿರುವ ಸೇತುವೆ ನಿರ್ಮಾಣ ಕಾರ್ಯ ಕಳೆದ 7 ವರ್ಷಗಳಿಂದ ನಡೆಯುತ್ತಿದ್ದರೂ ಇಲ್ಲಿಯವರೆಗೆ ಪೂರ್ಣಗೊಂಡಿಲ್ಲ. 2020ರ ಮಾರ್ಚ್‌ನಲ್ಲಿ ಅಂತಿಮ ಕಾಮಗಾರಿ ಮುಗಿಸಿ ಸಾರ್ವಜನಿಕರ ಸೇವೆಗೆ ಸೇತುವೆಯನ್ನು ಸಮರ್ಪಿಸಲಾಗುವುದೆಂದು ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ತಿಳಿಸಿದ್ದರು. ಆದರೆ ಇನ್ನೂ ಸೇತುವೆ ನಿರ್ಮಾಣ ಕಾರ್ಯ ಮುಗಿದಿಲ್ಲ.
2013 ಜ. 10ರಂದು ಮುಖ್ಯಮಂತ್ರಿಯಾಗಿದ್ದ ಜಗದೀಶ ಶೆಟ್ಟರ್‌ರು ರಾರಾವಿ ಸೇತುವೆ ನಿರ್ಮಾಣ ಕಾರ್ಯಕ್ಕೆ ಭೂಮಿಪೂಜೆಮಾಡಿ ಕಾಮಗಾರಿಗೆ ಚಾಲನೆ ನೀಡಿದ್ದರು. ಆದರೆ 7 ವರ್ಷ ಕಳೆದರೂ ಸೇತುವೆ ಇನ್ನೂ ಪೂರ್ಣಗೊಂಡಿಲ್ಲ.
ಅಬಟ್‌ಮೆಂಟ್-1 ಮತ್ತು ಅಬಟ್‌ಮೆಂಟ್ -2 ಕ್ಯಾಪ್ ಅಳವಡಿಸಲಾಗಿದೆ. ಪಿಯರ್ ಪಿ-1 ರಿಂದ ಪಿ-12 ಮತ್ತು ಪಿ-14 ರಿಂದ ಪಿ-21ರ ವರೆಗೆ ಪಿಯರ್ ಕ್ಯಾಪ್ ಅಳವಡಿಸಲಾಗಿದೆ. ಪಿಯರ್ ಸಂಖ್ಯೆ: ಪಿ-13 ತಳಪಾಯವನ್ನು ಬಲಪಡಿಸುವ ಕೆಲಸ ಪೂರ್ಣಗೊಂಡಿದೆ. ಸೇತುವೆ 66 ಗರ್ಡರ್‌ಗಳ ಪೈಕಿ 60 ಗರ್ಡರ್‌ಗಳನ್ನು ಕ್ಯಾಸ್ಟ್ ಮಾಡಲಾಗಿದ್ದು, 24 ಗರ್ಡರ್‌ಗಳ ಲಾಂಚಿಂಗ್ ಕೆಲಸ ಪೂರ್ಣಗೊಂಡಿದೆ, ಸೇತುವೆಯ 4 ಸ್ಕ್ಯಾನ್ ಗಳಿಗೆ ಕಾಂಕ್ರಿಟಿಂಗ್ ಪೂರ್ಣಗೊಂಡಿದೆ. 5ನೇ ಸ್ಕ್ಯಾನ್ ಗೆ ಫ್ಯಾಬ್ರಿಕೇಷನ್ ಕೆಲಸ ಪ್ರಗತಿಯಲ್ಲಿದೆ. ಆದರೆ 31 ಮಾರ್ಚ್ 2018ರಲ್ಲಿ ಈ ಸೇತುವೆ ಕಾರ್ಯ ಪೂರ್ಣಗೊಳ್ಳಬೇಕಾಗಿತ್ತು. ಆದರೆ ಮಾರ್ಚ್ 2020 ಬಂದರೂ ಇಲ್ಲಿಯವರೆಗೆ ಕಾಮಗಾರಿಯನ್ನು ಪೂರ್ಣಗೊಳಿಸಲು ಸಾಧ್ಯವಾಗಿಲ್ಲ.
ವೇದಾವತಿ ಹಗರಿ ನದಿಯ ಸೇತುವೆಯ ಮಧ್ಯದಲ್ಲಿರುವ ಒಂದು ಪಿಲ್ಲರ್ ನಿರ್ಮಾಣದಲ್ಲಿ ತಾಂತ್ರಿಕ ತೊಂದರೆ ಇರುವುದರಿಂದ ನೀರು ಕಡಿಮೆಯಾದ ನಂತರ ಪಿಲ್ಲರ್ ನಿರ್ಮಿಸಿ ಅತಿ ಶೀಘ್ರವಾಗಿ ಕಾಮಗಾರಿ ಪೂರ್ಣಗೊಳಿಸಲಾಗುವುದು.
.
ಮುತ್ತಯ್ಯ,
ಲೋಕೋಪಯೋಗಿ ಇಲಾಖೆಯ ಎಇಇ
2020ರ ಮಾರ್ಚ್ ಮೊದಲ ವಾರದಲ್ಲಿ ರಾರಾವಿ ಸೇತುವೆಯ ನಿರ್ಮಾಣ ಕಾರ್ಯ ಪೂರ್ಣವಾಗಬೇಕಾಗಿತ್ತು, ಆದರೆ ನದಿ ಮಧ್ಯದಲ್ಲಿರುವ ಪಿಲ್ಲರ್‌ನ ತಾಂತ್ರಿಕ ಸಮಸ್ಯೆಯಿಂದ ಕಾಮಗಾರಿ ಪೂರ್ಣಗೊಳಿಸಲು ಸಾಧ್ಯವಾಗಿಲ್ಲವೆಂದು ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಮಳೆಗಾಲಕ್ಕೆ ಮುಂಚೆಯೇ ಕಾಮಗಾರಿಯನ್ನು ಪೂರ್ಣಮಾಡುವಂತೆ ಅಧಿಕಾರಿಗಳಿಗೆ ತಾಕೀತು ಮಾಡಲಾಗಿದೆ.
ಎಂ.ಎಸ್. ಸೋಮಲಿಂಗಪ್ಪ,
ಶಾಸಕ
ಆರ್.ಬಸವರೆಡ್ಡಿ ಕರೂರು