Advertisement

ಸರ್ಕಾರಿ ಹಾಸ್ಟೆಲ್ ನಲ್ಲಿ ಸಮಸ್ಯೆಗಳ ಸರಮಾಲೆ!

11:44 AM Aug 21, 2019 | Naveen |

ಸಿರುಗುಪ್ಪ: ನಗರದಲ್ಲಿರುವ ಸರ್ಕಾರಿ ವಸತಿ ನಿಲಯದ ವಿದ್ಯಾರ್ಥಿಗಳಿಗೆ ತೀವ್ರ ನೀರಿನ ಕೊರತೆ ಉಂಟಾಗಿದೆ. ಇದರಿಂದ ವಿದ್ಯಾರ್ಥಿಗಳು ನಿತ್ಯದ ಕೆಲಸ ಕಾರ್ಯಗಳಿಗೆ ನೀರು ಯೋಚಿಸಿ ಬಳಸಬೇಕಾದ ಅನಿವಾರ್ಯತೆ ಎದುರಾಗಿದೆ.

Advertisement

ನಗರದಲ್ಲಿ ಸಮಾಜ ಕಲ್ಯಾಣ ಇಲಾಖೆಗೆ ಸಂಬಂಧಿಸಿದ 3ಮೆಟ್ರಿಕ್‌ ಪೂರ್ವ ವಿದ್ಯಾರ್ಥಿ ನಿಲಯದಲ್ಲಿ ಮಂಜೂರಾದ ವಿದ್ಯಾರ್ಥಿಗಳ ಸಂಖ್ಯೆ 300 ಆದರೆ 607 ವಿದ್ಯಾರ್ಥಿಗಳಿದ್ದು, 3 ಮೆಟ್ರಿಕ್‌ ನಂತರದ ವಿದ್ಯಾರ್ಥಿ ನಿಲಯಗಳಲ್ಲಿ ಮಂಜೂರಾಗಿರುವ ವಿದ್ಯಾರ್ಥಿಗಳ ಸಂಖ್ಯೆ 300 ಆದರೆ 537 ವಿದ್ಯಾರ್ಥಿಗಳ ಸೇರ್ಪಡೆಯಾಗಿದ್ದು, ಒಟ್ಟು 1144 ವಿದ್ಯಾರ್ಥಿಗಳು ವಸತಿ ನಿಲಯಗಳಲ್ಲಿರುವುದರಿಂದ ನೀರು, ಶೌಚಾಲಯ, ಕೊಠಡಿಗಳ ಸಮಸ್ಯೆ ಉಂಟಾಗಿದೆ.

ವಿದ್ಯಾರ್ಥಿಗಳಿಗೆ ನೀರು ಪೂರೈಕೆ ಮಾಡಲು ಕೊರೆಸಿದ ಕೊಳವೆ ಬಾವಿಗಳಲ್ಲಿ ನೀರು ಸಂಪೂರ್ಣವಾಗಿ ಬತ್ತಿ ಹೋಗಿರುವುದರಿಂದ ವಿದ್ಯಾರ್ಥಿ ನಿಲಯಗಳಿಗೆ ಹಣ ನೀಡಿ ಟ್ಯಾಂಕರ್‌ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದೆ. ವಿದ್ಯಾರ್ಥಿಗಳ ದಿನ ನಿತ್ಯದ ಬಳಕೆಗಾಗಿ ಟ್ಯಾಂಕರ್‌ ಮೂಲಕ ನೀರು ಪೂರೈಕೆ ಮಾಡುತ್ತಿದ್ದರೂ ಸಾಲದಾಗಿದೆ.

ವಸತಿ ನಿಲಯಗಳಲ್ಲಿರುವ ಶುದ್ಧ ಕುಡಿಯುವ ನೀರು ಪೂರೈಕೆ ಮಾಡುವ ವಾಟರ್‌ ಫಿಲ್ಟರ್‌ಗಳು ಕಾರ್ಯನಿರ್ವಹಿಸದಿರುವುದರಿಂದ ಹಣ ನೀಡಿ ಖಾಸಗಿ ಶುದ್ಧ ಕುಡಿಯುವ ನೀರಿನ ಘಟಕಗಳಿಂದ ವಿದ್ಯಾರ್ಥಿಗಳಿಗೆ ಕುಡಿಯುವ ನೀರನ್ನು ತರಲಾಗುತ್ತಿದೆ. ನಿತ್ಯ ಒಂದು ವಸತಿ ನಿಲಯಗಳಲ್ಲಿ ಅಂದಾಜು ಒಂದು ಸಾವಿರ ರೂ. ಕುಡಿಯುವ ನೀರು ಮತ್ತು ಬಳಕೆಗೆ ಬೇಕಾದ ನೀರನ್ನು ಖರೀದಿಸಲಾಗುತ್ತಿದ್ದು, ಸಮಾಜ ಕಲ್ಯಾಣ ಇಲಾಖೆಯಿಂದ ಲಕ್ಷಾಂತರ ರೂ. ಕೇವಲ ವಿದ್ಯಾರ್ಥಿ ನಿಲಯಗಳ ವಿದ್ಯಾರ್ಥಿಗಳಿಗೆ ಖರ್ಚು ಮಾಡುತ್ತಿದೆ.

ಸರ್ಕಾರದ ಆದೇಶದಂತೆ ಪ.ಜಾತಿಯಿಂದ ಅರ್ಜಿ ಸಲ್ಲಿಸಿದ ವಿದ್ಯಾರ್ಥಿಯನ್ನು ವಸತಿ ನಿಲಯಗಳಲ್ಲಿ ಸೇರ್ಪಡೆ ಮಾಡಿಕೊಳ್ಳಲೇ ಬೇಕು ಎಂಬ ನಿಯಮ ಇರುವುದರಿಂದ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗಿ ವಸತಿ ನಿಲಯಗಳಲ್ಲಿ ಕುಡಿಯುವ ನೀರು, ಶೌಚಾಲಯ, ಕೊಠಡಿಗಳ ಕೊರತೆ ಉಂಟಾಗಿದೆ.

Advertisement

ವಸತಿ ನಿಲಯಗಳಲ್ಲಿ ಮಂಜೂರಾದ ವಿದ್ಯಾರ್ಥಿಗಳಿಗಿಂತ ಹೆಚ್ಚಿನ ವಿದ್ಯಾರ್ಥಿಗಳು ವಾಸಿಸುತ್ತಿರುವುದರಿಂದ ನೀರಿನ ಕೊರತೆಯಿಂದಾಗಿ ನಗರದ ನಂ.1 ಮೆಟ್ರಿಕ್‌ ಪೂರ್ವ ವಸತಿ ನಿಲಯದಲ್ಲಿ 233 ವಿದ್ಯಾರ್ಥಿಗಳಿದ್ದು, ಕೇವಲ 8 ಶೌಚಾಲಯಗಳಿರುವುದರಿಂದ ಸ್ವಚ್ಛತೆಯಿಲ್ಲದೆ ಇರುವುದು ಮತ್ತು ವಸತಿ ನಿಲಯದ ಆವರಣದಲ್ಲಿ ಕಲುಷಿತ ನೀರು ಸಂಗ್ರಹಗೊಂಡು ಗಬ್ಬು ನಾರುತ್ತಿವೆ.ಕೊಠಡಿಗಳ ಮೇಲ್ಚಾವಣಿಯ ಸಿಮೆಂಟ್ ಉದುರಿ ಬೀಳುತ್ತಿದ್ದು, ವಿದ್ಯಾರ್ಥಿಗಳು ಆತಂಕದಲ್ಲೇ ವಾಸ ಮಾಡುತ್ತಿದ್ದಾರೆ.

ವಸತಿ ನಿಲಯದಲ್ಲಿ ಬಳಕೆ ಮತ್ತು ಕುಡಿಯುವ ನೀರಿಗೆ ತೊಂದರೆಯಾಗಿರುವುದಲ್ಲದೆ ಶೌಚಾಲಯಗಳು ಕಡಿಮೆ ಇರುವುದರಿಂದ ಶೌಚಕ್ಕೆ ತೊಂದರೆಯಾಗುತ್ತಿದೆ. ಅಲ್ಲದೆ ಕೊಠಡಿಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿರುವುದರಿಂದ ಮಲಗಲು ತೊಂದರೆಯಾಗುತ್ತಿದೆ ಎಂದು ವಿದ್ಯಾರ್ಥಿಗಳು ಅಳಲು ತೋಡಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next