Advertisement

ಟಗರು ಸಾಕಾಣಿಕೆಯಿಂದ ಲಾಭಗಳಿಸಿದ ರೈತ

11:45 AM Jul 12, 2019 | Naveen |

ಸಿರುಗುಪ್ಪ: ತಾಲೂಕಿನ ರಾರಾವಿ ಗ್ರಾಮದ ಪ್ರಗತಿಪರ ರೈತ ಈರಣ್ಣ ಟಗರು ಸಾಕಾಣಿಕೆಯನ್ನು ಉಪಕಸುಬನ್ನಾಗಿ ಮಾಡಿಕೊಂಡು ಬರಗಾಲದಲ್ಲಿಯೂ ವಾರ್ಷಿಕವಾಗಿ ರೂ. 2ಲಕ್ಷ 45 ಸಾವಿರ ಆದಾಯ ಗಳಿಸುವ ಮೂಲಕ ಇತರೆ ರೈತರಿಗೆ ಮಾದರಿಯಾಗಿದ್ದಾರೆ.

Advertisement

ತಮ್ಮ ಜಮೀನಿನ ಅರ್ಧ ಎಕರೆ ಜಾಗದಲ್ಲಿ ಟಗರು ಸಾಕಾಣಿಕೆಯನ್ನು ಕೈಗೊಂಡಿರುವ ರೈತನು ಸಿಂಧನೂರು ಕುರಿ ಸಂತೆಯಲ್ಲಿ ನಾಲ್ಕು ತಿಂಗಳ ಟಗರು ಮರಿಗಳನ್ನು ರೂ. 3ಸಾವಿರದಿಂದ 4 ಸಾವಿರದ ವರೆಗೂ 70 ಟಗರು ಮರಿಗಳನ್ನು ತಂದು ಸಾಕಾಣಿಕೆ ಮಾಡುತ್ತಿದ್ದಾರೆ. ಪ್ರತಿದಿನ ಒಂದು ಟಗರಿಗೆ 250ಗ್ರಾಂ ಮಿಶ್ರಧಾನ್ಯದ ಪುಡಿ ಹಾಗೂ ಹಸಿರೆಲೆ ಗೊಬ್ಬರವನ್ನು ತುಂಡರಿಸಿ ನೀಡುತ್ತಿದ್ದು, ಸ್ವಲ್ಪ ಸಮಯ ಜಮೀನಿನಲ್ಲಿ ಮೇಯಲು ಬಿಡುತ್ತಿದ್ದಾರೆ. 5 ತಿಂಗಳಲ್ಲಿ ಟಗರು ಮರಿಗಳು ಮಾರಾಟಕ್ಕೆ ಸಿದ್ಧವಾಗುತ್ತಿದ್ದು, ಮಾರುಕಟ್ಟೆಯಲ್ಲಿ 9 ತಿಂಗಳ ಟಗರು ಮರಿಗಳಿಗೆ ರೂ. 8-9 ಸಾವಿರದವರೆಗೂ ಬೆಲೆ ಸಿಗುತ್ತಿದ್ದು, ಒಂದು ಟಗರು ಮರಿಗೆ ರೂ. 5.000 ಲಾಭ ದೊರೆಯುತ್ತಿದ್ದು, 70 ಟಗರು ಮರಿಗಳಿಗೆ ರೂ. 3.5ಲಕ್ಷ ಲಾಭ ದೊರೆಯುತ್ತದೆ.

ಮಾರುಕಟ್ಟೆಯಲ್ಲಿ ಟಗರಿನ ಮಾಂಸಕ್ಕೆ ಉತ್ತಮ ಬೇಡಿಕೆಯಿರುವುದರಿಂದ ಒಳ್ಳೆಯ ಬೆಲೆ ದೊರೆಯುತ್ತಿದೆ. ಒಂದು ಟಗರು ಮರಿ ರೂ.3,500, ಔಷಧ ಹಾಗೂ ಆಹಾರ ಖರ್ಚು ರೂ. 500, 5ತಿಂಗಳಿಗೆ 70 ಟಗರು ಮರಿಗಳಿಗೆ ರೂ. 2,80,000 ಖರ್ಚು ಬರುತ್ತದೆ. ಒಂದು ಟಗರು ರೂ. 9 ಸಾವಿರದಂತೆ ಮಾರಾಟವಾದರೂ ರೂ. 6,30,000ಗಳು ಬರುತ್ತದೆ. ಇದರಲ್ಲಿ ಖರ್ಚು ತೆಗೆದಲ್ಲಿ ರೂ. 3,50,000ಗಳು 5 ತಿಂಗಳಿಗೆ ದೊರೆಯುತ್ತದೆ.

ಟಗರು ಸಾಕಾಣಿಕೆಯು ಹೆಚ್ಚಿನ ಆದಾಯ ತಂದುಕೊಡುತ್ತದೆ. ಆದರೆ ಮರಿಗಳ ಪೋಷಣೆ, ನಿರ್ವಹಣೆಗೆ ಹೆಚ್ಚಿನ ಮುತುವರ್ಜಿ ಅಗತ್ಯವಿದೆ. ಆದರೆ ಟಗರು ಸಾಕಾಣಿಕೆ ಸುಲಭವಾಗಿದ್ದು, ನಮಗೆ ಬೇಕೆನಿಸಿದಾಗ ಮಾರುಕಟ್ಟೆಯಲ್ಲಿ ಮರಿಗಳನ್ನು ತಂದು 5 ತಿಂಗಳ ಕಾಲ ಸಾಕಾಣಿಕೆ ಮಾಡಿದರೆ ಒಂದು ಟಗರಿಗೆ ನಿರ್ವಹಣೆ ವೆಚ್ಚ ಎಲ್ಲ ಕಳೆದರು ಸುಮಾರು ರೂ. 5,000 ನಿಖರ ಆದಾಯ ದೊರೆಯುತ್ತದೆ ಎಂದು ರೈತ ಈರಣ್ಣ ತಿಳಿಸಿದ್ದಾರೆ. ಬೇಸಿಗೆಯಲ್ಲಿ ತುಂಗಭದ್ರಾ ಅಚ್ಚುಕಟ್ಟು ಪ್ರದೇಶದಲ್ಲಿ ರೈತರು ಯಾವುದೇ ಬೆಳೆ ಬೆಳೆಯದಿರುವುದರಿಂದ ಪರ್ಯಾಯವಾಗಿ ತಮ್ಮ ಜಮೀನುಗಳಲ್ಲಿ ಟಗರು ಸಾಕಾಣಿಕೆ ಮಾಡಿದರೆ ಕೇವಲ 5 ತಿಂಗಳಲ್ಲಿ ಹೆಚ್ಚಿನ ಆದಾಯ ಪಡೆಯಬಹುದು. ರೈತರು ಟಗರು ಸಾಕಾಣಿಕೆಯನ್ನು ಕೈಗೊಂಡರೆ ಕಡಿಮೆ ಖರ್ಚಿನಲ್ಲಿ ಹೆಚ್ಚಿನ ಲಾಭಗಳಿಸುವ ಕೃಷಿ ಉಪ ಆದಾಯವಾಗಿ ಪಡೆಯಬಹುದಾಗಿದೆ ಎಂದು ಕೃಷಿ ವಿಜ್ಞಾನಿ ಡಾ| ಬಸವಣ್ಣೆಪ್ಪ ಅಭಿಪ್ರಾಯಪಟ್ಟಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next