ಸಿರುಗುಪ್ಪ: ಗದುಗಿನ ಪಂಡಿತ ಪಂಚಾಕ್ಷರಿ ಗವಾಯಿಗಳು ಮತ್ತು ಪಂ.ಪುಟ್ಟರಾಜ ಗವಾಯಿಗಳು ಶಾಸ್ತ್ರೀಯ ಸಂಗೀತದ ಕಲೆಯ ಪರಂಪರೆ ಉಳಿಸಿ ಬೆಳೆಸಿದ್ದಾರೆ. ಅವರ ಸಂಗೀತ ಪರಂಪರೆ ಇಂದಿಗೂ ಮುಂದುವರಿದಿರುವುದು ಅವರು ಮಾಡಿದ ಸೇವೆಯಿಂದ ಸಾಧ್ಯವಾಗಿದೆ ಎಂದು ಶಾಸಕ ಎಂ.ಎಸ್.ಸೋಮಲಿಂಗಪ್ಪ ತಿಳಿಸಿದರು.
ತಾಲೂಕಿನ ಕುಡುದರಹಾಳು ಗ್ರಾಮದ ತಾಯಮ್ಮದೇವಿ ಜನಸೇವಾ ಹಾಗೂ ಸಾಂಸ್ಕೃತಿಕ ಕಲಾ ಟ್ರಸ್ಟ್, ಡಾ.ಪುಟ್ಟರಾಜ ಗವಾಯಿಗಳ ಕಲಾ ಸಂಘ, ಸಿರುಗುಪ್ಪ ನೇತ್ರ ಕಲಾ ಸಂಘ ಸಂಯುಕ್ತಾಶ್ರಯದಲ್ಲಿ ಗಾನಯೋಗಿ ಪಂ.ಪಂಚಾಕ್ಷರಿ ಗವಾಯಿಗಳು, ಡಾ.ಪಂ.ಪುಟ್ಟರಾಜ ಗವಾಯಿಗಳು ಪುಣ್ಯಾರಾಧನೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಸಂಗೀತ ಪರಂಪರೆಯನ್ನು ಉಳಿಸಿ ಬೆಳೆಸಲು ಉಭಯ ಶ್ರೀಗಳು ಮಾಡಿದ ಕಾರ್ಯವನ್ನು ಪ್ರತಿಯೊಬ್ಬರು ಸ್ಮರಿಸಬೇಕು. ಅಂಧ, ಅನಾಥ ಮಕ್ಕಳ ಪಾಲಿಗೆ ದೇವರಾಗಿರುವ ಪಂಚಾಕ್ಷರಿ ಗವಾಯಿಗಳು ಮತ್ತು ಪಂ.ಪುಟ್ಟರಾಜ ಗವಾಯಿಗಳ ಸಾಧನೆಯು ಸುವರ್ಣಾಕ್ಷರಗಳಲ್ಲಿ ದಾಖಲಿಸುವಂತ ವಿಷಯವಾಗಿದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಗಾನಯೋಗಿ ಪಂಚಾಕ್ಷರಿ ಗವಾಯಿಗಳ ಪ್ರಶಸ್ತಿಯನ್ನು ಗದುಗಿನ ವಯಲಿನ್ ವಾದಕ ನಾರಾಯಣ ಹಿರೇಕೊಳಚಿ, ಮತ್ತು ಡಾ.ಪಂಡಿತ್ ಪುಟ್ಟರಾಜ ಗವಾಯಿಗಳ ಪ್ರಶಸ್ತಿಯನ್ನು ಹೊಸಪೇಟೆಯ ತಬಲ ವಾದಕ ಮಲ್ಲಿಕಾರ್ಜುನ ಬಡಿಗೇರಗೆ ಹಾಗೂ ರಂಗಭೂಮಿ ಗಜಸಿಂಹ ಯಲಿವಾಳ ಸಿದ್ದಯ್ಯಸ್ವಾಮಿ ಪ್ರಶಸ್ತಿಯನ್ನು ಆದೋನಿಯ ರಂಗಭೂಮಿ ಕಲಾವಿದರಾದ ಬದನೆಹಾಳು ಭೀಮಣ್ಣರಿಗೆ ನೀಡಿ ಸನ್ಮಾನಿಸಲಾಯಿತು.
ಇದಕ್ಕೂ ಮುನ್ನ ಉಭಯ ಗವಾಯಿಗಳ ಭಾವಚಿತ್ರ ಮೆರವಣಿಗೆಯು ಗ್ರಾಮದ ಪ್ರಮುಖ ಬೀದಿಗಳಲ್ಲಿ ಮಂಗಳವಾದ್ಯಗಳೊಂದಿಗೆ ನೆರವೇರಿಸಲಾಯಿತು. ಬಳಿಕ ‘ದೆವ್ವ ಬಂತು ದೆವ್ವ’ ನಾಟಕ ಪ್ರದರ್ಶಿಸಲಾಯಿತು. ಡಾ.ಶಿವಕುಮಾರ ತಾತ, ಗ್ರಾಪಂ ಅಧ್ಯಕ್ಷ ಗಟ್ಟಿ ರಾಮಲಿಂಗಪ್ಪ ಮುಖಂಡರಾದ ಮಹಾದೇವ, ಶಫಿ ಮತ್ತು ಗ್ರಾಮಸ್ಥರು ಇದ್ದರು.
ಅಹೋರಾತ್ರಿ ಸಂಗೀತ ಸೇವೆ: ಕುಡುದರಹಾಳು ಗ್ರಾಮದ ಪಂ.ಪಂಚಾಕ್ಷರಿ ಗವಾಯಿಗಳು, ಡಾ.ಪಂ.ಪುಟ್ಟರಾಜ ಗವಾಯಿಗಳು ಪುಣ್ಯಾರಾಧನೆ ಅಂಗವಾಗಿ ಶುಕ್ರವಾರ ಅಹೋರಾತ್ರಿ ಸಂಗೀತ ಕಾರ್ಯಕ್ರಮ ನಡೆಯಿತು. ಖ್ಯಾತ ಹಾರ್ಮೋನಿಯಂ ವಾದಕ ಮದಿರೆ ಮರಿಸ್ವಾಮಿ, ಕಲಾವಿದರಾದ ಎನ್.ನಾಗರಾಜ್, ಎಂ.ವಸಂತ್‌ಕುಮಾರ್, ಜಿ.ವೈ.ಸುಧಾ, ಉಷಾ, ಶರಣಪ್ಪ, ಜೆ.ಎಂ.ಕಾವ್ಯಬಾಯಿ, ಪ್ರವೀಣ್‌ಕುಮಾರ್, ಉಮೇಶ್ ಚವ್ಹಾಣ್, ವೀರೇಶ್ ದಳವಾಯಿ, ಸಂಗೀತ ಶರಣಪ್ಪ, ಅಂಬಣ್ಣ ದಳವಾಯಿ, ಹನುಮಂತ ಮುಂತಾದವರಿಂದ ಹಿಂದೂಸ್ಥಾನಿ ಸಂಗೀತ, ವಚನ ಗಾಯನ ಕಾರ್ಯಕ್ರಮ ನಡೆಯಿತು. ತಬಲ ಸಾಥ್ ಕೆ.ಹನುಮಂತಪ್ಪ, ಹಾರ್ಮೋನಿಯಂ ಸಾಥ್ ದಳವಾಯಿ ಅಂಬಣ್ಣ ನೀಡಿದರು.
ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಹೆಚ್ಚು ಅಂಕಪಡೆದ ವಿದ್ಯಾರ್ಥಿಗಳಾದ ಪ್ರದೀಪ, ಚಂದ್ರಕಾಂತ, ಹುಸೇನಮ್ಮ, ಗೋವಿಂದ, ಬಸಮ್ಮ, ಅಂಬಿಕಾ ಮತ್ತು ದ್ವಿತಿಯ ಪಿ.ಯು.ಸಿ.ಯಲ್ಲಿ ಅತಿ ಹೆಚ್ಚು ಅಂಕಪಡೆದ ವಿದ್ಯಾರ್ಥಿಗಳನ್ನು ಮತ್ತು ಕಲಾವಿದರಾದ ವಿದ್ಯಾಸಾಗರ ತಾತ, ವೀರಪ್ಪತಾತ, ಪಂಪಯ್ಯಸ್ವಾಮಿ ಸಾಲಿಮಠ, ಮಾರುತೇಶ, ಮಲ್ಲಪ್ಪ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರನ್ನು ಸನ್ಮಾನಿಸಲಾಯಿತು. ಮಾರುತಿ ಸ್ವಾಮಿಯಿಂದ ಜಾದು ಪ್ರದರ್ಶನ ನಡೆಯಿತು.